PLEASE LOGIN TO KANNADANET.COM FOR REGULAR NEWS-UPDATES


ದೇಶಾದ್ಯಂತ ತೀವ್ರ ಕುತೂಹಲ ಹಾಗೂ ವಿವಾದ ಹುಟ್ಟುಹಾಕಿದ್ದ ಬಿಡದಿ ಧ್ಯಾನಪೀಠದ ನಿತ್ಯಾನಂದ ಸ್ವಾಮಿ ರಾಸಲೀಲೆಗೆ ಸಂಬಂಧಿಸಿದಂತೆ ಮತ್ತೊಂದು ಸ್ಫೋಟಕ ಸುದ್ದಿ ಹೊರಬಿದ್ದಿದೆ. ಅದೇನಪ್ಪಾ ಅಂದ್ರೆ, ಚಿತ್ರನಟಿ ಜತೆ ನಿತ್ಯಾನಂದ ನಡೆಸಿದ್ದಾರೆ ಎನ್ನಲಾದ ರಾಸಲೀಲೆ ವೀಡಿಯೋ ಅಸಲಿಯಲ್ಲ, ನಕಲಿ ಎಂದು ಅಮೆರಿಕದ ತಜ್ಞರು ವರದಿ ಸಲ್ಲಿಸಿದ್ದಾರೆ.

ಆದರೆ ಈ ವರದಿಯಿಂದಾಗಿ ನಿತ್ಯಾನಂದ ವಿರುದ್ಧ ದಾಖಲಾಗಿರುವ ರೇಪ್, ವಂಚನೆ, ಸಾಕ್ಷ್ಯ ನಾಶಕ್ಕೆ ಯತ್ನ ಸೇರಿದಂತೆ ಹಲವು ಪ್ರಕರಣಗಳಿಂದ ಬಚಾವ್ ಆಗಲು ಸಾಧ್ಯವೇ ಎಂಬುದು ಸ್ಪಷ್ಟವಾಗಿಲ್ಲ.

ಬೆಂಗಳೂರು ಮಿರರ್ ವರದಿ ಪ್ರಕಾರ, ಅಮೆರಿಕದಲ್ಲಿನ ಹಲವಾರು ಕೋರ್ಟ್‌ಗಳಲ್ಲಿ ನಡೆಯು ತ್ತಿರುವ ಇಂತಹ ಪ್ರಕರಣಗಳ ವಿಡಿಯೋ ಟೇಪುಗಳ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡಿರುವ ಖ್ಯಾತ ವಿಧಿವಿಜ್ಞಾನ ಅಪರಾಧ ವಿಷಯ ತಜ್ಞ ಎಡ್ವರ್ಡ್ ಜೆ.ಪ್ರೆಮ್ಯೂ ಇದೀಗ ನಿತ್ಯಾನಂದ ರಾಸಲೀಲೆ ವೀಡಿಯೋ ಟೇಪ್ ಬಗ್ಗೆಯೂ ವರದಿ ನೀಡಿದ್ದಾರೆ.

ಪ್ರೆಮ್ಯೂ ಅಧ್ಯಯನದಂತೆ ನಿತ್ಯಾನಂದ ಹಾಗೂ ಚಿತ್ರ ನಟಿ ಜತೆಗಿನ ರಾಸಲೀಲೆ ವೀಡಿಯೋ ಟೇಪ್ ಅಸಲಿಯಲ್ಲ, ಇದು ಸತ್ಯಾಸತ್ಯತೆಯಿಂದ ಕೂಡಿಲ್ಲ. ಹಾಗಾಗಿ ಇದು ಪ್ರಕರಣದಲ್ಲಿ ಸತ್ಯವನ್ನು ಬಯಲಿಗೆಳೆಯುವ ಪ್ರಬಲ ಸಾಕ್ಷಿಯಾಗಲು ಸಾಧ್ಯವಿಲ್ಲ ಎಂದು ವಿವರಿಸಿದ್ದಾರೆ.

ಅದು ರಾಸಲೀಲೆ ಘಟನಾವಳಿಗಳನ್ನು ಯಥಾವತ್ತಾಗಿ, ನೈಜವಾಗಿ ಚಿತ್ರೀಕರಿಸಿದ ವೀಡಿಯೋ ಅಲ್ಲ. ಎರಡು ಪದರಗಳಿಂದ ತಯಾರಿಸಲಾದ ಈ ವೀಡಿಯೋ ನಕಲಿ ಎಂದು ವರದಿಯಲ್ಲಿ ತಮ್ಮ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

ಆ ನಿಟ್ಟಿನಲ್ಲಿ ಈವೀಡಿಯೋ ಟೇಪ್ ಅನ್ನು ಸಾಕ್ಷ್ಯವನ್ನಾಗಿ ಬಳಸಬಾರದು ಎಂದು ತಾನು ಶಿಫಾರಸು ಮಾಡುವುದಾಗಿ ಪ್ರೆಮ್ಯೂ ತನ್ನ ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಆದರೆ ನಿತ್ಯಾನಂದ ರಾಸಲೀಲೆ ಪ್ರಕರಣದ ಕುರಿತು ತನಿಖೆ ನಡೆಸಿರುವ ಸಿ‌ಐಡಿ ಪೊಲೀಸರು ರಾಸಲೀಲೆ ವೀಡಿಯೋ ಟೇಪ್ ಅನ್ನು ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಪರಿಶೀಲನೆ ನಡೆಸಿದ ನಂತರ ಅದು ಅಸಲಿ ಸಿಡಿ ಎಂದು ದೃಢಪಟ್ಟಿರುವುದಾಗಿ ತಿಳಿಸಿದ್ದರು.

ರಾಸಲೀಲೆ ಪ್ರಕರಣದಲ್ಲಿ ಸಿ‌ಐಡಿ ಪೊಲೀಸರು ವಿಡಿಯೋವನ್ನು ಸಾಕ್ಷ್ಯವನ್ನಾಗಿ ನ್ಯಾಯಾಲಯಕ್ಕೆ ಈಗಾಗಲೇ ಒಪ್ಪಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪೊಲೀಸ್ ಮೂಲಗಳು, ನಾವು 2010 ಡಿಸೆಂಬರ್ 23ರಂದು ಆರೋಪಪಟ್ಟಿ ಸಲ್ಲಿಸಿದ್ದೇವೆ. ಈವರೆಗೂ ಸಾಕಷ್ಟು ಬೆಳವಣಿಗೆಗಳು ನಡೆದಿವೆ. ಸಿಡಿಯನ್ನು ನಾವು ಫಾರ್ಮಾಲಿಟಿಗಾಗಿ ಕೋರ್ಟ್‌ಗೆ ನೀಡಿದ್ದೇವೆ. ಹಾಗಾಗಿ ವಿಚಾರಣೆ ಆರಂಭಗೊಂಡ ನಂತರ ಏನಾಗಲಿದೆ ಎಂಬುದು ತಿಳಿಯುತ್ತದೆ ಎಂದು ಹೇಳಿರುವುದಾಗಿ ಮಿರರ್ ವರದಿ ವಿವರಿಸಿದೆ.

ನಿತ್ಯಾನಂದ ಸ್ವಾಮಿಯ ಮಾಜಿ ಕಾರು ಚಾಲಕ ಲೆನಿನ್ ಕರುಪ್ಪನ್ ಎಂಬಾತ ರಾಸಲೀಲೆ ಸಿಡಿಯನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡುವ ಮೂಲಕ ಈ ವಿಷಯ ಬಹಿರಂಗಗೊಂಡಿತ್ತು. ಪ್ರಕರಣದಲ್ಲಿ ನಿತ್ಯಾನಂದ 50 ದಿನಗಳ ಕಾಲ ಜೈಲುವಾಸ ಅನುಭವಿಸಿ, ಜಾಮೀನಿನ ಮೇಲೆ ಹೊರಬಂದಿದ್ದರು

Advertisement

0 comments:

Post a Comment

 
Top