ಕಂಪೆನಿವಾರು ಲೈನ್‌ಮನ್ ನೇಮಕ
ಬೆಸ್ಕಾಂ- 580
ಮೆಸ್ಕಾಂ- 346
ಹೆಸ್ಕಾಂ- 567
ಜೆಸ್ಕಾಂ- 235
ಚೆಸ್ಕಾಂ- 187
ಕೆಪಿಟಿಸಿಎಲ್- 85
ಒಟ್ಟು- 2000
ಬೆಂಗಳೂರು: ಸಿಬ್ಬಂದಿ ಕೊರತೆ ಹಿನ್ನೆಲೆಯಲ್ಲಿ ಎರಡು ಸಾವಿರ ಲೈನ್‌ಮನ್‌ಗಳನ್ನು ನೇಮಕ ಮಾಡಿಕೊಳ್ಳುತ್ತಿದ್ದು, ಅರ್ಹತೆ ಮತ್ತು ರೋಸ್ಟರ್ ಆಧಾರದ ಮೇಲೆ ನೇಮಕಾತಿ ನಡೆಯಲಿದೆ. ಯಾವುದೇ ರೀತಿಯ ಸಂದರ್ಶನ ಇರುವುದಿಲ್ಲ ಎಂದು ಇಂಧನ ಸಚಿವೆ ಶೋಭಾ ಕರಂದ್ಲಾಜೆ ಶನಿವಾರ ಇಲ್ಲಿ ತಿಳಿಸಿದರು.
ಈಗಾಗಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, 1.82 ಲಕ್ಷ ಅರ್ಜಿಗಳು ಬಂದಿವೆ. ಜನವರಿ 11 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಐಟಿಐನಲ್ಲಿ ಗಳಿಸಿರುವ ಅಂಕಗಳ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳಲಾಗುವುದು. ಅಭ್ಯರ್ಥಿಗಳು ಮಧ್ಯವರ್ತಿಗಳ ಮೋಸಕ್ಕೆ ಒಳಗಾಗಬಾರದು ಎಂದು ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಿದರು.
ಸರ್ಕಾರ ಮತ್ತು ಇಲಾಖೆಗೆ ಕೆಟ್ಟ ಹೆಸರು ತರುವ ಉದ್ದೇಶದಿಂದ ಕೆಲವರು ಹಣ ಕೊಟ್ಟರೆ ಕೆಲಸ ಆಗುತ್ತದೆ ಎಂಬ ವದಂತಿಗಳನ್ನು ಹಬ್ಬಿಸುತ್ತಿದ್ದಾರೆ. ಅಭ್ಯರ್ಥಿಗಳು ಇಂತಹ ಮಾತುಗಳನ್ನು ನಂಬಬಾರದು. ಕೇವಲ ಅರ್ಹತೆ ಮತ್ತು ಮೀಸಲಾತಿಗೆ ಅನುಗುಣವಾಗಿ ನೇಮಕಾತಿ ನಡೆಯಲಿದೆ. ದೈಹಿಕ ಪರೀಕ್ಷೆ ಇದ್ದರೂ, ಅದರ ಅಂಕಗಳನ್ನು ಆಯ್ಕೆಗೆ ಪರಿಗಣಿಸುವುದಿಲ್ಲ ಎಂದು ತಿಳಿಸಿದರು.
ಈ ರೀತಿ ವದಂತಿ ಹಬ್ಬಿಸುತ್ತಿರುವವರ ವಿರುದ್ಧ ಕ್ರಮಕೈಗೊಳ್ಳುವಂತೆ ನಗರ ಅಪರಾಧ ವಿಭಾಗದ ಪೊಲೀಸರಿಗೆ ದೂರು ನೀಡಲಾಗುವುದು. ಕೆಲಸ ಕೊಡಿಸುತ್ತೇವೆ ಎಂದು ಯಾರಾದರೂ ಮುಂದೆ ಬಂದರೆ ಅಂತವರ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡುವಂತೆ ಅಭ್ಯರ್ಥಿಗಳಿಗೂ ಮನವಿ ಮಾಡಿದರು.
ಎರಡು ಹಳ್ಳಿಗಳಿಗೆ ಒಬ್ಬ ಲೈನ್‌ಮನ್ ಇದ್ದು, ಸಿಬ್ಬಂದಿ ಕೊರತೆಯಿಂದ ತೊಂದರೆಯಾಗಿದೆ. ಹೀಗಾಗಿ ಸದ್ಯಕ್ಕೆ ಎರಡು ಸಾವಿರ ಲೈನ್‌ಮನ್‌ಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಮುಂದಿನ ವರ್ಷ ಇನ್ನೂ ಎರಡು ಸಾವಿರ ಹುದ್ದೆಗಳನ್ನು ತುಂಬಲಾಗುವುದು ಎಂದರು.
ಕರ್ನಾಟಕ ವಿದ್ಯುತ್ ನಿಗಮಕ್ಕೆ ಅಗತ್ಯವಿರುವ 292 ಸಹಾಯಕ ಮತ್ತು ಕಿರಿಯ ಎಂಜಿನಿಯರ್‌ಗಳ ನೇಮಕಕ್ಕೆ ಈಗಾಗಲೇ ಸ್ಪರ್ಧಾತ್ಮಕ ಪರೀಕ್ಷೆ ನಡೆದಿದೆ. ಅರ್ಹತೆ ಮತ್ತು ಮೀಸಲಾತಿ ಆಧರಿಸಿ ಪಟ್ಟಿ ಪ್ರಕಟಿಸಲಾಗುವುದು. ಕೆಪಿಟಿಸಿಎಲ್ ಮತ್ತು ವಿವಿಧ ಕಂಪೆನಿಗಳಲ್ಲಿ ಖಾಲಿ ಇರುವ ಎಂಜಿನಿಯರ್ ಹುದ್ದೆಗಳ ಭರ್ತಿಗೆ ಅನುಮತಿ ನೀಡುವಂತೆ ಹಣಕಾಸು ಇಲಾಖೆಗೆ ಮನವಿ ಮಾಡಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ವಿದ್ಯುತ್ ಸಮಸ್ಯೆ ಇಲ್ಲ: ಸದ್ಯ 175 ದಶಲಕ್ಷ ಯೂನಿಟ್‌ವರೆಗೂ ವಿದ್ಯುತ್ ಪೂರೈಸಬಹುದಾಗಿದೆ. ಬೇಸಿಗೆಯಲ್ಲಿ 185 ದ.ಯೂ.ಗೆ ಬೇಡಿಕೆ ಬರಬಹುದು. ಸಕ್ಕರೆ ಕಾರ್ಖಾನೆಗಳಿಂದ 400 ಮೆಗಾವಾಟ್ ವಿದ್ಯುತ್ ಖರೀದಿಗೆ ಮಾತುಕತೆ ನಡೆದಿದೆ. ಬೇಸಿಗೆಯಲ್ಲಿ ವಿದ್ಯುತ್ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಲಾಗುವುದು ಎಂದು ತಿಳಿಸಿದರು.
ಸಕ್ಕರೆ ಕಾರ್ಖಾನೆಗಳಿಂದ 400 ಮೆಗಾವಾಟ್ ವಿದ್ಯುತ್ ಲಭ್ಯವಾಗಲಿದ್ದು, ಮೇ 31ವರೆಗೂ ಖರೀದಿಸಲು ಉದ್ದೇಶಿಸಲಾಗಿದೆ. ಕಾರ್ಖಾನೆ ಮಾಲೀಕರು ಯೂನಿಟ್‌ಗೆ ರೂ 5.30 ಕೇಳುತ್ತಿದ್ದಾರೆ. ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ ದರ ನಿಗದಿ ಸಂಬಂಧ ಮನವಿ ಮಾಡಲಾಗಿದೆ.
ಆಯೋಗ ವಾರದಲ್ಲಿ ಅನುಮತಿ ನೀಡುವ ವಿಶ್ವಾಸವಿದೆ ಎಂದರು. ಪೂರ್ವ ಪಾವತಿ ವಿದ್ಯುತ್ ಮೀಟರ್‌ಗನ್ನು ಅಳವಡಿಸುವ ಬಗ್ಗೆ ಚಿಂತನೆ ನಡೆದಿದೆ. ಅಲ್ಲದೆ ಬಿಲ್ಲಿಂಗ್ ಕೆಲಸವನ್ನು ಲೈನ್‌ಮನ್‌ಗಳಿಗೆ ವಹಿಸುವ ಬಗ್ಗೆಯೂ ಪರಿಶೀಲಿಸಲಾಗುವುದು ಎಂದು ಅವರು ಹೇಳಿದರು
0 comments:
Post a Comment