ಕೊಪ್ಪಳ ಡಿ. : ಬೆಂಬಲ ಬೆಲೆ ಯೋಜನೆಯಡಿ ಈರುಳ್ಳಿ ಖರೀದಿ ಕೇಂದ್ರ ಡಿ. ೨೩ ರಿಂದ ಕೊಪ್ಪಳದ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘ ನಿಯಮಿತ ಆವರಣದಲ್ಲಿ ಪ್ರಾರಂಭವಾಗಲಿದೆ ಎಂದು ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ತಿಳಿಸಿದ್ದಾರೆ.
ಸರ್ಕಾರದ ನಿರ್ದೇಶನದಂತೆ ಬೆಂಬಲ ಬೆಲೆಯಲ್ಲಿ ಈರುಳ್ಳಿಯನ್ನು ಖರೀದಿಸಲು ಕ್ರಮ ಕೈಗೊಳ್ಳಲಾಗಿದ್ದು, ಡಿ. ೨೩ ರಂದು ಬೆಳಿಗ್ಗೆ ೮ ಗಂಟೆಯಿಂದ ನಗರದ ಬಸವೇಶ್ವರ ವೃತ್ತ ಬಳಿ ಇರುವ ಟಿಎಪಿಸಿಎಂಎಸ್ ಆವರಣದಲ್ಲಿ ಖರೀದಿ ಕೇಂದ್ರ ಪ್ರಾರಂಭವಾಗಲಿದೆ. ಬೆಂಬಲ ಬೆಲೆ ಯೋಜನೆಯಡಿ ಪ್ರತಿ ಕ್ವಿಂಟಾಲ್‌ಗೆ ಗ್ರೇಡ್-೧ ಈರುಳ್ಳಿಗೆ ರೂ. ೭೬೦, ಗ್ರೇಡ್-೨ ಈರುಳ್ಳಿ- ರೂ. ೫೬೦ ಮತ್ತು ಗ್ರೇಡ್-೩ ಈರುಳ್ಳಿಗೆ ರೂ. ೩೬೦ ರಂತೆ ದರ ನಿಗದಿಪಡಿಸಲಾಗಿದೆ. ಈರುಳ್ಳಿಯನ್ನು ಬೆಂಬಲ ಬೆಲೆ ಖರೀದಿ ಕೇಂದ್ರದಲ್ಲಿ ಮಾರಾಟ ಮಾಡ ಬಯಸುವ ರೈತರು ಪಹಣಿ ಪತ್ರಿಕೆಯೊಂದಿಗೆ ಈರುಳ್ಳಿಯ ಮಾದರಿಯನ್ನು ತಂದು ತೋರಿಸಿ, ಸಂಬಂಧಪಟ್ಟ ಅಧಿಕಾರಿಗಳಿಂದ ಗುಣಮಟ್ಟ ಪರಿಶೀಲಿಸಿದ ನಂತರವೇ ಖರೀದಿಸಲಾಗುವುದು. ರೈತರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ತಿಳಿಸಿದ್ದಾರೆ.
0 comments:
Post a Comment