PLEASE LOGIN TO KANNADANET.COM FOR REGULAR NEWS-UPDATES


koppal keb
ಕೊಪ್ಪಳ ನ.  : ವಿದ್ಯುತ್ ಬಿಲ್ ಪಾವತಿಸಿದ್ದರೂ, ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಕ್ಕಾಗಿ ಜೆಸ್ಕಾಂ ೫೦೦೦ ರೂ.ಗಳ ಪರಿಹಾರವನ್ನು ಫಿರ್ಯಾದುದಾರರಿಗೆ ನೀಡುವಂತೆ ಕೊಪ್ಪಳ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ತೀರ್ಪು ನೀಡಿದೆ.
  ಅಲ್ಲಾಸಾಬ್ ತಂದೆ ಖಾನ್ ಸಾಬ್ ಮುಧೋಳ ಇವರು ಕೊಪ್ಪಳ ನಗರದ ಅಮೀನ್‌ಪುರ ಬಡಾವಣೆಯಲ್ಲಿ ಆಯುಷ್ಯಾ ನಿಖಾತ್ ಎಂಬುವವರ ಮನೆಯಲ್ಲಿ ಬಾಡಿಗೆದಾರರಾಗಿ ವಾಸಿಸುತ್ತಿದ್ದು, ಇವರ ಮನೆಯ ಆರ್.ಆರ್. ಸಂಖ್ಯೆ: ೧೧೫೨೩ ಕ್ಕೆ ಸಂಬಂಧಿಸಿದ ಬಳಕೆಯ ಬಿಲ್ಲಿನ ಮೊತ್ತ ರೂ. ೧೦೭೦ ಗಳನ್ನು ದಿ: ೨೧-೧೧-೨೦೦೯ ರಂದು ಪಾವತಿಸಿದ್ದರೂ ಸಹ, ಜೆಸ್ಕಾಂನ ಲೈನ್‌ಮನ್ ಬಿಲ್ ಪಾವತಿಸಿಲ್ಲವೆಂದು ತಿಳಿಸಿ ದಿ: ೨೩-೧೧-೨೦೦೯ ರಂದು ಬೆಳಿಗ್ಗೆ ೧೧ ಗಂಟೆ ಸುಮಾರಿಗೆ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿ, ನಂತರ ಅದೇ ದಿನ ಸಂಜೆ ೪-೧೫ ಗಂಟೆಗೆ ಮರಳಿ ವಿದ್ಯುತ್ ಸಂಪರ್ಕ ಕಲ್ಪಿಸಿರುತ್ತಾರೆ.  ಬಿಲ್ ಪಾವತಿಸಿರುವ ಬಗ್ಗೆ ರಸೀದಿಯನ್ನು ತೋರಿಸಿದರೂ ಸಹ ಲೈನ್‌ಮನ್ ಅದನ್ನು ಲೆಕ್ಕಿಸದೆ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿರುವುದನ್ನು ಸೇವಾ ನ್ಯೂನತೆ ಎಂದು ಪರಿಗಣಿಸಿ ನಷ್ಟ ಪರಿಹಾರವನ್ನು ದೊರಕಿಸುವಂತೆ ಅಲ್ಲಾಸಾಬ್ ಅವರು ಜಿಲ್ಲಾ ಗ್ರಾಹಕರ ವೇದಿಕೆಯ ಮೊರೆ ಹೋಗಿದ್ದರು.
  ಪ್ರಕರಣಕ್ಕೆ ಸಂಬಂಧಪಟ್ಟ ಆರ್.ಆರ್. ಸಂಖ್ಯೆಗೆ ವಿದ್ಯುತ್ ಸಂಪರ್ಕವನ್ನು ಆಯುಷ್ಯಾ ನಿಖಾತ್ ಇವರ ಹೆಸರಿಗೆ ನೀಡಿದ್ದು, ದೂರುದಾರರಾಗಿರುವ ಅಲ್ಲಾಸಾಬ್ ಅವರಿಗೆ ಸಂಬಂಧಿಸಿರುವುದಿಲ್ಲ ಎಂದು ಜೆಸ್ಕಾಂ ಗ್ರಾಹಕರ ವೇದಿಕೆಯಲ್ಲಿ ತಕರಾರು ಸಲ್ಲಿಸಿತು.  ವೇದಿಕೆಯ ಅಧ್ಯಕ್ಷ ಕೆ.ವಿ. ಕೃಷ್ಣಮೂರ್ತಿ ಹಾಗೂ ಸದಸ್ಯರುಗಳಾದ ಶಿವರೆಡ್ಡಿ ಬಿ. ಗೌಡ ಮತ್ತು ವೇದಾ ಜೋಷಿ ಅವರು ಪ್ರಕರಣವನ್ನು ಕೂಲಂಕಷವಾಗಿ ಪರಿಶೀಲಿಸಿ, ಗ್ರಾಹಕರ ಸಂರಕ್ಷಣಾ ಕಾಯ್ದೆಯಡಿ ದೂರುದಾರರು ಗ್ರಾಹಕರಾಗುತ್ತಾರೆಂದು ಪರಿಗಣಿಸಿ, ಅಲ್ಲಾಸಾಬ್ ಅವರು ವಿದ್ಯುತ್ ಬಳಕೆಯ ಮೊತ್ತವನ್ನು ನಿಗದಿತ ಅವಧಿಯೊಳಗೆ ಪಾವತಿಸಿದ್ದರೂ, ಜೆಸ್ಕಾಂ ಯಾವುದೇ ನೋಟೀಸನ್ನು ನೀಡದೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಸೇವಾ ನ್ಯೂನತೆ ಎಸಗಿದೆ.  ಎಲೆಕ್ಟ್ರಿಸಿಟಿ ಕಾಯ್ದೆ-೨೦೦೩, ಕಲಂ ೫೬ ರ ಅನ್ವಯ ಯಾವುದೇ ಆರ್.ಆರ್. ಸಂಖ್ಯೆಗೆ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಬೇಕಾದಲ್ಲಿ ಸಂಬಂಧಿಸಿದವರಿಗೆ ೧೫ ದಿನಗಳ ಮುಂಚಿತವಾಗಿ ಲಿಖಿತ ನೋಟೀಸನ್ನು ನೀಡಿದ ನಂತರ, ವಿದ್ಯುತ್ ಸಂಪರ್ಕ ಕಡಿತಗೊಳಿಸಬೇಕಾಗುತ್ತದೆ.  ಆದರೆ ಸಕಾಲದಲ್ಲಿ ಬಿಲ್ ಪಾವತಿಸಿದ್ದರೂ ಜೆಸ್ಕಾಂ ಯಾವುದೇ ನೋಟೀಸ್ ನೀಡದೆ ಏಕಾಏಕಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಸೇವಾ ನ್ಯೂನತೆ ಎಸಗಿರುವರೆಂದು ಪರಿಗಣಿಸಿ, ಜೆಸ್ಕಾಂ, ದೂರುದಾರ ಅಲ್ಲಾಸಾಬ್ ಅವರಿಗೆ ರೂ. ೫೦೦೦ ಗಳ ಪರಿಹಾರವನ್ನು ಹಾಗೂ ಪ್ರಕರಣದ ಖರ್ಚು ೧೦೦೦ ರೂ.ಗಳನ್ನು ಡಿಸೆಂಬರ್ ಅಂತ್ಯದೊಳಗಾಗಿ ನೀಡುವಂತೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ತೀರ್ಪು ನೀಡಿದೆ.

Advertisement

0 comments:

Post a Comment

 
Top