kushtagi - koppal
ಕುಷ್ಟಗಿ: ಪಟ್ಟಣದಲ್ಲಿರುವ ರಾಷ್ಟ್ರೀಯ ಚತುಷ್ಪಥ ಹೆದ್ದಾರಿಯಲ್ಲಿ ಮೇಲ್ಸೇತುವೆ (ಫ್ಲೈಒವರ್) ಮತ್ತು ಕೆಳಸೇತುವೆ ನಿರ್ಮಿಸುವುದಕ್ಕೆ ಸಂಬಂಧಿಸಿದಂತೆ ಅಂತೂ ಜನರ ಒತ್ತಡಕ್ಕೆ ಮಣಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಬೇಡಿಕೆ ಸೋಮವಾರ ಒಪ್ಪಿಗೆ ಸೂಚಿಸಿದೆ.
ಚತುಷ್ಪಥ ಹೆದ್ದಾರಿಯಾಗಿ ಪರಿವರ್ತನೆಗೊಂಡ ನಂತರ ಜನರು, ಜಾನುವಾರು, ಸಣ್ಣಪುಟ್ಟ ವಾಹನಗಳು, ಎತ್ತಿನಗಾಡಿಗಳು ರಸ್ತೆ ದಾಟುವುದಕ್ಕೆ ಪರದಾಡುವುದನ್ನು ತಪ್ಪಿಸಲು ಮೇಲ್ಸೇತುವೆ, ಕೆಳಸೇತುವೆ ನಿರ್ಮಾಣಕ್ಕೆ ಒತ್ತಾಯಿಸಿ ಅನೇಕ ದಿನಗಳಿಂದಲೂ ಪ್ರತಿಭಟನೆ ನಡೆಸಿದ ಇಲ್ಲಿಯ ರೈತರು, ನಾಗರಿಕರು ಪಟ್ಟಣ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಕಾಮಗಾರಿಯನ್ನು ಸ್ಥಗಿತಗೊಳಿಸಿದ್ದಲ್ಲದೇ ಹೆದ್ದಾರಿ ಬಂದ್ ನಡೆಸಿ ಚಳುವಳಿ ತೀವ್ರಗೊಳಿಸುವ ಸಿದ್ಧತೆಯಲ್ಲಿದ್ದರು.
ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಸಂಸದ ಶಿವರಾಮಗೌಡ, ಶಾಸಕ ಅಮರೇಗೌಡ ಬಯ್ಯಾಪೂರ, ಧಾರವಾಡ ವಲಯದ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಸಮುಂದ್ರಸಿಂಗ್, ಜಿಎಂಆರ್ ಕಂಪನಿ ವ್ಯವಸ್ಥಾಪಕ ನಿರ್ದೇಶಕ ಲೋಕೇಶ. ಹಾಗೂ ಸ್ಥಳೀಯ ಮುಖಂಡರು ಸಮಾಲೋಚನೆ ನಂತರ ನಾಗರಿಕರ ಬೇಡಿಕೆಯಂತೆ ಫ್ಲೈಒವರ್ ಮತ್ತು ಅಂಡರ್‌ಬ್ರಿಡ್ಜ್ ನಿರ್ಮಿಸುವ ನಿರ್ಧಾರಕ್ಕೆ ಬರಲಾಯಿತು.
ಫ್ಲೈಒವರ್ ಎಲ್ಲಿ?: ರಾಜ್ಯ ಹೆದ್ದಾರಿ ಕ್ರಾಸ್‌ಗಳಾದ ಸಿಂಧನೂರು ವೃತ್ತದಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಅಡ್ಡಲಾಗಿ ಫ್ಲೈಒವರ್ ನಿರ್ಮಿಸುವುದು ಮತ್ತು ಕೃಷ್ಣಗಿರಿ ಇತರೆ ಕಾಲೊನಿಗಳ ಜನ ನಡೆದಾಡಲು, ಎತ್ತಿನಗಾಡಿ, ಸಣ್ಣಪುಟ್ಟ ವಾಹನಗಳ ಸಂಚಾರಕ್ಕೆ ಅನುಕೂಲ ಕಲ್ಪಿಸಲು ಕೆಳಸೇತುವೆ (ಅಂಡರ್‌ಪಾಸ್) ನಿರ್ಮಿಸುವ ಸಂಬಂಧ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪ್ರಾಧಿಕಾರಿದ ಅಧಿಕಾರಿಗಳು ಹೇಳಿದರು. ಟೆಂಗುಂಟಿ ಕ್ರಾಸ್ ಬಳಿ ಮುದಗಲ್‌ಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯನ್ನು ಫ್ಲೈಒವರ್ ಆಗಿ ಪರಿವರ್ತಿಸುವ ಸಂಬಂಧ ಸರ್ವೆಕಾರ್ಯ ನಡೆಸಿ ಅವಶ್ಯವೆಂದಾದರೆ ಫ್ಲೈಒವರ್ ನಿರ್ಮಿಸುವುದಾಗಿ ಹೇಳಿದರು.
ಸಭೆಯಲ್ಲಿ ತರಾಟೆ: ಅದಕ್ಕೂ ಮೊದಲು ಪ್ರವಾಸಿ ಮಂದಿರದಲ್ಲಿ ಸಂಸದ ಶಿವರಾಮಗೌಡ ಅವರ ಅಧ್ಯಕ್ಷತೆಯಲ್ಲಿನ ಸಭೆಯಲ್ಲಿ ಈ ಕುರಿತು ತೀವ್ರ ಚರ್ಚೆ ನಡೆಯಿತು. ಚತುಷ್ಪಥ ಹೆದ್ದಾರಿ ನಿರ್ಮಾಣದ ವಿಷಯದಲ್ಲಿ ಮಾಹಿತಿ ನೀಡದ ಪ್ರಾಧಿಕಾರಿದ ಅಧಿಕಾರಿಗಳನ್ನು ಸಂಸದ ಶಿವರಾಮಗೌಡ ಹಾಗೂ ಶಾಸಕ ಅಮರೇಗೌಡ ಬಯ್ಯಾಪೂರ ತೀವ್ರ ತರಾಟೆಗೆ ತೆಗೆದುಕೊಂಡರು. ಅಲ್ಲದೇ ಕೃಷ್ಣಗಿರಿಯಿಂದ ಟೆಂಗುಂಟಿ ಕ್ರಾಸ್‌ವರೆಗಿನ ಫ್ಲೈಒವರ್ ಹೆದ್ದಾರಿ ನಿರ್ಮಿಸುವಂತೆ ಬಯ್ಯಾಪೂರ ಒತ್ತಾಯಿಸಿದರು. ಅದಕ್ಕೆ ಒಪ್ಪದ ಅಧಿಕಾರಿಗಳು ಪಟ್ಟಣದ ವ್ಯಾಪ್ತಿಯಲ್ಲಿ ಆರು ಮಾರ್ಗಗಳು ನಿರ್ಮಾಣಗೊಳ್ಳುವುದರಿಂದ ಅದನ್ನು ಫ್ಲೈಒವರ್ ಆಗಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಮಾಜಿ ಶಾಸಕರಾದ ಕೆ.ಶರಣಪ್ಪ, ದೊಡ್ಡನಗೌಡ ಪಾಟೀಲ, ಜಿಲ್ಲಾ ಪಂಚಾಯತಿ ಸದಸ್ಯ ಪರಸಪ್ಪ ಕತ್ತಿ, ಡಿವೈಎಸ್‌ಪಿ ಡಿ.ಎಲ್.ಹಣಗಿ, ಲೋಕೋಪಯೋಗಿ ಎಂಜಿನಿಯರ್ ಎಸ್.ಎನ್. ಗೋಟೂರು, ರಾದ ದೇವೇಂದ್ರಪ್ಪ ಬಳೂಟಗಿ, ಬಸವರಾಜ ಕುದರಿಮೋತಿ, ಚನಬಸಪ್ಪ ನಾಯಕವಾಡಿ ಹಾಗೂ ಪುರಸಭೆ ಸದಸ್ಯರು, ರೈತ ಮುಖಂಡರು ಸಭೆಯಲ್ಲಿದ್ದರು.
0 comments:
Post a Comment