PLEASE LOGIN TO KANNADANET.COM FOR REGULAR NEWS-UPDATES


:ಮಗನ ಬಗ್ಗೆ ಪೊಲೀಸರು ಸುಳ್ಳು ಹೇಳುತ್ತಿದ್ದಾರೆ ಎಂಬುದು ನನ್ನ ಬಲವಾದ ನಂಬಿಕೆಯಾಗಿತ್ತು: ಗೋಪಿನಾಥನ್ ಪಿಳ್ಳೈ

ಇಶ್ರತ್ ಜಹಾನ್ ಜೊತೆ ನಕಲಿ ಎನ್‌ಕೌಂಟರ್‌ಗೆ ಬಲಿಯಾದ ಪ್ರಾಣೇಶ್ ಪಿಳ್ಳೈಯ ತಂದೆ ಗೋಪಿನಾಥನ್ ಪಿಳ್ಳೈಗೆ ಸಿಟ್ ವರದಿಯಿಂದ ಸಮಾಧಾನ

ಆಳಪುಝ, ನ.22: ಭಯೋತ್ಪಾದಕನೆಂದು ಹೆಸರಿಸಲ್ಪಟ್ಟ ಮಗನೊಬ್ಬನ ತಂದೆ ಎಂ.ಆರ್. ಗೋಪಿನಾಥನ್ ಪಿಳ್ಳೈ (72)ಯ ಮಾನಸಿಕ ಪ್ರಕ್ಷುಬ್ಧತೆಗೆ ಏಳು ವರ್ಷಗಳ ಬಳಿಕ ಸಮಾಧಾನಕರ ಉತ್ತರವೊಂದು ಲಭಿಸಿದ್ದು, ಅವರಿಗೆ ಸೋಮವಾರ ದಿಂದ ನಿಜವಾಗಿಯೂ ಶಾಂತಿ ಎಂದರೇನೆಂದು ಅರಿವಾಗಬಹುದು.
   
ತನ್ನ ಮಗ ಭಯೋತ್ಪಾದಕನಲ್ಲ ಎಂದು ಪ್ರತಿಪಾದಿಸಲು ತನಗಿಂತ ಪ್ರಬಲ ಶಕ್ತಿಗಳೊಂದಿಗೆ ನಿರಂತರ ಹೋರಾಟ ಮಾಡಿ ಕೊನೆಗೂ, ವಿಜಯ ದೊರೆಯುವ ಎಲ್ಲ ಸಾಧ್ಯತೆಗಳು ಭಾರತ್ ಹೆವಿ ಎಲೆಕ್ಟ್ರಿಕಲ್ಸ್‌ನಲ್ಲಿ ಉದ್ಯೋಗಿಯಾಗಿದ್ದ ಪಿಳ್ಳೈಗೆ ಗೋಚರಿಸಿವೆ. ಇಲ್ಲಿಂದ 60 ಕಿ.ಮೀ. ದೂರದಲ್ಲಿರುವ ಕಾಯಂಕುಲಂನ ಚಾರುಮೂಡುನ ದಮರಕುಲಂನ ನಿವಾಸಿಯಾದ ಗೋಪಿನಾಥನ್ ಪಿಳ್ಳೈಯವರ ಮಗನನ್ನು ಗುಜರಾತ್ ಪೊಲೀಸರು ಭಯೋತ್ಪಾದಕ ನೆಂದು ಬಿಂಬಿಸಿ, ಇಶ್ರತ್ ಜಹಾನ್‌ಳೊಂದಿಗೆ ಎನ್‌ಕೌಂಟರ್ ಒಂದರಲ್ಲಿ ಹತ್ಯೆ ಮಾಡಿದ್ದರು. ತನ್ನ ಮಗ ಅಮಾಯಕನೆಂದು ಸಾಬೀತು ಪಡಿಸಲು ಮತ್ತು ನ್ಯಾಯಕ್ಕಾಗಿ ಗೋಪಿನಾಥನ್ ಕಳೆದ 2004ರಿಂದ ಗುಜರಾತ್, ದಿಲ್ಲಿ ಸೇರಿದಂತೆ ಎಲ್ಲೆಂದರಲ್ಲೆಲ್ಲ ಓಡಾಡಿದ್ದಾರೆ.

ಗುಜರಾತ್ ಪೊಲೀಸರಿಂದ ಹತ್ಯೆಗೀಡಾಗಿದ್ದ ತನ್ನ ಮಗ ಪ್ರಾಣೇಶ್ ಪಿಳ್ಳೈ ಅಲಿಯಾಸ್ ಜಾವೇದ್ ಶೇಖ್‌ನನ್ನು ಭಯೋತ್ಪಾದಕ ನಲ್ಲ ಎಂದು ಸಾಬೀತು ಪಡಿಸುವುದಕ್ಕಾಗಿ ಅವರು ಪಟ್ಟ ಶ್ರಮ ಅಷ್ಟಿಷ್ಟಲ್ಲ. (2004, ಜೂನ್ 15ರಂದು ನಡೆದಿರುವ ಈ ಎನ್‌ಕೌಂಟರ್ ನಕಲಿ ಎಂದು ಸಿಟ್ ಗುಜರಾತ್ ಹೈಕೋರ್ಟ್‌ಗೆ ಸೋಮವಾರ ಸಲ್ಲಿಸಿರುವ ವರದಿಯಲ್ಲಿ ತಿಳಿಸಲಾಗಿದೆ) 2004, ಜೂನ್ 15ರಂದು ಅಹ್ಮದಾಬಾದ್‌ನ ಹೊರ ವಲಯದಲ್ಲಿ ಗುಜರಾತ್ ಪೊಲೀಸರು ನಾಲ್ವರು ಭಯೋತ್ಪಾದಕರು ಎಂದು ಆಪಾದಿಸಿ ನಡೆಸಿದ ಎನ್‌ಕೌಂಟರ್‌ನಲ್ಲಿ ಪ್ರಾಣ ತೆತ್ತವರಲ್ಲಿ ಪ್ರಾಣೇಶ್ ಕೂಡ ಒಬ್ಬನಾಗಿದ್ದನು. ಎನ್‌ಕೌಂಟರ್‌ನಲ್ಲಿ ಬಲಿಯಾದ ನಾಲ್ವರನ್ನು ಅವರು ಲಷ್ಕರೆ ತಯ್ಯಿಬಾದ ಕಾರ್ಯಕರ್ತರು, ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಹತ್ಯೆಗೆ ಸಂಚು ರೂಪಿಸಿ ಆಗಮಿಸಿದ್ದರು ಎಂದು ಪೊಲೀಸರು ಆ ಸಂದರ್ಭ ಕತೆಕಟ್ಟಿದ್ದರು. ಪ್ರಾಣೇಶ್ ಪಿಳ್ಳೈಯನ್ನು ಜಾವೇದ್ ಎಂದು ಗುರುತಿಸಿದ್ದ್ದ ಪೊಲೀಸರು, ಆತ ಲಷ್ಕರೆ ತಯ್ಯಿಬಾದ ಕಾರ್ಯಕರ್ತರು ಪ್ರಯಾಣಿಸುತ್ತಿದ್ದ ನೀಲಿ ಕಾರನ್ನು ಚಲಾಯಿಸುತ್ತಿದ್ದ ಎಂದು ಪ್ರತಿಪಾದಿಸಿದ್ದರು.

‘‘ನನ್ನ ಮಗನ ಬಗ್ಗೆ ಪೊಲೀಸರು ಸುಳ್ಳು ಹೇಳುತ್ತಿದ್ದಾರೆ ಎಂದು ನನಗೆ ದೃಢ ವಿಶ್ವಾಸವಿತ್ತು. ಭಯೋತ್ಪಾದನೆಯಲ್ಲಿ ತೊಡಗುವುದಕ್ಕೆ ಸಂಬಂಧಿಸಿದ ಯಾವುದೇ ಗುಣ ಆತನಲ್ಲಿರಲಿಲ್ಲ. ಇದೀಗ ನನ್ನ ನಂಬಿಕೆ ನನ್ನೊಂದಿಗೆ ಉಳಿದಿದೆ’’ ಎಂದು ದಿ ಹಿಂದೂ ಪತ್ರಿಕೆಯೊಂದಿಗೆ ಮಾತನಾಡಿರುವ ಗೋಪಿನಾಥನ್ ಪಿಳ್ಳೈ ಹೇಳಿದ್ದಾರೆ.

ಪ್ರೇಮ ವಿವಾಹ:  ಪುಣೆಯ ಮುಸ್ಲಿಂ ಹುಡುಗಿ ಯೊಬ್ಬಳನ್ನು ಪ್ರೀತಿಸಿದ್ದ ಪ್ರಾಣೇಶ್, ಆಕೆಯನ್ನು ವಿವಾಹವಾಗುವುದಕ್ಕಾಗಿ ಇಸ್ಲಾಂ ಧರ್ಮಕ್ಕೆ ಮತಾಂತರ ಹೊಂದಿದ್ದನು ಎಂದು ಗೋಪಿನಾಥನ್ ಪಿಳ್ಳೈ ಹೇಳಿತ್ತಾರೆ. ಆತನಿಗೆ ದುಬೈಯಲ್ಲಿ ಕೆಲಸ ದೊರಕಿತ್ತು. ಅದಕ್ಕಾಗಿ ಆತನಿಗೆ ಜಾವೆದ್ ಶೇಕ್ ಎಂಬ ಹೆಸರಿನಲ್ಲಿ ಪಾಸ್‌ಪೋರ್ಟ್ ದೊರಕಿತ್ತು. ಮೊದಲು ಆತನ ಬಳಿ ಪ್ರಾಣೇಶ್ ಕುಮಾರ್ ಎಂಬ ಪಾಸ್‌ಪೋರ್ಟ್ ಇತ್ತು. ಅದನ್ನು ಬಳಸಿಕೊಂಡು ಆತ ಪುಣೆಯಲ್ಲಿ ರೇಶನ್ ಕಾರ್ಡ್ ಪಡೆದಿದ್ದ. ‘‘ಇದು ಮಹಾರಾಷ್ಟ್ರದಲ್ಲಿ ಅದರಲ್ಲೂ ಮುಖ್ಯವಾಗಿ ಮುಂಬೈಯಲ್ಲಿ ದೊಡ್ಡ ಕಷ್ಟದ ಕೆಲಸವೇನಲ್ಲ’’ ಎಂದು ಪಿಳ್ಳೈ ವಿವರಿಸುತ್ತಾರೆ. ಘಟನೆಯು ಪಿಳ್ಳೈಯ ಇಡೀ ಕುಟುಂಬದ ಮೇಲೆ ತೀವ್ರ ಋಣಾತ್ಮಕ ಪರಿಣಾಮವನ್ನು ಬೀರಿತ್ತು. ಪತ್ನಿಯನ್ನು ಕಳೆದುಕೊಂಡಿರುವ ಗೋಪಿನಾಥನ್‌ಗೆ ಅವರ ಸಂಬಂಧಿಕರು, ಸ್ನೇಹಿತರು ಈ ಬಗ್ಗೆ ನೂರಾರು ಪ್ರಶ್ನೆಗಳನ್ನು ಎದುರಿಸಬೇಕಾಗಿತ್ತು. ಪ್ರಾಣೇಶ್‌ನ ಪತ್ನಿ ಸಜಿದಾ ಮತ್ತು ಆಕೆಯ ಮೂವರು ಮಕ್ಕಳಾದ ಅಬೂಬಕ್ಕರ್ (ಈಗ 14), ಸೈನಾಬ್ (ಈಗ 10) ಮತ್ತು ಮೂಸ (ಈಗ 7)ರ ಸ್ಥಿತಿಯಂತೂ ತೀರಾ ಕರುಣಾಜನಕ ಸ್ಥಿತಿಗೆ ತಲುಪಿತ್ತು.

‘‘ಸಜಿದಾಳಿಗೆ ಈ ಹಿಂದೆ ಪಾಠ ಮಾಡುತ್ತಿದ್ದ ಶಾಲೆಯಲ್ಲಿ ಉದ್ಯೋಗ ನಿರಾಕರಿಸಲಾಯಿತು. ಮಕ್ಕಳಿಗೆ ಪುಣೆಯ ಯಾವುದೇ ಶಾಲೆಯೂ ಪ್ರವೇಶ ನೀಡಲಿಲ್ಲ. ಸಮಯ ಎಲ್ಲವನ್ನೂ ಮರೆಸುತ್ತದೆ ಮತ್ತು ಇದೀಗ ಅವರು ಸ್ವಲ್ಪ ಮಟ್ಟಿಗೆ ನೆಲೆಯೂರುತ್ತಿದ್ದಾರೆ. ಈ ನಡುವೆ ಅವರು ಇಲ್ಲಿಗೆ ಬಂದಿದ್ದಾರೆ ಮತ್ತು ಸಜೀದಾಗೆ ಉದ್ಯೋಗ ದೊರಕಿದೆ. ಈದ್‌ಗೆ ಅವರು ಇಲ್ಲಿದ್ದರು ಮತ್ತು ಕೆಲವು ಸಮಯ ನಾವು ಅಲ್ಲಿಗೆ ಹೋಗಿದ್ದೆವು. ಇದೀಗ ನಾವು ಸಂತೋಷವಾಗಿ ಮತ್ತೊಮ್ಮೆ ಸೇರಲು ಬಯಸಿದ್ದೇವೆ’’ ಎಂದು ಪಿಳ್ಳೈ ಹೇಳಿದ್ದಾರೆ.

‘‘ಇವತ್ತಿನಿಂದ ನನ್ನನ್ನು ನನ್ನ ಸ್ನೇಹಿತರು ಭಯೋತ್ಪಾದಕನ ತಂದೆ ಎಂದು ಕರೆಯುವಂತಿಲ್ಲ. ನನ್ನ ಮೊಮ್ಮಕ್ಕಳನ್ನು ಭಯೋತ್ಪಾದಕನ ಮಕ್ಕಳೆಂದು ಕರೆಯುಂತಿಲ್ಲ. ಯಾವುದನ್ನೂ ಬಿಟ್ಟುಕೊಡದೆ ಕಠಿಣ ಹೋರಾಟ ನಡೆಸಿದ ಸಮಾಧಾನ ನನಗಿದೆ’’ ಎಂದು ಪಿಳ್ಳೈ ಹೇಳಿದ್ದಾರೆ. ಈ ವರದಿಯನ್ನು ಸಲ್ಲಿಸಲು ಧೈರ್ಯ ತೋರಿದ ವಿಶೇಷ ತನಿಖಾ ತಂಡದ ಕೆಲವು ಅಧಿಕಾರಿಗಳ ಪ್ರಾಮಾಣಿಕ ಪ್ರಯತ್ನದಿಂದಾಗಿ ಈ ವರದಿ ಬಂದಿದೆ. ಯಾವುದೇ ಕಾರಣಕ್ಕೂ ಇದಕ್ಕೆ ತಣ್ಣೀರೆರಚಕೂಡದು ಎಂದು ಪಿಳ್ಳೈ ಅಭಿಪ್ರಾಯ ಪಟ್ಟಿದ್ದಾರೆ.  - Vartha Bharati 

Advertisement

0 comments:

Post a Comment

 
Top