ಗದಗ: ಇದೇ ತಿಂಗಳ 15ರಂದು ಬೆಂಗಳೂರಿನಲ್ಲಿ ನಡೆಯುವ ಕೆಐಎಡಿಬಿ ಸಭೆಯಲ್ಲಿ ಮತ್ತೆ ಪೋಸ್ಕೊ ಕಂಪೆನಿಯ ಭೂಸ್ವಾಧೀನ ವಿಷಯ ಪ್ರಸ್ತಾಪಿಸಲು ಅಜೆಂಡಾ ಸಿದ್ಧವಾಗಿದೆ.
ಜುಲೈ 22ರಂದು ಹಳ್ಳಿಗುಡಿಯ ಕೆಲವು ರೈತರು ಭೂಸ್ವಾಧೀನಕ್ಕೆ ಸಮ್ಮತಿ ಸೂಚಿಸಿ ನೀಡಿದ್ದ ಷರತ್ತುಬದ್ಧ ಒಪ್ಪಿಗೆ ಪತ್ರಗಳನ್ನು ಆಧಾರವಾಗಿಟ್ಟುಕೊಂಡು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯು ಆ.16ರಂದು ಈ ವಿಷಯದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಕೆಐಎಡಿಬಿಗೆ ನಿರ್ದೇಶನ ನೀಡಿದೆ.
ಈ ಹಿನ್ನೆಲೆಯಲ್ಲಿ `ಪ್ರಸ್ತಾವಿತ ಭೂಸ್ವಾಧೀನಕ್ಕೆ ಸಮ್ಮತಿಸಿರುವ ಭೂ ಮಾಲೀಕರ ಕೋರಿಕೆಯ ಬಗ್ಗೆ ಪರಿಶೀಲಿಸಿ ಸದರಿ ಜಮೀನುಗಳು ಒಂದೇ ಆಯಾಕಟ್ಟಿನಲ್ಲಿ ಬರುತ್ತಿದ್ದಲ್ಲಿ ಭೂ ಸ್ವಾಧೀನ ಪ್ರಕ್ರಿಯೆಯನ್ನು ಪೂರೈಸುವುದರ ಬಗ್ಗೆ ಪೋಸ್ಕೊ ಇಂಡಿಯಾ ಕಂಪೆನಿಯ ಅಭಿಪ್ರಾಯವನ್ನು ಪಡೆದು ಮುಂದುವರೆಯಬಹುದೇ ಎಂಬ ಬಗ್ಗೆ ಮಂಡಳಿ ಸಭೆಯ ಅವಗಾಹನೆ ಮತ್ತು ನಿರ್ಣಯಕ್ಕಾಗಿ ಮಂಡಿಸಿದೆ` ಎಂಬ ವಿಷಯ ಸೂಚಿತ ಅಜೆಂಡಾ ತಯಾರಾಗಿದೆ ಎಂದು ಮಾಜಿ ಸಚಿವ ಎಚ್.ಕೆ. ಪಾಟೀಲ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.
ಜಿಲ್ಲೆಯಲ್ಲಿ ಪೋಸ್ಕೊ ವಿರುದ್ಧ ಅನೇಕ ಸಂಘಟನೆಗಳು, ಮಠ-ಮಾನ್ಯಗಳು, ರಾಜಕೀಯ ಪಕ್ಷಗಳು ಹೋರಾಟ ಮಾಡಿದ ಹಿನ್ನೆಲೆಯಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪೋಸ್ಕೊ ಸ್ಥಾಪನೆ ಇಲ್ಲ ಎಂದು ಹೇಳಿದ್ದರು.
ಜುಲೈ 14ರಂದು ಈ ವಿಷಯವಾಗಿ ಡಾ. ತೋಂಟದ ಸಿದ್ಧಲಿಂಗ ಸ್ವಾಮೀಜಿ ಅವರಿಗೆ ಪತ್ರದ ಮೂಲಕ ತಿಳಿಸಿದ್ದರು. ಅಲ್ಲದೇ ಈಗಿನ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡರು ಸಹ ಮಾತನ್ನು ತಪ್ಪುವುದಿಲ್ಲ ಎಂದು ಹೇಳಿದ್ದರು. ಆದರೆ ಮತ್ತೆ ಪೋಸ್ಕೊವನ್ನು ವಾಪಸ್ ಕರೆತರುವ ಪ್ರಕ್ರಿಯೆಯನ್ನು ಪ್ರಾರಂಭಿಸುವ ಮೂಲಕ ಮುಖ್ಯಮಂತ್ರಿ ವಚನ ಭ್ರಷ್ಟರಾಗಿದ್ದಾರೆ ಎಂದು ಪಾಟೀಲ ಬಲವಾಗಿ ಆರೋಪಿಸಿದರು.
ಪೋಸ್ಕೊ ಸ್ಥಾಪನೆಯಾಗುವುದಿಲ್ಲ ಎಂದು ಹೇಳಿದ ನಂತರವೂ ಸರ್ಕಾರದ ಇಲಾಖೆಗಳು ಅದೇ ವಿಚಾರವಾಗಿ ಪತ್ರ ವ್ಯವಹಾರಗಳನ್ನು ನಡೆಸಿವೆ. ಇದರಲ್ಲಿ ಯಾರ ಹಿತಾಸಕ್ತಿ ಅಡಗಿದೆ ಎನ್ನುವುದು ಪ್ರಶ್ನೆಯಾಗಿದೆ. ಮುರುಗೇಶ ನಿರಾಣಿ ಎರಡು ಸಂಪುಟದಲ್ಲೂ ಕೈಗಾರಿಕಾ ಸಚಿವರಾಗಿಯೇ ಇದ್ದಾರೆ. ಇದರ ಹಿಂದೆ ಯಾವ ಉದ್ದೇಶವಿದೆ ಎಂಬುದು ಜನರಿಗೆ ಸ್ಪಷ್ಟವಾಗಿದೆ ಎಂದು ಮಾರ್ಮಿಕವಾಗಿ ನುಡಿದರು.
ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡರು ತಾವು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇ ಆದರೆ ಕೆಐಎಡಿಬಿ ಸಭೆಯಲ್ಲಿ ಪೋಸ್ಕೊ ನಿರ್ಣಯ ಅಂಗೀಕಾರವಾಗದಂತೆ ತಡೆಯುವ ಕೆಲಸವಾಗಬೇಕು. ಇಲ್ಲದಿದ್ದರೆ ಸರ್ಕಾರ `ಪೋಸ್ಕೊ ಏಜೆಂಟ್` ಎನ್ನುವ ಆರೋಪ ಸತ್ಯವಾಗುತ್ತದೆ. ಸ್ವಾಮೀಜಿಗಳಿಗೆ ಕೊಟ್ಟಿರುವ ಮಾತು ತಪ್ಪಿ ವಚನ ಭ್ರಷ್ಟರಾಗಬೇಕಾಗುತ್ತದೆ ಎಂದರು. ಒಂದು ವೇಳೆ ನಿರ್ಣಯ ಅಂಗೀಕಾರವಾದರೇ ಉಗ್ರವಾದ ಹೋರಾಟ ಕೈಗೊಳ್ಳಲಾಗುತ್ತದೆ ಎನ್ನುವ ಎಚ್ಚರಿಕೆಯನ್ನು ಇದೇ ಸಂದರ್ಭದಲ್ಲಿ ನೀಡಿದರು.
0 comments:
Post a Comment