ಯಲಬುರ್ಗಾ: ಜಿಲ್ಲಾ ಮಕ್ಕಳ ರಕ್ಷಣಾ ವೇದಿಕೆ ಯುನಿಸೆಫ್ ಹಾಗೂ ಸ್ಥಳೀಯ ಪೊಲೀಸ್ ಇಲಾಖೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಈಚೆಗೆ ಸ್ಥಳೀಯ ಠಾಣೆಯಲ್ಲಿ `ತೆರೆದ ಮನೆ` ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ತಾಲ್ಲೂಕಿನ ಕಲ್ಲೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಎಎಸ್‌ಐ ಮಾರ್ತಾಂಡಪ್ಪ, ಪೊಲೀಸ ಇಲಾಖೆ ಬಗ್ಗೆ ಅನೇಕ ತಪ್ಪು ಗ್ರಹಿಕೆಗಳು ಜನರಲ್ಲಿವೆ, ಇವುಗಳನ್ನು ಹೋಗಲಾಡಿಸಲು ಇಲಾಖೆ ವಿವಿಧ ಕಾರ್ಯಕ್ರಮಗಳ ಮೂಲಕ ಜನ ಜಾಗೃತಿ ಮಾಡುತ್ತಿದೆ.
ಬಾಲ್ಯದಿಂದಲೇ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳುವತ್ತ ಹೆಜ್ಜೆ ಹಾಕಿದರೆ ಉತ್ತಮ ನಾಗರೀಕರಾಗಿ ರೂಪುಗೊಳ್ಳಲು ಸಾಧ್ಯವಾಗುತ್ತದೆ. ಹಾಗೆಯೆ ಇಲಾಖೆಯ ಕಾರ್ಯವೈಖರಿ ಬಗ್ಗೆ ಸಂಪೂರ್ಣ ಮಾಹಿತಿ ಪಡೆದರೆ ಇಲಾಖೆ ಬಗ್ಗೆ ಇರುವ ತಪ್ಪುಭಾವನೆಗಳು ದೂರವಾಗುತ್ತವೆ ಎಂದ ಅವರು, ಕೆಳಹಂತದಿಂದ ಮೇಲಿನ ವರೆಗೆ ಇರುವ ಸಿಬ್ಬಂದಿ ಹಾಗೂ ಅಧಿಕಾರಿಗಳ ಪರಿಚಯ ಮತ್ತು ಆಯಾ ಸಿಬ್ಬಂದಿ ಯಾವ ರೀತಿ ಕೆಲಸ ನಿರ್ವಹಿಸಬೇಕು ಎಂಬುದರ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡಿದರು. ಮಹಿಳಾ ಪೇದೆ ನಿಂಗಮ್ಮ ರಾಮಕೃಷ್ಣನ್ ಈರಪ್ಪ ಹಾಗೂ ಇನ್ನಿತರರು ಮಾತನಾಡಿ ಉತ್ತಮ ನಡಾವಳಿಕೆಯನ್ನು ಮೈಗೂಡಿಸಿಕೊಳ್ಳುವಂತೆ ಮಕ್ಕಳಿಗೆ ಕಿವಿ ಮಾತು ಹೇಳಿದರು. ಡಾ.ವೀರೇಶ ಮೂಲಿಮನಿ ಸ್ವಾಗತಿಸಿದರು. ಸಮುದಾಯ ಸಂಘಟಕ ಮಂಜುನಾಥ ಕುರಿ ನಿರೂಪಿಸಿದರು. ಮಂಜು ರ‌್ಯಾವಣಕಿ ವಂದಿಸಿದರು.
0 comments:
Post a Comment