ಬೆಂಗಳೂರು, : ಭೂಹಗರಣದ ಆರೋಪದ ಮೇಲೆ 24 ದಿನ ಜೈಲು ವಾಸ ಅನುಭವಿಸಿ ಹೊರ ಬಂದಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಇತರರನ್ನು ರಕ್ಷಿಸಲು ಲೋಕಾಯುಕ್ತ ಎಡಿಜಿಪಿ ಜೀವನ್ ಕುಮಾರ್ ಗಾಂವ್ಕರ್‌ರನ್ನು ಎತ್ತಂಗಡಿ ಮಾಡಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಆರೋಪಿಸಿದ್ದಾರೆ ಯಡಿಯೂರಪ್ಪನವರ ವಿರುದ್ಧದ ಪ್ರಕರಣಗಳ ತನಿಖಾಧಿಕಾರಿಯಾಗಿ ಎರಡು ತಿಂಗಳ ಹಿಂದಷ್ಟೇ ಲೋಕಾಯುಕ್ತ ಎಡಿಜಿಪಿ ಆಗಿ ನಿಯುಕ್ತಿಗೊಂಡಿದ್ದ ಗಾಂವ್ಕರ್‌ರನ್ನು ಯಡಿಯೂರಪ್ಪ ಜೈಲಿನಿಂದ ಹೊರ ಬಂದ ಮರುದಿನ ವರ್ಗಾವಣೆ ಮಾಡಲಾಗಿದೆ. ಇದು ಕಾಕತಾಳಿಯವೋ ಅಥವಾ ಮುಖ್ಯಮಂತ್ರಿ ಸದಾನಂದ ಗೌಡರ ಮೇಲೆ ಯಡಿಯೂರಪ್ಪನವರ ಒತ್ತಡ ಬಿದ್ದಿದೆಯೋ? ಗಾಂವ್ಕರ್ ವರ್ಗಾವಣೆ ಹಿನ್ನೆಲೆಯನ್ನು ಮುಖ್ಯಮಂತ್ರಿ ರಾಜ್ಯದ ಜನತೆಗೆ ಹೇಳಬೇಕು ಎಂದು ಪಕ್ಷದ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಪರಮೇಶ್ವರ್ ಆಗ್ರಹಿಸಿದರು.
ಈ ಹಿಂದೆ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳಾಗಿದ್ದ ಆರ್.ಕೆ.ದತ್ತಾ, ಪ್ರಣವ್ ಮೊಹಾಂತಿ ಹಾಗೂ ಮಧುಕರ್ ಶೆಟ್ಟಿಯವರನ್ನು ವರ್ಗಾವಣೆಗೊಳಿಸಿದಾಗ ಸರಕಾರದ ಬಳಿ ಯಾವುದೇ ಸಮರ್ಥನೆ ಇರಲಿಲ್ಲ. ಈಗ ಕರ್ತವ್ಯ ಲೋಪದ ಆರೋಪದ ಮೇಲೆ ಕ್ರಮ ಕೈಗೊಳ್ಳುವಂತೆ ಸ್ವತಃ ಹೈಕೋರ್ಟ್ ನಿರ್ದೇಶನ ನೀಡಿರುವ ಕಳಂಕಿತ ಎಚ್.ಎನ್. ಸತ್ಯನಾರಾಯಣ ಅವರನ್ನು ಎಡಿಜಿಪಿಯಾಗಿ ನಿಯುಕ್ತಿಗೊಳಿಸಲಾಗಿದೆ. ಅದೇ ರೀತಿ ಕೊಲೆ ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸಿದ ಆರೋಪದಲ್ಲಿ ಶಿಸ್ತು ಕ್ರಮ ಜರಗಿಸುವಂತೆ ಮಾಜಿ ಲೋಕಾಯುಕ್ತ ನ್ಯಾ. ಹೆಗ್ಡೆ ಶಿಫಾರಸು ಮಾಡಿದ ಎಸ್ಪಿ ಅರುಣ್ ಚಕ್ರವರ್ತಿ ಅವರನ್ನು ತನಿಖಾಧಿಕಾರಿಯನ್ನಾಗಿ ನೇಮಕ ಮಾಡಿರುವುದನ್ನು ಪರಮೇಶ್ವರ್ ತರಾಟೆಗೆ ತೆಗೆದುಕೊಂಡರು.
ಹೋರಾಟದ ಎಚ್ಚರಿಕೆ: ಕಳಂಕಿತರನ್ನು ಲೋಕಾಯುಕ್ತ ಪೊಲೀಸ್ ವಿಭಾಗಕ್ಕೆ ನಿಯುಕ್ತಿಗೊಳಿಸುವುದರಿಂದ ಲೋಕಾಯುಕ್ತ ಸಂಸ್ಥೆಯ ವಿಶ್ವಾಸಾರ್ಹತೆ ಕಡಿಮೆ ಆಗುತ್ತದೆ. ಯಡಿಯೂರಪ್ಪ ಹಾಗೂ ಇತರ ಶಾಸಕರನ್ನು ಆರೋಪಗಳಿಂದ ಖುಲಾಸೆಗೊಳಿಸಲು ಬಿಜೆಪಿ ಸರಕಾರ ಗಾಂವ್ಕರ್‌ರನ್ನು ಎತ್ತಂಗಡಿ ಮಾಡಿದೆ.
ಯಡಿಯೂರಪ್ಪ ಸರಕಾರದ ಮೇಲೆ ಒತ್ತಡ ತಂದು ಸಾಕ್ಷ ನಾಶಕ್ಕೆ ಪ್ರಯತ್ನ ಮಾಡುತ್ತಿದ್ದಾರೆ. ಸರಕಾರ ತಕ್ಷಣ ಗಾಂವ್ಕರ್ ವರ್ಗಾವಣೆ ರದ್ದುಗೊಳಿಸಿ ಅವರನ್ನು ಈಗಿರುವ ಹುದ್ದೆಯಲ್ಲಿ ಮುಂದುವರಿಸಬೇಕು. ಇಲ್ಲದಿದ್ದರೆ ಕಾಂಗ್ರೆಸ್ ಹೋರಾಟ ನಡೆಸಲಿದೆ ಎಂದು ಪರಮೇಶ್ವರ್ ಎಚ್ಚರಿಕೆ ನೀಡಿದ್ದಾರೆ. ಮಾಜಿ ಪ್ರಧಾನಿಗಳ ಕ್ರಮ ಆಶ್ಚರ್ಯಕರ: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಲೋಕಾಯುಕ್ತ ಎಡಿಜಿಪಿ ಜೆ.ಕೆ. ಗಾಂವ್ಕರ್ ಅವರಿಗೆ ಬೆದರಿಕೆ ಹಾಕಿದ್ದಾರೆ ಎನ್ನುವುದು ಆಶ್ಚರ್ಯ ತಂದಿದೆ. ಒಬ್ಬ ಮಾಜಿ ಪ್ರಧಾನಿ ಈ ರೀತಿ ಮಾಡಬಹುದಾ ಎನ್ನುವುದು ಅನುಮಾನ ಮೂಡಿಸುತ್ತದೆ. ದೂರವಾಣಿ ಕರೆ ಮಾಡಿದ್ದು ನಿಜ ಸರಿ ಆದರೆ ಬೆದರಿಕೆ ಹಾಕಿಲ್ಲ ಎಂದು ದೇವೇಗೌಡರು ಸ್ಪಷ್ಟನೆ ನೀಡಿದ್ದಾರೆ. ಈ ಪ್ರಹಸನದ ಸತ್ಯಾಸತ್ಯತೆಯನ್ನು ಮುಖ್ಯಮಂತ್ರಿ ರಾಜ್ಯದ ಜನತೆಗೆ ತಿಳಿಸಬೇಕು ಎಂದು ಪರಮೇಶ್ವರ್ ಸದಾನಂದಗೌಡರಿಗೆ ಆಗ್ರಹಿಸಿದ್ದಾರೆ.
0 comments:
Post a Comment