PLEASE LOGIN TO KANNADANET.COM FOR REGULAR NEWS-UPDATES


ವಿಧಾನಸಭೆಯಲ್ಲಿ ಸದಾನಂದ ಗೌಡರಿಂದ ಪ್ರಕಟ ♦   ಮೇಯರ್, ಉಪ ಮೇಯರ್ ಉಚ್ಚಾಟನೆ

ಬೆಂಗಳೂರು, ಡಿ.15: ಕನ್ನಡ ವಿರೋಧಿ ಚಟುವಟಿಕೆ, ಆಡಳಿತ ವೈಫಲ್ಯದ ಹಿನ್ನೆಲೆಯಲ್ಲಿ ಬೆಳಗಾವಿ ಮಹಾನಗರ ಪಾಲಿಕೆಯನ್ನು ಸರಕಾರ ಸೂಪರ್ ಸೀಡ್ ಮಾಡಿ ಅಧಿಕೃತ ಆದೇಶ ಹೊರಡಿಸಿದೆ. ಕನ್ನಡ ರಾಜ್ಯೋತ್ಸವದ ದಿನದಂದೇ ಕರಾಳ ದಿನಾಚರಣೆ ಮಾಡುವ ಮೂಲಕ ಕನ್ನಡ ವಿರೋಧಿ ಧೋರಣೆ ತಳೆದಿದ್ದ ಬೆಳಗಾವಿ ಮಹಾನಗರ ಪಾಲಿಕೆಯನ್ನು ರಾಜ್ಯ ಸರಕಾರ ಸೂಪರ್ ಸೀಡ್ ಮಾಡಿದೆ. ಬೆಳಗಾವಿ ಮಹಾನಗರ ಪಾಲಿಕೆಯನ್ನು ಸೂಪರ್ ಸೀಡ್ ಮಾಡಿರುವುದನ್ನು ವಿಧಾನಸಭೆಯಲ್ಲಿಂದು ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಸ್ಪಷ್ಟಪಡಿಸಿದ್ದಾರೆ.
ನ.1ರ ಕನ್ನಡ ರಾಜ್ಯೋತ್ಸವದಂದು ಎಂಇಎಸ್‌ನ ಕರಾಳ ದಿನಾಚರಣೆಯಲ್ಲಿ ಭಾಗಿಯಾಗಿದ್ದು, ಜೊತೆಗೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಚಂದ್ರಶೇಖರ ಕಂಬಾರರ ಅಭಿನಂದನಾ ಸಮಾರಂಭಕ್ಕೆ ವಿರೋಧ ವ್ಯಕ್ತಪಡಿಸಿ ಕನ್ನಡ ದ್ರೋಹ ವರ್ತನೆ ಪ್ರದರ್ಶಿಸಿದ ಹಿನ್ನೆಲೆಯಲ್ಲಿ ಸರಕಾರ ಮೇಯರ್- ಉಪಮೇಯರ್‌ಗೆ ನೋಟಿಸ್ ಜಾರಿ ಮಾಡಿತ್ತು. ಆದರೆ, ಸರಕಾರದ ನೋಟಿಸ್‌ಗೆ ಸಮರ್ಪಕ ಉತ್ತರ ನೀಡದ ಹಿನ್ನೆಲೆಯಲ್ಲಿ ಪಾಲಿಕೆಯ ಸೂಪರ್ ಸೀಡ್‌ಗೆ ಸರಕಾರ ನಿರ್ಧಾರ ಮಾಡಿದೆ.
ಪಾಲಿಕೆಯಲ್ಲಿ ಕನ್ನಡ ವಿರೋಧಿ ನೀತಿ, ಆಡಳಿತ ವೈಫಲ್ಯ, ಅಭಿವೃದ್ಧಿ ಕಾಮಗಾರಿಗಳು ನಿರೀಕ್ಷಿತ ಮಟ್ಟದಲ್ಲಿ ಜಾರಿಯಾಗದಿರುವುದು ಸೇರಿದಂತೆ ಹಲವು ಕಾರಣಗಳನ್ನು ನೀಡಿ ಸರಕಾರ ಸೂಪರ್ ಸೀಡ್‌ಗೆ ಆದೇಶ ಮಾಡಿದೆ. ಬೆಳಗಾವಿ ಪಾಲಿಕೆಯನ್ನು ಸೂಪರ್ ಸೀಡ್ ಮಾಡಿರುವ ಸರಕಾರ, ಪಾಲಿಕೆಗೆ ಆಡಳಿತಾಧಿಕಾರಿಯನ್ನು ನೇಮಕ ಮಾಡಲು ನಿರ್ಧರಿಸಿದೆ.
ವಿಧಾನಸಭೆಯಲ್ಲಿಂದು ಈ ಕುರಿತು ಮಾತನಾಡಿದ ಮುಖ್ಯಮಂತ್ರಿ ಸದಾನಂದ ಗೌಡ, ‘ಬೆಳಗಾವಿ ಮಹಾನಗರ ಪಾಲಿಕೆ ತನ್ನ ಆದ್ಯ ಕರ್ತವ್ಯವನ್ನು ಕೈಗೊಳ್ಳುವಲ್ಲಿ ವಿಫಲವಾಗಿದೆ. ಜೊತೆಗೆ ಈ ಸಂಬಂಧ ಸರಕಾರ ಆಗಿಂದಾಗ್ಗೆ ನೀಡುತ್ತಾ ಬಂದಿರುವ ಎಚ್ಚರಿಕೆಯನ್ನು ನಿರ್ಲಕ್ಷಿಸುತ್ತಾ ಬಂದಿರುತ್ತದೆ. ರಾಜ್ಯದ ಜನರ ಭಾವನೆಗಳಿಗೆ ಧಕ್ಕೆ ತರುವ ರೀತಿಯಲ್ಲಿ ಪಾಲಿಕೆ ಹಾಗೂ ಮಹಾಪೌರರು ನಡೆದುಕೊಂಡಿದ್ದಾರೆ. ಬೆಳಗಾವಿ ಮಹಾನಗರ ಪಾಲಿಕೆಯ ಈ ಎಲ್ಲ ನಡವಳಿಕೆಯನ್ನು ಗಮನಿಸಿರುವ ಸರಕಾರ ಪಾಲಿಕೆಯನ್ನು ವಿಸರ್ಜಿಸಿದೆ’ ಎಂದು ಪ್ರಕಟಿಸಿದರು. ಬೆಳಗಾವಿ ಪಾಲಿಕೆಯನ್ನು ಸೂಪರ್ ಸೀಡ್ ಮಾಡದಂತೆ ಕೆಲವು ರಾಜಕೀಯ ಮುಖಂಡರು ಮುಖ್ಯಮಂತ್ರಿಯ ಮೇಲೆ ಒತ್ತಡವೇರಿದ್ದಾರೆನ್ನಲಾಗಿದೆ.
ಈ ಮಧ್ಯೆ ಬೆಳಗಾವಿ ಮಹಾನಗರ ಪಾಲಿಕೆಯನ್ನು ಸೂಪರ್‌ಸೀಡ್ ಮಾಡಬಾರದೇಕೆ ಎಂದು ಕಾರಣ ಕೇಳಿ ಸರಕಾರ ನೀಡಿದ್ದ ಶೋಕಾಸ್ ನೋಟಿಸ್‌ಗೆ ಮೇಯರ್ ಮಂದಾ ಬಾಳೆಕುಂದ್ರಿ ಕನ್ನಡದಲ್ಲಿಯೇ ಉತ್ತರಿಸಿ ಸರಕಾರದ ಮನವೊಲಿಸಲು ಮುಂದಾಗಿದ್ದರು. ಸರಕಾರದ 20 ಅಂಶಗಳ ಪ್ರಶ್ನೆಗೆ ಮಂದಾ ಬಾಳೆಕುಂದ್ರಿ ಕನ್ನಡದಲ್ಲಿ ಉತ್ತರಿಸಿದ್ದರೆ, ಮಾಧ್ಯಮಗಲು ಹಾಗೂ ಮರಾಠಿ ಸಂಘ-ಸಂಸ್ಥೆಗಳಿಗೆ ಇಂಗ್ಲಿಷ್‌ನಲ್ಲಿ ಉತ್ತರಿಸಿದ್ದರು. ಆದರೆ ಸರಕಾರ ಸೂಕ್ತ ಉತ್ತರ ನೀಡದ ಹಿನ್ನೆಲೆಯಲ್ಲಿ ಪಾಲಿಕೆಯನ್ನು ಸೂಪರ್ ಸೀಡ್ ಮಾಡಿ ಆದೇಶ ಹೊರಡಿಸಿದೆ.
ಮೇಯರ್, ಉಪ ಮೇಯರ್ ಉಚ್ಚಾಟನೆ
ಸೂಪರ್ ಸೀಡ್ ಕುರಿತು ಸರಕಾರ ಹೊರಡಿಸಿದ್ದ ನೋಟಿಸ್‌ಗೆ ಮೇಯರ್ ಮಂದಾ ಬಾಳೆಕುಂದ್ರಿ ಹಾಗೂ ಉಪ ಮೇಯರ್ ರೇಣು ಕಿಣೇಕರ್ ಕನ್ನಡದಲ್ಲಿಯೇ ಉತ್ತರಿಸಿದ್ದಕ್ಕಾಗಿ ಎಂಇಎಸ್‌ನಿಂದ ಅವರನ್ನು ಉಚ್ಚಾಟಿಸಲಾಗಿದೆ.
ಈ ಕುರಿತು ಮಾತನಾಡಿರುವ ಎಂಇಎಸ್ ನಗರ ಘಟಕ ಅಧ್ಯಕ್ಷ ಟಿ.ಕೆ.ಪಾಟೀಲ್, ಮರಾಠಿಗರ ಭಾವನೆಗಳಿಗೆ ಮೇಯರ್ ಹಾಗೂ ಉಪಮೇಯರ್ ನೋವುಂಟು ಮಾಡಿದ್ದಾರೆ. ಆದ್ದರಿಂದ ಅವರಿಬ್ಬರನ್ನು ಉಚ್ಚಾಟಿಸಲಾಗಿದೆ ಎಂದಿದ್ದಾರೆ.

Advertisement

0 comments:

Post a Comment

 
Top