PLEASE LOGIN TO KANNADANET.COM FOR REGULAR NEWS-UPDATES


ಬಂಧಿಸಿದ ಬಳಿಕ ಅಮಾನುಷವಾಗಿ ಕೊಲ್ಲಲಾಯಿತೇ?| ಅದು ಸ್ಪಷ್ಟ ಹಾಗೂ ಯಶಸ್ವಿ ಕಾರ್ಯಾಚರಣೆ: ಸಿಆರ್‌ಪಿಎಫ್ | ಒಳಜಗಳವೇ ಮುಳುವಾಯಿತೇ?
ಹೊಸದಿಲ್ಲಿ, ನ.25: ಮಾವೊವಾದಿ ನಾಯಕ ಕಿಶನ್‌ಜಿಯನ್ನು ಹತ್ಯೆಗೈದ ರೀತಿಯನ್ನು ಸಿಪಿಐ ನಾಯಕ ಗುರುದಾಸ್ ದಾಸ್‌ಗುಪ್ತ ಇಂದು ಪ್ರಶ್ನಿಸಿದ್ದಾರೆ.ಮಾವೊ ನಾಯಕನನ್ನು ಬಂಧಿಸಿದ ಬಳಿಕ ಅಮಾನುಷ ರೀತಿಯಲ್ಲಿ ಕೊಲ್ಲಲಾಯಿತೇ ಎಂಬ ಬಗ್ಗೆ ಸರಕಾರ ಸ್ಪಷ್ಟೀಕರಣ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಗೃಹ ಸಚಿವ ಪಿ.ಚಿದಂಬರಂಗೆ ಪತ್ರವೊಂದನ್ನು ಬರೆದಿರುವ ದಾಸ್‌ಗುಪ್ತಾ, ‘‘ಎನ್‌ಕೌಂಟರ್‌ನ ಕತೆ ನಕಲಿಯೆಂಬಂತೆ ಕಂಡು ಬರುತ್ತಿದೆ.ಅದರ ಬಗ್ಗೆ ತನಿಖೆ ನಡೆಯ ಬೇಕಾಗಿದೆ ಹಾಗೂ ಸರಕಾರ ಈ ಬಗ್ಗೆ ಸ್ಪಷ್ಟೀಕರಣ ನೀಡಬೇಕು’’ಎಂದು ಒತ್ತಾಯಿಸಿದ್ದಾರೆ.

ಕಿಶನ್‌ಜಿಯನ್ನು ನಿನ್ನೆ ಮಧ್ಯಾಹ್ನ ಬಂಧಿಸಲಾಗಿತ್ತು ಹಾಗೂ ಬಳಿಕ ‘‘ಅಮಾನುಷವಾಗಿ ಹತ್ಯೆ ನಡೆಸಲಾ ಯಿತು’’ಎಂದು ಮೂಲವೊಂದು ತನಗೆ ತಿಳಿಸಿದೆ ಎಂದು ಚಿದಂಬರಂ ಜೊತೆ ಫೋನ್‌ನಲ್ಲಿ ಮಾತ ನಾಡಿದ ಅವರು ಹೇಳಿದ್ದಾರೆ.

‘‘ನನಗೆ ಸಿಕ್ಕ ಮಾಹಿತಿ ಸರಿ ಎಂದಾದರೆ,ಅದು ಎಲ್ಲ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕಾನೂನುಗಳನ್ನು ಗಾಳಿಗೆ ತೂರಿ ನಡೆಸಲಾದ ಹೇಡಿತನದ ಅಪರಾಧ’’ ಎಂದು ಅವರು ತನ್ನ ಪತ್ರದಲ್ಲಿ ಹೇಳಿದ್ದಾರೆ.

ಪಶ್ಚಿಮ ಬಂಗಾಳದ ಪಶ್ಚಿಮ ಮಿಡ್ನಾಪುರ ಜಿಲ್ಲೆಯ ಅರಣ್ಯದಲ್ಲಿ ನಿನ್ನೆ ಭದ್ರತಾ ಪಡೆಗಳೊಂದಿಗೆ ನಡೆದ ಸಂಘರ್ಷದಲ್ಲಿ ಕಿಶನ್‌ಜಿಯೆಂದೇ ಕರೆಯಲ್ಪಡುತ್ತಿದ್ದ 58 ವರ್ಷ ಪ್ರಾಯದ ಮೊಲಜುಲ ಕೋಟೇಶ್ವರ ರಾವ್ ಹತನಾಗಿದ್ದಾನೆ ಎಂದು ಪೊಲೀಸರು ಹೇಳಿದ್ದರು.ಹತನಾಗುವ ಒಂದು ದಿನ ಮೊದಲು ಪೊಲೀಸರು ಆ ಪ್ರದೇಶದಲ್ಲಿ ಶೋಧ ಕಾರ್ಯದಲ್ಲಿ ನಿರತರಾಗಿದ್ದಾಗ ಮಾವೋ ನಾಯಕ ಸ್ವಲ್ಪದರಲ್ಲಿ ಪಾರಾಗಿದ್ದನು ಎಂದು ಪೊಲೀಸರು ಹೇಳಿಕೊಂಡಿದ್ದರು.

ಕಿಶನ್‌ಜಿಯ ದೇಹವನ್ನು ಗುರುತಿಸಲು ಹಾಗೂ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಸಾಧ್ಯವಾಗುವಂತೆ ಅವರ ಬಂಧುಗಳಿಗೆ ಮಿಡ್ನಾಪುರಕ್ಕೆ ಪ್ರಯಾಣಿಸಲು ಸರಕಾರ ಅನುಕೂಲತೆಗಳನ್ನು ಕಲ್ಪಿಸಬೇಕು ಎಂದು ಸಿಪಿಐ ನಾಯಕ ಒತ್ತಾಯಿಸಿದ್ದಾರೆ.

ನಕಲಿ ಎನ್‌ಕೌಂಟರ್: ಎಸ್‌ಪಿ ಆರೋಪ

ಹೊಸದಿಲ್ಲಿ, ನ. 25: ಮಾವೊವಾದಿ ನಾಯಕ ಕಿಶನ್‌ಜಿ ಯನ್ನು ಪಶ್ಚಿಮ ಬಂಗಾಳದಲ್ಲಿ ನಕಲಿ ಎನ್‌ಕೌಂಟರ್‌ನಲ್ಲಿ ಕೊಲ್ಲಲಾಗಿದೆ ಎಂದು ಸಮಾಜವಾದಿ ಪಕ್ಷ ಇಂದು ಆರೋಪಿಸಿದೆ.ನಕ್ಸಲ್ ನಾಯಕರ ಸಾಮೂಹಿಕ ನರಮೇಧದ ಮೂಲಕ ನಕ್ಸಲ್‌ವಾದವನ್ನು ಕೊನೆಗೊಳಿಸಲು ಸಾಧ್ಯವಿಲ್ಲ ಎಂದು ಅದು ಹೇಳಿದೆ.

‘‘ಕಿಶನ್‌ಜಿ ಹತ್ಯೆಯಾದ ವರದಿಗಳು ಬಂದ ರೀತಿ ನೋಡಿದರೆ,ಕಿಶನ್‌ಜಿ ಎನ್‌ಕೌಂಟರ್‌ನಲ್ಲಿ ಸತ್ತಂತೆ ಅನಿಸುವುದಿಲ್ಲ..ಅದು ನಕಲಿ ಎನ್‌ಕೌಂಟರ್’’ಎಂದು ಸಮಾಜವಾದಿ ಪಕ್ಷದ ನಾಯಕ ಮೋಹನ್ ಸಿಂಗ್ ಸಂಸತ್ತಿನ ಹೊರಗೆ ಸುದ್ದಿಗಾರರಿಗೆ ತಿಳಿಸಿದರು.‘‘ನಕ್ಸಲ್ ನಾಯಕರ ಸಾಮೂಹಿಕ ನರಮೇಧದ ಮೂಲಕ ನೀವು ನಕ್ಸಲ್‌ವಾದವನ್ನು ಮುಗಿಸಲು ಸಾಧ್ಯವಿಲ್ಲ.ಅಧಿಕಾರದಲ್ಲಿದ್ದುಕೊಂಡು ನೀವು ನಕ್ಸಲೀಯತೆಯನ್ನು ಕೊನೆಗೊಳಿಸಲಾರಿರಿ.ಅದನ್ನು ಕೊನೆಗೊಳಿಸುವ ಇತರ ವಿಧಾನಗಳಿವೆ’’ ಎಂದರು.

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಧಿಕಾರಕ್ಕೆ ಬರುವ ಮೊದಲು ನಕ್ಸಲ್ ನಾಯಕರಿಗೆ ನೀಡಿದ್ದ ಎಲ್ಲ ಭರವಸೆಗಳನ್ನು ಈಡೇರಿಸಿಲ್ಲ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಆರೋಪಿಸಿದರು.

‘‘ನಕ್ಸಲ್ ನಾಯಕರು ತೃಣಮೂಲ ಕಾಂಗ್ರೆಸ್ ನಾಯಕರನ್ನು ಕೊಲ್ಲಲು ಆರಂಭಿಸಿದ ಬಳಿಕ,ಮಮತಾ ಬ್ಯಾನರ್ಜಿ ಈಗ ನಕ್ಸಲ್ ವಾದವನ್ನು ಪೊಲೀಸ್ ಬಲ,ಆಡಳಿತ ಮತ್ತು ಕ್ಷಿಪ್ರ ಕಾರ್ಯಾಚರಣೆ ಪಡೆಗಳ ಮೂಲಕ ಮುಗಿಸಲು ಯತ್ನಿಸುತ್ತಿದ್ದಾರೆ.ಈಗ ಒಬ್ಬರ ಬಳಿಕ ಒಬ್ಬರಂತೆ ನಕ್ಸಲ್ ನಾಯಕರು ಹತ್ಯೆಯಾಗುತ್ತಿದ್ದಾರೆ’’ ಎಂದರು.

ಅದು ಸ್ಪಷ್ಟ ಹಾಗೂ ಯಶಸ್ವಿ ಕಾರ್ಯಾಚರಣೆ: ಸಿಆರ್‌ಪಿಎಫ್

ಝಾರ್‌ಗ್ರಾಂ (ಪಶ್ಚಿಮ ಬಂಗಾಳ), ನ. 25:ಪೊಲೀಸರಿಗೆ ಬೇಕಾಗಿದ್ದ ಮಾವೊವಾದಿ ನಾಯಕ ಕಿಶನ್‌ಜಿ ಪಶ್ಚಿಮ ಮಿಡ್ನಾಪುರ ಜಿಲ್ಲೆಯಲ್ಲಿ ಜಂಟಿ ಪಡೆಗಳು ನಡೆಸಿದ ‘‘ಅತ್ಯಂತ ಸ್ಪಷ್ಟ ಹಾಗೂ ಯಶಸ್ವಿ’’ ಕಾರ್ಯಾಚರಣೆಯಲ್ಲಿ ಹತನಾಗಿದ್ದಾನೆ ಎಂದು ಸಿಆರ್‌ಪಿಎಫ್ ಮಹಾ ನಿರ್ದೇಶಕ ವಿಜಯ ಕುಮಾರ್ ಇಂದು ಹೇಳಿದ್ದಾರೆ.

‘‘ಅದೊಂದು ಅತ್ಯಂತ ಸ್ಪಷ್ಟ ಹಾಗೂ ಯಶಸ್ವಿ ಕಾರ್ಯಾಚರಣೆ ಹಾಗೂ ನಮ್ಮ ಹುಡುಗರು ಒಂದು ಕ್ಷಣವನ್ನೂ ವ್ಯರ್ಥಗೊಳಿಸಲಿಲ್ಲ’’ಎಂದು ಕಿಶನ್‌ಜಿ ಹತ್ಯೆಯಾದ ಬುರಿಸೋಲ್ ಕಾಡಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ತಿಳಿಸಿದರು. ಅದು ನಕಲಿ ಎನ್‌ಕೌಂಟರ್ ಎಂಬು ದಾಗಿ ಕ್ರಾಂತಿಕಾರಿ ಕವಿ ಹಾಗೂ ಮಾವೊ ಸಹಾನು ಭೂತಿದಾರ ವರವರ ರಾವ್ ಮಾಡಿರುವ ಆರೋ ಪದ ಬಗ್ಗೆ ಕೇಳಿದಾಗ, ‘‘ಇಲ್ಲ, ಇಲ್ಲ, ಇಲ್ಲ’’ ಎಂದು ವಿಜಯಕುಮಾರ್ ಉತ್ತರಿಸಿದರು.

‘‘ಅದು ಜಂಟಿ ಪಡೆಗಳು,ವಿಶೇಷವಾಗಿ ಸಿಆರ್‌ಪಿಎಫ್ ಮತ್ತು ಪಶ್ಚಿಮ ಬಂಗಾಳ ಪೊಲೀಸ್,ನಡೆಸಿದ ವ್ಯೆಹಾತ್ಮಕ ಹಾಗೂ ಸಾಂಕೇತಿಕ ಕಾರ್ಯಾಚರಣೆ.ಅವರು (ಮಾವೊವಾದಿಗಳು) ಒತ್ತಡದಲ್ಲಿದ್ದರು. ಯಾಕೆಂದರೆ ಅವರಿಗೆ ಅಲ್ಲಿ ಸಾರ್ವಜನಿಕರ ನೆರವಿರಲಿಲ್ಲ.ಅದು ನಮಗೆ ಸಹಕಾರಿಯಾಯಿತು.ಅದು ಅತ್ಯಂತ ಉಪಯುಕ್ತ ಹೋರಾಟ’’ ಎಂದು ಕುಮಾರ್ ಹೇಳಿದರು.

ಜಂಟಿ ಪಡೆಗಳು ಕೇವಲ ಕಿಶನ್‌ಜಿಯನ್ನು ಬೆನ್ನಟ್ಟಿದವೆ ಎಂಬ ಪ್ರಶ್ನೆಗೆ ಉತ್ತರಿಸಿದ ಮಿಡ್ನಾಪುರ ವಲಯದ ಡಿಐಜಿ ವಿನೀತ್ ಗೋಯಲ್,‘‘ಮಾವೊವಾದಿಗಳ ಒಂದು ಗುಂಪು ಅರಣ್ಯದಲ್ಲಿದೆ ಎಂಬ ಬಗ್ಗೆ ನಮಗೆ ಗುಪ್ತಚರ ಮಾಹಿತಿ ಲಭಿಸಿದ ಬಳಿಕ ಈ ಕಾರ್ಯಾಚರಣೆಯನ್ನು ಯೋಜಿಸಲಾಗಿತ್ತು.ಅಂತಿಮವಾಗಿ ನಮಗೆ ಮಾವೊ ನಾಯಕನನ್ನು ಪತ್ತೆಹಚ್ಚಲು ಸಾಧ್ಯವಾಯಿತು’’ ಎಂದು ಹೇಳಿದರು.

ಎನ್‌ಕೌಂಟರ್ ನಕಲಿ; ಸ್ವತಂತ್ರ ತನಿಖೆಯಾಗಲಿ: ಮಾವೋವಾದಿಗಳು

ಕೋಲ್ಕತ/ಝಾರ್‌ಗ್ರಾಮ್,ನ.25:ಪಶ್ಚಿಮ ಮಿಡ್ನಾಪುರ ಜಿಲ್ಲೆಯ ಬುರಿಸೋಲ್ ಅರಣ್ಯದಲ್ಲಿ ನಿನ್ನೆ ಮಾವೋವಾದಿ ನಾಯಕ ಕಿಶನ್‌ಜಿ ಹತ್ಯೆಗೆ ಕಾರಣವಾದ ಸನ್ನೆವೇಶಗಳ ಬಗ್ಗೆ ಸ್ವತಂತ್ರ ತನಿಖೆಯೊಂದನ್ನು ನಡೆ ಸುವಂತೆ ಮಾವೋವಾದಿಗಳು ಒತ್ತಾಯಿಸಿದ್ದಾರೆ.

‘‘ನಕಲಿ ಎನ್‌ಕೌಂಟರ್’’ ವಿರೋಧಿಸಿ ಮಾವೋ ವಾದಿಗಳು ಪಶ್ಚಿಮ ಬಂಗಾಳದಲ್ಲಿ ನವೆಂಬರ್ 26ರಿಂದ ಎರಡು ದಿನಗಳ ಬಂದ್ ಆಚರಿಸಲೂ ಕರೆ ನೀಡಿದ್ದಾರೆ. ‘‘ಕಿಶನ್‌ಜಿಯನ್ನು ನಕಲಿ ಎನ್ ಕೌಂಟರ್‌ನಲ್ಲಿ ಕೊಲ್ಲಲಾಗಿದೆ. ಇದನ್ನು ಪ್ರತಿಭಟಿಸಲು ಪಶ್ಚಿಮ ಬಂಗಾಳದಲ್ಲಿ ಎರಡು ದಿನಗಳ ಬಂದ್ ಹಾಗೂ ಒಂದು ವಾರದ ಪ್ರತಿಭಟನೆಗೆ ನಾವು ಕರೆ ನೀಡುತ್ತಿದ್ದೇವೆ’’ಎಂದು ಮಾವೋವಾದಿ ರಾಜ್ಯ ಸಮಿತಿ ಸದಸ್ಯ ಹಾಗೂ ವಕ್ತಾರ ಆಕಾಶ್ ಬಹಿರಂಗಪಡಿಸದ ಸ್ಥಳವೊಂದರಿಂದ ಪಿಟಿಐಗೆ ಫೋನ್ ಮೂಲಕ ತಿಳಿಸಿದ್ದಾರೆ.

ಕಿಶನ್‌ಜಿಯನ್ನು ನಕಲಿ ಎನ್‌ಕೌಂಟರ್‌ನಲ್ಲಿ ಕೊಲ್ಲಲಾಗಿದೆ ಎಂದು ತೆಲುಗು ಕವಿ ಹಾಗೂ ಮಾವೋವಾದಿಗಳ ಬಗ್ಗೆ ಸಹಾನುಭೂತಿ ಹೊಂದಿರುವ ವರವರ ರಾವ್ ಆರೋಪಿಸಿದ್ದಾರೆ.

‘‘ಕಿಶನ್‌ಜಿಯನ್ನು ಎರಡು ದಿನಗಳ ಹಿಂದೆ ಬಂಧಿಸಲಾಗಿತ್ತು ಹಾಗೂ ಪೊಲೀಸ್ ಕಸ್ಟಡಿಯಲ್ಲಿಡಲಾಗಿತ್ತು.ನಕಲಿ ಎನ್‌ಕೌಂಟರ್‌ನಲ್ಲಿ ಅವರನ್ನು ಕೊಲ್ಲಲಾಗಿದೆ. ಅದೊಂದು ಕೊಲೆ ಪ್ರಕರಣ ಹಾಗೂ ಅದರ ಬಗ್ಗೆ ತನಿಖೆಯಾಗಬೇಕಾಗಿದೆ’’ಎಂದು ವರವರ ರಾವ್ ಕೋಲ್ಕತ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರಿಗೆ ಹೇಳಿದರು.

ಎನ್‌ಕೌಂಟರ್ ಎನ್ನುವುದು ಪೊಲೀಸರು ಹೆಣೆದ ಕಟ್ಟು ಕತೆಯಾಗಿದೆ ಎಂದು ಅವರು ಬಣ್ಣಿಸಿದರು.

‘‘ನಮ್ಮ ಜನರು ಹತ್ತಿರದಲ್ಲಿರುವಾಗಲೇ ಕಿಶನ್‌ಜಿಯನ್ನು ಬಂಧಿಸಲಾಗಿತ್ತು ಹಾಗೂ ಬಳಿಕ ಅಮಾನುಷವಾಗಿ ಕೊಲ್ಲಲಾಯಿತು.ಹತ್ಯೆಯ ಬಗ್ಗೆ ನಾವು ಸ್ವತಂತ್ರ ತನಿಖೆಯಾಗಬೇಕೆಂದು ಒತ್ತಾಯಿಸುತ್ತೇವೆ’’ ಎಂದರು.

ಕಿಶನ್‌ಜಿಗೆ ಒಳಜಗಳವೇ ಮುಳುವಾಯಿತೇ?

ನವದೆಹಲಿ/ ಕೋಲ್ಕತ್ತ(ಪಿಟಿಐ):ಪಶ್ಚಿಮ ಬಂಗಾಳದ ಅರಣ್ಯ ಪ್ರದೇಶದಲ್ಲಿ ಗುರುವಾರ ಭದ್ರತಾ ಪಡೆ ನಡೆಸಿದ ಕಾರ್ಯಾಚರಣೆಯಲ್ಲಿ ಪ್ರಮುಖ ನಕ್ಸಲ್ ನಾಯಕ ಕಿಶನ್‌ಜಿ ಬಲಿಯಾಗಲು ಸಂಘಟನೆಯಲ್ಲಿದ್ದ ಆಂತರಿಕ ಕಚ್ಚಾಟವೇ ಕಾರಣ ಎನ್ನಲಾಗಿದೆ.

ನಕ್ಸಲೀಯರ ಒಳಜಗಳದ ಲಾಭ ಪಡೆದ ಭದ್ರತಾ ಪಡೆ ಮತ್ತು ಗುಪ್ತಚರ ಇಲಾಖೆ, ಅರಣ್ಯದಲ್ಲಿದ್ದ ಅವರ ಅಭೇದ್ಯ ಕೋಟೆಯನ್ನು ಭೇದಿಸುವಲ್ಲಿ ಯಶಸ್ವಿಯಾಯಿತು ಎಂದು ಭದ್ರತಾ ಪಡೆ ಮೂಲಗಳು ಹೇಳಿವೆ.

 ಸಂಘಟನೆಯಲ್ಲಿದ್ದ ಆಂತರಿಕ ಕಚ್ಚಾಟದ ಸುಳಿವರಿತ ಗುಪ್ತಚರ ಅಧಿಕಾರಿಗಳು ಒಂದೊಂದಾಗಿ ವಿಷಯ ಸಂಗ್ರಹಿಸತೊಡಗಿದರು.ತಮಗೆ ಸಿಕ್ಕ ಸುಳಿವಿನಿಂದ ಈ ಬಾರಿ ಬೇಟೆ ಬಲೆಗೆ ಬೀಳುವುದು ಖಚಿತ ಎಂದು ಅರಿತ ಸಿಬ್ಬಂದಿ,ಚಿಕ್ಕಪುಟ್ಟ ವಿಷಯವನ್ನೂ ನಿರ್ಲಕ್ಷಿಸಲಿಲ್ಲ.ಅನೇಕ ದಿನಗಳಿಂದ ಕಿಶನ್‌ಜಿ ಬೆನ್ನು ಬಿದ್ದು ಅವರ ಪ್ರತಿ ಚಲನವಲನದ ಮೇಲೂ ನಿಗಾ ಇಟ್ಟಿದ್ದರು.ಎಲ್ಲವನ್ನೂ ಖಚಿತಪಡಿಸಿಕೊಂಡ ಬಳಿಕವೇ ಕಾರ್ಯಾಚರಣೆಗೆ ಇಳಿದರು.ಕೊನೆಗೂ ಅದರಲ್ಲಿ ಯಶ ಕಂಡರು ಎನ್ನುತ್ತವೆ ಮೂಲಗಳು.

ಸಂಘಟನೆಯಲ್ಲಿದ್ದ ಮಹಿಳಾ ಹೋರಾಟಗಾರರನ್ನು ಶೋಷಿಸಲಾಗುತ್ತಿದೆ ಎಂಬ ಸುಳಿವು ಕೂಡಾ ಕಾರ್ಯಾಚರಣೆ ಬಳಿಕ ನಿಜವಾಗಿದೆ.ಹತ್ಯೆಯಾದ ವ್ಯಕ್ತಿ ಕಿಶನ್‌ಜಿ ಎಂಬುದು ಪೊಲೀಸರಿಗೆ ನೂರಕ್ಕೆ ನೂರರಷ್ಟು ಖಚಿತವಾಗಿದ್ದರೂ ಅಧಿಕೃತ ಘೋಷಣೆ ಬಾಕಿ ಇದೆ.ಆಂಧ್ರದಿಂದ ಅವರ ಕುಟುಂಬದ ಸದಸ್ಯರು ಬಂದು ಶವ ಗುರುತಿಸುವ ಪ್ರಕ್ರಿಯೆ ಮುಗಿದ ಬಳಿಕವಷ್ಟೇ ಪೊಲೀಸರ ಅಧಿಕೃತ ಘೋಷಣೆ ಹೊರಬೀಳುವ ನಿರೀಕ್ಷೆ ಇದೆ.ಗೃಹ ಇಲಾಖೆ ಕಳುಹಿಸಿದ ಕಿಶನ್‌ಜಿ ಇತ್ತೀಚಿನ ಭಾವಚಿತ್ರಕ್ಕೂ,ಶವಕ್ಕೂ ಸಾಕಷ್ಟು ಸಾಮ್ಯ ಇದೆ.ಹೀಗಾಗಿ ಶವ ಅವರದೇ ಎಂಬುದರಲ್ಲಿ ಯಾವುದೇ ಸಂಶಯ ಉಳಿದಿಲ್ಲ ಎಂದು ಮೂಲಗಳು ಹೇಳುತ್ತವೆ.

ಈ ನಡುವೆ,ಮರಣೋತ್ತರ ಪರೀಕ್ಷೆಗಾಗಿ ಮಿಡ್ನಾಪುರ ಜಿಲ್ಲಾ ಆಸ್ಪತ್ರೆಗೆ ತಂದಿರುವ ಶವವನ್ನು ಗುರುತಿಸಲು ಅವರ ಕುಟುಂಬದ ಸದಸ್ಯರನ್ನು ಪೊಲೀಸರು ಎದುರು ನೋಡುತ್ತಿದ್ದಾರೆ.

ಕಿಶನ್‌ಜಿ ಸಹೋದರಿಯ ಪುತ್ರಿ ದೀಪಾ ಅವರು ನಕ್ಸಲೀಯರ ಬಗ್ಗೆ ಸಹಾನುಭೂತಿ ಹೊಂದಿರುವ ಕವಿ ವರವರರಾವ್ ಅವರೊಂದಿಗೆ ಶುಕ್ರವಾರ ಆಂಧ್ರದಿಂದ ಪಶ್ಚಿಮ ಬಂಗಾಳಕ್ಕೆ ತೆರಳಿದ್ದಾರೆ.

ತೀವ್ರ ಶೋಧ:ಪರಾರಿಯಾಗಿರುವ ನಕ್ಸಲ್ ನಾಯಕಿ ಸುಚಿತ್ರಾ ಮಹತೊ ಅವರಿಗಾಗಿ ಭದ್ರತಾ ಪಡೆ ತೀವ್ರ ಶೋಧ ಆರಂಭಿಸಿದೆ.

ಕಿಶನ್‌ಜಿ ಹತ್ಯೆ ಸಂದರ್ಭದಲ್ಲಿ ಅವರ ಜೊತೆಗೇ ಇದ್ದು ಗಾಯಗೊಂಡಿರುವ ಸುಚಿತ್ರಾ ಮತ್ತು ಸಹಚರರು ಬಳಿಕ ಪರಾರಿಯಾದರು ಎನ್ನಲಾಗಿದೆ. ನಕ್ಸಲ್ ಹೋರಾಟದಲ್ಲಿದ್ದ ಪತಿ ಶಶಿಧರ ಮಹತೊ ಹತ್ಯೆಯಾದ ಬಳಿಕ ಸುಚಿತ್ರಾ ಅವರು ಕಿಶನ್‌ಜಿ ಅವರೊಂದಿಗೆ ವಾಸವಾಗಿದ್ದರು ಎನ್ನಲಾಗಿದೆ.

ಅರಣ್ಯ ಪ್ರದೇಶದ ಹೊರವಲಯದಲ್ಲಿ ಈ ತಂಡ ಕಾಣಿಸಿಕೊಂಡಿದೆ ಎಂಬ ಖಚಿತ ಸುಳಿವು ಪಡೆದಿರುವ ಸಾವಿರಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ ವ್ಯಾಪಕ ಬಲೆ ಬೀಸಿದ್ದಾರೆ

Advertisement

0 comments:

Post a Comment

 
Top