PLEASE LOGIN TO KANNADANET.COM FOR REGULAR NEWS-UPDATES


ದಿನವಿಡೀ ಚರ್ಚೆ ನಡೆಸಿದ ನಂತರವೂ ವಿವಾದಿತ ಲೋಕಪಾಲ ಮಸೂದೆಗೆ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಅನುಮೋದನೆ ಸಿಗಲಿಲ್ಲ. ರಾಜ್ಯ ಸಭೆಯಲ್ಲಿ ಮಸೂದೆ ಅಂಗೀಕಾರಕ್ಕೆ ಅವಶ್ಯವಿರುವಷ್ಟು ಮತಗಳನ್ನು ಗೆಲ್ಲಲು ಸಾಧ್ಯವಾಗದೆ ಸಮಯದ ಅಭಾವದ ನೆಪ ಹೇಳಿ ಕಲಾಪವನ್ನು ಮುಂದೂಡಲಾಯಿತು. ಸಂಖ್ಯೆಯ ಆಟದಲ್ಲಿ ಅಗತ್ಯವಿರುವಷ್ಟು ಸದಸ್ಯರನ್ನು ಒಟ್ಟುಗೂಡಿಸುವಲ್ಲಿ ಯುಪಿಎ ಸರಕಾರ ವಿಫಲಗೊಂಡಿದೆ. ಹೀಗಾಗಿ ಬಹು ನಿರೀಕ್ಷಿತವಾಗಿದ್ದ ಲೋಕಪಾಲ ಮಸೂದೆ ಮುಂದಿನ ಅಧಿವೇಶನಕ್ಕೆ ಮುಂದೂಡಲ್ಪಟ್ಟಿತು. ಯುಪಿಎಯ ಮಿತ್ರಪಕ್ಷಗಳು ಕೈಕೊಟ್ಟ ಪರಿಣಾಮವಾಗಿ ಲೋಕಪಾಲ ಮಸೂದೆಗೆ ಸೋಲುಂಟಾಗಬಹುದೆಂಬ ಭೀತಿಯಲ್ಲಿ ಸರಕಾರವು ಕುಂಟು ನೆಪ ನೀಡಿ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡಿತು. ಒಟ್ಟು 243 ಸದಸ್ಯ ಬಲದ ಮೇಲ್ಮನೆಯಲ್ಲಿ ಮಸೂದೆಯ ಅಂಗೀಕಾರಕ್ಕೆ 122 ಮತಗಳ ಆವಶ್ಯಕತೆಯಿದೆ. ಕಾಂಗ್ರೆಸ್ ಮಿತ್ರ ಪಕ್ಷಗಳು ಹಾಗೂ ಬಾಹ್ಯ ಬೆಂಬಲ ನೀಡಿದ ಸದಸ್ಯರನ್ನು ಒಟ್ಟುಗೂಡಿಸಿದರೂ ಸಂಖ್ಯೆ 114 ನ್ನು ದಾಟುತ್ತಿರಲಿಲ್ಲ. ಕಡಿಮೆ ಬಿದ್ದ 5-6 ಸದಸ್ಯರನ್ನು ಒಟ್ಟುಗೂಡಿಸುವಲ್ಲಿ ಸರಕಾರ ಯಶಸ್ವಿಯಾಗಲಿಲ್ಲ.
ಲೋಕಪಾಲ ಮಸೂದೆ ಅಂಗೀಕಾರವಾಗದಿರಲು ಯಾರು ಕಾರಣ ಎಂದು ಜಿಜ್ಞಾಸೆಗೆ ಹೊರಟರೆ, ಕಾಂಗ್ರೆಸ್ ಒಂದೇ ಕಾರಣ ಎಂದು ಹೇಳಿದರೆ ಪಕ್ಷಪಾತ ಮಾಡಿದಂತಾಗುತ್ತದೆ. ಮುಖ್ಯ ಪ್ರತಿಪಕ್ಷವಾದ ಬಿಜೆಪಿಯೂ ಈ ವೈಫಲ್ಯದ ಹೊಣೆ ಹೊರಬೇಕಾಗುತ್ತದೆ. ಅದು ಜವಾಬ್ದಾರಿಯಿಂದ ನಡೆದುಕೊಂಡಿದ್ದರೆ ಇಂತಹ ಪರಿಸ್ಥಿತಿ ಉಂಟಾಗುತ್ತಿರಲಿಲ್ಲ. ಆದರೂ ರಾಷ್ಟ್ರಕ್ಕೆ ನೀಡಿದ ಭರವಸೆಯನ್ನು ಈಡೇರಿಸುವಲ್ಲಿ ವಿಫಲಗೊಂಡ ಕಾಂಗ್ರೆಸ್ ನೇತೃತ್ವದ ದ್ವಿತೀಯ ಯುಪಿಎ ಸರಕಾರ ವಚನ ಭ್ರಷ್ಟವೇ ಆಯಿತು ಎಂದು ಹೇಳಿದರೆ ಅತಿಶಯೋಕ್ತಿಯಲ್ಲ.
ಲೋಕಪಾಲ ಮಸೂದೆಯೊಂದರಿಂದಲೇ ನಮ್ಮ ಸಮಾಜದಲ್ಲಿ ಬೇರು ಬಿಟ್ಟಿರುವ ಭ್ರಷ್ಟಾಚಾರವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಸಾಧ್ಯವಿಲ್ಲ.ಆದರೆ ಲೋಕಪಾಲದಂತಹ ಕಟ್ಟುನಿಟ್ಟಿನ ವ್ಯವಸ್ಥೆ ಇದ್ದರೆ ಲಂಚಕೋರತನವನ್ನು ಒಂದಿಷ್ಟಾದರೂ ನಿಯಂತ್ರಿಸಬಹುದು.ಆದರೆ, ಅದಕ್ಕೆ ಅಗತ್ಯವಿರುವ ರಾಜಕೀಯ ಇಚ್ಛಾಶಕ್ತಿಯನ್ನು ಯುಪಿಎ ಸರಕಾರ ತೋರಿಸಲಿಲ್ಲ. ಜನ ಬೆಂಬಲವಿಲ್ಲದೆ ಅಣ್ಣಾ ಹಝಾರೆ ತನ್ನ ನಿರಶನ ಪ್ರಹಸನವನ್ನು ಮುಗಿಸಿದ ನಂತರ ಲೋಕಸಭೆಯಲ್ಲಿ ವಿಧೇಯಕವನ್ನು ಅಂಗೀಕರಿಸಿದರು. ಲೋಕಸಭೆಯಲ್ಲಿ ಅಂಗೀಕಾರವಾದ ಮಸೂದೆಯಂತೆ ರಚನೆಯಾಗುವ ಈ ಲೋಕಪಾಲ್ ಕಾನೂನಿಗೆ ಸಾಂವಿಧಾನಿಕ ಸ್ಥಾನಮಾನ ನೀಡಲು ಆಗುತ್ತಿರಲಿಲ್ಲ.
ಈ ವಿಧಿಯನ್ನು ಬಿಜೆಪಿ ವಿರೋಧಿಸಿರುವುದರಿಂದ ಸಂವಿಧಾನ ಬದಲಾವಣೆಗೆ ಬೇಕಾಗಿದ್ದ 273 ಮತಗಳು ಕೂಡಾ ಸಿಗಲಿಲ್ಲ. ಬಿಜೆಪಿ ಮೊದಲು ಒಪ್ಪಿಕೊಂಡು ಆನಂತರ ಕೈಕೊಟ್ಟಿತು. ಅದಕ್ಕೆ ಮಸೂದೆ ಅಂಗೀಕಾರವಾದುದೇ ಕಾರಣವಾಗಿದೆ. ಸರಕಾರ ಮಂಡಿಸಿದ ಲೋಕಪಾಲ ವಿಧೇಯಕ ಅನೇಕ ಲೋಪಗಳಿಂದ ಕೂಡಿದ್ದು. ರಾಜ್ಯಗಳ ಲೋಕಾಯುಕ್ತರ ನೇಮಕದ ಕುರಿತು ಮಸೂದೆಯಲ್ಲಿ ಸೇರಿಸಲ್ಪಟ್ಟ ಅಂಶ ರಾಷ್ಟ್ರದ ಒಕ್ಕೂಟ ವ್ಯವಸ್ಥೆಗೆ ಮಾರಕವಾಗಿತ್ತು. ಲೋಕಾಯುಕ್ತರ ನೇಮಕ ವಿಷಯ ಆಯಾ ರಾಜ್ಯಗಳ ಅಧಿಕಾರದ ವ್ಯಾಪ್ತಿಗೆ ಸೇರಿದ ವಿಷಯ. ಈ ಸಾಂವಿಧಾನಿಕವಾದ ಅಂಶವೇ ಸರಕಾರದ ಮಸೂದೆಯಲ್ಲಿ ಸೇರ್ಪಡೆಯಾಗಿರಲಿಲ್ಲ.
ಸರಕಾರದ ಮಸೂದೆಯಲ್ಲಿ ಕಾರ್ಪೊರೇಟ್ ಕಂಪೆನಿಗಳ ಭ್ರಷ್ಟಾಚಾರದ ಬಗ್ಗೆ ಜಾಣ ವೌನ ತಾಳಲಾಗಿದೆ. ಇದು ಕೂಡಾ ಎಡ ಪಕ್ಷಗಳ ವಿರೋಧಕ್ಕೆ ಕಾರಣವಾದ ಅಂಶವಾಗಿದೆ. ಲೋಕಪಾಲದಂತಹ ಮಹತ್ವದ ಮಸೂದೆಯನ್ನು ಮಂಡಿಸುವಾಗ ಸರಕಾರ ಎಚ್ಚರದ ಹೆಜ್ಜೆ ಇಡಬೇಕಾಗಿದೆ. ಮಿತ್ರ ಪಕ್ಷಗಳನ್ನು ಮಾತ್ರವಲ್ಲ, ಪ್ರಮುಖ ಪ್ರತಿಪಕ್ಷಗಳನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳ ಬೇಕಾಗಿದೆ. ಇಡೀ ಭಾರತದ ರಾಷ್ಟ್ರೀಯ ಮಾತ್ರವಲ್ಲ ಸಾಮಾಜಿಕ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಆಳವಾಗಿ ಬೇರೂರಿದೆ. ಭ್ರಷ್ಟಾಚಾರದ ವಿಷ ಚಕ್ರಕ್ಕೆ ಬಲಿಪಶುಗಳಾಗಿರುವ ಸಾಮಾನ್ಯ ಜನರು ಅಣ್ಣಾ ಹಝಾರೆಯವರ ಚಳವಳಿಯಲ್ಲಿ ಭರವಸೆಯ ಬೆಳಕನ್ನು ಕಂಡರು.
ಆದರೆ, ಹಝಾರೆಗೆ ಸಂಘಪರಿವಾರದ ಕೈಗೊಂಬೆಯಾಗಿ ಜನರ ನಂಬಿಕೆಯನ್ನು ಉಳಿಸಿಕೊಳ್ಳಲು ಆಗಲಿಲ್ಲ. ಅಂತಲೇ ಬರಲಿರುವ 5 ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಹಝಾರೆ ನೇರವಾಗಿ ಬಿಜೆಪಿಗೆ ಅನುಕೂಲವಾಗುವ ರೀತಿಯಲ್ಲಿ ಪ್ರಚಾರಕ್ಕೆ ಇಂಬು ಕೊಡುವ ಮೂಲಕ ತನ್ನ ನಿಜಸ್ವರೂಪ ತೋರಿಸಲಿದ್ದಾರೆ. ಇಂಥ ಸನ್ನಿವೇಶದಲ್ಲಿ ಲೋಕಪಾಲ ಮಸೂದೆಗೆ ಈ ಹಿಂದಿನ ಮಹಿಳಾ ಮೀಸಲಾತಿ ಮಸೂದೆಗೆ ಉಂಟಾದ ಗತಿ ಒದಗಬಾರದು. ಅದರಂತೆ ಇದನ್ನು ನನೆಗುದಿಗೆ ತಳ್ಳಬಾರದು. ಈ ನಿಟ್ಟಿನಲ್ಲಿ ಸಂಘ ಪರಿವಾರ ಮತ್ತು ಅಣ್ಣಾ ಹಝಾರೆಯವರನ್ನು ದೂರವಿಟ್ಟು, ಪ್ರಗತಿಪರ ಶಕ್ತಿಗಳ ಪಕ್ಷಾತೀತ ಹೋರಾಟ ನಡೆಯ ಬೇಕಾಗಿದೆ. - Editorial VarthaBharati

Advertisement

0 comments:

Post a Comment

 
Top