PLEASE LOGIN TO KANNADANET.COM FOR REGULAR NEWS-UPDATES


ಗಂಗಾವತಿ: ನಗರದಲ್ಲಿ ನಡೆಯುವ 78ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕೇವಲ ಒಂದು ತಿಂಗಳು ಬಾಕಿ ಇದೆ. ಇನ್ನುಳಿದ ಸಿದ್ಧತೆ 15 ದಿನದೊಳಗೆ ಪೂರ್ಣವಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಅಧಿಕಾರಿಗಳಿಗೆ ಸೂಚಿಸಿದರು.
ಸೋಮವಾರ ನಗರದ ಮಿನಿ ವಿಧಾನಸೌಧದಲ್ಲಿ ಸಾಹಿತ್ಯ ಸಮ್ಮೇಳನದ ಅಂಗವಾಗಿ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಸಿದ್ಧತೆ ಪರಿಶೀಲಿಸಿದರು. ಸಮ್ಮೇಳನಕ್ಕೆ ನಿಗದಿ ಮಾಡಿದ ದಿನಾಂಕ ಹತ್ತಿರವಾಗುತ್ತಿದ್ದಂತೆ ಸಿದ್ಧತೆಗಳು ತ್ವರಿತ ಗತಿಯಲ್ಲಿ ಸಾಗುತ್ತವೆ. ಗಂಗಾವತಿಯ ಸಮ್ಮೇಳನ ಖಚಿತವಾಗಿ ಯಶಸ್ವಿಯಾಗುತ್ತದೆ. ಈ ಬಗ್ಗೆ ಯಾರಿಗೂ ಸಂದೇಹ ಬೇಡ ಎಂದು ಸವದಿ ತಿಳಿಸಿದರು.
`ಡಿ.5ರಿಂದ ಅಧಿವೇಶನ ಆರಂಭವಾಗಲಿದ್ದು, ನಾನು ಕೇವಲ ಒಂದು ದಿನ ಅಧಿವೇಶನದಲ್ಲಿ ಪಾಲ್ಗೊಳ್ಳುತ್ತೇನೆ. ಆದಷ್ಟು ತ್ವರಿತ ನಾನು ಪೂರ್ಣ ಪ್ರಮಾಣದಲ್ಲಿ ಸಮ್ಮೇಳನದ ಕಾರ್ಯದಲ್ಲಿ ತೊಡಗಿಸಿಕೊಳ್ಳುವೆ` ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ಶೇಖರಗೌಡ ಮಾಲಿ ಪಾಟೀಲ್, ಸಮ್ಮೇಳನದ ವಸತಿ ಮತ್ತು ಊಟದ ಶೇ. 75ರಷ್ಟು ಸಿದ್ಧತೆ ಪೂರ್ಣವಾಗಿದೆ. ಪ್ರತಿನಿಧಿಗಳ ವರ್ಗೀಕರಣ ಮಾಡಿ ಮೂರು ಹಂತದ ಊಟದ ವ್ಯವಸ್ಥೆಯ ಏರ್ಪಾಡು ಮಾಡಲಾಗಿದೆ ಎಂದರು.
ಜಿಲ್ಲಾಧಿಕಾರಿ ಎಂ. ತುಳಸಿ, ಶಾಸಕರಾದ ಪರಣ್ಣ ಮುನವಳ್ಳಿ, ಕರಡಿ ಸಂಗಣ್ಣ, ಹಾಲಪ್ಪ ಆಚಾರ, ರಾಜ್ಯ ಕರಕುಶಲ ನಿಗಮದ ಅಧ್ಯಕ್ಷೆ ಲಲಿತಾರಾಣಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಬಿಲ್ಗಾರ, ಸಿಇಒ ಕೆ.ಎಚ್. ಕಾಕನೂರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ಪ್ರಕಾಶ ಇತರರು ಇದ್ದರು.

Advertisement

0 comments:

Post a Comment

 
Top