ಹೊಸದಿಲ್ಲಿ, ಡಿ.26: ಬಹು ಚರ್ಚಿತ ಲೋಕಪಾಲ ಮಸೂದೆಯ ಕುರಿತಾಗಿ ಲೋಕಸಭೆಯು ನಾಳೆ ಚರ್ಚೆ ಆರಂಭಿಸಲಿದೆ.
ಅದೇ ವೇಳೆ ‘ಪ್ರಬಲ ಲೋಕಪಾಲ’ಕ್ಕೆ ಆಗ್ರಹಿಸಿ ಹಿರಿಯ ಗಾಂಧಿವಾದಿ ಅಣ್ಣಾ ಹಝಾರೆ ತನ್ನ ಮೂರು ದಿನಗಳ ಉಪವಾಸ ಮುಷ್ಕರಕ್ಕೆ ಮುಂಬೈಯಲ್ಲಿ ಚಾಲನೆ ನೀಡಲಿದ್ದಾರೆ. ಲೋಕಸಭೆಯಲ್ಲಿ ಲೋಕಾಯುಕ್ತ ಮಸೂದೆ-2011 ಹಾಗೂ ಅದಕ್ಕೆ ಸಾಂವಿಧಾನಿಕ ಸ್ಥಾನಮಾನ ನೀಡುವುದಕ್ಕಾಗಿ ಸಂವಿಧಾನ ತಿದ್ದುಪಡಿ ಮಸೂದೆಗಳ ಬಗ್ಗೆ ಸಂಯುಕ್ತ ಚರ್ಚೆ ನಡೆಯಲಿದೆ. ಚರ್ಚೆಯ ವೇಳೆ ಲೋಕ ಸಭೆಯಲ್ಲಿ ಕಡ್ಡಾಯ ಹಾಜರಿರುವಂತೆ ಕಾಂಗ್ರೆಸ್ ತನ್ನ ಸದಸ್ಯರಿಗೆ ಈಗಾಗಲೇ ಮೂರು ಸಾಲುಗಳ ಸಚೇತಕಾಜ್ಞೆ ಜಾರಿಗೊಳಿಸಿದೆಯಲ್ಲದೆ, ಇದೇ ರೀತಿ ಮಾಡುವಂತೆ ಯುಪಿಎಯ ಅಂಗಪಕ್ಷಗಳನ್ನು ವಿನಂತಿಸಿದೆ.
ಲೋಕಪಾಲ ಮಸೂದೆಯು ಸಾರ್ವಜನಿಕ ಸೇವಕರ ಭ್ರಷ್ಟಾಚಾರ ಪ್ರಕರಣಗಳ ತನಿಖೆಗಾಗಿ ಕೇಂದ್ರದಲ್ಲಿ ಲೋಕಪಾಲ ಹಾಗೂ ರಾಜ್ಯಗಳಲ್ಲಿ ಲೋಕಾಯುಕ್ತದ ನೇಮಕಕ್ಕೆ ಅನುವು ಕಲ್ಪಿಸುತ್ತದೆ. ಕಳೆದ ವಾರ ಮಸೂದೆ ಮಂಡನೆಯಾಗುವ ವೇಳೆ ಪ್ರಧಾನ ವಿಪಕ್ಷ ಬಿಜೆಪಿ ಸಹಿತ ಹಲವು ರಾಜಕೀಯ ಪಕ್ಷಗಳಿಂದ ಆಕ್ಷೇಪ ಎದುರಿಸಿತ್ತು. ಲೋಕಪಾಲ ಪೀಠ ಹಾಗೂ ಶೋಧ ಸಮಿತಿಗಳಲ್ಲಿ ಅಲ್ಪಸಂಖ್ಯಾತರಿಗೆ ಶೇ.50 ಮೀಸಲಾತಿ ನೀಡಿರುವುದು ‘ಸಂವಿಧಾನ ಬಾಹಿರ’ ಎಂದು ಅವು ಹೇಳಿದ್ದವು. ಮಸೂದೆಯು ರಾಜ್ಯಗಳಿಗೆ ಲೋಕಾಯುಕ್ತ ನೇಮಕಾತಿಯನ್ನು ಕಡ್ಡಾಯಗೊಳಿಸಿರುವುದು ರಾಷ್ಟ್ರದ ಒಕ್ಕೂಟ ಸ್ವರೂಪಕ್ಕೆ ಧಕ್ಕೆ ತರುವುದೆಂದು ಹಲವು ಪಕ್ಷಗಳು ಆರೋಪಿಸಿದ್ದವು. ಕೆಲವರು ಲೋಕಪಾಲದ ವ್ಯಾಪ್ತಿಗೆ ಪ್ರಧಾನಿಯನ್ನು ತರುವ ಕುರಿತು ಟೀಕಿಸಿದ್ದರು.
‘ದುರ್ಬಲ’ ಲೋಕಪಾಲವನ್ನು ವಿರೋಧಿಸಿ ತಾನು ಮುಂಬೈಯಲ್ಲಿ ನಾಳೆಯಿಂದ ಮೂರು ದಿನಗಳ ಉಪವಾಸ ಮುಷ್ಕರ ನಡೆಸುವುದಾಗಿ ಹಝಾರೆ ಘೋಷಿಸಿದ್ದಾರೆ. ತಾನು ಲೋಕಪಾಲ ಮಸೂದೆಗಾಗಿ ಹೋರಾಡುವೆನೆಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಸಾರಿದ್ದಾರೆ. ಭ್ರಷ್ಟಾಚಾರವನ್ನು ನಿಭಾಯಿಸಲು ಪ್ರಮುಖವಾದ ಮೂರು ಮಸೂದೆಗಳನ್ನು ಶೀಘ್ರವೇ ಮಂಡಿಸುವುದಾಗಿ ಅವರು ಇತ್ತೀಚೆಗೆ ಪಕ್ಷದ ಸಂಸದರಿಗೆ ತಿಳಿಸಿದ್ದರು. ಅವು ಭ್ರಷ್ಟಾಚಾರದ ವಿರೋಧಿಗಳ ರಕ್ಷಣೆ, ನ್ಯಾಯಾಂಗ ಉತ್ತರದಾಯಿತ್ವ ಹೆಚ್ಚಳ, ಹಣ ಚೆಲುವೆ ವಿರೋಧಿ ಕ್ರಮ ಬಲ ಪಡಿಸುವಿಕೆ ಹಾಗೂ ವಿದೇಶಿ ಸಂಸ್ಥೆಗಳು ಭಾರತೀಯ ಅಧಿಕಾರಿಗಳಿಗೆ ಲಂಚ ನೀಡುವುದನ್ನು ತಡೆಯುವುದಕ್ಕೆ ಸಂಬಂಧಿಸಿದವುಗಳಾಗಿವೆ.
ಯಾವನೇ ಸರಕಾರಿ ಅಧಿಕಾರಿಯ ವಿರುದ್ಧದ ಭ್ರಷ್ಟಾಚಾರ ಆರೋಪ, ಉದ್ದೇಶ ಪೂರ್ವಕ ಅಧಿಕಾರ ದುರ್ಬಳಕೆ ಅಥವಾ ವಿಶೇಷ ಸ್ಥಾನಮಾನದ ದುರುಪಯೋಗ ಆರೋಪಗಳನ್ನು ಬಹಿರಂಗಪಡಿಸುವವರಿಗೆ ರಕ್ಷಣೆಯೊದಗಿಸುವ ವಿಜಲ್ ಬ್ಲೋವರ್‌ಗಳ ಮಸೂದೆ ಸಹ ಕೇಳ ಮನೆಯಲ್ಲಿ ನಾಳೆ ಚರ್ಚೆಗೆ ಬರಲಿವೆ. ಅಂತಹ ದೂರು ನೀಡುವವರಿಗೆ ಕಿರುಕುಳ ನೀಡದಂತೆ ಸಾಕಷ್ಟು ರಕ್ಷಣೆಯೊದಗಿಸುವ ಪ್ರಸ್ತಾಪವೂ ಮಸೂದೆಯಲ್ಲಿದೆ
0 comments:
Post a Comment