PLEASE LOGIN TO KANNADANET.COM FOR REGULAR NEWS-UPDATES



ಕೊಪ್ಪಳ ನ.)- ಶಿಕ್ಷಣ ಕ್ಷೇತ್ರದ ಬೆಳವಣಿಗೆಗೆ ಸರ್ಕಾರ ಆದ್ಯತೆ ನೀಡುತ್ತಿದ್ದು, ಈ ನಿಟ್ಟಿನಲ್ಲಿ ಶಾಲೆಗಳಲ್ಲಿ ಕುಡಿಯುವ ನೀರು, ಶೌಚಾಲಯ ಸೇರಿದಂತೆ ಇನ್ನಿತರ ಅಗತ್ಯ ಮೂಲಭೂತ ಸೌಕರ್ಯ ಒದಗಿಸಲು ಸರ್ಕಾರ ಆದ್ಯತೆ ಮೇರೆಗೆ ಕ್ರಮ ಕೈಗೊಂಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ರಾಜ್ಯ ಸಹಕಾರ ಮತ್ತು ಕೃಷಿ ಮಾರುಕಟ್ಟೆ ಸಚಿವ ಲಕ್ಷ್ಮಣ ಎಸ್ ಸವದಿ ಅವರು ಹೇಳಿದರು.
  ತಾಲೂಕಿನ ಹೊರತಟ್ನಾಳ ಗ್ರಾಮದಲ್ಲಿ ಜಿಲ್ಲಾ ಪಂಚಾಯತ್ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ನೂತನ ಸರ್ಕಾರಿ ಪ್ರೌಢಶಾಲಾ ಕೊಠಡಿಗಳ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
  ಶೈಕ್ಷಣಿಕ ಬೆಳವಣಿಗೆಗೆ ಸರ್ಕಾರ ಹೆಚ್ಚಿನ ಆದ್ಯತೆ ನೀಡಿದೆ.  ಸರ್ಕಾರಿ ಶಾಲೆಗಳ ಶಿಕ್ಷಕರು ಉತ್ತಮ ಪ್ರತಿಭಾವಂತರಾಗಿದ್ದು, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಶಿಕ್ಷಕರು ಮುಂದಾಗಬೇಕು.  ರಾಜ್ಯ ಸರ್ಕಾರ ಮಕ್ಕಳಿಗೆ ಉತ್ತಮ ಶಿಕ್ಷಣ ದೊರಕಿಸುವ ನಿಟ್ಟಿನಲ್ಲಿ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದೆ.  ಪಾಲಕರೂ ಸಹ ಬಡತನದ ಕಾರಣವೊಡ್ಡಿ ಮಕ್ಕಳನ್ನು ಕೂಲಿ ಕೆಲಸಕ್ಕೆ ಕಳುಹಿಸಬಾರದು.  ಮಕ್ಕಳ ಭವಿಷ್ಯ ಉಜ್ವಲಗೊಳಿಸಬೇಕೆಂದರೆ, ಅವರಿಗೆ ಶಿಕ್ಷಣ ಕೊಡಿಸುವುದು ಅಗತ್ಯವಾಗಿದೆ ಎಂದು ತಿಳಿಸಿದರು.
  ಕೊಪ್ಪಳ ಕ್ಷೇತ್ರದ ಅಭಿವೃದ್ಧಿಗೆ ಸ್ಥಳೀಯ ಶಾಸಕ ಸಂಗಣ್ಣ ಕರಡಿ ಅವರು ಹೆಚ್ಚಿನ ಶ್ರಮ ವಹಿಸುತ್ತಿದ್ದಾರೆ. ಶೀಘ್ರದಲ್ಲಿ ಕೊಪ್ಪಳ ಕ್ಷೇತ್ರವನ್ನು ಹಸಿರುಕ್ರಾಂತಿಯ ಕ್ಷೇತ್ರವನ್ನಾಗಿಸಲು ಈ ಭಾಗದ ಸಿಂಗಟಾಲೂರು ಹಾಗೂ ಹಿರೇಹಳ್ಳ ನೀರಾವರಿ ಯೋಜನೆಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಕ್ರಮ ವಹಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ರಾಜ್ಯ ಸಹಕಾರ ಮತ್ತು ಕೃಷಿ ಮಾರುಕಟ್ಟೆ ಸಚಿವ ಲಕ್ಷ್ಮಣ ಎಸ್ ಸವದಿ ಅವರು ಹೇಳಿದರು.
  ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ಸಂಗಣ್ಣ ಕರಡಿ ಅವರು ಮಾತನಾಡಿ, ಶಿಕ್ಷಣದ ಅಭಿವೃದ್ಧಿಗೆ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ.  ಹೊರತಟ್ನಾಳ ಗ್ರಾಮ ಮಾದರಿ ಗ್ರಾಮವಾಗಿದ್ದು, ಈ ಭಾಗದ ಗ್ರಾಮಸ್ಥರ ಶೈಕ್ಷಣಿಕ ಕಾಳಜಿ ಮೆಚ್ಚುವಂತಹದ್ದಾಗಿದೆ.  ಕೊಪ್ಪಳ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ನೆನೆಗುದಿಗೆ ಬಿದ್ದಿರುವ ಯೋಜನೆಗಳನ್ನು ಶೀಘ್ರದಲ್ಲಿ ಕಾರ್ಯಗತಗೊಳಿಸಿ, ಮತದಾರರ ಋಣ ತೀರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.
  ವಿಧಾನಪರಿಷತ್ ಸದಸ್ಯ ಹಾಲಪ್ಪ ಆಚಾರ್ ಅವರು ಮಾತನಾಡಿ ಕೊಪ್ಪಳ ಮತ್ತು ಯಲಬುರ್ಗಾ ತಾಲೂಕುಗಳು ಪದೇ ಪದೇ ಬರಕ್ಕೆ ತುತ್ತಾಗುವ ಪ್ರದೇಶಗಳಾಗಿದ್ದು, ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ನೀರಾವರಿ ಯೋಜನೆಗಳನ್ನು ಕೈಗೆತ್ತಿಕೊಂಡು ಅವುಗಳನ್ನು ಪೂರ್ಣಗೊಳಿಸಬೇಕು.  ರೈತರು ಪದೇ ಪದೇ ಬರ ಪರಿಸ್ಥಿತಿ ಅನುಭವಿಸುವುದನ್ನು ತಪ್ಪಿಸಬೇಕು.  ಹಿರೇಹಳ್ಳ ಯೋಜನೆಯಡಿ ಮುಳುಗಡೆಯಾಗುವ ಪ್ರದೇಶಗಳಿಗೆ ಸಂಬಂಧಿಸಿದಂತೆ ಪರಿಹಾರ ವಿತರಿಸಲು ಹೆಚ್ಚಿನ ಅನುದಾನವನ್ನು ಸರ್ಕಾರ ಮಂಜೂರು ಮಾಡಬೇಕು ಎಂದು ಮನವಿ ಮಾಡಿದರು.
  ಸಾರ್ವಜನಿಕ ಶಿಕ್ಷಣ ಇಲಾಖೆ ಮಂಟೇಲಿಂಗಾಚಾರ್ ಅವರು ಪ್ರಾಸ್ತಾವಿಕ ಭಾಷಣ ಮಾಡಿದರು.  ಪ್ರಾರಂಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ್ ಪೂಜಾರ್ ಅವರು ಸ್ವಾಗತಿಸಿದರು, ಸಮಾರಂಭದಲ್ಲಿ ಶಾಲಾ ಸುಧಾರಣಾ ಸಮಿತಿಯ ಅಧ್ಯಕ್ಷರು, ಸದಸ್ಯರುಗಳು, ಕೊಪ್ಪಳ ಎ.ಪಿ.ಎಂ.ಸಿ. ಅಧ್ಯಕ್ಷ ಶರಣಪ್ಪ ಸಜ್ಜನ್, ಗ್ರಾ.ಪಂ. ಅಧ್ಯಕ್ಷೆ ದೇವಮ್ಮ ಹಳ್ಳೆಪ್ಪ, ಸದಸ್ಯರುಗಳಾದ ಹನುಮಂತಪ್ಪ, ಯಲ್ಲಮ್ಮ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.

Advertisement

0 comments:

Post a Comment

 
Top