gangavathi sammelana
ಗಂಗಾವತಿ: ಕರಿ ಎಂದು ಕರೆಯಲಾಗುವ ಹಬ್ಬದ ನಂತರದ ದಿನ ಮತ್ತು ಅಮವಾಸ್ಯೆಯಂದು ಶುಭ ಕಾರ್ಯ ಕೈಗೊಳ್ಳಬಾರದು ಎಂಬುವುದು ನಾಸ್ತಿಕರ ವಾದ. ಮೂಢನಂಬಿಕೆಯನ್ನು ಹೋಗಲಾಡಿಸಬೇಕಾದ ಚುನಾಯಿತ ಪ್ರತಿನಿಧಿಯೆ ಅಮವಾಸ್ಯೆಗೆ ಆತಂಕ ಪಟ್ಟ ಘಟನೆ ನಗರದಲ್ಲಿ ನಡೆಯಿತು.
ಅಮವಾಸ್ಯೆಯ ಭೀತಿಯಿಂದ ಆತಂಕಕ್ಕೊಳಗಾದ ಶಾಸಕ ಪರಣ್ಣ ಮುನವಳ್ಳಿ, ನಗರದ ಬಸವೇಶ್ವರ ವೃತ್ತದಿಂದ ಪಂಪಾಪತಿ ದೇವಸ್ಥಾನದವರೆಗಿನ ರಸ್ತೆ ಕಾಮಗಾರಿಗೆ ಇದ್ದಕ್ಕಿದ್ದಂತೆಯೆ ಗುರುವಾರ ರಾತ್ರೋರಾತ್ರಿ ಕತ್ತಲಲ್ಲಿ ಗುದ್ದಲಿ ಪೂಜೆ ನೆರವೇರಿಸಿದರು.
1.60 ಕೋಟಿಯ ರಸ್ತೆ:
ಗುದ್ದಲಿ ಪೂಜೆ ನೆರವೇರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಪರಣ್ಣ ಮುನವಳ್ಳಿ, 1.60 ಕೋಟಿ ರೂಪಾಯಿ ಮೊತ್ತದಲ್ಲಿ ಬಸವ ವೃತ್ತದಿಂದ (ಮಾಜಿ ಸಂಸದ ರಾಮುಲು ನಿವಾಸ)
ಪಂಪಾಪತಿ ದೇವಸ್ಥಾನದ ವರೆಗೆ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಲಾಗುತ್ತಿದೆ ಎಂದರು.
ಶಿವೇ ಚಿತ್ರಮಂದಿರದಿಂದ ಹಾಯ್ದು ಹೋಗುವ ದುರ್ಗಮ್ಮ ಹಳ್ಳದ ಮೇಲಿರುವ ರಸ್ತೆಯಿಂದ ಮೇದಾರ ಓಣಿಯವರೆಗಿನ ರಸ್ತೆಗೆ ಸುಮಾರು 15 ಲಕ್ಷ ರೂಪಾಯಿ ವೆಚ್ಚದಲ್ಲಿ ರಸ್ತೆ ದುರಸ್ತಿ ಕಾರ್ಯ ಕೈಗೊಳ್ಳಲಾಗುತ್ತಿದೆ ಎಂದರು.
ಹೈಮಾಸ್ಟ್ ದೀಪ:
ನಗರದಲ್ಲಿ ನಡೆಯುವ 78ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ನಗರವನ್ನು ವಿದ್ಯುದೀಕರಣ ಗೋಳಿಸುವ ನಿಟ್ಟಿನಲ್ಲಿ ನಗರದ ವಿವಿಧ ಐದು ಪ್ರಮುಖ ವೃತ್ತಗಳಿಗೆ ತಲಾ 1.25 ಲಕ್ಷ ಮೊತ್ತದಲ್ಲಿ ಐದು ಹೈಮಾಸ್ಟ್ ಅಳವಡಿಸಲಾಗಿದೆ.
ಕನಕಗಿರಿ ರಸ್ತೆಯ ವೆಂಕಟಪ್ಪ ನಾಯಕ್ ವೃತ್ತ, ಪಂಪಾನಗರದ ಕಲ್ಮಠದ ಹತ್ತಿರ, ಮಳೆಮಲ್ಲೇಶ್ವರ ವೃತ್ತ, ಬಸವಣ್ಣ ಸರ್ಕಲ್‌ನಲ್ಲಿ ಮತ್ತು ನಗರದ ಪ್ರಮುಖ ವೃತ್ತವಾದ ಮಹಾವೀರ ಸರ್ಕಲ್‌ನಲ್ಲಿ ಒಟ್ಟು 6.25 ಲಕ್ಷ ಮೊತ್ತದಲ್ಲಿ ಹೈಸ್ಟ್ ದೀಪ ಅಳವಡಿಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರಾದ ಮನೋಹರ ಹೇರೂರು, ನಾಗಲಿಂಗಪ್ಪ ಪತ್ತಾರ, ಕಾಮದೊಡ್ಡಿ ದೇವಪ್ಪ, ನಿರ್ಮಿತಿ ಕೇಂದ್ರದ ಎಂಜಿನಿಯರ್ ಶಶಿಧರ, ನಗರಸಭಾ ಪೌರಾಯುಕ್ತ ಎಚ್.ಎನ್. ಕುಮ್ಮಣ್ಣನವರ್, ಸುದರ್ಶನ ತಾಂದಳೆ ಮೊದಲಾದವರಿದ್ದರು. *ಪ್ರಜಾವಾಣಿ
0 comments:
Post a Comment