PLEASE LOGIN TO KANNADANET.COM FOR REGULAR NEWS-UPDATES

 : ಪೊಲೀಸರಿಗೆ ಮಾಹಿತಿ ನೀಡಿದ್ದಕ್ಕೆ ಕೊಲೆ?

ಹೆಬ್ರಿ:ನಕ್ಸಲರಿಂದ ಅಪಹರಣಕ್ಕೊಳಗಾಗಿದ್ದಾರೆ ಎನ್ನಲಾದ ಮಲೆಕುಡಿಯ ಕಬ್ಬಿನಾಲೆ ತೆಂಗುಮಾರಿನ ಸದಾಶಿವ ಗೌಡರ ಮೃತದೇಹ ಅವರ ಮನೆಯಿಂದ ಮೂರು ಕಿ.ಮೀ. ದೂರದಲ್ಲಿ ಪಶ್ಚಿಮ ಘಟ್ಟದ ದಟ್ಟ ಕಾಡಿನಲ್ಲಿ ಬುಧವಾರ ಸಂಜೆ ಪತ್ತೆಯಾಗಿದೆ.ಮೃತದೇಹ ಸದಾಶಿವ ಗೌಡ ಅವರದೇ ಎಂದು ಅವರ ಕುಟುಂಬದವರು ಗುರುತಿಸಿದ್ದಾರೆ.
ಕೆಲವು ದಿನಗಳಿಂದ ಈ ಭಾಗದಲ್ಲಿ ಸದಾಶಿವ ಗೌಡ ಅವರ ಪತ್ತೆಗಾಗಿ ಶೋಧ ನಡೆಸುತ್ತಿದ್ದ ನಕ್ಸಲ್ ನಿಗ್ರಹ ಪಡೆ ಸಿಬ್ಬಂದಿಗೆ ಕಾರ್ಕಳ ತಾಲ್ಲೂಕಿನ ನಾಡ್ಪಾಲು ಗ್ರಾಮದ ತೆಂಗುಮಾರು ಸಮೀಪದ ದಟ್ಟ ಕಾಡಿನಲ್ಲಿ ಮೃತದೇಹ ಗುರುವಾರ ಮಧ್ಯಾಹ್ನದ ವೇಳೆ ಗೋಚರಿಸಿತು.
ಚಿತ್ರಹಿಂಸೆ ನೀಡಿ ಹತ್ಯೆ:ಸದಾಶಿವ ಗೌಡ ಅವರನ್ನು ಗೋಳಿಮರದ ಬುಡಕ್ಕೆ ಕೆಂಪು ಬಟ್ಟೆಯಿಂದ ಕಟ್ಟಿಹಾಕಿ ಶಿಕ್ಷೆ ನೀಡಲಾಗಿದೆ.ಅವರ ಎರಡೂ ಕೈಗಳನ್ನು ಮುಂದಕ್ಕೆ ಬರುವಂತೆ ಸರಪಣಿ ಹಾಗೂ ನೈಲಾನ್ ಹಗ್ಗದಿಂದ ಕಟ್ಟಿಹಾಕಿ ಹೊಡೆಯಲಾಗಿದೆ.ದೇಹದ ತುಂಬ ಗಾಯಗಳಾಗಿದ್ದು,ರಕ್ತ ಒಸರಿ ಹೆಪ್ಪುಗಟ್ಟಿದೆ.ಮುಖಕ್ಕೆ ನಕ್ಸಲರು ಧರಿಸುವ ಹಸಿರು ಸಮವಸ್ತ್ರವನ್ನು ಮುಚ್ಚಿರುವುದು ಬುಧವಾರ ಸಂಜೆ ಸ್ಥಳಕ್ಕೆ ಭೇಟಿ ನೀಡಿದ  ಪ್ರತಿನಿಧಿಗೆ ಗೋಚರಿಸಿತು.

ಶವ ಕೊಳೆತ ಸ್ಥಿತಿಯಲ್ಲಿತ್ತು.ಕಾಲಿನ ಭಾಗದಿಂದ ಚರ್ಮ ಕಿತ್ತು ಹೋದ ಸ್ಥಿತಿಯಲ್ಲಿತ್ತು. ಶವದ ಮೇಲೆ ಹುಳಗಳು ಹರಿದಾಡುತ್ತಿದ್ದವು.ವಾರದ ಹಿಂದೆಯೇ ಕೊಲೆ ನಡೆದಿರಬಹುದು ಎಂದು ಪೊಲೀಸರು ಹೇಳಿದ್ದಾರೆ.

`ಮುಖಕ್ಕೆ ಬಟ್ಟೆ ಮುಚ್ಚಿದ್ದರಿಂದ ಸಾವು ಹೇಗೆ ಉಂಟಾಗಿದೆ ಎಂಬುದು ಸ್ಪಷ್ಟವಾಗಿಲ್ಲ.ವಿಧಿವಿಜ್ಞಾನ ತಜ್ಞರನ್ನು ಸ್ಥಳಕ್ಕೆ ಕರೆಸಲಾಗುತ್ತಿದ್ದು,ಅವರು ಪರಿಶೀಲಿಸಿದ ಬಳಿಕವಷ್ಟೇ ಕೊಲೆ ಯಾವಾಗ, ಹೇಗೆ ಆಗಿದೆ ಎಂಬುದನ್ನು ಖಚಿತವಾಗಿ ಹೇಳಬಹುದು`ಎಂದು ಅಲೋಕ್ ಕುಮಾರ್ ತಿಳಿಸಿದರು.
ಎಚ್ಚರಿಕೆ ಪತ್ರ:ನಕ್ಸಲರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುವವರಿಗೆ ಎಚ್ಚರ ಎಂಬ ಒಕ್ಕಣೆಯ ಪತ್ರವೂ ಮೃತದೇಹದ ಬಳಿ ಇದ್ದಿತು. ಅದೀಗ ಪೊಲೀಸರ ವಶದಲ್ಲಿದೆ ಎಂದು ತಿಳಿದುಬಂದಿದೆ.
ನಕ್ಸಲ್ ನಿಗ್ರಹ ಪಡೆಯ ರಾಜ್ಯ ಕಮಾಂಡೆಂಟ್ ಅಲೋಕ್ ಕುಮಾರ್,ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಕುಮಾರ್,ಎಎನ್‌ಎಫ್ ಎಸ್‌ಪಿ ವಾಸುದೇವ ಮೂರ್ತಿ,ಕಾರ್ಕಳ ಡಿವೈಎಸ್‌ಪಿ ಸಂತೋಷ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸದ್ಯ ನಕ್ಸಲ್ ನಿಗ್ರಹ ಪಡೆಯ ನೂರಕ್ಕೂ ಅಧಿಕ ಸಿಬ್ಬಂದಿ ಸ್ಥಳದಲ್ಲಿದ್ದಾರೆ.
ಇದಕ್ಕೂ ಮುನ್ನ:ಕಳೆದ ಸೋಮವಾರದಿಂದ (ಡಿ.19)ಸದಾಶಿವ ಗೌಡ ನಾಪತ್ತೆಯಾಗಿದ್ದರು. ಬೆತ್ತದಿಂದ ಬುಟ್ಟಿ ಹೆಣೆದು, ಕಾಡಿನಲ್ಲಿ ಸಿಗುವ ಬೆತ್ತ, ರಾಮಪತ್ರೆ ಮತ್ತಿತರ ಸಾಮಗ್ರಿ ಸಂಗ್ರಹಿಸಿ ಮಾರಾಟ ಮಾಡಿ ಸದಾಶಿವ ಗೌಡ ಬದುಕು ನಡೆಸುತ್ತಿದ್ದರು.ಕೆಲವೊಮ್ಮೆ ಬೆತ್ತ ತರಲು ಕಾಡು ಹೊಕ್ಕರೆ ವಾರ ಗಟ್ಟಲೆ ಮನೆಗೆ ಮರಳುತ್ತಿರಲಿಲ್ಲ. ಹಾಗಾಗಿ ಅವರು ವಾರದ ಹಿಂದೆ ಮನೆಯಿಂದ ಹೋದವರು ಮರಳಿ ಬಾರದ ಬಗ್ಗೆ ಕುಟುಂಬದವರು ಹೆಚ್ಚು ತಲೆ ಕೆಡಿಸಿಕೊಂಡಿರಲಿಲ್ಲ.
ಈ ನಡುವೆ ನಕ್ಸಲ್ ನಾಯಕ ವಿಶ್ವ ಎಂಬ ಹೆಸರಿನಿಂದ ಪರಿಚಯಿಸಿಕೊಂಡ ವ್ಯಕ್ತಿಯೊಬ್ಬರು ಗುರುವಾರ (ಡಿ.22)ಕುಂದಾಪುರ ವ್ಯಾಪ್ತಿಯ ಸುದ್ದಿಗಾರರಿಗೆ ಕರೆ ಮಾಡಿದ್ದು,ಪೊಲೀಸ್ ಮಾಹಿತಿದಾರನಾಗಿ ಕಾರ್ಯನಿರ್ವಹಿಸಿದ್ದಕ್ಕಾಗಿ ಸದಾಶಿವ ಗೌಡ ಅವರಿಗೆ ಶಿಕ್ಷೆ ನೀಡಿದ್ದೇವೆ ಎಂದು ತಿಳಿಸಿದ್ದರು.ದೂರವಾಣಿ ಕರೆ ಮಾಡಲು ಅವರು ಸದಾಶಿವ ಗೌಡ ಅವರ ಮೊಬೈಲ್ ಫೋನನ್ನೇ ಬಳಸಿದ್ದು ಕರೆ ಬಂದ ಸಂಖ್ಯೆಯಿಂದ ದೃಢಪಟ್ಟಿತ್ತು.

ಸುದ್ದಿ ತಿಳಿದ ಬಳಿಕ ಮನೆಯವರು ಸದಾಶಿವ ಗೌಡ ಅವರಿಗಾಗಿ ಕಾಡಿನಲ್ಲಿ ಹುಡುಕಾಡಿದ್ದರು. ನಕ್ಸಲ್ ನಿಗ್ರಹ ದಳ ಹಾಗೂ ಸ್ಥಳೀಯ ಪೊಲೀಸರು ಕಾಡಿನಲ್ಲಿ 2-3ದಿನಗಳ ಕಾಲ ಶೋಧಿಸಿದರೂ ಸದಾಶಿವ ಗೌಡ ಅವರ ಬಗ್ಗೆ ಯಾವುದೇ ಸುಳಿವು ದೊರಕಿರಲಿಲ್ಲ.

ಬೆತ್ತ ಸಂಗ್ರಹಿಸಲು ಹೋದಾಗ ಅವರು ಉಳಿಯುತ್ತಿದ್ದ ತೆಂಗುಮಾರಿನ ಮನೆಯಿಂದ ಮೂರು ಕಿ.ಮೀ.ದೂರದಲ್ಲಿ ಮೃತದೇಹ ಪತ್ತೆಯಾಗಿದೆ.ಈ ಸ್ಥಳ ಕಬ್ಬಿನಾಲೆಯಿಂದ 15ಕಿ.ಮೀ. ದೂರದಲ್ಲಿದೆ.ದಟ್ಟ ಕಾಡಿನ ನಡುವಿನ ಈ ಸ್ಥಳ ತಲುಪಲು 8-9ಕಿ.ಮೀ.ದೂರ ನಡಿಗೆಯಲ್ಲೇ ಸಾಗಬೇಕಿದೆ.

ಪೊಲೀಸರಿಗೆ ಮಾಹಿತಿ ನೀಡಿದ್ದಕ್ಕೆ ಕೊಲೆ?

ಮೂಲತಃ ಕಬ್ಬಿನಾಲೆಯವರೇ ಆದ ಸದಾಶಿವ ಗೌಡ ಮಲೆಕುಡಿಯರ ಪೈಕಿ ಇದ್ದುದರಲ್ಲೇ ಸ್ವಲ್ಪ ಅಕ್ಷರ ಜ್ಞಾನ ಹೊಂದಿದವರಾಗಿದ್ದರು.

15ವರ್ಷದ ಹಿಂದೆ ಕಬ್ಬಿನಾಲೆ ತೊರೆದು ಅಜ್ಜಿಯಿಂದ ಬಳುವಳಿಯಾಗಿ ಬಂದ ಕಾರ್ಕಳ ತಾಲ್ಲೂಕಿನ ಈದು ಗುಂಡಿ ಎಂಬಲ್ಲಿನ ಜಮೀನಿನಲ್ಲಿ ಕೃಷಿ ಮಾಡಿಕೊಂಡಿದ್ದರು.ಆ ಮನೆಯೂ ಕಾಡಿನ ನಡುವೆಯೇ ಇದ್ದು,4-5ಕಿ.ಮೀ.ನಡೆದೇ ಸಾಗಬೇಕಿತ್ತು.ಕಾಡಿನ ನಡುವಿನ ಈ ಒಂಟಿ ಮನೆಗೆ ನಕ್ಸಲರು ಆಗಾಗ ಭೇಟಿ ಕೊಡುತ್ತಿದ್ದರು.
 ಹಾಗಾಗಿ ಸದಾಶಿವ ಗೌಡ ಅವರಿಗೂ ನಕ್ಸಲರ ಒಡನಾಟ ಇತ್ತು.ಇದನ್ನು ತಿಳಿದ ಪೊಲೀಸರು ಸದಾಶಿವ ಗೌಡ ಅವರನ್ನು ಕರೆದು ವಿಚಾರಣೆಗೊಳಪಡಿಸಿದ್ದರು.ಇನ್ನೊಂದೆಡೆ ನಕ್ಸಲರ ಶೋಧ ಕಾರ್ಯಕ್ಕೆ ತೆರಳುತ್ತಿದ್ದ ನಕ್ಸಲ್ ನಿಗ್ರಹ ಪಡೆ ಪೊಲೀಸರೂ ಇವರ ಸಂಪರ್ಕದಲ್ಲಿದ್ದರು.
ಕಳೆದ ವರ್ಷ ಈದು ಗುಂಡಿಯ ಮನೆ ಬಿದ್ದುಹೋಗಿದ್ದು,ಬಳಿಕ ಸದಾಶಿವ ಗೌಡ ಅವರು ಕಬ್ಬಿನಾಲೆಗೆ ಮರಳಿ ಸಂಬಂಧಿಕರ ಮನೆಗಳಲ್ಲಿ ಉಳಿದು ಬುಟ್ಟಿ ಹೆಣೆದು ಜೀವಿಸುತ್ತಿದ್ದರು. ಇವರಿಗೆ ಮದುವೆ ಆಗಿರಲಿಲ್ಲ.`ಸದಾಶಿವ ಗೌಡ ಅವರು ಹಿಂದಿನಿಂದಲೂ ಪ್ರಗತಿಪರ ಮನೋಭಾವದವರಾಗಿದ್ದು,ಗ್ರಾಮ ಸಭೆಗಳಲ್ಲಿಯೂ ಭಾಗವಹಿಸಿ ಮಲೆಕುಡಿಯರ ಸಮಸ್ಯೆ ಬಗ್ಗೆ ಅಧಿಕಾರಿಗಳ ಗಮನ ಸೆಳೆಯುತ್ತಿದ್ದರು` ಎಂದು ಗ್ರಾಮಸ್ಥರು ನೆನಪಿಸಿಕೊಂಡಿದ್ದಾರೆ.
ಗುರುತು ಪತ್ತೆ
ಉಡುಪಿ:ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವೈ.ಎಸ್.ರವಿಕುಮಾರ್ ಅವರನ್ನು ಬುಧವಾರ ಸಂಜೆ ಸಂಪರ್ಕಿಸಿದಾಗ ಶವದ ಪತ್ತೆಯಾಗಿರುವುದನ್ನು ಖಚಿತ ಪಡಿಸಿದರು.`ಕಾಡಿನ ನಡುವೆ ಸಿಕ್ಕ ಶವ ನಾಪತ್ತೆಯಾಗಿದ್ದ ಸದಾಶಿವ ಗೌಡನದೇ ಎನ್ನುವುದು ಖಚಿತವಾಗಿದೆ.ಶವವನ್ನು ಆತನ ಮನೆಯವರೂ ಗುರುತಿಸಿದ್ದಾರೆ.ಕಾಡಿನೊಳಗೆ ಬಹಳ ದೂರದಲ್ಲಿ ಶವ ಪತ್ತೆಯಾಗಿರುವ ಕಾರಣ ಶವಪರೀಕ್ಷೆಗಾಗಿ ಗುರುವಾರ ಕಾರ್ಕಳಕ್ಕೆ ತರಲಾಗುವುದು`ಎಂದರು
ನನಗೇನೂ ಭಯವಿಲ್ಲ...

ಸದಾಶಿವ ಗೌಡನಿಗೆ ಮದುವೆಯಾಗದ ಕಾರಣ ಬಂಧುಗಳು 'ನಕ್ಸಲ್‌-ಪೊಲೀಸ್‌' ವ್ಯವಹಾರ ಬೇಡ ಎಂದು ಹೇಳುತ್ತಿದ್ದರೂ ಆತ ಕೇಳುತ್ತಿರಲಿಲ್ಲವಂತೆ.ಸದಾಶಿವ ಗೌಡನ ತಮ್ಮ ರಾಜು ಗೌಡ ಕಬ್ಬಿನಾಲೆಯಲ್ಲಿದ್ದು ಕೂಲಿ ಮಾಡಿ ಬದುಕುತ್ತಿದ್ದಾನೆ. ಪಾಪ ಈತನೇ ಅಣ್ಣನ ನಾಪತ್ತೆ ಪ್ರಕರಣವನ್ನು ಪೊಲೀಸ್‌ ಠಾಣೆಯಲ್ಲಿ ದಾಖಲಿಸಿದ್ದು. ತಂದೆ ತಾಯಿ ಇಲ್ಲ.ಚಿಕ್ಕಮ್ಮ ಶಂಕರಿ,ಚಿಕ್ಕಮ್ಮನ ಮಗಳು ಸುಂದರಿ ಮತ್ತು ಐವರು ತಂಗಿಯರಿದ್ದಾರೆ.ಇವರೆಲ್ಲರೂ ದುಃಖದ ಮಡುವಿನಲ್ಲಿದ್ದಾರೆ.'ಈ ಉಸಾಬಾರಿ ಬೇಡ' ಎಂದು ನಾವು ಸಾಕಷ್ಟು ಬುದ್ಧಿ ಹೇಳಿದ್ದೆವು.'ನಾನು ಮದುವೆಯಾಗಿಲ್ಲ.ನಾನು ಹೆದರುವುದಿಲ್ಲ' ಎಂದು ಹೇಳುತ್ತಿದ್ದ ಎಂದು ಬಂಧುಗಳು ಹೇಳುತ್ತಾರೆ.
ಹೇಗಿದೆ ಭಯಾನಕ ದೃಶ್ಯ?

ತೆಂಗಮಾರಿನಿಂದ ಎರಡು ಕಿ..ದಕ್ಷಿಣಕ್ಕೆ ಇರುವ ದಟ್ಟ ಕಾನನ ಪ್ರದೇಶ ಶಾಂತಬೋಳೇರಿಗುಡ್ಡದಲ್ಲಿ ಭಯಾನಕವಾದ ಹಿಂಸೆ ನಡೆದಿದೆ.ತೆಂಗಮಾರಿನಿಂದ ಹೋಗುವಾಗ ಒಂದು ಹುಲ್ಲುಗಾವಲು ಸಿಗುತ್ತದೆ.ಅನಂತರ ಮತ್ತೆ ದೊಡ್ಡ ಅರಣ್ಯ ಸಿಗುತ್ತದೆ.ಸಣ್ಣ ಅರೆಕಲ್ಲಿನ ನಡುವೆ ಇರುವ ಗೋಳಿಮರವೊಂದರ ಕೆಳಗೆ ಇದ್ದ ಸಣ್ಣ ಮರಕ್ಕೆ ಸದಾಶಿವ ಗೌಡನನ್ನು ಕಟ್ಟಿ ಹಾಕಿದ್ದಾರೆ.ಅರ್ಧ ಕೂತಂತ ಭಂಗಿ ಕಾಣುತ್ತದೆ. ಸೊಂಟಕ್ಕೆ ಬಟ್ಟೆಯಿಂದ ಕಟ್ಟಿದ್ದರೆ,ಕೈಯನ್ನು ಮುಂದೆ ಮಾಡಿ ನೈಲಾನ್‌ ಹಗ್ಗದಿಂದ ಕಟ್ಟಿದ್ದಾರೆ.ಮುಖಕ್ಕೆ (ಕಣ್ಣು-ಬಾಯಿ)ಮಿಲಿಟರಿ ಬಟ್ಟೆ ಕಟ್ಟಿದ್ದಾರೆ.ಬುಲೆಟ್‌ನಿಂದ ಗುಂಡು ಹಾರಿಸಿ ಕೊಂದಿರಬಹುದು ಎಂಬ ಶಂಕೆ ಇದ್ದರೂ ಗುಂಡು ಹಾರಿದ ಚಿಹ್ನೆಗಳು ಕಾಣುತ್ತಿಲ್ಲ.ಕಾಲಿನಲ್ಲಿ ಸ್ವಲ್ಪ ಗಾಯವಾಗಿ ರಕ್ತ ಬಂದಂತಿದೆ.ಕೊಲೆ ನಡೆದು ನಾಲ್ಕೈದು ದಿನಗಳಾಗಿರಬಹುದು ಎಂದು ಶಂಕಿಸಲಾಗುತ್ತಿದೆ.ಈ ಶಂಕೆಗೆ ಪೂರಕವಾಗಿ ದೇಹ ಅಲ್ಲಲ್ಲಿ ಕೊಳೆತಿರುವುದು ಕಂಡುಬಂದಿದೆ.ಚರ್ಮವನ್ನು ಮುಟ್ಟಿದರೆ ಸುಲಿದು ಬರುವ ಸ್ಥಿತಿ ಇದೆ.ಬಾಯಿ ಕಟ್ಟಿರುವುದು ಕೂಗಬಾರದು ಎಂಬ ಉದ್ದೇಶಕ್ಕೆ ಇರಬಹುದು.ಕೋಲಿನಲ್ಲಿ ಹೊಡೆದಿರುವ ಸಾಧ್ಯತೆ ಹೆಚ್ಚಿಗೆ ಇದೆ.ಪ್ಯಾಂಟ್‌ ಜಿಪ್‌ ಹರಿದು ಹೋಗಿರುವುದರಿಂದ ಮರ್ಮಾಂಗಕ್ಕೆ ಚಿತ್ರಹಿಂಸೆ ಕೊಟ್ಟಿರಬಹುದು.


ಮಾವೋವಾದಿ ಜಿಂದಾಬಾದ್‌...!

ಸದಾಶಿವ ಗೌಡನ ಕಳೇಬರವಿರುವಲ್ಲಿ 'ಮಾವೋವಾದಿ ಜಿಂದಾಬಾದ್‌,ಕರಾವಳಿ ಏರಿಯಾ ಸಮಿತಿ' ಎಂದು ಬರೆದ ಕಾಗದ ಸಿಕ್ಕಿದೆ.
ಕಳೇಬರಕ್ಕೆ ಪೊಲೀಸ್‌ ಕಾವಲು

ಕಳೆದ ಕೆಲವು ದಿನಗಳಿಂದ ನಡೆಯುತ್ತಿದ್ದ ಕೂಂಬಿಂಗ್‌ ಬುಧವಾರ ಒಂದು ಘಟ್ಟಕ್ಕೆ ತಲುಪಿದೆ.ಕಾರ್ಕಳ ಗ್ರಾಮಾಂತರ ಸಿಪಿಐ ವಿಜಯಪ್ರಸಾದ್‌ ನೇತೃತ್ವದ ತಂಡ ಎಂದಿನಂತೆ ಕೂಂಬಿಂಗ್‌ ಮಾಡುವಾಗ ತೆಂಗಮಾರಿನಿಂದ ದಕ್ಷಿಣಕ್ಕೆ ತೆರಳಿತು.ಆಗ ವಾಸನೆ ಬಂದಾಗ ಸಂಶಯಗೊಂಡು ಪತ್ತೆ ಕಾರ್ಯಕ್ಕೆ ಮುಂದಾದರು.ಸಮೀಪದಲ್ಲಿ ಭಯಾನಕ ದೃಶ್ಯ ಕಣ್ಣಿಗೆ ಬಿತ್ತು.
ಸ್ಥಳಕ್ಕೆ ಎಎನ್‌ಎಫ್ ಕಮಾಂಡೆಂಟ್‌ ಅಲೋಕ್‌ ಕುಮಾರ್‌,ಎಸ್ಪಿ ಡಾ|ರವಿಕುಮಾರ್‌, ಕಾರ್ಕಳ ಡಿವೈಎಸ್ಪಿ ಸಂತೋಷಕುಮಾರ್‌,ಡಿಸಿಐಬಿ ಸಿಪಿಐ ಗಣೇಶ್‌ ಹೆಗಡೆ ಮೊದಲಾದವರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.ಸ್ಥಳದಲ್ಲೀಗ ಸುಮಾರು 75 ಪೊಲೀಸರು ಪಹರೆ ಕಾಯುತ್ತಿದ್ದಾರೆ.

ಅಲ್ಲಿಗೆ ವೈದ್ಯರನ್ನು ಕರೆದೊಯ್ದು ಮರಣೋತ್ತರ ಪರೀಕ್ಷೆ ನಡೆಸುವುದು ಅಸಾಧ್ಯವಾದ ಕಾರಣ ಕಳೇಬರವನ್ನು ತಂದು ಗುರುವಾರ ಮರಣೋತ್ತರ ಪರೀಕ್ಷೆ ನಡೆಸುವ ಸಾಧ್ಯತೆ ಇದೆ

Advertisement

0 comments:

Post a Comment

 
Top