PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ ನ.   ದಾಸ ಶ್ರೇಷ್ಠರಲ್ಲಿ ಒಬ್ಬರಾಗಿರುವ ಕನಕದಾಸರ ಜಯಂತಿಯನ್ನು ನ. ೧೪ ರಂದು ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಬಿ.ಪಿ. ಅಡ್ನೂರ್ ಅವರು ಹೇಳಿದರು.
  ಕನಕದಾಸರ ಜಯಂತಿ ಆಚರಣೆ ಸಂಬಂಧ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
  ದಾಸ ಸಾಹಿತ್ಯಕ್ಕೆ ಕನಕದಾಸರ ಕೊಡುಗೆ ಅತ್ಯಂತ ಮಹತ್ವದ್ದಾಗಿದ್ದು, ಇಂತಹ ಮಹಾನ್ ವ್ಯಕ್ತಿಯ ಜಯಂತಿ ಕಾರ್ಯಕ್ರಮವನ್ನು ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ವಿಜೃಂಭಣೆಯಿಂದ ಆಚರಿಸಲು ಜಿಲ್ಲಾಡಳಿತ ನಿರ್ಧರಿಸಿದೆ.  ಕಾರ್ಯಕ್ರಮದ ಅಂಗವಾಗಿ ಅಂದು ಬೆಳಿಗ್ಗೆ ೯ ಗಂಟೆಗೆ ನಗರದ ಶಿರಸಪ್ಪಯ್ಯನ ಮಠದಿಂದ ಕನಕದಾಸರ ಭಾವಚಿತ್ರದೊಂದಿಗೆ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದ್ದು, ಮೆರವಣಿಗೆಯು ಶಿರಸಪ್ಪಯ್ಯನ ಮಠದಿಂದ ಗಡಿಯಾರಕಂಭ, ಜವಾಹರ ರಸ್ತೆ, ಅಶೋಕ ವೃತ್ತ ಮೂಲಕ ಸಾಹಿತ್ಯ ಭವನ ತಲುಪಲಿದೆ.  ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ಜಾಂಜ್ ಮೇಳ, ಹಲಗಿ ಮೇಳ, ಕರಡಿ ಮಜಲು ಸೇರಿದಂತೆ ವೈವಿಧ್ಯಮಯ ಕಲಾತಂಡಗಳು ಪಾಲ್ಗೊಂಡು ಮೆರವಣಿಗೆ ಆಕರ್ಷಕವಾಗಲಿದೆ.  ಅಂದು ಬೆಳಿಗ್ಗೆ ೧೧-೩೦ ಗಂಟೆಗೆ ನಗರದ ಸಾಹಿತ್ಯ ಭವನದಲ್ಲಿ ಕನಕದಾಸರ ಜಯಂತಿ ಸಮಾರಂಭ ಆಯೋಜಿಸಲಾಗಿದ್ದು, ಗಣ್ಯಾತಿಗಣ್ಯರು ಈ ಸಮಾರಂಭದಲ್ಲಿ ಭಾಗವಹಿಸುವರು.  ಈ ಸಂದರ್ಭದಲ್ಲಿ ಕನಕದಾಸರ ಕುರಿತು ವಿಶೇಷ ಉಪನ್ಯಾಸ ನೀಡಲು ಕರಮುಡಿಯ ಸರ್ಕಾರಿ ಪ್ರೌಢಶಾಲೆಯ ಸಹಶಿಕ್ಷಕ ಬಸವರಾಜ ಕೊಂಡಗುರಿಯವರನ್ನು ಆಹ್ವಾನಿಸಲು ನಿರ್ಧರಿಸಲಾಗಿದೆ.  ಎಲ್ಲಾ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳು ಮೆರವಣಿಗೆ ಮತ್ತು ಸಮಾರಂಭದಲ್ಲಿ ಭಾಗವಹಿಸುವುದು ಕಡ್ಡಾಯವಾಗಿದೆ.  ಅಲ್ಲದೆ ಎಲ್ಲಾ ಶಾಲೆಗಳ ಮಕ್ಕಳೂ ಸಹ ಪಾಲ್ಗೊಳ್ಳುವಂತೆ ಸೂಕ್ತ ಕ್ರಮ ಜರುಗಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಸೂಚನೆ ನೀಡಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಬಿ.ಪಿ. ಅಡ್ನೂರ್ ಅವರು ತಿಳಿಸಿದರು.
  ಸಭೆಯಲ್ಲಿ ಭಾಗವಹಿಸಿದ್ದ ಸಹಾಯಕ ಆಯುಕ್ತ ಎಂ. ಶರಣಬಸಪ್ಪ ಅವರು ಮಾತನಾಡಿ, ಮೆರವಣಿಗೆ ಸಂದರ್ಭದಲ್ಲಿ ಯಾವುದೇ ಟ್ರಾಫಿಕ್ ಜಾಮ್ ಆಗದಂತೆ ಪೊಲೀಸ್ ಅಧಿಕಾರಿಗಳು ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು.  ಮೆರವಣಿಗೆಯಲ್ಲಿ ಪಾಲ್ಗೊಳ್ಳುವವರಿಗೆ ನಗರಸಭೆ ಅಧಿಕಾರಿಗಳು ಅಗತ್ಯ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು.  ಎಸ್.ಎಸ್.ಎಲ್.ಸಿ. ಹಾಗೂ ಪಿ.ಯು.ಸಿ. ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿ ಉತ್ತೀರ್ಣರಾದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಮಾರಂಭದಲ್ಲಿ ಪಾರಿತೋಷಕ ನೀಡಿ ಗೌರವಿಸಲಾಗುವುದು ಎಂದು ತಿಳಿಸಿದರಲ್ಲದೆ, ಜಯಂತಿಯ ಮುನ್ನಾ ದಿನದಂದು ನಗರಸಭೆ ವತಿಯಿಂದ ಮೆರವಣಿಗೆ ಸಾಗುವ ಮಾರ್ಗದ ರಸ್ತೆ ಸ್ವಚ್ಛಗೊಳಿಸುವುದು, ನಗರದ ಕನಕದಾಸ ವೃತ್ತ ಹಾಗೂ ಸಾಹಿತ್ಯ ಭವನದ ಬಳಿ ಸ್ವಚ್ಛತಾ ಕಾರ್ಯ ಕೈಗೊಳ್ಳಬೇಕು ಎಂದು ನಗರಸಭೆ ಪೌರಾಯುಕ್ತ ಕಾಂಬ್ಳೆ ಅವರಿಗೆ ತಿಳಿಸಿದರು.
  ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ರಾಘವೇಂದ್ರ ಹಿಟ್ನಾಳ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಶ್ರೀಶೈಲಕರಿಶಂಕರಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ಅಶೋಕ ಕಲಘಟಗಿ, ಕೊಪ್ಪಳ ತಹಸಿಲ್ದಾರ್ ಬಿ.ಎಲ್. ಘೋಟೆ, ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಾಯಕ ನಿರ್ದೇಶಕ ಕುಮಾರಸ್ವಾಮಿ, ಕೊಪ್ಪಳ ನಗರಠಾಣೆ ಪೊಲೀಸ್ ಅಧಿಕಾರಿ ಆರಾಧ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ್ ಪೂಜಾರ್, ವೀರಕನ್ನಡಿಗ ಸಂಘದ ಅಧ್ಯಕ್ಷ ಶಿವಾನಂದ ಹೊದ್ಲೂರ್, ಡಾ. ಜ್ಞಾನಸುಂದರ್, ಗವಿಸಿದ್ದಪ್ಪ ಹಿಟ್ನಾಳ್ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿ ಉಪಯುಕ್ತ ಸಲಹೆ ಸೂಚನೆಗಳನ್ನು ನೀಡಿದರು.

Advertisement

0 comments:

Post a Comment

 
Top