PLEASE LOGIN TO KANNADANET.COM FOR REGULAR NEWS-UPDATES


ಬೆಂಗಳೂರು, ನ.5: ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿ ಮಾಜಿ ಸಚಿವ ವಿ.ಮುನಿಯಪ್ಪ, ಜನಾರ್ದನ ರೆಡ್ಡಿ, ಅವರ ಪತ್ನಿ ಲಕ್ಷ್ಮಿ ಅರುಣಾ ಸೇರಿದಂತೆ ಒಟ್ಟು 21 ಮಂದಿಯ ವಿರುದ್ಧ ಸಿಬಿಐ ಅಧಿಕಾರಿಗಳ ತಂಡ ಬೆಂಗಳೂರಿನ ವಿಶೇಷ ನ್ಯಾಯಾಲಯದಲ್ಲಿ ಎಫ್‌ಐಆರ್ ದಾಖಲಿಸಿದೆ. ಇದರಿಂದ ಜೈಲಿನಲ್ಲಿರುವ ಮಾಜಿ ಸಚಿವ ಜನಾರ್ದನ ರೆಡ್ಡಿಗೆ ಮತ್ತೆ ಸಂಕಟ ಎದುರಾಗಿದೆ. ಓಎಂಸಿ ಮತ್ತು ಎಎಂಸಿ ಗಣಿ ಕಂಪೆನಿಗಳು ನಡೆಸಿರುವ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿ ರೆಡ್ಡಿ ಹಾಗೂ ಅವರ ಪತ್ನಿಯ ಮೇಲೆ ನ್ಯಾಯಾಲಯದಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ಅಕ್ರಮ ಗಣಿಗಾರಿಕೆ, ಅದಿರು ರಫ್ತು, ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆ, ಬಳ್ಳಾರಿ ಜಿಲ್ಲೆ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಕಾನೂನು ಉಲ್ಲಂಘಿಸಿ, ಅರಣ್ಯಕಾಯ್ದೆಯನ್ನು ಮೀರಿ ಗಣಿಗಾರಿಕೆ ನಡೆಸಿರುವ ಆರೋಪದ ಹಿನ್ನೆಲೆಯಲ್ಲಿ ವಿಶೇಷ ನ್ಯಾಯಾಲಯದಲ್ಲಿ ಈ ಎಫ್‌ಐಆರ್ ದಾಖಲಿಸಲಾಗಿದೆ. ರಾಜ್ಯದಲ್ಲಿ ನಡೆದಿರುವ ಅಕ್ರಮ ಗಣಿಗಾರಿಕೆಯ ಸಂಬಂಧ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಸಿಬಿಐನ ಡಿಜಿಪಿ ಹಿತೇಂದ್ರ, 21 ಮಂದಿಯ ವಿರುದ್ಧ ಎಫ್‌ಐಆರ್ ದಾಖಲಿಸಿ, ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
ಮಾಜಿ ಸಚಿವ ಜನಾರ್ದನ ರೆಡ್ಡಿ ಹಾಗೂ ಅವರ ಪತ್ನಿ ಲಕ್ಷ್ಮಿ ಅರುಣಾ, ಬಳ್ಳಾರಿಯಲ್ಲಿ ಉಪ ವಲಯ ಅರಣ್ಯ ಸಂರಕ್ಷಣಾಧಿಕಾರಿಯಾಗಿದ್ದ ಮುತ್ತಯ್ಯ, ಮಾಜಿ ಗಣಿ ಸಚಿವ ವಿ.ಮುನಿಯಪ್ಪ, ಗಣಿ ಮತ್ತು ಭೂವಿಜ್ಞ್ಞಾನ ಇಲಾಖೆಯ ನಿರ್ದೇಶಕ ಶಿವಲಿಂಗಮೂರ್ತಿ, ಜನಾದೇವಿ ಮಿನರಲ್ಸ್, ಲಕ್ಷ್ಮಿಅರುಣಾ ಮಿನರಲ್ಸ್, ಈಗಲ್ ಟ್ರೇಡರ್ಸ್‌ ಆ್ಯಂಡ್ ಲಾಜಿಸ್ಟಿಕ್ಸ್, ಶಾಂತಾಲಕ್ಷ್ಮಿ ಜಯರಾಮ್, ವಿಜಯ ಮೈನಿಂಗ್ ಆಂಡ್ ಇನ್‌ಫ್ರಾಸ್ಟ್ರಕ್ಚರ್, ಅಸೋಸಿಯೇಟೆಡ್ ಮೈನಿಂಗ್ ಕಂಪೆನಿಯ ಹಿಂದಿನ ಮಾಲಕರು, ದಿವಾಕರ್ ಮಿನರಲ್ಸ್ ಆ್ಯಂಡ್ ಜಿಂಟೆಕ್ಸ್, ಬ್ರಹ್ಮಿಣಿ ಇಂಡಸ್ಟ್ರೀಸ್, ಐಎಲ್‌ಸಿ ಎಕ್ಸ್‌ಪೋರ್ಟ್ಸ್ ಆ್ಯಂಡ್ ಟ್ರೇಡಿಂಗ್ ಸೇರಿದಂತೆ 21 ಮಂದಿಯ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ಅಕ್ರಮ ಗಣಿಗಾರಿಕೆಯ ಆರೋಪದ ಮೇಲೆ ಮಾಜಿ ಸಚಿವ ಜನಾರ್ದನ ರೆಡ್ಡಿ ಈಗಾಗಲೇ ಆಂಧ್ರದ ಜೈಲಿನಲ್ಲಿದ್ದು, ಇದೀಗ ಅವರ ಹಾಗೂ ಅವರ ಪತ್ನಿಯ ಮೇಲೆ ಕರ್ನಾಟಕದಲ್ಲಿ ಎಫ್‌ಐಆರ್ ದಾಖಲಾಗಿರುವುದು ಗಣಿ ದೊರೆಗಳಿಗೆ ನುಂಗಲಾರದ ತುತ್ತಾಗಿದೆ. ಸಿಬಿಐ ಅಧಿಕಾರಿಗಳ ವಿಶೇಷ ತಂಡ ಶುಕ್ರವಾರ ಬಳ್ಳಾರಿ ಜಿಲ್ಲೆಯ ಸಂಡೂರಿನ ರಾಮಗಡ ಪ್ರದೇಶದಲ್ಲಿ ಎಎಂಸಿ ಸೇರಿದಂತೆ ವಿವಿಧ ಗಣಿ ಕಂಪೆನಿಗಳಿಗೆ ದಾಳಿ ನಡೆಸಿದ್ದು, ವಿದೇಶಗಳಿಗೆ ರಫ್ತು ಮಾಡಿರುವ ಅದಿರನ್ನು ಕೂಡಾ ಪತ್ತೆ ಹಚ್ಚಿದ್ದರು ಎನ್ನಲಾಗಿದೆ. ಎಸ್.ಎಂ.ಕೃಷ್ಣ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಸಚಿವರಾಗಿದ್ದ ಕಾಂಗ್ರೆಸ್‌ನ ವಿ.ಮುನಿಯಪ್ಪನವರಿಗೆ ಈ ಬಾರಿ ಅಕ್ರಮ ಗಣಿಗಾರಿಕೆಯ ಧೂಳು ಮೆತ್ತಿಕೊಂಡಿರುವುದು ಕಾಂಗ್ರೆಸ್‌ಗೆ ಮುಜುಗರವನ್ನುಂಟು ಮಾಡಿದೆ.

Advertisement

0 comments:

Post a Comment

 
Top