ಸಹಕಾರ ಮತ್ತು ಕೃಷಿ ಮಾರುಕಟ್ಟೆ ಸಚಿವರಾದ ಲಕ್ಷ್ಮಣ ಸ. ಸವದಿರವರು ದಿನಾಂಕ: ೨೦೧೧ ನವೆಂಬರ್ ೧ ರಂದು ೫೫ ನೇ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಮಾಡಿದ ಭಾಷಣ
ಕೊಪ್ಪಳ ಜಿಲ್ಲೆಯ ಸಮಸ್ತ ನಾಗರೀಕರೆ, ಎಲ್ಲಾ ಚುನಾಯಿತ ಪ್ರತಿನಿಧಿಗಳೆ, ವೇದಿಕೆಯ ಮೇಲಿರುವ ಎಲ್ಲಾ ಗಣ್ಯರೆ, ವಿದ್ಯಾರ್ಥಿ ಮಿತ್ರರೆ, ಅಧಿಕಾರಿ ವರ್ಗದವರೆ, ಮಾಧ್ಯಮದ ಮಿತ್ರರೆ, ತಮಗೆಲ್ಲರಿಗೂ ೫೫ನೇ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.
ಕರ್ನಾಟಕ ರಾಜ್ಯವು ಏಕೀಕರಣಗೊಂಡು ೫೪ ವರ್ಷಗಳು ಕಳೆದಿದ್ದು, ಇಂದು ೫೫ನೇ ರಾಜ್ಯೋತ್ಸವದ ಆಚರಣೆಯ ಈ ಶುಭ ಸಂದರ್ಭದಲ್ಲಿ, ರಾಷ್ಟ್ರದ ತ್ರಿವರ್ಣ ಧ್ವಜ ಮತ್ತು ಕನ್ನಡದ ಧ್ವಜಾರೋಹಣ ಮಾಡಲು ನನಗೆ ಅತ್ಯಂತ ಸಂತೋಷವೆನಿಸಿದೆ.
ಕನ್ನಡ ನಾಡು ವಿವಿಧ ಧರ್ಮಗಳ ಮತ್ತು ಸಂಸ್ಕೃತಿಗಳ ತವರೂರು ಎನಿಸಿದೆ. ಪ್ರಾಚೀನ ಕಾಲದಿಂದಲೂ ತನ್ನ ಭವ್ಯ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸಿಕೊಂಡು ಬಂದಿದೆ. ಸಾಮರಸ್ಯ ಮತ್ತು ಸಹಬಾಳ್ವೆ ಕನ್ನಡ ಸಂಸ್ಕೃತಿಯ ಜೀವಾಳವಾಗಿದೆ. ಕರ್ನಾಟಕವು ಸರ್ವಧರ್ಮ ಸಹಿಷ್ಣುತೆ ಮತ್ತು ಭಾವೈಕ್ಯತೆಯ ಸಂಗಮವಾಗಿದೆ.
ಕನ್ನಡ ನಾಡಿಗೆ ಎರಡು ಸಾವಿರ ವರ್ಷಗಳ ಇತಿಹಾಸವಿದ್ದರೆ, ಕನ್ನಡ ಭಾಷೆಗೆ ಸುಮಾರು ಒಂದು ಸಾವಿರದ ಐನೂರು ವರ್ಷಗಳ ಇತಿಹಾಸವಿದೆ. ಆದಿಕವಿ ಪಂಪನಿಂದ, ರಾಷ್ಟ್ರಕವಿ ಕುವೆಂಪುವರೆವಿಗೂ ಅನೇಕ ಕವಿಗಳು ಕನ್ನಡ ಭಾಷೆಯಲ್ಲಿ ಮಹತ್ವದ ಕೃತಿಗಳನ್ನು ರಚಿಸಿದ್ದಾರೆ.
ಆಧುನಿಕ ಕಾಲದಲ್ಲಿ ಎಂಟು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದ ಭಾರತೀಯ ಭಾಷೆಗಳಲ್ಲಿ, ಕನ್ನಡ ಭಾಷೆ ಒಂದೇ ಎಂಬುದನ್ನು ಈ ಸಂದರ್ಭದಲ್ಲಿ ಹೇಳಲು ಹೆಮ್ಮೆ ಎನಿಸುತ್ತದೆ. ಅದರಲ್ಲೂ ಇತ್ತೀಚೆಗೆ ಕರ್ನಾಟಕದವರೇ ಆದ ಚಂದ್ರಶೇಖರ ಕಂಬಾರ ಅವರಿಗೆ ಜ್ಞಾನಪೀಠ ಪ್ರಶಸ್ತಿ ಲಭಿಸಿದ್ದು, ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿಯಾಗಿದೆ.
ಕರ್ನಾಟಕದ ಸಾಂಸ್ಕೃತಿಕ ಇತಿಹಾಸಕ್ಕೆ ಕೊಪ್ಪಳ ಜಿಲ್ಲೆ ಮಹೋನ್ನತ ಕಾಣಿಕೆ ನೀಡಿದೆ. ಹತ್ತನೇ ಶತಮಾನದ ರನ್ನ ಮಹಾಕವಿಯ ಆಶ್ರಯದಾತೆ ದಾನಚಿಂತಾಮಣಿ ಅತ್ತಿಮಬ್ಬೆ, ಹದಿನಾರನೆಯ ಶತಮಾನದ ನಂಜುಂಡಕವಿ, ಗಂಡುಗಲಿ ಕುಮಾರರಾಮ ಇವರುಗಳು ಕೊಪ್ಪಳದ ಸಾಂಸ್ಕೃತಿಕ ಶ್ರೀಮಂತಿಕೆಗೆ ಮೆರಗು ನೀಡಿದ್ದಾರೆ. ಆನೆಗುಂದಿ ಹಾಗೂ ಕನಕಗಿರಿ ಸಂಸ್ಥಾನಗಳ ಇತಿಹಾಸ ಕೊಪ್ಪಳದ ಜನತೆಯ ಮನದಲ್ಲಿ ಹಸಿರಾಗಿದೆ.
ಡಾ: ಸಿದ್ದಯ್ಯ ಪುರಾಣಿಕ್, ಅನಿರುದ್ಧ ದೇಸಾಯಿ, ಜಯತೀರ್ಥ ರಾಜಪುರೋಹಿತ, ದೇವೇಂದ್ರ ಕುಮಾರ್ ಹಕಾರಿ ಹಾಗೂ ಜಿ.ವಿ.ಶಿರೂರು ಇವರುಗಳು ಕೊಪ್ಪಳ ಜಿಲ್ಲೆಯ ಸಾಹಿತ್ಯ ಪುರುಷರೆಂದು ಖ್ಯಾತಿ ಪಡೆದಿದ್ದಾರೆ.
ಅನೇಕ ಹಿರಿಯ ಮಹಾಪುರುಷರು ಕರ್ನಾಟಕದ ಏಕೀಕರಣಕ್ಕಾಗಿ ತಮ್ಮ ಸರ್ವಸ್ವವನ್ನು ಅರ್ಪಿಸಿದ್ದಾರೆ. ಬಿ.ಎಂ. ಶ್ರೀಕಂಠಯ್ಯ, ಕುವೆಂಪು, ಅನ.ಕೃಷ್ಣರಾಯರು, ಆಲೂರು ವೆಂಕಟರಾಯರು, ಗೋರೂರು ರಾಮಸ್ವಾಮಿ ಅಯ್ಯಂಗಾರ್, ಕಡಿದಾಳ್ ಮಂಜಪ್ಪ, ಕೆಂಗಲ್ ಹನುಮಂತಯ್ಯ, ಹೆಚ್.ಎಸ್.ದೊರೆಸ್ವಾಮಿ, ಪಾಟೀಲ ಪುಟ್ಟಪ್ಪ, ಅಂದಾನಪ್ಪ ದೊಡ್ಡಮೇಟಿ, ಅಳವಂಡಿ ಶಿವಮೂರ್ತಿಸ್ವಾಮಿ, ಚನ್ನಪ್ಪ ವಾಲಿ, ಅಣ್ಣ ಗುರೂಜಿ, ಹೊಸಮನಿ ಸಿದ್ದಪ್ಪ, ಮಂಗಳವೇಡೆ ಶ್ರೀನಿವಾಸರಾಯರು, ಹರ್ಡಿಕರ ಮಂಜಪ್ಪ ಮೊದಲಾದ ಅನೇಕ ಗಣ್ಯರು, ಸಾಹಿತಿಗಳು, ಸಂಘ-ಸಂಸ್ಥೆಗಳು, ಪತ್ರಿಕೋದ್ಯಮಿಗಳು ಏಕೀಕರಣಕ್ಕೆ ಅವಿರತವಾಗಿ ಶ್ರಮಿಸಿದ್ದಾರೆ.
ಇವರೆಲ್ಲರ ಕನಸುಗಳನ್ನು ನನಸು ಮಾಡಿದವರು ಎಸ್.ನಿಜಲಿಂಗಪ್ಪನವರು. ೧೯೫೬ ನವೆಂಬರ್ ೧ ರಂದು ಇವರ ನಾಯಕತ್ವದಲ್ಲಿ ಕರ್ನಾಟಕವು ಏಕೀಕರಣಗೊಂಡಿತು. ಅದೇ ರೀತಿ ೧೯೭೨ ರಲ್ಲಿ ಶ್ರೀ ಡಿ.ದೇವರಾಜ ಅರಸು ಅವರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿದರು. ೧೯೯೭ ರಲ್ಲಿ ಸನ್ಮಾನ್ಯ ಶ್ರೀ ಜೆ.ಹೆಚ್.ಪಟೇಲ್ ಅವರು ಕೊಪ್ಪಳ ಜಿಲ್ಲೆಯನ್ನು ರಚಿಸಿದರು. ಈ ಎಲ್ಲಾ ಹಿರಿಯ ಮಹನೀಯರುಗಳನ್ನು ಈ ಸಂದರ್ಭದಲ್ಲಿ ಕೃತಜ್ಞತೆಯಿಂದ ನೆನೆಸಿಕೊಂಡು ಅವರುಗಳಿಗೆ ನಮನಗಳನ್ನು ಸಲ್ಲಿಸುವುದು ನಮ್ಮ ಕರ್ತವ್ಯವಾಗಿದೆ.
ಕರ್ನಾಟಕ ಏಕೀಕರಣವಾದ ನಂತರ ಕರ್ನಾಟಕವು ಸಮಗ್ರ ಬೆಳವಣಿಗೆಯನ್ನು ಕಂಡಿತು. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ರಾಜ್ಯದ ಸಾಧನೆ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿದೆ.
ಕನ್ನಡ ನಾಡು, ನುಡಿಗಾಗಿ ಸೇವೆ ಸಲ್ಲಿಸುವ ಸುಸಂದರ್ಭ ಕೊಪ್ಪಳ ಜಿಲ್ಲೆಗೆ ಮತ್ತೊಮ್ಮೆ ಒದಗಿ ಬಂದಿದೆ. ೭೮ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಬರುವ ಡಿಸೆಂಬರ್ ೯, ೧೦, ಮತ್ತು ೧೧ ರಂದು ಮೂರು ದಿನಗಳ ಕಾಲ ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದಲ್ಲಿ ಅತ್ಯಂತ ಅರ್ಥಪೂರ್ಣವಾಗಿ ಆಚರಿಸುವ ಅವಕಾಶ ಒದಗಿ ಬಂದಿರುವುದು ನಮ್ಮೆಲ್ಲರಿಗೂ ಸಂತಸ ತಂದಿದೆ. ಈ ಭಾಗದ ಎಲ್ಲಾ ಸಾಹಿತಿಗಳು, ಚುನಾಯಿತ ಪ್ರತಿನಿಧಿಗಳು, ಉದ್ಯಮಿಗಳು, ಅಧಿಕಾರಿಗಳು, ಎಲ್ಲಾ ಕನ್ನಡ ಪ್ರೇಮಿಗಳು ಒಗ್ಗಟ್ಟಿನಿಂದ ಸಕ್ರಿಯವಾಗಿ ತೊಡಗಿಸಿಕೊಂಡು, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅತ್ಯಂತ ಯಶಸ್ವಿಯಾಗಿ ನಡೆಸೋಣ.
ನಮ್ಮ ಸರ್ಕಾರವು ಅಧಿಕಾರಕ್ಕೆ ಬಂದ ಮೇಲೆ ರಾಜ್ಯದ ಸಮಗ್ರ ಅಭಿವೃದ್ಧಿ ಪಣ ತೊಟ್ಟು ಅನೇಕ ಹತ್ತು-ಹಲವಾರು ಜನಪ್ರಿಯ ಯೋಜನೆಗಳನ್ನು ಜಾರಿಗೊಳಿಸಿದೆ.
ರಾಜ್ಯದ ಜನಪ್ರಿಯ ಮುಖ್ಯ ಮಂತ್ರಿಗಳೂ ನಮ್ಮ ನಾಯಕರೂ ಆಗಿರುವ ಮಾನ್ಯ ಶ್ರೀ ಡಿ.ವಿ.ಸದಾನಂದಗೌಡ ಅವರು ರಾಜ್ಯದ ಅಭಿವೃದ್ಧಿಯನ್ನೇ ಮೂಲ ಮಂತ್ರವನ್ನಾಗಿಸಿಕೊಂಡು, ರಾಜ್ಯವನ್ನು ಅಭಿವೃದ್ಧಿ ಪಥದತ್ತ ಸಾಗಿಸಲು ಶ್ರಮಿಸುತ್ತಿದ್ದಾರೆ.
ಇಡೀ ದೇಶದಲ್ಲೆ ಕೇವಲ ಶೇ.೧ ರ ಬಡ್ಡಿ ದರದಲ್ಲಿ ರೈತರಿಗೆ ಸಾಲ ನೀಡುವ ಯೋಜನೆಯನ್ನು ನಮ್ಮ ಸರ್ಕಾರವು ಜಾರಿಗೆ ತಂದಿದೆ. ಕಳೆದ ಸೆಪ್ಟಂಬರ್ ಅಂತ್ಯದವರೆಗೆ ೮,೮೬,೬೯೨ ರೈತರಿಗೆ ರೂ.೩೨೭೩ ಕೋಟಿಗಳ ಬೆಳೆ ಸಾಲ ವಿತರಣೆ ಮಾಡಲಾಗಿದೆ.
ಮುಂಗಾರು ಮಳೆ ವಿಫಲಗೊಂಡ ಕಾರಣದಿಂದಾಗಿ, ರಾಜ್ಯ ಸರ್ಕಾರವು ಕೊಪ್ಪಳ ಜಿಲ್ಲೆಯ ಎಲ್ಲಾ ನಾಲ್ಕು ತಾಲ್ಲೂಕುಗಳನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿದೆ. ಜಿಲ್ಲೆಯ ಗ್ರಾಮೀಣ ಪ್ರದೇಶ ನಗರ ಪ್ರದೇಶ ಮತ್ತು ಪಟ್ಟಣ ಪ್ರದೇಶಗಳಲ್ಲಿ ಅವಶ್ಯವಿರುವ ಕುಡಿಯುವ ನೀರು, ಮೇವು ಸರಬರಾಜು, ಬೆಳೆ ಹಾನಿ, ರಸ್ತೆ ದುರಸ್ತಿ ಇತ್ಯಾದಿಗಳಿಗೆ ರೂ.೫೫ ಕೋಟಿ ೬೮ ಲಕ್ಷಗಳ ಅನುದಾನ ಬೇಕಾಗಬಹುದು ಎಂದು ಅಂದಾಜಿಸಲಾಗಿದ್ದು, ಜಿಲ್ಲಾಡಳಿತದಲ್ಲಿ ಹಾಲಿ ೬ ಕೋಟಿ ೨೪ ಲಕ್ಷ ರೂ.ಗಳ ಅನುದಾನ ಲಭ್ಯವಿದೆ. ಅವಶ್ಯಕತೆಗನುಗುಣವಾಗಿ ಅನುದಾನವನ್ನು ಸರ್ಕಾರದಿಂದ ಬಿಡುಗಡೆ ಗೊಳಿಸಲಾಗುವುದು.
ಸಮಾಜ ಕಲ್ಯಾಣ ಇಲಾಖೆಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಒಟ್ಟು ೮ ವಸತಿ ನಿಲಯಗಳ ಕಟ್ಟಡ ನಿರ್ಮಾಣಕ್ಕಾಗಿ ೬ ಕೋಟಿ ೬೧ ಲಕ್ಷ ರೂ.ಗಳ ಅನುದಾನ ಒದಗಿಸಲಾಗಿದೆ.
ಪ್ರತಿ ವಿಧಾನ ಸಭಾ ಕ್ಷೇತ್ರದ ಪರಿಶಿಷ್ಟ ಜಾತಿ ಕಾಲೋನಿಗಳ ಮೂಲಭೂತ ಸೌಕರ್ಯಕ್ಕಾಗಿ ರೂ. ಒಂದು ಕೋಟಿ, ಹಾಗೂ ಪರಿಶಿಷ್ಟ ವರ್ಗದ ಕಾಲೋನಿಗಳಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಲು ರೂ.೫೦.೦೦ ಲಕ್ಷಗಳ ಅನುದಾನವನ್ನು ನಿಗದಿಪಡಿಸಲಾಗಿದೆ.
ಯಲಬುರ್ಗಾ ತಾಲ್ಲೂಕು ಕಕ್ಕಿಹಳ್ಳಿ ತಾಂಡಾ ಮತ್ತು ಕುಷ್ಟಗಿ ತಾಲ್ಲೂಕು ಕಳಮಳ್ಳಿ ತಾಂಡಾಗಳಲ್ಲಿ ತಲಾ ರೂ.೧೦.೦೦ ಲಕ್ಷಗಳ ಮಿತಿಯಲ್ಲಿ ಸೇವಾಲಾಲ್ ಭವನ ನಿರ್ಮಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.
೨೦೧೧-೧೨ನೇ ಸಾಲಿಗೆ ಕೊಪ್ಪಳ ತಾಲ್ಲೂಕಿನ ಗೌರಿ ಶಂಕರ ದೇವಸ್ಥಾನದ ಹತ್ತಿರ ದದೇಗಲ್, ಆದಿ ಜಾಂಬವ ಕಲ್ಯಾಣ ಮಂಟಪದ ಹತ್ತಿರ ಸಮುದಾಯ ಭವನಗಳನ್ನು, ಕೊಪ್ಪಳದಲ್ಲಿ ಭೋವಿ ಸಮುದಾಯ ಭವನ, ಕೊಪ್ಪಳ ನಗರದಲ್ಲಿ ಮೋಚಿ ಸಮುದಾಯ ಭವನ, ಹುಲಿಗಿ, ಅಗಳಕೇರಾ, ಹಿರೇಸಿಂದೋಗಿಯಲ್ಲಿ ಸಮುದಾಯ ಭವನ ನಿರ್ಮಿಸಲು ರೂ.೯೦.೦೦ ಲಕ್ಷಗಳಿಗೆ ಸರ್ಕಾರದಿಂದ ತಾತ್ವಿಕ ಮಂಜೂರಾತಿ ನೀಡಲಾಗಿದೆ.
ಪರಿಶಿಷ್ಟ ಜಾತಿಯ ಮೆಟ್ರಿಕ್ ನಂತರದ ೩೬೦೦ ವಿದ್ಯಾರ್ಥಿಗಳಿಗಾಗಿ ರೂ.೭೯.೯೩ ಲಕ್ಷ, ಪರಿಶಿಷ್ಟ ವರ್ಗದ ಮೆಟ್ರಿಕ್ ನಂತರ ೨೧೫೦ ವಿದ್ಯಾರ್ಥಿಗಳಿಗಾಗಿ ರೂ.೮೧.೦೦ ಲಕ್ಷ ಅನುದಾನ ವಿದ್ಯಾರ್ಥಿ ವೇತನಕ್ಕಾಗಿ ಒದಗಿಸಲಾಗಿದೆ.
ವಿಶೇಷ ಘಟಕ ಯೋಜನೆ ಅಡಿ ರೂ.೬೪.೦೦ ಲಕ್ಷ ಹಾಗೂ ಗಿರಿಜನ ಉಪಯೋಜನೆ ಅಡಿ ರೂ.೧೫.೦೦ ಲಕ್ಷ ಅನುದಾನವನ್ನು ನಿಗದಿಪಡಿಸಲಾಗಿದೆ. ಜಿಲ್ಲಾ ಕೇಂದ್ರಸ್ಥಾನದಲ್ಲಿ ವಾಲ್ಮೀಕಿ ಭವನ ನಿರ್ಮಿಸಲು ರೂ. ಒಂದು ಕೋಟಿ ಅನುದಾನ ನಿಗದಿಯಾಗಿದ್ದು, ಈಗಾಗಲೇ ರೂ.೫೦.೦೦ ಲಕ್ಷ ಅನುದಾನ ಬಿಡುಗಡೆಯಾಗಿರುತ್ತದೆ.
ಕೊಪ್ಪಳ ಜಿಲ್ಲೆಯ ಕೆಲ ಭಾಗಗಳಲ್ಲಿ ಸೆಪ್ಟಂಬರ್-೨೦೦೯ನೇ ವರ್ಷದಲ್ಲಿ ಉಂಟಾದ ಅನಿರೀಕ್ಷಿತ ಅತಿ ಹೆಚ್ಚು ಮಳೆ ಮತ್ತು ಪ್ರವಾಹದಿಂದ ಜನರನ್ನು ರಕ್ಷಿಸಲು ಅನುಕೂಲವಾಗುವಂತೆ ನಿರಂತರ ಪ್ರವಾಹದ ಭೀತಿಗೆ ಒಳಗಾದ ಒಟ್ಟು ೧೭ ಗ್ರಾಮಗಳ ಸ್ಥಳಾಂತರಕ್ಕಾಗಿ ಸರ್ಕಾರವು ವ್ಯಾಪಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಮನೆಗಳನ್ನು ಕಳೆದುಕೊಂಡ ೨೮೯೪ ಕುಟುಂಬಗಳಿಗೆ ಆಸರೆ ಯೋಜನೆ ಅಡಿಯಲ್ಲಿ ಮನೆಗಳನ್ನು ನಿರ್ಮಿಸಲಾಗುತ್ತಿದೆ. ಈಗಾಗಲೇ ೧೩ ಗ್ರಾಮಗಳಲ್ಲಿ ೨೧೨೩ ಮನೆಗಳ ನಿರ್ಮಾಣ ಮುಕ್ತಾಯವಾಗಿದ್ದು, ಅವುಗಳನ್ನು ಫಲಾನುಭವಿಗಳಿಗೆ ಈಗಾಗಲೇ ವಿತರಿಸಲಾಗಿದೆ. ಇನ್ನುಳಿದ ಗ್ರಾಮಗಳಲ್ಲಿನ ಮನೆಗಳನ್ನು ಈ ವರ್ಷದ ಅಂತ್ಯದೊಳಗೆ ಮುಕ್ತಾಯಗೊಳಿಸಿ ಫಲಾನುಭವಿಗಳಿಗೆ ವಿತರಿಸಲಾಗುವುದು.
ರಾಜ್ಯದ ೨ ಲಕ್ಷ ಸಣ್ಣ ಮತ್ತು ಅತಿ ಸಣ್ಣ ರೈತರನ್ನು ಆರ್ಥಿಕವಾಗಿ ಸದೃಢರನ್ನಾಗಿ ಮಾಡಲು ಸುವರ್ಣ ಭೂಮಿ ಯೋಜನೆಯಡಿ ವಿವಿಧ ಇಲಾಖೆಗಳು ಅನುಷ್ಠಾನಗೊಳಿಸಲಾಗುತ್ತಿದ್ದು, ಜಿಲ್ಲೆಯ ೨೩,೭೫೪ ಫಲಾನುಭವಿಗಳ ಆಯ್ಕೆಗಾಗಿ ಪ್ರಕ್ರಿಯೆ ಪೂರ್ಣಗೊಂಡಿದೆ. ಅಲ್ಲದೆ ಸಂಬಂಧಪಟ್ಟ ಫಲಾನುಭವಿ ರೈತರ ಬ್ಯಾಂಕ್ ಖಾತೆಗೆ ಸರ್ಕಾರದ ಸಹಾಯಧನ ಜಮಾ ಮಾಡುವ ಪ್ರಕ್ರಿಯೆ ಪೂರ್ಣಗೊಳ್ಳುವ ಹಂತ ತಲುಪಿದೆ. ಈ ಮೂಲಕ ಕೃಷಿ, ಸಾವಯವ ಕೃಷಿ, ತೋಟಗಾರಿಕೆ, ರೇಷ್ಮೆ, ಮೀನುಗಾರಿಕೆ, ಜೈವಿಕ ಇಂಧನ, ಕೃಷಿ ಚಟುವಟಿಕೆಗಳಲ್ಲಿ ಸಣ್ಣ ಮತ್ತು ಅತಿ ಸಣ್ಣ ರೈತರು ತೊಡಗಿಸಿಕೊಳ್ಳಲು ಉತ್ತೇಜನ ನೀಡಲಾಗುತ್ತಿದೆ.
ಪ್ರಸಕ್ತ ವರ್ಷದಲ್ಲಿ ಲೋಕೋಪಯೋಗಿ ಇಲಾಖೆಯ ಮೂಲಕ ಜಿಲ್ಲೆಯ ೧೫೬ ಕಿ.ಮೀ. ಜಿಲ್ಲಾ ಮುಖ್ಯ ರಸ್ತೆ ಹಾಗೂ ರಾಜ್ಯ ಹೆದ್ದಾರಿಗಳನ್ನು ಅಭಿವೃದ್ಧಿಪಡಿಸಲು ೧೩೨ ಕೋಟಿ ರೂ.ಗಳ ಅನುದಾನ ಒದಗಿಸಲಾಗಿದೆ. ಅಲ್ಲದೆ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯಡಿ ೨೦೫ ಕಿ.ಮೀ. ರಸ್ತೆ ಅಭಿವೃದ್ಧಿಗಾಗಿ ೯೧ ಕೋಟಿ ರೂ.ಗಳ ಅನುದಾನ ನಿಗದಿಪಡಿಸಲಾಗಿದೆ. ಅದೇ ರೀತಿ ನಬಾರ್ಡ್ ಯೋಜನೆಯಡಿ ೮ ಸೇತುವೆಗಳ ನಿರ್ಮಾಣಕ್ಕೆ ೪ ಕೋಟಿ ೫೬ ಲಕ್ಷ ರೂ.ಗಳ ಅನುದಾನ ಒದಗಿಸಿದೆ. ಲೋಕೋಪಯೋಗಿ ಇಲಾಖೆ, ನ್ಯಾಯಾಲಯ, ಶಿಕ್ಷಣ ಇಲಾಖೆ ಸೇರಿದಂತೆ ಇನ್ನಿತರ ಇಲಾಖೆಯ ೩೦ ಕಟ್ಟಡ ಕಾಮಗಾರಿಗಳಿಗಾಗಿ ೩೩ ಕೋಟಿ ೫೦ ಲಕ್ಷ ರೂ.ಗಳ ಅನುದಾನ ಒದಗಿಸಿ, ಜಿಲ್ಲೆಯ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ.
ಕೊಪ್ಪಳದಲ್ಲಿ ೨೫೦ ಹಾಸಿಗೆಯ ನೂತನ ಜಿಲ್ಲಾ ಆಸ್ಪತ್ರೆ ನಿರ್ಮಾಣಕ್ಕೆ ೨ ಕೋಟಿ ೧೫ ಲಕ್ಷ ರೂ. ವೆಚ್ಚ ಮಾಡಲಾಗಿದ್ದು, ಕಾಮಗಾರಿ ಭರದಿಂದ ಸಾಗಿದೆ.
ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೊಪ್ಪಳ ಜಿಲ್ಲೆಯಲ್ಲಿ ೨,೦೪,೪೦೧ ಕುಟುಂಬಗಳು ಉದ್ಯೋಗಕ್ಕಾಗಿ ನೊಂದಣಿಯಾಗಿದ್ದು, ಜಿಲ್ಲೆಗೆ ರೂ.೬೦ ಕೋಟಿ ೩೯ ಲಕ್ಷಗಳ ಕ್ರಿಯಾ ಯೋಜನೆಯನ್ನು ಗ್ರಾಮಪಂಚಾಯತ್ ಮಟ್ಟದಲ್ಲಿ ತಯಾರಿಸಲಾಗಿದೆ.
ಈ ಯೋಜನೆಯಡಿಯಲ್ಲಿ ಕಾಮಗಾರಿಗಳನ್ನು ಪ್ರಾರಂಭಿಸಿ, ಕಳೆದ ತಿಂಗಳಾಂತ್ಯದವರೆಗೆ ಕೂಲಿ ಕಾರ್ಮಿಕರಿಗೆ ಉದ್ಯೋಗ ನೀಡಿ ೪,೮೩,೦೩೭ ಮಾನವ ದಿನಗಳನ್ನು ಸೃಜಿಸಲಾಗಿದೆ ಹಾಗೂ ೨೦ ಕೋಟಿ ೬೩ ಲಕ್ಷಗಳ ಅನುದಾನ ಬಳಕೆ ಮಾಡಲಾಗಿದೆ.
ಜಿಲ್ಲೆಯಲ್ಲಿ ಬರಗಾಲ ಘೋಷಣೆಯಾಗಿರುವುದರಿಂದ ಜಿಲ್ಲೆಯ ಜನರು ಗುಳೆ ಹೋಗುವುದನ್ನು ತಪ್ಪಿಸಲು ಈ ಯೋಜನೆಯಡಿ ನೋಂದಣಿಯಾದ ಕೂಲಿ ಕಾರ್ಮಿಕರಿಗೆ ಹೆಚ್ಚುವರಿ ಉದ್ಯೋಗ ನೀಡುವ ಕುರಿತು ರೂ.೫೨ ಕೋಟಿಗಳ ೮೫ ಲಕ್ಷಗಳ ವಿಶೇಷ ಕ್ರಿಯಾ ಯೋಜನೆಯನ್ನು ಸಿದ್ದಪಡಿಸಲಾಗಿದೆ.
ಮುಖ್ಯ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಈ ಜಿಲ್ಲೆಗೆ ೨೦೧೧-೧೨ನೇ ಸಾಲಿಗೆ ರೂ.೪ ಕೋಟಿ ೭೪ ಲಕ್ಷಗಳ ಅನುದಾನ ನಿಗದಿಪಡಿಸಿದೆ. ಈ ಪೈಕಿ ರೂ.೨ ಕೋಟಿ ೩೭ ಲಕ್ಷಗಳ ಸರ್ಕಾರದ ಅನುದಾನ ಬಿಡುಗಡೆಯಾಗಿದ್ದು, ೨೯ ಕಾಮಗಾರಿಗಳನ್ನು ಪೂರ್ಣಗೊಳಿಸಿ ೧೯.೩೩ ಕಿ.ಮೀ. ಗಳ ರಸ್ತೆ ಅಭಿವೃದ್ಧಿಗೊಳಿಸಲಾಗಿದೆ. ಇದಕ್ಕಾಗಿ ರೂ.೧ ಕೋಟಿ ೧೮ ಲಕ್ಷಗಳ ಅನುದಾನ ವಿನಿಯೋಗಿಸಲಾಗಿದೆ.
೧೩ನೇ ಹಣಕಾಸು ಆಯೋಗ ಯೋಜನೆಯಡಿ ೨೦೧೧-೧೨ನೇ ಸಾಲಿಗೆ ರೂ.೧ ಕೋಟಿ ೯೫ ಲಕ್ಷಗಳ ಗುರಿ ನಿಗಿದಿಯಾಗಿದ್ದು, ಕ್ರಿಯಾ ಯೋಜನೆಯನ್ನು ಸಿದ್ದಪಡಿಸಲಾಗಿದೆ.
ಸ್ವರ್ಣ ಜಯಂತಿ ಗ್ರಾಮ ಸ್ವರೋಜ್‌ಗಾರ್ ಯೋಜನೆಯಡಿ ವಾರ್ಷಿಕ ಆರ್ಥಿಕ ಗುರಿ ರೂ.೫ ಕೋಟಿ ೭೩ ಲಕ್ಷಗಳ ಹಾಗೂ ಭೌತಿಕ ಗುಂಪು ೧೬೫ ನಿಗದಿಪಡಿಸಿದ್ದು, ಸರ್ಕಾರದಿಂದ ರೂ.೨ ಕೋಟಿ ೪೫ ಲಕ್ಷಗಳ ಅನುದಾನ ಬಿಡುಗಡೆಯಾಗಿದೆ.
ಸಂಪೂರ್ಣ ಸ್ವಚ್ಛತಾ ಆಂದೋಲನ ಯೋಜನೆಯಲ್ಲಿ ಜಿಲ್ಲೆಗೆ ರೂ.೬ ಕೋಟಿ ೨೬ ಲಕ್ಷಗಳ ಅನುದಾನ ಬಿಡುಗಡೆಯಾಗಿದ್ದು, ೨೧ ಗ್ರಾಮ ಪಂಚಾಯಿತಿಗಳಿಗೆ ಅನುದಾನ ಬಿಡುಗಡೆ ಮಾಡಲಾಗಿದೆ.
೨೦೧೧-೧೨ನೇ ಸಾಲಿನ ನಿರ್ಮಲ ಗ್ರಾಮ ಪುರಸ್ಕಾರಕ್ಕಾಗಿ ೫೭ ಗ್ರಾಮ ಪಂಚಾಯಿತಿಗಳಿಗೆ ಪುರಸ್ಕಾರ ಪಡೆದುಕೊಳ್ಳಲು ಆಯ್ಕೆ ಮಾಡಲಾಗಿದೆ.
ಶೌಚಾಲಯ ಕಟ್ಟಿಕೊಳ್ಳಲು ಬಿ.ಪಿ.ಎಲ್. ಫಲಾನುಭವಿಗಳಿಗೆ ಸರ್ಕಾರದಿಂದ ಸಹಾಯಧನ ಮೊತ್ತ ರೂ.೩೦೦೦-೦೦ ದಿಂದ ೩೭೦೦-೦೦ ರವರೆಗೆ ಹೆಚ್ಚಿಸಲಾಗಿದೆ.
ಜಿಲ್ಲೆಯಲ್ಲಿ ಬಿ.ಪಿ.ಎಲ್. ವೈಯಕ್ತಿಕ ಶೌಚಾಲಯಗಳನ್ನು ಕಳೆದ ಸಾಲಿನ ಅಂತ್ಯದವರೆಗೆ ೫೧,೨೫೨ ನಿರ್ಮಿಸಲಾಗಿದ್ದು, ಈ ವರ್ಷ ಇನ್ನೂ ೯,೬೧೭ ವೈಯಕ್ತಿಕ ಶೌಚಾಲಯಗಳನ್ನು ಮಾರ್ಚಿ-೨೦೧೧ ರ ಅಂತ್ಯದೊಳಗೆ ನಿರ್ಮಿಸಲಾಗುವುದು.
ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಯೋಜನೆಯಲ್ಲಿ ಕೊಪ್ಪಳ ಜಿಲ್ಲೆಗೆ ರೂ.೧೧೧ ಕೋಟಿ ೮೧ ಲಕ್ಷ ವಾರ್ಷಿಕ ಕ್ರಿಯಾ ಯೋಜನೆ ಮಂಜೂರಾಗಿದ್ದು, ಅದರಲ್ಲಿ ಒಟ್ಟು ೬೧೨ ಕಾಮಗಾರಿಗಳು ಮಂಜೂರಾಗಿವೆ. ೩೨೯ ಹೊಸ ಕಾಮಗಾರಿಗಳಿಗೆ ಟೆಂಡರ್ ಕರೆಯಲಾಗಿದೆ. ೨೮೩ ಮುಂದುವರೆದ ಕಾಮಗಾರಿಗಳಲ್ಲಿ ೧೧೯ ಪೂರ್ಣಗೊಂಡಿದ್ದು, ಉಳಿದ ೧೬೪ ಕಾಮಗಾರಿಗಳು ಪೂರ್ಣಗೊಳ್ಳುವ ಹಂತದಲ್ಲಿವೆ.
ಜಿಲ್ಲೆಯಲ್ಲಿ ಬರಗಾಲ ಘೋಷಣೆಯಾಗಿರುವುದರಿಂದ ಜನವಸತಿ ಗ್ರಾಮೀಣ ಪ್ರದೇಶಗಳಲ್ಲಿ ಜನವರಿ ೨೦೧೧ ರಿಂದ ಜೂನ್ ೨೦೧೨ ರವರೆಗೆ ಉಂಟಾಗಬಹುದಾದ ಕುಡಿಯುವ ನೀರಿನ ಸಮಸ್ಯೆ ಕುರಿತಂತೆ ತುರ್ತು ಕ್ರಮ ಕೈಗೊಳ್ಳಲು ಜಿಲ್ಲೆಯಲ್ಲಿ ಒಟ್ಟು ೮೭೯ ಕಾಮಗಾರಿಗಳನ್ನು ಗುರುತಿಸಿ ಇದಕ್ಕೆ ರೂ.೯ ಕೋಟಿ ೫೧ ಲಕ್ಷಗಳ ಅಂದಾಜಿನ ವಿಶೇಷ ಕ್ರಿಯಾ ಯೋಜನೆಯನ್ನು ಸಿದ್ದಪಡಿಸಲಾಗಿದೆ.
ಸುವರ್ಣ ಗ್ರಾಮೋದಯ ಯೋಜನೆಯಡಿ ಕೊಪ್ಪಳ ಜಿಲ್ಲೆಯಲ್ಲಿ ೧ ರಿಂದ ೪ ಹಂತ ಸೇರಿ ಒಟ್ಟು ೧೪೯ ಗ್ರಾಮಗಳು ಆಯ್ಕೆಯಾಗಿರುತ್ತವೆ. ಅನುಮೋದಿತ ಕ್ರಿಯಾ ಯೋಜನೆಯ ಮೊತ್ತ ರೂ.೯೧ ಕೋಟಿ ೨೮ ಲಕ್ಷಗಳಿದ್ದು, ಸರ್ಕಾರದಿಂದ ವಿವಿಧ ಹಂತದವರೆಗೆ ರೂ.೬೭ ಕೋಟಿ ೩೬ ಲಕ್ಷಗಳು ಬಿಡುಗಡೆಯಾಗಿದೆ.
೨೦೧೧-೧೨ನೇ ಸಾಲಿಗೆ ಇಂದಿರಾ ಆವಾಸ್ ಯೋಜನೆಯಲ್ಲಿ ೪,೬೮೭ ಮನೆಗಳು ಮಂಜೂರಾಗಿದ್ದು, ಗ್ರಾಮ ಸಭೆಗಳ ಮೂಲಕ ಫಲಾನುಭವಿಗಳ ಆಯ್ಕೆ ಗ್ರಾಮ ಪಂಚಾಯತ್ ಹಂತದಲ್ಲಿ ಪ್ರಗತಿಯಲ್ಲಿದೆ.
೨೦೧೦-೧೧ನೇ ಸಾಲಿನ ಬಸವ ಇಂದಿರಾ ಯೋಜನೆಯಡಿ ಪ್ರತಿ ವಿಧಾನ ಸಭಾ ಕ್ಷೇತ್ರಕ್ಕೆ ೨,೦೦೦ ಮನೆಗಳು ಮಂಜೂರಾಗಿದ್ದು, ಫಲಾನುಭವಿಗಳ ಆಯ್ಕೆ ದಾಖಲೀಕರಣವಾಗಿ, ಮನೆಗಳನ್ನು ಫಲಾನುಭವಿಗಳ ಮುಖಾಂತರ ಕಟ್ಟಿಸುವುದು ಪ್ರಾರಂಭವಾಗಿದೆ.
೨೦೧೦-೧೧ನೇ ಸಾಲಿಗೆ ಅಂಬೇಡ್ಕರ್ ಯೋಜನೆಯಡಿ ೫೩೯ ಮನೆಗಳು ಮಂಜೂರಾಗಿದ್ದು, ದಾಖಲೀಕರಣ ಪೂರ್ಣಗೊಂಡಿದ್ದು, ಫಲಾನುಭವಿಗಳ ಆಯ್ಕೆ ದಾಖಲೀಕರಣಕ್ಕಾಗಿ ಮನೆಗಳನ್ನು ಫಲಾನುಭವಿಗಳ ಮುಖಾಂತರ ಕಟ್ಟಿಸುವುದು ಪ್ರಾರಂಭವಾಗಿದೆ.
೨೦೧೦-೧೧ ಮತ್ತು ೨೦೧೧-೧೨ನೇ ಸಾಲಿನಲ್ಲಿ ೧೧,೭೫೦ ವಸತಿ ರಹಿತರಿಗೆ ನಿವೇಶನ ಹಂಚಿಕೆ ಗುರಿ ನಿಗದಿಪಡಿಸಿದ್ದು, ಈಗಾಗಲೇ ೧೩೩ ವಸತಿ ರಹಿತ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡಲಾಗಿದ್ದು, ಉಳಿದ ೨೪೫೫ ನಿವೇಶನಗಳನ್ನು ಫಲಾನುಭವಿಗಳಿಗೆ ಹಂಚಲು ಜಮೀನು ಖರೀದಿ ಪ್ರಕ್ರಿಯೆ ಪ್ರಗತಿ ಹಂತದಲ್ಲಿದೆ.
ಹೀಗೆ ಕೊಪ್ಪಳ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ನಮ್ಮ ಸರ್ಕಾರವು ನಾನಾ ಕಾರ್ಯಕ್ರಮಗಳನ್ನು ರೂಪಿಸಿ ಯಶಸ್ವಿಯಾಗಿ ಜಾರಿಗೊಳಿಸುತ್ತಿದೆ.
ಎಲ್ಲ ಆತ್ಮೀಯ ಬಂಧುಗಳೇ, ಈ ನಾಡಿನ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಲು ನಾವೆಲ್ಲರೂ ಕಂಕಣಬದ್ಧರಾಗೋಣ. ಸದೃಢ, ಸಮೃದ್ಧ ಹಾಗೂ ಸ್ವಾವಲಂಬಿ ಕರ್ನಾಟಕ ನಿರ್ಮಾಣ ಮಾಡಲು ಶ್ರಮಿಸೋಣ.
ಕೊಪ್ಪಳ ಜಿಲ್ಲೆಯೂ ಸೇರಿದಂತೆ ಇಡೀ ಕನ್ನಡ ನಾಡಿನಲ್ಲಿ ಸುಖ, ಶಾಂತಿ, ನೆಮ್ಮದಿ ಮತ್ತು ಭಾವೈಕ್ಯತೆ ನೆಲೆಸಿ, ಸಮಸ್ತ ನಾಗರೀಕರು ಶಾಂತಿ ಮತ್ತು ಸಹಬಾಳ್ವೆ ನಡೆಸಲು ಮತ್ತು ಕನ್ನಡ ತಾಯಿ ಭುವನೇಶ್ವರಿಯ ಕೃಪೆ ಎಲ್ಲರಿಗೂ ದೊರಕಲಿ ಎಂದು ಹಾರೈಸುತ್ತೇನೆ.
ಎಲ್ಲರಿಗೂ ಮತ್ತೊಮ್ಮೆ ರಾಜ್ಯೋತ್ಸವದ ಶುಭಾಶಯಗಳು.
"ಜೈಹಿಂದ್" "ಜೈ ಕರ್ನಾಟಕ"
0 comments:
Post a Comment