ಹೊಸದಿಲ್ಲಿ,ನ.26:ವಿದೇಶಿ ಕಂಪೆನಿಗಳು ಮತ್ತು ಇತರ ಪ್ರತಿಷ್ಠಾನಗಳೊಂದಿಗೆ ಸೇರಿಕೊಂಡು ವಂಚನೆ ಹಾಗೂ ನಿಧಿ ದುರುಪಯೋಗ ಮಾಡಿದ ಆರೋಪದಲ್ಲಿ ಮಾಜಿ ಐಪಿಎಸ್ ಅಧಿಕಾರಿಣಿ ಹಾಗೂ ಟೀಂ ಅಣ್ಣಾ ಸದಸ್ಯೆ ಕಿರಣ್ ಬೇಡಿಯವರ ವಿರುದ್ಧ ಪ್ರಥಮ ಮಾಹಿತಿ ವರದಿಯನ್ನು ದಾಖಲಿಸುವಂತೆ ದಿಲ್ಲಿಯ ನ್ಯಾಯಾಲಯ ವೊಂದು ಇಂದು ಆದೇಶಿಸಿದೆ.ದಿಲ್ಲಿಯ ವಕೀಲ ದೇವೇಂದರ್ ಸಿಂಗ್ ಚೌಹಾಣ್ ಎಂಬವರ ದೂರನ್ನು ಆಧರಿಸಿ ಬೇಡಿಯವರ ವಿರುದ್ಧ ಪ್ರಕರಣ ದಾಖಲಿಸುವಂತೆ ದಿಲ್ಲಿ ಪೊಲೀಸ್‌ನ ಅಪರಾಧ ವಿಭಾಗಕ್ಕೆ ಹೆಚ್ಚುವರಿ ಮುಖ್ಯ ನಗರ ನ್ಯಾಯಾಧೀಶ ಅಮಿತ್ ಬನ್ಸಾಲ್ ನಿರ್ದೇಶನ ನೀಡಿದ್ದಾರೆ.ಬೇಡಿ ತನ್ನ ‘ಇಂಡಿಯಾ ವಿಜನ್ ಫೌಂಡೇಶನ್’ ಹೆಸರಿನಲ್ಲಿ ‘ಮೇರಿ ಪೊಲೀಸ್’ ಮೂಲಕ ಧರ್ಮಾರ್ಥ ಕಂಪ್ಯೂಟರ್ ತರಬೇತಿ ನೀಡುವ ನೆಪದಲ್ಲಿ ವಿವಿಧ ಅರೆ ಸೇನಾ ಪಡೆಗಳು ಹಾಗೂ ರಾಜ್ಯ ಪೊಲೀಸ್ ಸಂಘಟನೆಗಳನ್ನು ‘ಲೂಟಿ’ ಮಾಡಿದ್ದಾರೆಂದು ದೂರುದಾರರು ಆರೋಪಿಸಿದ್ದಾರೆ.ಬಿಎಸ್‌ಎಫ್,ಸಿಐಎಸ್‌ಎಫ್,ಸಿಆರ್‌ಪಿಎಫ್ ಹಾಗೂ ಇತರ ರಾಜ್ಯ ಪೊಲೀಸ್ ಸಂಘಟನೆಗಳ ಸಿಬ್ಬಂದಿಯ ಮಕ್ಕಳಿಗೆ ಹಾಗೂ ಕುಟುಂಬದವರಿಗೆ ಧರ್ಮಾರ್ಥ ಕಂಪ್ಯೂಟರ್ ತರಬೇತಿ ನೀಡುವ ಹೆಸರಲ್ಲಿ ಮೈಕ್ರೋಸಾಫ್ಟ್ ಸಂಸ್ಥೆಯಿಂದ ರೂ.50ಲಕ್ಷಕ್ಕೂ ಹೆಚ್ಚು ದೇಣಿಗೆಯನ್ನು ಅವರು ಪಡೆದಿದ್ದಾರೆಂದು ಚೌಹಾಣ್ ದೂರಿದ್ದಾರೆ.
ಧರ್ಮಾರ್ಥ ತರಬೇತಿ ಅಥವಾ ಕಂಪ್ಯೂಟರ್ ನೀಡುವ ಬದಲು ಬೇಡಿ, ಕೆಲವು ಅಜ್ಞಾತ ವ್ಯಕ್ತಿಗಳೊಂದಿಗೆ ಸೇರಿಕೊಂಡು ವೇದಾಂತ ಫೌಂಡೇಶನ್‌ಗೆ ವಂಚನೆ ಮಾಡಿದ್ದಾರೆ ಹಾಗೂ ಸೈನಿಕರು, ಅರೆ ಸೈನಿಕರು ಹಾಗೂ ನಾಗರಿಕ ಪೊಲೀಸರ ಮಕ್ಕಳನ್ನು ವಂಚಿಸುವ ಯೋಜನೆ ರೂಪಿಸಿದ್ದಾರೆ. ಅವರು ತರಬೇತಿ ಕೇಂದ್ರವೊಂದಕ್ಕೆ ತಿಂಗಳಿಗೆ ತಲಾ 20 ಸಾವಿರದಂತೆ ತನಗಾಗಿ ಸಂಗ್ರಹಿಸಲು ಯೋಜನೆ ಹಾಕಿಕೊಂಡಿದ್ದರೆಂದು ಅವರು ಆಪಾದಿಸಿದ್ದಾರೆ. ತನಗಾಗಿ ಹಣವನ್ನು ದಿಕ್ಕುತಿಗೊಳಿಸಲು ಬೇಡಿ ವೇದಾಂತದೊಂದಿಗೆ ವಂತಿಗೆ ಒಪ್ಪಂದವೊಂದನ್ನು ಮಾಡಿಕೊಂಡಿದ್ದರು.
ತರಬೇತಿ ಕೇಂದ್ರಗಳ ಚಟುವಟಿಕೆಗಾಗಿ ಕಿರಣ್ ಬೇಡಿ ಭೂಮಿ ಹಾಗೂ ವಿದ್ಯುತ್ತಿನ ವ್ಯವಸ್ಥೆ ಮಾಡಿದ್ದಾರೆಂಬ ಸುಳ್ಳು ನೆಲೆಯಲ್ಲಿ ಒಟ್ಟು 20 ಸಾವಿರ ರೂ.ಗಳಲ್ಲಿ ವೇದಾಂತ ಸಂಸ್ಥೆಯು ರೂ.6ಸಾವಿರವನ್ನು ಅವರ ಇಂಡಿಯಾ ವಿಜನ್ ಫೌಂಡೇಶನ್‌ಗೆ ಈ ಒಪ್ಪಂದದ ಪ್ರಕಾರ ಪಾವತಿಸಬೇಕಿತ್ತೆಂದು ದೂರುದಾರರು ಹೇಳಿದ್ದಾರೆ.ಜಮೀನು, ವಿದ್ಯುತ್ ಇತ್ಯಾದಿ ವ್ಯವಸ್ಥೆಯನ್ನು ಪೊಲೀಸ್ ಸಂಘಟನೆಗಳೇ ಮಾಡಿದ್ದು, ಇದರಲ್ಲಿ ಬೇಡಿಯವರ ಪಾತ್ರವೇನೂ ಇರಲಿಲ್ಲ. ಬೇಡಿ ತನ್ನೆರಡು ಟ್ರಸ್ಟ್‌ಗಳಿಗಾಗಿ ವಿದೇಶಗಳಿಂದ ಭಾರೀ ಮೊತ್ತವನ್ನು ಕೊಡುಗೆಯಾಗಿ ಪಡೆದಿದ್ದಾರೆ.
ಈ ಬಗ್ಗೆ ಜಾರಿ ನಿದೇ೯ಶನಾಲಯದಿಂದ ತನಿಖೆ ನಡೆಸುವ ಅಗತ್ಯವಿದೆಯೆಂದು ಅವರು ತಿಳಿಸಿದ್ದಾರೆ. ಬೇಡಿ ಸೆ. 420 (ವಂಚನೆ), 406 (ಕ್ರಿಮಿನಲ್ ವಿಶ್ವಾಸ ದ್ರೋಹ), 477ಎ (ಖಾತೆಗಳ ಸುಳ್ಳು ಮಾಹಿತಿ) ಹಾಗೂ 120ಬಿ ( ಕ್ರಿಮಿನಲ್ ಪಿತೂರಿ) ಇತ್ಯಾದಿ ಐಪಿಸಿಯ ಹಲವು ಪರಿಚ್ಛೇದಗಳನ್ವಯ ವಿಚಾರಣೆಗೆ ಅರ್ಹರಾಗಿದ್ದಾರೆಂದು ಚೌಹಾಣ್ ಆರೋಪಿಸಿದ್ದಾರೆ.
kiran bedi
0 comments:
Post a Comment