PLEASE LOGIN TO KANNADANET.COM FOR REGULAR NEWS-UPDATES


ನಿಮ್ಮ ಕಚೇರಿಯ ಬಣ್ಣ ಬಯಲಾಗಿದೆ, ಕನ್ನಡಪ್ರಭ ಓದಿ ವಿಷಯ ತಿಳ್ಕೊಳ್ಳಿ -ಯಡಿಯೂರಪ್ಪ

ಶಿವಮೊಗ್ಗ ನ.೧೪ : ‘ಕಾರಾಗೃಹ ವಾಸ’ದಿಂದ ಹೊರ ಬಂದ ಬಳಿಕ ಹೋದ ಕಡೆಯೆಲ್ಲಾ ಬಲ ಪ್ರದರ್ಶನ ಮಾಡುತ್ತಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೋಮವಾರ ಸ್ವಕ್ಷೇತ್ರ ಶಿಕಾರಿಪುರದಲ್ಲೂ‘ಶಕ್ತಿ’ ಪ್ರದರ್ಶಿಸಿದರು.

ತವರು ಕ್ಷೇತ್ರದಲ್ಲಿ ತಾಲೂಕು ಬಿಜೆಪಿ ಆಯೋಜಿಸಿದ್ದ ಅಭಿಮಾನಿಗಳು ಹಾಗೂ ಕಾರ್ಯಕರ್ತರ ಸಮಾವೇಶ ಮತ್ತು ಅದಕ್ಕಿಂತ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ತಮ್ಮ ಎದುರಾಳಿಗಳ ವಿರುದ್ಧ ಘರ್ಜಿಸಿದರು.

ನಿವೃತ್ತ ಲೋಕಾಯುಕ್ತ ನ್ಯಾ.ಸಂತೋಷ್ ಹೆಗ್ಡೆ ಅವರನ್ನು ಗುರಿಯಾಗಿಟ್ಟುಕೊಂಡು ಗುಡುಗಿದ ಯಡಿಯೂರಪ್ಪ ಅವರು,‘ಹೆಗ್ಡೆ ಅವರೇ, ನಿಮ್ಮ ಕಚೇರಿಯನ್ನೇ ಶುದ್ಧ ಮಾಡಲು ಆಗದ ನೀವು ನನ್ನ ವಿರುದ್ಧ ಪ್ರಕರಣ ದಾಖಲಿಸಿದ್ದೀರಿ. ಈಗ ನಿಮ್ಮ ಕಚೇರಿಯ ಬಣ್ಣ ಬಯಲಾಗಿದೆ. ಹೀಗಾಗಿ ನೀವು ರಾಜ್ಯದ ಜನತೆಯ ಕ್ಷಮೆ ಕೇಳಬೇಕು’ ಎಂದು ಆಗ್ರಹಿಸಿದರು.

ಸಮಾವೇಶದಲ್ಲಿ ಮಾತನಾಡುವಾಗ‘ಕನ್ನಡಪ್ರಭ’ ಪತ್ರಿಕೆಯನ್ನು ಎತ್ತಿ ಹಿಡಿದ ಅವರು,‘ಈ ಪತ್ರಿಕೆಯನ್ನು ಎಲ್ಲರೂ ಒಂದೂ ಅಂಶ ಬಿಡದಂತೆ ಓದಿ. ಅದರಲ್ಲಿ ವಿಶೇಷ ಸಂದರ್ಶನ ಬಂದಿದೆ. ಲೋಕಾಯುಕ್ತ ಸಂಸ್ಥೆ ಬಗ್ಗೆ ಪ್ರಾಮಾಣಿಕ ಅಧಿಕಾರಿ ಮಧುಕರ ಶೆಟ್ಟಿ ಅವರು ಏನು ಹೇಳಿದ್ದಾ ರೆಂದು ತಿಳಿದುಕೊಳ್ಳಿ’ ಎಂದು ನೆರೆದಿದ್ದ ಜನತೆಗೆ ಸಂದೇಶ ನೀಡಿದರು.

ಕಚೇರಿಯಲ್ಲಿ ಕುಳಿತು ಸಿದ್ಧಪಡಿಸಿದ್ದಿರಿ: ‘ಅಕ್ರಮ ಗಣಿಗಾರಿಕೆ ಬಗ್ಗೆ ವರದಿ ನೀಡಿ ಎಂದರೆ ನಿಮ್ಮ (ಸಂತೋಷ್ ಹೆಗ್ಡೆ) ಕಣ್ಣಿಗೆ ಕಂಡಿದ್ದು ರೆಡ್ಡಿ ಸಹೋದರರು ಮತ್ತು ಯಡಿಯೂರಪ್ಪ ಮಾತ್ರ. ಅ ವರದಿಯನ್ನೂ ಕಚೇರಿಯಲ್ಲೇ ಕುಳಿತು ಸಿದ್ಧಪಡಿಸಿದ್ದೀರಿ’ ಎಂದು ಟೀಕಿಸಿದರು.

‘ನಿಮ್ಮ ಕಚೇರಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ನಿಮ್ಮ ಜತೆಗೆ ಇದ್ದ ಅಧಿಕಾರಿ (ಮಧುಕರ ಶೆಟ್ಟಿ) ಹೇಳಿದ್ದಾರೆ. ಲೋಕಾಯುಕ್ತ ಮುಖ್ಯಸ್ಥರಾಗಿ ಯಾವುದೇ ಕ್ರಮ ಕೈಗೊಳ್ಳದ ನಿಮಗೆ ವಿಧಾನಸೌಧದಲ್ಲಿ ಕುಳಿತವರ ಬಗ್ಗೆ ಮಾತನಾಡೋ ನೈತಿಕ ಹಕ್ಕಿಲ್ಲ. ಈ ಬಗ್ಗೆ ರಾಜ್ಯದ ಜನತೆಯ ಕ್ಷಮೆ ಯಾಚಿಸಬೇಕು. ಇಲ್ಲದಿದ್ದರೆ ಜನ ನಿಮ್ಮನ್ನು ಕ್ಷಮಿಸುವುದಿಲ್ಲ’ ಎಂದರು.

ಇದ್ಯಾವ ಋಣ?: ‘ಹೆಗ್ಡೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಆಗಿದ್ದವರು. ಲೋಕಾಯುಕ್ತ ಕಚೇರಿಯಲ್ಲಿನ ಭ್ರಷ್ಟಾಚಾರವನ್ನೇ ತಡೆಯಲು ಅವರಿಗೆ ಆಗಲಿಲ್ಲ. ಇಂಥ ಅಧಿಕಾರಿ ರಾಜಿನಾಮೆ ಕೊಡ್ತೀನಿ ಎಂದಾಗ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಗಡ್ಕರಿ ಅವರ ಜತೆಯಲ್ಲಿ ಅವರ ಮನೆಗೆ ಹೋಗಿ ಉಳಿಸಿಕೊಂಡೆವು.

ಈಗ ಕೇಂದ್ರದಲ್ಲಿ ಅಧಿಕಾರ ಸಿಗುತ್ತದೆ ಎಂಬ ಅಸೆಯಿಂದ ಈ ಯಡಿಯೂರಪ್ಪನನ್ನೇ ಅಪರಾಧಿ ಮಾಡಿದರು. ಅದರ ಋಣವನ್ನು ಪರಪ್ಪನ ಆಗ್ರಹಾರಕ್ಕೆ ನನ್ನನ್ನು ಕಳಿಸುವ ಮೂಲಕ ತೀರಿಸಿ ಕೊಂಡರು. ಇದರಿಂದ ನನಗೇನೂ ಬೇಸರವಿಲ್ಲ’ಎಂದರು.

‘ಇಂಥ ವರದಿ ನೀಡುವುದಕ್ಕೆ ಕಾರಣ ಏನು ಎಂದು ಸಂತೋಷ್ ಹೆಗ್ಡೆ ಅವರು ಈಗಲಾದರೂ ಹೇಳಲಿ. ಇದರ ಹಿಂದಿನ ಪಿತೂರಿ ಯಾವುದು ? ನಿಮಗೆ ಕೇಂದ್ರದಲ್ಲಿ ಯಾವ ಸ್ಥಾನದ ಅಪೇಕ್ಷೆ ಇತ್ತು ಎಂಬುದನ್ನು ಬಹಿರಂಗಪಡಿಸಬೇಕು’ ಎಂದು ಒತ್ತಾಯಿಸಿದರು.

ಸತ್ಯಾಂಶ ಏನು?:‘ಯಡಿಯೂರಪ್ಪ ವಿರುದ್ಧದ ಪ್ರಕರಣಗಳ ತನಿಖೆ ಹಾದಿ ತಪ್ಪಿಸಲು ಗಾಂವ್ಕಾರ್ ಅವರನ್ನು ಲೋಕಾಯುಕ್ತಕ್ಕೆ ವರ್ಗ ಮಾಡಲಾಗಿದೆ ಎಂದು ಸಂತೋಷ್ ಹೆಗ್ಡೆ ಅವರು ಟೀಕಿಸಿದ್ದಾರೆ. ಈಗ ದೇವೇಗೌಡರು ಗಾಂವ್ಕಾರ್ ಅವರನ್ನು ಯಡಿಯೂರಪ್ಪ ಅವರ ಗುಲಾಮ ಎಂದಿದ್ದಾರೆ. ಹಾಗಾದರೆ ಸತ್ಯಾಂಶ ಏನು ಹೆಗ್ಡೆ ಅವರೇ?’ ಎಂದು ಪ್ರಶ್ನಿಸಿದರು.

‘ನಾನು ಒಬ್ಬ ಆರ್ಡಿನರಿ ಎಂಎಲ್‌ಎ. ಈ ವಿಷಯದಲ್ಲಿ ಮುಖ್ಯಮಂತ್ರಿಯವರು ನಿಷ್ಪಕ್ಷಪಾತದಿಂದ ಕರ್ತವ್ಯ ನಿರ್ವಹಿಸುತ್ತಾರೆ ಎಂಬ ನಂಬಿಕೆ ನನಗಿದೆ. ರಾಜ್ಯದಲ್ಲಿರುವ ಅಧಿಕಾರಿಗಳು ಈಗಲೂ ದೇವೇಗೌಡರು, ಕುಮಾರಸ್ವಾಮಿ ಅವರ ಮಾತು ಕೇಳುತ್ತಾರೆಯೇ ವಿನಃ ನನ್ನ ಮಾತು ಕೇಳುವು ದಿಲ್ಲ’ ಎಂದು ಒಂದು ಹಂತದಲ್ಲಿ ಆಕ್ರೋಶದಿಂದ ನುಡಿದರು.

ಸಶಕ್ತವಾಗಬೇಕು: ನಾನು ಲೋಕಾಯುಕ್ತ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಪ್ರಯತ್ನ ಮಾಡುತ್ತಿಲ್ಲ. ಲೋಕಾಯುಕ್ತ ಶಕ್ತವಾಗಬೇಕು. ಅಲ್ಲಿಗೆ ಸಮರ್ಥರು, ಪ್ರಾಮಾಣಿಕರು ನೇಮಕ ಆಗಬೇಕು. ಅದಕ್ಕಿರುವ ಗೌರವ ಉಳಿಯಬೇಕು ಎಂಬುದೇ ನನ್ನ ಆಶಯ ಎಂದರು.

ಪಕ್ಷಕ್ಕೆ ದ್ರೋಹ ಮಾಡುವುದಿಲ್ಲ: ನನ್ನ ವಿರುದ್ಧ ನಡೆಯುತ್ತಿರುವ ಷಡ್ಯಂತ್ರದಿಂದ ಉಸಿರು ಕಟ್ಟುವ ವಾತಾವರಣ ನಿರ್ಮಾಣವಾಗಿದೆ. ಇದು ಹೀಗೇ ಮುಂದುವರಿದರೆ ರಾಜಕೀಯ ಸನ್ಯಾಸ ಪಡೆಯುತ್ತೇನೆಯೇ ಹೊರತು ಬಿಜೆಪಿ ಬೆನ್ನಿಗೆ ಚೂರಿ ಹಾಕುವುದಿಲ್ಲ. ಪಕ್ಷಕ್ಕೆ ದ್ರೋಹ ಬಗೆಯುವ ಕೆಲಸವನ್ನು ಯಾವತ್ತೂ ಮಾಡುವುದಿಲ್ಲ ಎಂದು ಯಡಿಯೂರಪ್ಪ ತಿಳಿಸಿದರು.

ಭಾನುವಾರದ‘ಕನ್ನಡಪ್ರಭ’ ಸಂಚಿಕೆಯ‘ನಾಳೆಯಿಂದ ಬಿ‌ಎಸ್‌ವೈ ರಾಜಕೀಯ ಶಿಕಾರಿ’ ವರದಿಗೆ ಪ್ರತಿಕ್ರಿಸಿದ ಅವರು, ನಾನು ಕಟ್ಟಿ ಬೆಳೆಸಿದ ಬಿಜೆಪಿಗೆ ಯಾವತ್ತೂ ವಂಚಿಸುವುದಿಲ್ಲ. ನನಗೆ ಯಾವುದೇ ಅಧಿಕಾರ ಬೇಡ. ನಾನು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಕೇಳುತ್ತಿದ್ದೇನೆ ಎನ್ನಲಾಗುತ್ತಿದೆ. ಬಡವರಿಗೆ ಸಹಕರಿಸಲು ನಾನು ಅಧ್ಯಕ್ಷನಾಗಬೇಕಾ? ಸದಾನಂದಗೌಡರನ್ನು ಕೆಳಗಿಳಿಸಿ ತಾವು ಮುಖ್ಯಮಂತ್ರಿಯಾಗಲು ಇಚ್ಛಿಸುವುದಿಲ್ಲ ಆದ್ರೆ ನನ್ನ ವಿರುದ್ಧ ಪಿತೂರಿ ಮಾಡಿದರೆ ಮಾತ್ರ ಬಗ್ಗೋಲ್ಲ ಎಂದರು.

ಪ್ರಚಾರಕ್ಕೆ ಅಡ್ಡಿ ಮಾಡೋಲ್ಲ: ವೈಯಕ್ತಿಕ ಕಾರಣದಿಂದ ಬಳ್ಳಾರಿ ಉಪಚುನಾವಣೆ ಪ್ರಚಾರಕ್ಕೆ ಹೋಗುವುದಿಲ್ಲ. ಆದರೆ, ಅಲ್ಲಿಗೆ ಹೋಗ ಬಯಸುವ ಯಾರನ್ನೂ ತಡೆಯುವುದಿಲ್ಲ. ನಮ್ಮ ಪಕ್ಷದ ಅಭ್ಯರ್ಥಿ ಗೆಲ್ಲಬೇಕು. ನ.೧೭ ಹಾಗೂ ೧೮ರಂದು ಪಕ್ಷದ ಶಾಸಕರು, ಸಂಸದರು ಸಭೆ ಸೇರಿ ಈ ಕುರಿತು ಚಿಂತಿಸಲಿದ್ದು, ಯಾರು ಪ್ರಚಾರಕ್ಕೆ ಹೋಗಬೇಕು ಎಂದು ಚರ್ಚಿಸುತ್ತೇವೆ. ಆದರೆ, ತಾವು ಬಳ್ಳಾರಿಗೆ ಹೋಗದಿರುವ ಬಗ್ಗೆ ಅಪಾರ್ಥದ ಮಾತುಗಳು ಬೇಡವೆಂದರು.

ಯಾರೂ ತಡೆಯೊಕ್ಕಾಗಲ್ಲ!

ನನ್ನ ವಿರುದ್ಧ ಯಾರ್ಯಾರು ಸಂಚು ಮಾಡಿದರು ಎಂಬುದು ಗೊತ್ತಿದೆ. ಕಾಲ ಬಂದಾಗ ಎಲ್ಲದ ಕ್ಕೂ ಉತ್ತರಿಸುತ್ತೇನೆ. ತಮ್ಮ ತಮ್ಮ ಸ್ವಾರ್ಥಕ್ಕಾಗಿ ನನ್ನನ್ನು ಬಲಿಪಶು ಮಾಡಿದರು. ರಾಜ್ಯಾ ದ್ಯಂತ ಪ್ರವಾಸ ಮಾಡ್ತೀನಿ. ಪಕ್ಷದ ಒಬ್ಬ ಕಾರ್ಯಕರ್ತ ಕರೆದರೂ ಹೋಗ್ತೀನಿ. ನನ್ನನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ. ಈಗಾಗಲೇ ರಾಜ್ಯದ ವಿವಿಧೆಡೆಯಿಂದ ಆಮಂತ್ರಣ ಬರುತ್ತೀವೆ ಎಂದು ಯಡಿಯೂರಪ್ಪ ಹೇಳಿದ್ದಾರೆ.

ಶಿಕಾರಿಪುರದಲ್ಲಿ ಅಭಿಮಾನಿ ಸಮಾವೇಶದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಹುದ್ದೆಗೆ ರಾಜಿನಾಮೆ ನೀಡಲು ರಾಜಭವನಕ್ಕೆ ತೆರಳುವಾಗ ನನ್ನ ಜತೆ ೭೦ ಶಾಸಕರು ಇದ್ದರು. ಯಾವತ್ತೂ ಇತಿಹಾಸದಲ್ಲಿ ಈ ರೀತಿ ಆಗಿಲ್ಲ. ಹಿಂದೆ ವೀರೇಂದ್ರ ಪಾಟೀಲರು ರಾಜಿನಾಮೆ ಕೊಟ್ಟಾಗ ಅವರ ಜತೆಗೆ ಇದ್ದಿದ್ದು ಎಂ.ವಿ. ರಾಜಶೇಖರಮೂರ್ತಿ ಮಾತ್ರ.

ವಿಧಾನಸಭೆ ಅಧಿವೇಶನ ಮುಗಿದ ನಂತರ ಶಿವಮೊಗ್ಗದಲ್ಲಿ ೨ ಲಕ್ಷ ಜನರನ್ನು ಸೇರಿಸಿ ಬೃಹತ್ ಸಮಾವೇಶ ಮಾಡುತ್ತೇನೆ. ಕಾಲ ಬಂದಾಗ ತಾವು ಅನುಭವಿಸಿದ್ದನ್ನೆಲ್ಲಾ ಹೇಳಿಯೇ ತೀರುತ್ತೇನೆ ಎಂದರು.

‘ಸಂತೋಷ್ ಹೆಗ್ಡೆ ಅವರೇ, ನಿಮ್ಮ ಕಚೇರಿಯನ್ನೇ ಶುದ್ಧ ಮಾಡಲು ಆಗದ ನೀವು ನನ್ನ ವಿರುದ್ಧ ಪ್ರಕರಣ ದಾಖಲಿಸಿದ್ದೀರಿ. ಈಗ ನಿಮ್ಮ ಕಚೇರಿಯ ಬಣ್ಣ ಬಯಲಾಗಿದೆ. ಹೀಗಾಗಿ ನೀವು ರಾಜ್ಯದ ಜನತೆಯ ಕ್ಷಮೆ ಕೇಳಬೇಕು’ -ಯಡಿಯೂರಪ್ಪ

-ಹೆಗ್ಡೆ ಅಧಿಕಾರ ದಾಹಕ್ಕೆ ನಾನು ಬಲಿ: ಬಿಎಸ್‌ವೈ

ಶಿವಮೊಗ್ಗ: `ಕೇಂದ್ರದಲ್ಲಿ ಮಹತ್ವದ ಸ್ಥಾನ ಸಿಗುತ್ತದೆ ಎಂಬ ಅಧಿಕಾರದಾಹದಿಂದ ಮಾಜಿ ಲೋಕಾಯುಕ್ತ ಸಂತೋಷ ಹೆಗ್ಡೆ ನನ್ನನ್ನು ಪರಪ್ಪನ ಅಗ್ರಹಾರಕ್ಕೆ ಅಟ್ಟಿದರು` ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೋಮವಾರ ತೀವ್ರ ವಾಗ್ದಾಳಿ ನಡೆಸಿದರು.

ಶಿಕಾರಿಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, `ಯಾರ ಮತ್ತು ಯಾವ ಒತ್ತಡಕ್ಕಾಗಿ ನನ್ನನ್ನು ಜೈಲಿಗೆ ಕಳುಹಿಸಿದಿರಿ ಎಂಬುದನ್ನು ತಿಳಿಸಬೇಕು. ಇದರ ಹಿಂದಿನ ಪಿತೂರಿ ಯಾವುದು ಎಂಬುದನ್ನು ನೀವು ಪ್ರಾಮಾಣಿಕವಾಗಿ ಬಿಚ್ಚುಮನಸ್ಸಿನಿಂದ ಹೇಳಬೇಕು` ಎಂದು ಹೆಗ್ಡೆ ಅವರಿಗೆ ನೇರವಾಗಿ ಸವಾಲು ಹಾಕಿದರು.

`ಗಣಿ ತನಿಖೆಯನ್ನು ಆರಂಭದಿಂದ ಮಾಡದೆ ಕೇವಲ ರೆಡ್ಡಿ ಸೋದರರು ಹಾಗೂ ಯಡಿಯೂರಪ್ಪ ನನ್ನು ತನಿಖೆ ಮಾಡಿದ್ದೀರಿ. ಯಾವುದೇ ನೋಟಿಸ್ ನೀಡದೆ ಕಚೇರಿಯಲ್ಲೇ ಕುಳಿತು ವರದಿ ನೀಡಿದ್ದೀರಿ. ಆಗಾಗ್ಗೆ ವರದಿಯ ಮುಖ್ಯಾಂಶಗಳನ್ನು ಮಾಧ್ಯಮಗಳಿಗೂ ಬಿಡುಗಡೆ ಮಾಡಿದ್ದೀರಿ. ಇದರ ಹಿಂದಿನ ಷಡ್ಯಂತ್ರ ಏನು` ಎಂದು ಅವರು, ಸಂತೋಷ್ ಹೆಗ್ಡೆ ವಿರುದ್ಧ ವಾಗ್ದಾಳಿ ಮುಂದುವರಿಸಿದರು.

`ನಿಮ್ಮ ಕಚೇರಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ನಿಮ್ಮ ಸಂಸ್ಥೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಅದರ ಮುಖ್ಯಸ್ಥರಾಗಿ ಯಾವುದೇ ಕ್ರಮ ಕೈಗೊಳ್ಳದ ನಿಮಗೆ ವಿಧಾನಸೌಧದಲ್ಲಿ ಕುಳಿತವರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಈ ಬಗ್ಗೆ ನೀವು ರಾಜ್ಯದ ಜನತೆಯ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಜನ ನಿಮ್ಮನ್ನು ಕ್ಷಮಿಸುವುದಿಲ್ಲ` ಎಂದು ಗುಡುಗಿದರು.

`ಎಡಿಜಿಪಿ ಗಾಂವ್ಕರ್ ವರ್ಗಾವಣೆ ಹಿಂದೆ ನನ್ನ ಕೈವಾಡ ಇದೆ ಎಂದು ದೇವೇಗೌಡ ಆರೋಪಿ ಸುತ್ತಾರೆ. ಆದರೆ ಇದೇ ಸಂತೋಷ್ ಹೆಗ್ಡೆ ಯಡಿಯೂರಪ್ಪ ರಕ್ಷಣೆಗಾಗಿ ಗಾಂವ್ಕರ್ ವರ್ಗಾವಣೆ ಮಾಡಲಾಗಿದೆ ಎನ್ನುತ್ತಾರೆ. ಇದರ ಒಳಮರ್ಮವೇನು` ಎಂದು ಅವರು ಪ್ರಶ್ನಿಸಿದರು.

`ಲೋಕಾಯುಕ್ತ ಅಧಿಕಾರಿಗಳು ದೇವೇಗೌಡರ ಮಕ್ಕಳ ವಿರುದ್ಧದ ದೂರಿನಲ್ಲಿ ತನಿಖೆ ನಡೆಸಲು ಒಂಬತ್ತು ತಿಂಗಳು ಬೇಕು ಎನ್ನುತ್ತಾರೆ. ಆದರೆ, ನನ್ನ ವಿರುದ್ಧದ ದೂರಿನಲ್ಲಿ ತನಿಖೆ ನಡೆಸಿ ವರದಿ ಸಲ್ಲಿಸಲು ಅವರಿಗೆ ಕೇವಲ ಒಂದು ತಿಂಗಳು ಸಾಕು. ಅಧಿಕಾರಿಗಳು ಇಂದಿಗೂ ದೇವೇಗೌಡ ಮತ್ತು ಅವರ ಮಕ್ಕಳ ಮಾತು ಕೇಳುತ್ತಾರೆ` ಎಂದು ಯಡಿಯೂರಪ್ಪ ದೂರಿದರು.

`ನಾನು ಅಧಿಕಾರದಲ್ಲಿ ಇರುವಷ್ಟು ಕಾಲ ನನ್ನನ್ನು ಇಳಿಸುವುದೇ ಕೆಲವರ ಗುರಿಯಾಗಿತ್ತು. ಅದೂ ಆಯಿತು. ಜೈಲಿಗೆ ಕಳುಹಿಸುವ ಉದ್ದೇಶವಿತ್ತು. ಆ ಆಸೆಯನ್ನೂ ಪೂರೈಸಿಕೊಂಡರು. ಅವರಿಗೆ ಇನ್ನೂ ಸಮಾಧಾನ ಇಲ್ಲ` ಎಂದು ದೇವೇಗೌಡ ಮತ್ತು ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

ಶಿಕಾರಿಪುರ ವರದಿ:

`ನಾನು ಜೈಲಿಗೆ ಹೋಗುವುದಕ್ಕೆ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಕಾರಣವಾಗಿದ್ದು, ಕೆಲ ಕಾಂಗ್ರೆಸ್ ಮುಖಂಡರೊಂದಿಗೆ ಅವರು ಸೇರಿಕೊಂಡು ಷಡ್ಯಂತ್ರ ರೂಪಿಸುವ ಮೂಲಕ ನನ್ನನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಿದ್ದಾರೆ` ಎಂದು ಅವರು ಇದಕ್ಕೂ ಮುಂಚೆ ಆರೋಪಿಸಿದರು..

ಸುದ್ದಿಗಾರರ ಜತೆ ಅವರು ಮಾತನಾಡಿ, `ಲೋಕಾಯುಕ್ತ ಸ್ಥಾನಕ್ಕೆ ಸಂತೋಷ್ ಹೆಗ್ಡೆ ರಾಜೀನಾಮೆ ನೀಡಿದಾಗ ಅವರನ್ನು ಮರಳಿ ಕರೆತಂದಿದ್ದು ನಾನು. ಆದರೂ ಕಾಂಗ್ರೆಸ್ ಮುಖಂಡರಿಂದ ಡೊನೇಷನ್ ಪಡೆಯುವ ಮೂಲಕ ನನ್ನ ವಿರುದ್ಧವೇ ಪಿತೂರಿ ನಡೆಸಿ, 24 ದಿನಗಳ ಕಾಲ ಜೈಲಿನಲ್ಲಿ ಕಳೆಯುವಂತೆ ಮಾಡಿದರು` ಎಂದು ಹೇಳಿದರು.

ಪಕ್ಷಕ್ಕೆ ಚೂರಿ ಹಾಕುವುದಿಲ್ಲ: ಯಡಿಯೂರಪ್ಪ

ಶಿವಮೊಗ್ಗ: `ಬಿಜೆಪಿ, ನಾನು ಕಟ್ಟಿದ ಮನೆ. ಹಾಗಾಗಿ ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ. ಒಂದು ವೇಳೆ ಇಲ್ಲಿ ಉಸಿರುಕಟ್ಟಿದರೆ ರಾಜಕೀಯದಿಂದ ನಿವೃತ್ತಿ ಪಡೆಯುತ್ತೇನೆಯೇ ಹೊರತು ಪಕ್ಷಕ್ಕೆ ಚೂರಿ ಹಾಕುವುದಿಲ್ಲ` ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸ್ಪಷ್ಟಪಡಿಸಿದರು.

ಶಿಕಾರಿಪುರದಲ್ಲಿ ತಾಲ್ಲೂಕು ಬಿಜೆಪಿ ಘಟಕ ಮಂಗಳಭವನ ಹಿಂಬದಿ ಮೈದಾನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕಾರ್ಯಕರ್ತರ ಹಾಗೂ ಯಡಿಯೂರಪ್ಪ ಅಭಿಮಾನಿಗಳ ಬೃಹತ್ ಸಮಾವೇಶ ದಲ್ಲಿ ಅವರು ಮಾತನಾಡಿದರು.

`ಇದು ನನ್ನ ಮನೆ. ಬೇಕಾದರೆ ಬೇರೆಯವರು ಪಕ್ಷ ಬಿಟ್ಟು ಹೋಗಲಿ. ಆದರೆ, ನಾನು ಕೋಲು ಊರಿಕೊಂಡು ಬೇಕಾದರೂ ರಾಜಕೀಯ ಮಾಡುತ್ತೇನೆ. ಯಾವ ಷಡ್ಯಂತ್ರಕ್ಕೂ ಹೆದರುವವನೂ ಅಲ್ಲ; ಬೆದರುವವನೂ ಅಲ್ಲ. ಈ ಶಬ್ದಗಳು ನನ್ನ ಡೈರಿಯಲ್ಲೇ ಇಲ್ಲ` ಎಂದು ಸವಾಲು ಹಾಕಿದರು.

`ಜಯಲಲಿತಾ ಅವರ ಮೇಲೆ ಈಗಲೂ ಕ್ರಿಮಿನಲ್ ಮೊಕದ್ದಮೆಗಳಿವೆ. ಆದರೂ ಅವರು ಜನಪ್ರಿಯ ಮುಖ್ಯಮಂತ್ರಿ. ಶೀಲಾ ದೀಕ್ಷಿತ್ ಮೇಲೂ ಕ್ರಿಮಿನಲ್ ಮೊಕದ್ದಮೆ ಇದೆ. ಅವರು ರಾಜೀನಾಮೆ ನೀಡಿಲ್ಲ. ಆದರೆ ಬಿಜೆಪಿ ವರಿಷ್ಠರ ಮಾತಿನಂತೆ ನಾನು ರಾಜೀನಾಮೆ ಸಲ್ಲಿಸಬೇಕಾಗಿ ಬಂತು` ಎಂದು ನೆನಪು ಮಾಡಿಕೊಂಡರು

Advertisement

0 comments:

Post a Comment

 
Top