ಬೆಂಗಳೂರು, ಡಿ.21: ವಿಧಾನ ಪರಿಷತ್ತಿನ ಒಂದು ಸ್ಥಾನಕ್ಕೆ ನಡೆಯಲಿರುವ ಚುನಾವಣೆಯಲ್ಲಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಗೆಲುವು ಬಹುತೇಕ ಖಚಿತವಾಗಿದೆ. ವಿಧಾನಸೌಧದಲ್ಲಿ ಬೆಳಗ್ಗೆ 9 ಗಂಟೆಯಿಂದ ಸಂಜೆ 4ರ ವರೆಗೆ ಮತದಾನ ನಡೆಯಲಿದ್ದು, ಸಂಜೆ 5 ಗಂಟೆಯೊಳಗೆ ಫಲಿತಾಂಶ ಪ್ರಕಟಗೊಳ್ಳಲಿದೆ. ಮುಖ್ಯಮಂತ್ರಿ ಸದಾನಂದ ಗೌಡರ ವಿರುದ್ಧವಾಗಿ ಕಾಂಗ್ರೆಸ್‌ನ ಆನಂದ ಗಡ್ಡದೇವರಮಠ ಸ್ಪರ್ಧೆಗಿಳಿದಿದ್ದು, ನಾಳೆ ಇವರಿಬ್ಬರ ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ.
ಸದಾನಂದ ಗೌಡ ಮುಖ್ಯಮಂತ್ರಿಯಾಗಿ ಉಳಿಯುತ್ತಾರೋ ಅಥವಾ ಸಂಸದರಾಗಿ ಮುಂದುವರಿಯುತ್ತಾರೋ ಎಂಬುದನ್ನು ನಾಳೆ ನಡೆಯಲಿರುವ ಚುನಾವಣೆ ನಿರ್ಧರಿಸಲಿದೆ. ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದು ಕೊಂಡಿರುವ ಬಿಜೆಪಿ ಗೆಲುವು ತಮ್ಮದೇ ಎಂದು ಬೀಗುತ್ತಿದೆಯಾದರೂ, ಇನ್ನೊಂದೆಡೆ ಪಕ್ಷದೊಳಗಿನ ಗುಂಪುಗಾರಿಕೆಯಿಂದ ಅಡ್ಡಮತದಾನದ ಭೀತಿಯೂ ಅದು ಎದುರಿಸುತ್ತಿದೆ. ಈ ಹಿನ್ನೆಲೆಯಲ್ಲಿಂದು ನಗರದ ಹೊರವಲಯದ ಗೋಲ್ಡನ್ ಫಾರ್ಮ್ ರೇಸಾರ್ಟ್‌ನಲ್ಲಿ ತಮ್ಮ ಶಾಸಕರನ್ನೆಲ್ಲ ಸೇರಿಸಿ ಸಭೆ ನಡೆಸಿದೆ. ಜೊತೆಗೆ ಶಾಸಕರ ಮೇಲೆ ವಿಪ್ ಕೂಡಾ ಜಾರಿ ಮಾಡಿದೆ.
ವಿಧಾನ ಪರಿಷತ್ತಿಗೆ ಮುಖ್ಯಮಂತ್ರಿ ಸದಾನಂದ ಗೌಡ ಸ್ಪರ್ಧೆಗಿಳಿದಿರುವುದರಿಂದ ಚುನಾವಣೆ ಮತ್ತಷ್ಟು ರಂಗು ಪಡೆದಿದ್ದು, ಗೆಲುವಿಗಾಗಿ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರಿಂದು ರಣತಂತ್ರ ನಡೆಸಿದ್ದಾರೆ. ಜೆಡಿಎಸ್ ಚುನಾವಣೆಯಲ್ಲಿ ತಟಸ್ಥವಾಗಿರು ವುದು ಕಾಂಗ್ರೆಸ್‌ಗೆ ಹಿನ್ನಡೆಯನ್ನುಂಟು ಮಾಡಿದ್ದು, ಜೊತೆಗೆ 5 ಮಂದಿ ಪಕ್ಷೇತರರು ಕೂಡಾ ಬಿಜೆಪಿ ಪರ ನಿಂತಿರುವುದು ಸದಾನಂದ ಗೌಡ ಗೆಲುವಿಗೆ ಮೆಟ್ಟಿಲಾಗಿದೆ. ಜೆಡಿಎಸ್ ಚುನಾವಣೆಯ ಕುರಿತು ಯಾವುದೇ ಸ್ಪಷ್ಟ ನಿರ್ಧಾರ ಪ್ರಕಟಿಸದೆ ತಟಸ್ಥವಾಗಿರುವುದರಿಂದ ಪಕ್ಷೇತರರು ಬಿಜೆಪಿಗೆ ಬೆಂಬಲಿಸುವುದಾಗಿ ಹೇಳಿದ್ದು, ಇನ್ನೊಂದೆಡೆ ಬಳ್ಳಾರಿ ಶಾಸಕ ಶ್ರೀರಾಮುಲು ಕೂಡಾ ಮತದಾನದಿಂದ ಹಿಂದೆ ಸರಿದಿದ್ದು, ಕಾಂಗ್ರೆಸ್ ಗೆಲುವಿಗೆ ಹಿನ್ನಡೆಯುಂಟು ಮಾಡಿದೆ.
ವಿಧಾನಸಭೆಯು ಒಟ್ಟು 225 ಶಾಸಕರ ಸಂಖ್ಯಾಬಲವನ್ನು ಹೊಂದಿದೆ. ಸಭಾಧ್ಯಕ್ಷ ಹಾಗೂ ನಾಮನಿರ್ದೇಶಕ ಸದಸ್ಯನಿಗೂ ಮತದಾನದ ಹಕ್ಕು ನೀಡಲಾಗಿದೆ. ಸಭಾಧ್ಯಕ್ಷ ಬೋಪಯ್ಯ ಹಾಗೂ ನಾಮನಿರ್ದೇಶನ ಸದಸ್ಯ ಸೇರಿದಂತೆ ಬಿಜೆಪಿ ಬಲ 121, ಕಾಂಗ್ರೆಸ್ 71, ಜೆಡಿಎಸ್ 26, ಪಕ್ಷೇತರರು 7 ಮಂದಿ ಇದ್ದಾರೆ. ಈ ಪೈಕಿ ವರ್ತೂರು ಸೇರಿದಂತೆ 6 ಮಂದಿ ಬಿಜೆಪಿಗೆ ಬೆಂಬಲಿಸಿರುವುದರಿಂದ ಬಿಜೆಪಿ ಒಟ್ಟು 127 ಶಾಸಕರ ಸಂಖ್ಯಾಬಲವನ್ನು ಹೊಂದಿದೆ. ಜೆಡಿಎಸ್ ಹಾಗೂ ಶ್ರೀರಾಮುಲು ದೂರ ಉಳಿದಿರುವುದರಿಂದ ನಾಳಿನ ಮತದಾನ ಯಾವ ಹಾದಿಯತ್ತ ಸಾಗಲಿದೆ ಎಂಬುದು ನಿಗೂಢವಾಗಿದೆ.
0 comments:
Post a Comment