PLEASE LOGIN TO KANNADANET.COM FOR REGULAR NEWS-UPDATES


ಬೆಂಗಳೂರು,ನ.25:ಬಳ್ಳಾರಿ ಗ್ರಾಮಾಂತರ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪದ ಮೇರೆಗೆ ಸಂಸದರಾದ ಜೆ.ಶಾಂತಾ ಹಾಗೂ ಸಣ್ಣ ಪಕೀರಪ್ಪರನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ.

ಬಳ್ಳಾರಿ ಸಂಸದೆ ಜೆ.ಶಾಂತಾ ಹಾಗೂ ರಾಯಚೂರು ಸಂಸದ ಸಣ್ಣಪಕೀರಪ್ಪರನ್ನು ಬಿಜೆಪಿಯಿಂದ ಅಮಾನತುಗೊಳಿಸಿರುವುದಾಗಿ ಪಕ್ಷದ ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪ ಬಳ್ಳಾರಿಯಲ್ಲಿಂದು ತಿಳಿಸಿದ್ದಾರೆ.ಬಳ್ಳಾರಿ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ವಿರುದ್ಧವಾಗಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಶ್ರೀರಾಮುಲು ಪರ ಚುನಾವಣಾ ಪ್ರಚಾರ ನಡೆಸುವ ಮೂಲಕ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದರು.ಈ ಕಾರಣಕ್ಕೆ ಇಬ್ಬರ ಮೇಲೂ ಶಿಸ್ತಿನ ಕ್ರಮ ಕೈಗೊಳ್ಳುವಂತೆ ಈಶ್ವರಪ್ಪ ಹೈಕಮಾಂಡ್‌ಗೆ ಪತ್ರ ಬರೆದಿದ್ದು,ಈ ಹಿನ್ನೆಲೆಯಲ್ಲಿ ಪಕ್ಷದಿಂದ ಅಮಾನತುಗೊಳಿಸಲಾಗಿದೆ.

ನಾಲ್ವರು ಶಾಸಕರಿಗೆ ನೋಟಿಸ್
ಬಳ್ಳಾರಿ,ನ.25:ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೆಎಂಎಫ್ ಅಧ್ಯಕ್ಷ ಸೋಮಶೇಖರ ರೆಡ್ಡಿ ಸೇರಿದಂತೆ ನಾಲ್ವರು ಶಾಸಕರಿಗೆ ರಾಜ್ಯ ಬಿಜೆಪಿ ಶೋಕಾಸ್ ನೋಟಿಸ್ ನೀಡಿದೆ.
ಬಳ್ಳಾರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಪಕ್ಷದ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ,ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುವ ಶಾಸಕರಾದ ಸೋಮಶೇಖರ ರೆಡ್ಡಿ,ಸುರೇಶ್‌ಬಾಬು,ನಾಗೇಂದ್ರ ಹಾಗೂ ಮೃತ್ಯುಂಜಯ ಜಿನಗಾರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ ಎಂದರು.

ನಾಳೆ ಸಂಜೆಯೊಳಗೆ ಅವರು ಉತ್ತರ ನೀಡುವಂತೆ ಗಡುವು ನೀಡಲಾಗಿದೆ ಎಂದ ಈಶ್ವರಪ್ಪ,ಪಕ್ಷೇತರರಾಗಿ ಕಣಕ್ಕಿಳಿದಿರುವ ಶ್ರೀರಾಮುಲು ಪರ ಪ್ರಚಾರ ನಡೆಸುವ ಮೂಲಕ ಪಕ್ಷ ವಿರೋಧಿ ಕೃತ್ಯದಲ್ಲಿ ತೊಡಗಿಕೊಂಡಿದ್ದಾರೆ.ಈ ಹಿನ್ನೆಲೆಯಲ್ಲಿ ನಿಮ್ಮ ಮೇಲೆ ಏಕೆ ಶಿಸ್ತಿನ ಕ್ರಮ ಕೈಗೊಳ್ಳಬಾರದೆಂದು ಶೋಕಾಸ್ ನೋಟಿಸ್‌ನಲ್ಲಿ ತಿಳಿಸಲಾಗಿದೆ ಎಂದರು.

ಜೊತೆಗೆ ಶ್ರೀರಾಮುಲು ಪರ ಚುನಾವಣಾ ಪ್ರಚಾರದಲ್ಲಿ ತೊಡಗಿರುವ ಬಳ್ಳಾರಿ ಸಂಸದೆ ಜೆ.ಶಾಂತಾ ಹಾಗೂ ರಾಯಚೂರಿನ ಸಂಸದ ಸಣ್ಣಫಕೀರಪ್ಪರ ವಿರುದ್ಧವೂ ಶಿಸ್ತಿನ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಹಾಗೂ ಪ್ರತಿಪಕ್ಷದ ನಾಯಕಿ ಸುಷ್ಮಾಸ್ವರಾಜ್‌ರಿಗೆ ಪತ್ರ ಬರೆಯಲಾಗಿದೆ.ಅವರು ಕೋರ್ ಕಮಿಟಿ ಸಭೆಯಲ್ಲಿ ಈ ಕುರಿತು ಕ್ರಮ ಕೈಗೊಳ್ಳಲಿದ್ದಾರೆ ಎಂದರು.ಈ ನಾಲ್ಕು ಮಂದಿ ಶಾಸಕರು ಬಿಜೆಪಿ ಅಭ್ಯರ್ಥಿಯ ವಿರುದ್ಧವಾಗಿ ಪ್ರಚಾರ ನಡೆಸುತ್ತಿದ್ದು,ಪಕ್ಷದ ನಿಯಮಕ್ಕೆ ವಿರುದ್ಧವಾಗಿ ನಡೆಯುತ್ತಿರುವುದರಿಂದ ನೋಟಿಸ್ ಜಾರಿ ಮಾಡಲಾಗಿದೆ ಎಂದರು.

ಬಿಜೆಪಿ ಶಾಸಕರಾದ ಸೋಮಶೇಖರ ರೆಡ್ಡಿ,ಸುರೇಶ್ ಬಾಬು,ನಾಗೇಂದ್ರ ಹಾಗೂ ವಿಧಾನ ಪರಿಷತ್ ಸದಸ್ಯ ಮೃತ್ಯುಂಜಯ ಜಿನಗ ಬಹಿರಂಗವಾಗಿ ಶ್ರೀರಾಮುಲು ಪರ ಪ್ರಚಾರದಲ್ಲಿ ತೊಡಗಿಕೊಂಡಿದ್ದು,ಅವರ ಮನವೊಲಿಸಲು ಬಿಜೆಪಿ ನಾಯಕರು ಯತ್ನಿಸಿದ್ದರೂ,ಅದು ಫಲನೀಡಿಲ್ಲ.ಜೊತೆಗೆ ನಮ್ಮ ವಿರುದ್ಧ ಪಕ್ಷ ಯಾವುದೇ ಕ್ರಮ ಕೈಗೊಂಡರೂ ನಾವು ಅದಕ್ಕೆ ಹೆದರಲ್ಲ ಎಂದು ಬಹಿರಂಗವಾಗಿ ಶಾಸಕರು ಘೋಷಿಸಿರುವುದು ಬಿಜೆಪಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿತ್ತು.

ಶ್ರೀರಾಮುಲುರೊಂದಿಗಿರುವ ಶಾಸಕರನ್ನು ಹೆದರಿಸಲು ಮುಂದಾಗಿರುವ ಬಿಜೆಪಿ, ಶೋಕಾಸ್ ನೋಟಿಸ್ ಜಾರಿ ಮಾಡಿದೆ.ಆದರೆ ಸದ್ಯಕ್ಕೆ ಶಾಸಕರ ಮೇಲೆ ಯಾವುದೇ ಕ್ರಮ ಕೈಗೊಳ್ಳದಿರಲು ಬಿಜೆಪಿ ಚಿಂತಿಸಿದೆ ಎನ್ನಲಾಗಿದೆ.

ಬಳ್ಳಾರಿ ಚುನಾವಣೆಯ ಫಲಿತಾಂಶವನ್ನು ನೋಡಿ,ಬಳಿಕ ಶಾಸಕರ ಮನವೊಲಿಸಬೇಕೆ ಅಥವಾ ಅವರ ಮೇಲೆ ಕ್ರಮ ಕೈಗೊಳ್ಳಬೇಕೆಂಬ ನಿರ್ಧಾರಕ್ಕೆ ಬಿಜೆಪಿ ನಾಯಕರು ಮುಂದಾಗಿದ್ದಾರೆನ್ನಲಾಗಿದೆ.

ಬಿಜೆಪಿಯ 4 ಶಾಸಕರ ಅಮಾನತು
ಬೆಂಗಳೂರು: ಪಕ್ಷೇತರ ಅಭ್ಯರ್ಥಿ ಬಿ.ಶ್ರೀರಾಮುಲು ಪರ ಪ್ರಚಾರದಲ್ಲಿ ತೊಡಗಿರುವ ನಾಲ್ವರು ಶಾಸಕರು ಹಾಗೂ ಬಳ್ಳಾರಿ ಸಂಸದೆ ಜೆ.ಶಾಂತಾ ಮತ್ತು ರಾಯಚೂರು ಸಂಸದ ಸಣ್ಣ ಪಕೀರಪ್ಪ ಅವರನ್ನು ಶುಕ್ರವಾರ ರಾತ್ರಿ ಬಿಜೆಪಿಯಿಂದ ಅಮಾನತು ಗೊಳಿಸಲಾಗಿದೆ. 

ಸಂಸದರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಅವರು ಶುಕ್ರವಾರ ಸಂಜೆ ವರಿಷ್ಠರಿಗೆ ಪತ್ರ ಬರೆದಿದ್ದರು.ಇದ್ದಕ್ಕೆ ತಕ್ಷಣ ಸ್ಪಂದಿಸಿದ ಹೈಕಮಾಂಡ್ ನೋಟಿಸ್ ಕೂಡ ನೀಡದೆ ಸಂಸದರ ವಿರುದ್ಧ ಶಿಸ್ತು ಕ್ರಮ ಜರುಗಿಸಿದೆ.

ಬಳ್ಳಾರಿಯಲ್ಲಿ ಬೆಳಿಗ್ಗೆ ಈಶ್ವರಪ್ಪ ಸುದ್ದಿಗಾರರ ಜತೆ ಮಾತನಾಡಿ,ವಿಧಾನಸಭಾ ಸದಸ್ಯರಾದ ಜಿ.ಸೋಮಶೇಖರ ರೆಡ್ಡಿ,ಟಿ.ಎಚ್.ಸುರೇಶ ಬಾಬು,ಬಿ.ನಾಗೇಂದ್ರ ಹಾಗೂ ವಿಧಾನ ಪರಿಷತ್ ಸದಸ್ಯ ಮೃತ್ಯುಂಜಯ ಜಿನಗಾ ಅವರಿಗೆ ನೋಟಿಸ್ ನೀಡಿ ಶನಿವಾರದ ಸಂಜೆಯೊಳಗೆ ಉತ್ತರಿಸುವಂತೆ ತಿಳಿಸಿರುವುದಾಗಿ ಹೇಳಿದ್ದರು. ಆದರೆ ರಾತ್ರಿ 10-30ರ ವೇಳೆಗೆ ದಿಢೀರ್ ನಿರ್ಧಾರ ತಳೆದು,ನಾಲ್ಕೂ ಶಾಸಕರನ್ನು ಪಕ್ಷದಿಂದ ಅಮಾನತು ಮಾಡಿರುವುದಾಗಿ ಪ್ರಕಟಿಸಿದರು.

ಪಕ್ಷದ ರಾಜ್ಯ ಘಟಕ ನೋಟಿಸ್-ಉತ್ತರ ಎಂದು ಕಾದುನೋಡುವಾಗಲೇ ದೆಹಲಿಯಿಂದ ಪಕ್ಷದ ವರಿಷ್ಠರು ಸಂಸದರ ವಿರುದ್ಧ ಕತ್ತಿಬೀಸಿದರು.ಇದೇ ಮಾನದಂಡವನ್ನು ನಾಲ್ಕು  ಶಾಸಕರ ವಿರುದ್ಧವೂ ಅನುಸರಿಸಲಾಯಿತು.

ಲೋಕಸಭೆ ಪ್ರತಿಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಅವರ ಶಿಫಾರಸಿನ ಮೇರೆಗೆ ಪಕ್ಷದ ಸಂಸದೀಯ ಮಂಡಳಿ ಅಧ್ಯಕ್ಷ ಎಲ್.ಕೆ.ಅಡ್ವಾಣಿ ಅವರು ಸಂಸದರನ್ನು ಅಮಾನತು ಮಾಡಿದ್ದಾರೆ.

ಶನಿವಾರ ಬೆಳಿಗ್ಗೆ ರಾಜ್ಯದ ಬಿಜೆಪಿ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಅವರು ಲೋಕಸಭೆಯ ಪ್ರತಿಪಕ್ಷ ನಾಯಕಿಯಾದ ಸುಷ್ಮಾ ಸ್ವರಾಜ್ ಅವರಿಗೆ ಪತ್ರವೊಂದನ್ನು ಬರೆದು, ಬಳ್ಳಾರಿ ಮೀಸಲು ಕ್ಷೇತ್ರದ ಸಂಸದೆ ಜೆ.ಶಾಂತಾ ಮ್ತು ರಾಯಚೂರು ಮೀಸಲು ಕ್ಷೇತ್ರದ ಸಂಸದ ಎಸ್.ಪಕೀರಪ್ಪ ಅವರು ಬಿಜೆಪಿ ಅಧಿಕೃತ ಅಭ್ಯರ್ಥಿ ಪರ ಪ್ರಚಾರ ನಡೆಸುತ್ತಿಲ್ಲ.ಪಕ್ಷೇತರ ಅಭ್ಯರ್ಥಿ ಬಿ.ಶ್ರೀರಾಮುಲು ಪರ ಪ್ರಚಾರಕಾರ್ಯದಲ್ಲಿ ನಿರತರಾಗಿದ್ದಾರೆ ಎಂದು ದೂರಿದ್ದರು.

ಇದು ಪಕ್ಷದ ಶಿಸ್ತಿನ ಉಲ್ಲಂಘನೆಯಾಗಿದ್ದು,ಪಕ್ಷ ವಿರೋಧಿ ಕೃತ್ಯವಾಗಿದೆ ಎಂದು ಅವರು ವಿವರಿಸಿದ್ದರು.ಈ ಪತ್ರವನ್ನು ಸುಷ್ಮಾ ಸ್ವರಾಜ್ ಅವರು ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಅವರಿಗೆ ತಲುಪಿಸಿ, ಸಮಾಲೋಚಿಸಿದ್ದರು.ಇಂತಹ ಕೆಲಸವನ್ನು ಕ್ಷಣವೂ ಸಹಿಸಲು ಸಾಧ್ಯವಿಲ್ಲ ಯಾವುದೇ ನೊಟೀಸ್ ನೀಡದೆ ಇಬ್ಬರನ್ನೂ ಪಕ್ಷದಿಂದ ಉಚ್ಚಾಟಿಸಬೇಕೆಂದು ಎಲ್.ಕೆ.ಅಡ್ವಾಣಿ ಅವರು ಲಿಖಿತ ಮೂಲಕ ಸೂಚಿಸಿದರು.ರಾತ್ರಿ 8ಗಂಟೆಯ ವೇಳೆಗೆ ಶಾಂತಾ ಹಾಗೂ ಪಕೀರಪ್ಪ ಅವರನ್ನು ಪಕ್ಷದಿಂದ ಅಮಾನತುಗೊಳಿಸಿ ಆದೇಶ ಹೊರಟಿತು.ಆದೇಶ ಬಳ್ಳಾರಿಗೆ ತಲುಪಿದ ಕೂಡಲೇ ಬಿಜೆಪಿಯಲ್ಲಿ ಹೊಸ ಸಂಚಲನವೇ ಉಂಟಾಯಿತು.

ಹೆದರುವುದಿಲ್ಲ: ಸೋಮಶೇಖರ ರೆಡ್ಡಿ
`ಪಕ್ಷ ನಮ್ಮ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಿ. ನಮಗೆ ಭಯವಿಲ್ಲ. ಶ್ರೀರಾಮುಲು ನನ್ನ ಸಹೋದರರಿದ್ದಂತೆ. ಎಂದೆಂದಿಗೂ ಅವರನ್ನು ತೊರೆಯುವುದಿಲ್ಲ` ಎಂದು ಶಾಸಕ, ಕೆಎಂಎಫ್ ಅಧ್ಯಕ್ಷ ಜಿ.ಸೋಮಶೇಖರರೆಡ್ಡಿ ಅವರು ನೋಟಿಸ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಶ್ರೀರಾಮುಲು ಪರ ನಗರದಲ್ಲಿ ಶುಕ್ರವಾರ ಪ್ರಚಾರದಲ್ಲಿ ತೊಡಗಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ಸದ್ಯ ಚಂಚಲಗೂಡ ಜೈಲಿನಲ್ಲಿರುವ ಸೋದರ, ಮಾಜಿ ಸಚಿವ ಜಿ.ಜನಾರ್ದನರೆಡ್ಡಿ ಜೈಲಿನಿಂದ ಹೊರಗೆ ಬಂದ ಮೇಲೆ ಪಕ್ಷ ಬಳ್ಳಾರಿಯಲ್ಲಿ ಯಾರಿಂದ ಬೆಳೆಯಿತು, ಸರ್ಕಾರ ರಚನೆ ವೇಳೆ ಪಕ್ಷಕ್ಕೆ ನಮ್ಮಿಂದ ಏನು ಸಹಾಯ ಆಗಿದೆ ಎಂಬುದನ್ನು ಹೊರ ಹಾಕಲಿದ್ದಾರೆ` ಎಂದರು.  `ನಾನು ಶ್ರೀರಾಮುಲು ಅವರ ಅಭಿಮಾನಿ. ಅವರು ಹೇಗೆ ಹೇಳುತ್ತಾರೋ ಹಾಗೆಯೇ ನಡೆದುಕೊಳ್ಳುವೆ. ಕೊನೆಯ ಉಸಿರು ಇರುವವರೆಗೂ ಅವರ ಪರ ಇರುತ್ತೇನೆ. ಈಶ್ವರಪ್ಪ ನೋಟೀಸ್ ನೀಡಿದ್ದಾರೆ. ಅದಕ್ಕೆ ತಕ್ಕ ಉತ್ತರ ನೀಡುತ್ತೇನೆ`  ಎಂದು ತಿಳಿಸಿದರು. `ಬಿಜೆಪಿ ಮುಖಂಡರು ನಮ್ಮನ್ನು ಕಡೆಗಣಿಸಿದ್ದರಿಂದಲೇ ಶ್ರೀರಾಮುಲು ಜನತಾ ನ್ಯಾಯಾಲಯದೆದುರು ಬಂದಿದ್ದಾರೆ. ಜನತೆ ನೀಡುವ ತೀರ್ಪಿಗೆ ತಲೆಬಾಗುತ್ತೇವೆಯೇ ವಿನಾ ಈಶ್ವರಪ್ಪ ಅವರಿಗಲ್ಲ` ಎಂದು ಸೋಮಶೇಖರರೆಡ್ಡಿ ಸ್ಪಷ್ಟಪಡಿಸಿದರು.

`ಸುಷ್ಮಾ ಸ್ವರಾಜ್ ಅವರು ಬಳ್ಳಾರಿಯಿಂದ ಸ್ಪರ್ಧಿಸಿರಬಹುದು. ಆದರೆ, ಇಲ್ಲಿ ಪಕ್ಷ ಬೆಳೆದಿದ್ದು ಯಾರಿಂದ ಎಂಬುದು ಎಲ್ಲರಿಗೂ ಗೊತ್ತಿದೆ. ಪಕ್ಷದ ಮುಖಂಡರು ಮಾಡಿದ ಅವಮಾನದಿಂದ ನೊಂದು ಶ್ರೀರಾಮುಲು ರಾಜೀನಾಮೆ ನೀಡಿದ್ದಾರೆ. ಅವರು ಬಿಜೆಪಿಗೆ ಮಾಡಿದ ಸೇವೆಯನ್ನು ಪರಿಗಣಿಸಿ ದಯವಿಟ್ಟು ಅವರ ವಿರುದ್ಧ ಪಕ್ಷದ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಬೇಡಿ ಎಂದು ಚುನಾವಣೆಗೆ ಮುನ್ನವೇ ಮುಖಂಡರಿಗೆ ನಾನು ಮನವಿ ಮಾಡಿದ್ದೆ` ಎಂದೂ ಅವರು ತಿಳಿಸಿದರು.
ಶ್ರೀರಾಮುಲು ಪರ ಇರುವ ಗುಂಪು ಇದನ್ನು ನಿರೀಕ್ಷಿಸಿದ್ದರೋ ಎನ್ನುವಂತೆ ಯಾರೂ ಈ ಆದೇಶವನ್ನು ತೀವ್ರವಾಗಿ ಪರಿಗಣಿಸಲಿಲ್ಲ.ಸೋಮಶೇಖರ ರೆಡ್ಡಿ ಅವರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿ ಇಂತಹ ಬೆದರಿಕೆಗಳಿಗೆಲ್ಲಾ ಜಗ್ಗುವುದಿಲ್ಲ ಎಂದು ಸೆಡ್ಡು ಹೊಡೆದರು. ಇದರಿಂದ ಪಕ್ಷದ ಅಧ್ಯಕ್ಷ ಈಶ್ವರಪ್ಪ ಮತ್ತಷ್ಟು ಕೆರಳಿದ್ದರು. ಇದೇ ವೇಳೆಗೆ ದೆಹಲಿಯಿಂದ ಕ್ಷಿಪ್ರವಾಗಿ ತೆಗೆದುಕೊಂಡ ನಿರ್ಣಯವೂ ಅವರಿಗೆ ಸ್ಪೂರ್ತಿ ತಂದಿತು. ಈ ಮುನ್ನ ಶನಿವಾರ ಸಂಜೆಯವರೆಗೆ ನೀಡಿದ್ದ ಗಡುವನ್ನು ವಾಪಸು ಪಡೆದು, ತಕ್ಷಣದಿಂದಲೇ ಜಾರಿಗೆ ಬರುವಂತೆ ಮೂವರೂ ಶಾಸಕರು ಹಾಗೂ ಒಬ್ಬರು ವಿಧಾನಪರಿಷತ್ ಸದಸ್ಯರನ್ನು ಅಮಾನತು ಮಾಡಿರುವುದಾಗಿ ಪ್ರಕಟಿಸಿದರು. 

ಈ ವಿದ್ಯಮಾನಗಳಿಂದಾಗಿ ಬಳ್ಳಾರಿಯ ಚುನಾವಣಾ ಕಣ ಹೊಸ ತಿರುವು ಪಡೆದುಕೊಂಡಿದೆ.ಶ್ರೀರಾಮುಲು ಅವರು ತಮ್ಮ ಪ್ರತಿಷ್ಠೆಯನ್ನು ಪಣಕ್ಕಿಟ್ಟು ಕಣದಲ್ಲಿದ್ದು,ಅಮಾನತು ಕ್ರಮಕ್ಕೆ ತಕ್ಷಣಕ್ಕೆ ಪ್ರತಿಕ್ರಿಯಿಸಲು ಸಿಕ್ಕಿಲ್ಲ.ಈ ನಡುವೆ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಶನಿವಾರದಿಂದ 2ನೇ ಸುತ್ತಿನ ಪ್ರಚಾರ ಕೈಗೊಳ್ಳಲಿದ್ದಾರೆ. ಶನಿವಾರ ಬಳ್ಳಾರಿ ಕಣ ಮತ್ತಷ್ಟು ರಂಗೇರಲಿದೆ.

ಮುಖ್ಯಮಂತ್ರಿ ಸಮರ್ಥನೆ

ಬಳ್ಳಾರಿ ಉಪ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ನಾಲ್ವರು ಶಾಸಕರಿಗೆ ನೋಟಿಸ್ ಜಾರಿ ಮಾಡಿರುವುದನ್ನು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರು ಮಂಡ್ಯದಲ್ಲಿ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.

ಪಕ್ಷದ ಅಧ್ಯಕ್ಷರು ಕೈಗೊಂಡಿರುವ ಕ್ರಮ ಸರಿಯಾಗಿದೆ.ಬಳ್ಳಾರಿ ಉಪ ಚುನಾವಣೆಯಲ್ಲಿ ಬಿಜೆಪಿ ಆತಂಕ ಪಡುವ ಅಗತ್ಯವೇ ಇಲ್ಲ.ಪಕ್ಷ ಅಲ್ಲಿ ಜಯಗಳಿಸಲಿದ್ದು, ಸರ್ಕಾರದ ಮೇಲೆ ಇದರ ಫಲಿತಾಂಶ ಪರಿಣಾಮ ಬೀರುವುದಿಲ್ಲ ಎಂದು ಸುದ್ದಿಗಾರರಿಗೆ ತಿಳಿಸಿದರು.

ಪ್ರಗತಿ ಪರಿಶೀಲನಾ ಸಭೆಗೆ ಮುನ್ನ ಮಾತನಾಡಿದ ಅವರು,ನೋಟಿಸ್ ನೀಡಿರುವುದರ ಹಿಂದೆ ಪಕ್ಷಕ್ಕೆ ಸೋಲಿನ ಆತಂಕ ಆಗುತ್ತಿದೆಯೇ ಎಂಬ ಪ್ರಶ್ನೆಗೆ, ಬಿಜೆಪಿ ಇಬ್ಬರು ಸಂಸದರಿದ್ದಾಗಲೂ ದೃಢವಾಗಿಯೇ ಇತ್ತು.ಮುಂದೆಯೂ ಇರುತ್ತದೆ ಎಂದು ಪ್ರತಿಕ್ರಿಯಿಸಿದರು

Advertisement

0 comments:

Post a Comment

 
Top