ಬೆಂಗಳೂರು, ಡಿ.: ಚಂಪಾಷಷ್ಠಿ ಅಂಗವಾಗಿ ರಾಜ್ಯದ ವಿವಿಧೆಡೆ ನಡೆದಿರುವ ವಾರ್ಷಿಕ ಮಡೆಸ್ನಾನ ಅಥವಾ ಉರುಳುಸೇವೆ ಆಚರಣೆಗೆ ದಲಿತ ಸಂಘಟನೆಗಳಿಂದ ಭಾರಿ ಪ್ರತಿರೋಧ ವ್ಯಕ್ತವಾಗಿದೆ. ಮಡೆಸ್ನಾನದ ಬಗ್ಗೆ ಮೌನ ವಹಿಸಿರುವ ಪೇಜಾವರ ಶ್ರೀಗಳಿಗೆ ದಲಿತ ಮುಖಂಡರು ಬಹಿರಂಗ ಸವಾಲ್ ಕೂಡಾ ಹಾಕಿದ್ದರು.
ಈ ಹಿನ್ನೆಲೆಯಲ್ಲಿ ನಗರದ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ತಂಗಿರುವ ಪೇಜಾವರ ಶ್ರೀವಿಶ್ವೇಶ ತೀರ್ಥರು ತಮ್ಮ ಮೌನ ಮುರಿದು ಪ್ರತಿಕ್ರಿಯೆ ನೀಡಿದ್ದಾರೆ.
"ಮಡೆಸ್ನಾನ ಅಥವಾ ಎಂಜೆಲೆಲೆ ಮೇಲೆ ಉರುಳು ಸೇವೆ ಮಾಡುವುದನ್ನು ನಿಷೇಧಿಸುವುದರಿಂದ ಯಾವ ರೀತಿ ಲಾಭವೂ ಇಲ್ಲ ನಷ್ಟವೂ ಇಲ್ಲ. ನಾನು ಈ ವಿಷಯದಲ್ಲಿ ತಟಸ್ಥ ನೀತಿ ಅನುಸರಿಸುತ್ತೇನೆ"
ಆದರೆ, ಸುಮಾರು 400 ವರ್ಷಗಳಿಂದ ನಡೆದು ಬಂದಿರುವ ಈ ಧಾರ್ಮಿಕ ಆಚರಣೆಗೆ ಅನಗತ್ಯವಾಗಿ ಜಾತಿಲೇಪ ಹಚ್ಚುವುದು ಬೇಡ. ಬ್ರಾಹ್ಮಣರಿಂದಲೂ ಮಡೆ ಮಡೆಸ್ನಾನ ನಡೆದಿದೆ. ಈ ಬಾರಿ ಉಡುಪಿಯಲ್ಲಿ ಬ್ರಾಹ್ಮಣರೂ ಕೂಡಾ ಈ ಉರುಳು ಸೇವೆಯಲ್ಲಿ ಪಾಲ್ಗೊಂಡಿದ್ದರು.
ಇದು ಧಾರ್ಮಿಕ ನಂಬಿಕೆಗೆ ಸಂಬಂಧಪಟ್ಟ ವಿಷಯ. ಜಾತಿ ರಾಜಕಾರಣ ತರುವುದು ಸರಿಯಲ್ಲ. ಉಡುಪಿಗೆ ಸಮೀಪದ ಸಗ್ರಿ, ತಾಂಗೋಡು, ಮಾಂಗೋಡು, ಮುಚ್ಲಗೋಡುಗಳಲ್ಲಿ ಜೊತೆಗೆ ಪೆರ್ಡೂರು ಸಮೀಪದ ಕಲ್ಲಂಗಳ, ಬೆಳ್ಮಣ್ ಸಮೀಪದ ಸೂಡಾ, ಪಡು ಬಿದ್ರೆಯ ಸುಬ್ರಹ್ಮಣ್ಯ ದೇವಸ್ಥಾನಗಳಲ್ಲೂ ಮಡೆಸ್ನಾನ ಹಿಂದಿನಿಂದ ನಡೆದು ಬಂದಿದೆ.
ಆರ್ಥಿಕ, ದೈಹಿಕ ಹಾಗೂ ಮಾನಸಿಕ ಸ್ಥಿರತೆಗಾಗಿ ದೇವರ ಮೊರೆ ಹೋಗುವ ಭಕ್ತರು ಈ ರೀತಿ ಹರಕೆ ಹೊತ್ತು ಸೇವೆ ಸಲ್ಲಿಸುತ್ತಾರೆ ಎಂದು ಪೇಜಾವರಶ್ರೀಗಳು ವಿವರಿಸಿದರು
0 comments:
Post a Comment