ಮೂರು ದಿನಗಳ ಸಾಹಿತ್ಯ ಜಾತ್ರೆ ಮುಗಿದಿದೆ.ಆದರೆ ಅಲ್ಲಿ ಮೊಳಗಿದ ಕನ್ನಡ ಕಲರವದ ತರಂಗಗಳು ಇನ್ನೂ ಅಲೆ ಅಲೆಯಾಗಿ ಅನುರಣಿಸುತ್ತಲೇ ಇವೆ.ಈ ಬಾರಿ ಇಡೀ ಸಾಹಿತ್ಯ ಸಮ್ಮೇಳನ ಮುಚ್ಚುತ್ತಿರುವ ಕನ್ನಡ ಶಾಲೆಗಳ ಕುರಿತಂತೆ ತನ್ನ ಆತಂಕವನ್ನು ವ್ಯಕ್ತಪಡಿಸಿರುವುದು ಗಮನಾರ್ಹವಾಗಿತ್ತು. ಬಹುಶಃ ಸಾಹಿತ್ಯ ಸಮ್ಮೇಳನದಲ್ಲಿ ಅಲುಗಾಡುತ್ತಿರುವ ಕನ್ನಡದ ಬೇರಿನ ಕುರಿತಂತೆ ಆತಂಕ ವ್ಯಕ್ತವಾದುದು ಇದೇ ಮೊದಲ ಬಾರಿಯದಾಗಿದೆ.ಮಾತನಾಡಿದವರೆಲ್ಲರೂ ಮುಚ್ಚುತ್ತಿರುವ ಕನ್ನಡ ಶಾಲೆಗಳ ಕುರಿತಂತೆ ಆತಂಕ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ, ಇಂಗ್ಲಿಷ್ ಶಾಲೆಗಳನ್ನು ಮುಚ್ಚುವ ಅಗತ್ಯವನ್ನೂ ಎತ್ತಿ ಹಿಡಿದಿದ್ದಾರೆ. ಸರಕಾರ ಮೂರು ಸಾವಿರ ಶಾಲೆಗಳನ್ನು ಮುಚ್ಚುವ ಇಂಗಿತ ವ್ಯಕ್ತಪಡಿಸಿರುವುದೇ ಇದಕ್ಕೆ ಕಾರಣ. ಕನ್ನಡ ಶಾಲೆಗಳನ್ನು ಮುಚ್ಚುವುದೆಂದರೆ ಕನ್ನಡ ಬದುಕನ್ನು ಮುಚ್ಚುವುದೆಂದರ್ಥ ಎಂಬ ಸಮ್ಮೇಳನಾಧ್ಯಕ್ಷರ ಮಾತುಗಳು ಅರ್ಥಪೂರ್ಣ.ಸರಕಾರವೂ ಈ ಕೂಗಿಗೆ ಮಣಿದಿದೆ.ಇಂಗ್ಲಿಷ್ ಶಾಲೆಗಳನ್ನು ಮುಚ್ಚುವ ಮಾತನ್ನಾಡಿದೆ. ಇಂಗ್ಲಿಷ್ ಶಾಲೆಗಳನ್ನು ಮುಚ್ಚುತ್ತೇನೆ ಎಂದು ಘೋಷಿಸಿದಾಕ್ಷಣ ಮುಚ್ಚುವುದಕ್ಕಾಗುವುದಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ.
ಕನಿಷ್ಠ ಮುಚ್ಚಲು ಹೊರಟಿರುವ ಮೂರು ಸಾವಿರ ಶಾಲೆಗಳನ್ನು ಮತ್ತೆ ತೆರೆದು, ಅವುಗಳಿಗೆ ಸಕಲ ಆಧುನಿಕ ಸವಲತ್ತುಗಳನ್ನು ಒದಗಿಸಿಕೊಟ್ಟು ಖಾಸಗಿ ಶಾಲೆಗಳಿಗೆ ಸಮರ್ಥ ಪೈಪೋಟಿ ನೀಡಿದರೆ ಇಂಗ್ಲಿಷ್ ಶಾಲೆಗಳನ್ನು ತನ್ನಷ್ಟಕ್ಕೆ ಮುಚ್ಚಿಸಬಹುದು. ಅಂತಹ ಇಚ್ಛಾಶಕ್ತಿಯನ್ನು ರಾಜಕಾರಣಿಗಳು ವ್ಯಕ್ತಪಡಿಸದೆ ಇಂಗ್ಲಿಷ್ ಶಾಲೆಗಳನ್ನು ಮುಚ್ಚಿಸುವುದು ಸಾಧ್ಯವೇ ಇಲ್ಲ.
ಇದೇ ಸಂದರ್ಭದಲ್ಲಿ ಸಮ್ಮೇಳನಾಧ್ಯಕ್ಷ ಸಿಪಿಕೆ, ಇನ್ನೊಂದು ಕರೆಯನ್ನು ನೀಡಿದರು. ‘‘ಕನ್ನಡದ ಹಿತಾಸಕ್ತಿಗಳನ್ನು ಬೆಂಬಲಿಸುವ ರಾಜಕಾರಣಿಗಳನ್ನು ಬೆಂಬಲಿಸಿ’’
ಇಂದು ರಾಜ್ಯದಲ್ಲಿ ರಾಜಕಾರಣಿಗಳು ಜಾತಿಗಳಿಗೆ, ಧರ್ಮಗಳಿಗೆ ಹೆದರುತ್ತಾರೆ. ಮತಗಳಿಗಾಗಿಯೇ ಲಿಂಗಾಯತ, ಒಕ್ಕಲಿಗ, ಅಲ್ಪಸಂಖ್ಯಾತ ಎಂಬಿತ್ಯಾದಿ ಲಾಬಿಗಳನ್ನು ಮಾಡುತ್ತಾರೆ. ಆದರೆ ಇಂದಿಗೂ ಕನ್ನಡ ಲಾಬಿಗೆ ರಾಜಕಾರಣಿಗಳು ಹೆದರುತ್ತಿಲ್ಲ. ಅಂದರೆ ಕನ್ನಡ ಬದುಕು ಯಾವತ್ತೂ ಅವರಿಗೆ ಮತಗಳಾಗಿ ಕಂಡೇ ಇಲ್ಲ. ಕರ್ನಾಟಕದಲ್ಲಿ ಲಿಂಗಾಯತರಿದ್ದಾರೆ, ಒಕ್ಕಲಿಗರಿದ್ದಾರೆ, ಕುರುಬರಿದ್ದಾರೆ, ಮುಸ್ಲಿಮರಿದ್ದಾರೆ, ಕ್ರಿಶ್ಚಿಯನ್ನರಿದ್ದಾರೆ. ಆದರೆ ಚುನಾವಣೆಯ ಸಂದರ್ಭದಲ್ಲಿ ಕನ್ನಡಿಗರು ಮಾತ್ರ ಲೆಕ್ಕಕ್ಕೇ ಇಲ್ಲ. ಆಯಾ ಜಾತಿಗಳನ್ನು, ಧರ್ಮಗಳನ್ನು ಸಂತೃಪ್ತಿ ಪಡಿಸಿದರೆ ಸಾಕು.
ಕನ್ನಡಿಗರನ್ನು ಸಮಗ್ರವಾಗಿ ಸಂತೃಪ್ತಿ ಪಡಿಸುವಂತಹ ಒತ್ತಡಗಳು ರಾಜಕಾರಣಿಗಳ ಮೇಲಿಲ್ಲ. ಆದುದರಿಂದಲೇ ಕನ್ನಡದ ಕುರಿತಂತೆ ರಾಜಕಾರಣಿಗಳು ಯಾವತ್ತೂ ಗಂಭೀರವಾಗಿ ನಿಲುವುಗಳನ್ನು ತೆಗೆದುಕೊಂಡಿಲ್ಲ.ಮೂರು ದಿನ ಗಂಗಾವತಿಯಲ್ಲಿ ಸಾಹಿತ್ಯ ಸಮ್ಮೇಳನ ನಡೆಯಿತು. ಸಹಸ್ರಾರು ಜನರು ಅಲ್ಲಿ ಸೇರಿದರು. ಆ ಸಮ್ಮೇಳನದ ಅಂಗಣದಲ್ಲಿ ಎಲ್ಲರೂ ಕನ್ನಡಿಗರಾಗಿ ನೆರೆದಿದ್ದರು.ಆದರೆ ಆ ಅಂಗಣದಿಂದ ಹೊರಬಂದು ತಮ್ಮ ತಮ್ಮ ಬಸ್ಸು ಹತ್ತುವಾಗ ಅವರು ಬೇರೆ ಬೇರೆ ಜಾತಿಗಳಾಗಿ, ಧರ್ಮಗಳಾಗಿ, ವರ್ಗಗಳಾಗಿ ಒಡೆದುಹೋಗಿದ್ದಾರೆ. ಅವರನ್ನು ಮತ್ತೆ ಕನ್ನಡಿಗರನ್ನಾಗಿಸ ಬೇಕಾದರೆ ಮತ್ತೊಂದು ಸಾಹಿತ್ಯ ಸಮ್ಮೇಳನ ನಡೆಯಬೇಕು ಅಥವಾ ಕನ್ನಡ ರಾಜ್ಯೋತ್ಸವ ಬರಬೇಕು. ಇದು ನಮ್ಮ ರಾಜಕಾರಣಿಗಳಿಗೆ ಚೆನ್ನಾಗಿ ಗೊತ್ತು.
ಮೊನ್ನೆ ಸಾಹಿತ್ಯ ಸಮ್ಮೇಳನ ವೇದಿಕೆಯಲ್ಲಿ ಮಾತುಗಳನ್ನಾಡಿದ ಮುಖ್ಯಮಂತ್ರಿ ಸದಾನಂದ ಗೌಡರಿಗೂ ಗೊತ್ತಿತ್ತು. ಆದುದರಿಂದಲೇ ಇಂಗ್ಲಿಷ್ ಶಾಲೆಗಳನ್ನು ಮುಚ್ಚಿಸುತ್ತೇನೆ ಎಂದು ಘೋಷಣೆ ಮಾಡಿದರು. ನಾಳೆ ಇಂಗ್ಲಿಷ್ ಶಾಲೆಗಳನ್ನು ಮುಚ್ಚಿಸಿದರೂ,ಮುಚ್ಚಿಸದಿದ್ದರೂ ಯಾರು ಕೇಳಲಾರರು ಎನ್ನುವುದು ಅವರಿಗೆ ಗೊತ್ತಿದೆ.ಮೊದಲು ಕನ್ನಡವು ರಾಜಕೀಯ ಇಚ್ಛಾಶಕ್ತಿಯಾಗಿ ಮಾರ್ಪಡಬೇಕು.ಕನ್ನಡ ಮತಗಳು ಯಾವಾಗ ಚಲಾವಣೆಯಾಗಲು ಆರಂಭಿಸುತ್ತವೆಯೋ ಆಗ ರಾಜಕಾರಣಿಗಳು ಕನ್ನಡಕ್ಕಾಗಿ ಧ್ವನಿಯೆತ್ತುವುದಕ್ಕೆ ಆರಂಭಿಸುತ್ತಾರೆ. ಕನ್ನಡ ಶಾಲೆಗಳು ಬಲಿಷ್ಠವಾಗಿ ಬೆಳೆಯುತ್ತವೆ ಮಾತ್ರವಲ್ಲ, ಇಂಗ್ಲಿಶ್ ಶಾಲೆಗಳ ಸಂಖ್ಯೆಯೂ ಕಡಿಮೆಯಾಗುತ್ತದೆ.
ಕನ್ನಡದ ಹಿತಾಸಕ್ತಿ ನಮ್ಮ ಹಿತಾಸಕ್ತಿ ಎನ್ನುವುದನ್ನು ಎಲ್ಲ ಜಾತಿ, ಧರ್ಮಗಳ ಸಂಘಟನೆಗಳು ಅರ್ಥ ಮಾಡಿಕೊಳ್ಳಬೇಕು. ಎಲ್ಲ ಜಾತಿ, ಧರ್ಮ ಸಂಘಟನೆಗಳು ಕನ್ನಡದ ಹಿತಾಸಕ್ತಿಯನ್ನೂ ತಮ್ಮ ಅಜೆಂಡಾಗಳಲ್ಲಿ ಸೇರಿಸಬೇಕು.ತಮ್ಮ ಜಾತಿಯ ಹಿತಾಸಕ್ತಿಯ ಬಗ್ಗೆ ಮಾತನಾಡುವಾಗ,ನಾಲ್ಕು ಸಾಲು ಕನ್ನಡದ ಹಿತಾಸಕ್ತಿಯನ್ನು ಸೇರಿಸಬೇಕು.ಕನ್ನಡವನ್ನು ಬೆಂಬಲಿಸದಿದ್ದರೆ ಚುನಾವಣೆಯಲ್ಲಿ ಸೋಲುತ್ತೇವೆ ಎನ್ನುವ ಭಯ ಯಾವಾಗ ನಮ್ಮ ರಾಜಕಾರಣಿಗಳನ್ನು ಕಾಡುತ್ತದೆಯೋ ಆಗ ತನ್ನಷ್ಟಕ್ಕೇ ಕನ್ನಡದ ಕುರಿತಂತೆ ಮಾತನಾಡಲು ಅವರು ಆರಂಭಿಸುತ್ತಾರೆ.
ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವ ಸಹಸ್ರಾರು ಕನ್ನಡಿಗರು ನಾಳೆ ತಮಗೆ ಮತ ಹಾಕುವವರು ಎನ್ನುವ ಎಚ್ಚರಿಕೆ ರಾಜಕೀಯ ನಾಯಕರಲ್ಲಿ ಮೂಡಿದಾಗ ಅವರಲ್ಲಿ ಕನ್ನಡದ ಕುರಿತಂತೆಯೂ ಜಾಗೃತಿ ಮೂಡುತ್ತದೆ. ಆದುದರಿಂದ ಕನ್ನಡ ಎನ್ನುವುದು ರಾಜಕೀಯ ಶಕ್ತಿಯಾಗಬೇಕು. ಕನ್ನಡವನ್ನು ಬೆಂಬಲಿಸಿದ ನಾಯಕರೇ ಕರ್ನಾಟಕವನ್ನು ಆಳಬೇಕು. ಈ ಬಾರಿಯ ಸಾಹಿತ್ಯ ಸಮ್ಮೇಳನ ಇಂತಹ ದೊಂದು ಕರೆಯನ್ನು ನೀಡಿ ಕೊನೆಗೊಂಡಿದೆ. ಈ ಕರೆ ಆದಷ್ಟು ಬೇಗ ನಿಜವಾಗಲಿ. ವಾರ್ತಾಭಾರತಿ ಸಂಪಾದಕೀಯ
0 comments:
Post a Comment