ಬೆಂಗಳೂರು, ನ: ‘ಜೈಲುವಾಸದಿಂದ ಮುಕ್ತಿ ಹೊಂದುತ್ತೇನೆ’ ಎಂಬ ನಿರೀಕ್ಷೆಯಲ್ಲಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ, ಹೈಕೋರ್ಟ್ ಶುಕ್ರವಾರ ಶಾಕ್ ನೀಡಿದೆ. ಸಿರಾಜಿನ್ ಬಾಷಾ ದಾಖಲಿಸಿದ್ದ 2ನೆ ದೂರಿನ ಸಂಬಂಧ ಯಡಿ ಯೂರಪ್ಪನವರಿಗೆ ಗುರುವಾರ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದ್ದ ಹೈಕೋರ್ಟ್, 3ನೆ ದೂರಿನ ಸಂಬಂಧ ಜಾಮೀನು ಅರ್ಜಿಯ ತೀರ್ಪನ್ನು ಶುಕ್ರವಾರ ಪ್ರಕಟಿಸುವುದಾಗಿ ತಿಳಿಸಿತ್ತು.
ಆದರೆ, ಜಾಮೀನು ಅರ್ಜಿಯ ವಿಚಾರಣೆ ಯನ್ನು ನ.8ಕ್ಕೆ ಮುಂದೂಡಿ ಹೈಕೋರ್ಟ್ ಶುಕ್ರವಾರ ಆದೇಶಿ ಸಿತು. ಯಡಿಯೂರಪ್ಪರ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಬಿ.ವಿ.ಪಿಂಟೋ, ಡಿನೋಟಿಫಿಕೇಷನ್ ಆರೋಪದ ಕುರಿತು ದೂರುದಾರ ಬಾಷಾ ಸಲ್ಲಿಸಿರುವ ದಾಖಲಾತಿಗಳನ್ನು ಇನ್ನಷ್ಟು ಪರಿಶೀಲಿಸಬೇಕಾಗಿದೆ ಎಂದು ತಿಳಿಸಿ ವಿಚಾರಣೆ ಮುಂದೂಡಿದರು. ಇದರೊಂದಿಗೆ ಬಿಡುಗಡೆಯ ಕನಸು ಕಾಣುತ್ತಿದ್ದ ಯಡಿಯೂರಪ್ಪರಿಗೆ, ಹೈಕೋರ್ಟ್ ನಿರಾಸೆ ಮೂಡಿಸಿತಲ್ಲದೆ, ಶಾಸಕ ಕೃಷ್ಣಯ್ಯ ಶೆಟ್ಟಿಯ ಆಸೆಗೂ ತಣ್ಣೀರು ಎರಚಿದೆ. ಬೆಳವಣಿಗೆಯಿಂದ ಬಿಡುಗಡೆ ಭಾಗ್ಯಕ್ಕಾಗಿ ಯಡಿಯೂರಪ್ಪರ ಮಂಗಳವಾರದವರೆಗೂ ಕಾಯಬೇಕಾಗಿದೆ.
ಶುಕ್ರವಾರ 12.30ಕ್ಕೆ ಜಾಮೀನು ಅರ್ಜಿ ವಿಚಾರಣೆಯನ್ನು ನ್ಯಾಯಪೀಠ ಕೈಗೆತ್ತಿಕೊಂಡಾಗ ಬಾಷಾ ಪರ ವಕೀಲ ಆರ್.ನಿತಿನ್ ವಾದ ಮಂಡಿಸಿ, ಇದು ಸಾಮಾನ್ಯ ಪ್ರಕರಣವನಲ್ಲ. ಭಾರೀ ಅವ್ಯವಹಾರ ಮತ್ತು ಒಳಸಂಚಿನಿಂದ ಕೂಡಿದ ಗಂಭೀರ ಪ್ರಕರಣವಾಗಿದೆ. ಅಲ್ಲದೆ ಡಿನೋಟಿಫಿಕೇಷನ್ ಅವ್ಯವಹಾರದಲ್ಲಿ ಯಡಿಯೂರಪ್ಪ ಮತ್ತವರ ಪುತ್ರರು ಹಾಗೂ ಅಳಿಯ ನೇರವಾಗಿ ಭಾಗವಹಿಸಿದ್ದಾರೆ. ಡಿನೋಟಿಫೈ ಮಾಡಲಾದ ಜಮೀನನ್ನು ಅವರೇ ಖರೀದಿಸಿ, ಹೆಚ್ಚಿನ ಲಾಭಕ್ಕೆ ಮಾರಾಟ ಮಾಡುವ ಮೂಲಕ ಡಿನೋಟಿಕೇಷನ್‌ನ ಫಲಾನುಭವಿಗಳು ಕೂಡ ಅವರಾಗಿದ್ದಾರೆ ಎಂದು ಕೋರ್ಟ್ ಗಮನಕ್ಕೆ ತಂದರು.
ಪ್ರಕರಣದ ಸಂಬಂಧ ಸಾಕಷ್ಟು ದಾಖಲಾತಿಗಳಿದ್ದು, ಅವುಗಳನ್ನು ಪರಶೀಲನೆ ನಡೆಸಿದ ನಂತರವೇ ಜಾಮೀನು ಅರ್ಜಿ ತೀರ್ಪು ಹೊರಡಿಸಬೇಕು ಎಂದು ನ್ಯಾಯಮೂರ್ತಿಗಳಲ್ಲಿ ವಕೀಲ ನಿತಿನ್ ಮನವಿ ಮಾಡಿದರು. ಈ ಹಿನ್ನೆಲೆಯಲ್ಲಿ ನ್ಯಾ.ಬಿ.ವಿ.ಪಿಂಟೋ ಅವರು, ಪ್ರಕರಣದ ಕುರಿತಾದ ದಾಖಲಾತಿಗಳನ್ನು ಹಾಜರು ಪಡಿಸಿ, ಪರಿಶೀಲನೆ ನಡೆಸಿದ ಬಳಿಕ ವಿಚಾರಣೆ ನಡೆಸೋಣ ಎಂದು ತಿಳಿಸಿ, ವಿಚಾರಣೆಯನ್ನು ನ.8ಕ್ಕೆ ಮುಂದೂಡಿದರು. ಯಡಿಯೂರಪ್ಪರ ಅಭಿಮಾನಿಗಳ ದಂಡು: ನಮ್ಮ ನಾಯಕನಿಗೆ ಜಾಮೀನು ಮಂಜೂರಾಗುತ್ತದೆ ಎಂದು ಭಾರೀ ನೀರೀಕ್ಷೆಯೊಂದಿಗೆ ಯಡಿಯೂರಪ್ಪರ ಅಭಿಮಾನಿಗಳ ದಂಡು ಹೈಕೋರ್ಟ್‌ನಲ್ಲಿ ಶುಕ್ರವಾರ ಜಮಾಯಿಸಿತ್ತು. ಜಾಮೀನು ಸಿಕ್ಕೇ ಸಿಕ್ಕುವುದು ಎಂಬ ವಿಶ್ವಾಸದಲ್ಲಿದ್ದ ಅವರು, ವಿಚಾರಣೆ ಮುಂದೂಡಿದ್ದರಿಂದ ಭಾರಿ ನಿರಾಸೆಗೊಂಡು ನಿರ್ಗಮಿಸಿದರು
0 comments:
Post a Comment