ಬೆಳ್ತಂಗಡಿ: ವಿಶ್ವಗೋಳೀಕರಣದಿಂದಾಗಿ ಸಾಹಿತ್ಯಕ - ಸಾಂಸ್ಕೃತಿಕ ಬದುಕು ಹಿನ್ನೆಲೆಗೆ ಸರಿದು ಅರ್ಥ ಸಂಸ್ಕೃತಿ ಮುನ್ನೆಲೆಗೆ ಬರುತ್ತಿದೆ ಎಂದು ಮಂಗಳೂರು ಆಕಾಶವಾಣಿ ಮುಖ್ಯಸ್ಥ ಡಾ| ವಸಂತ ಕುಮಾರ್ ಪೆರ್ಲ ಹೇಳಿದ್ದಾರೆ.
ಅವರು ಮಂಗಳವಾರ ಉಜಿರೆಯಲ್ಲಿ ಕಲಾವೃಂದ ಉಡುಪಿ ಇವರು ರಾಜ್ಯೋತ್ಸವ ನಿಮಿತ್ತ ನಾಡಿನ ಖ್ಯಾತ ಸಾಹಿತಿ ಕೆ.ಟಿ. ಗಟ್ಟಿ ಅವರಿಗೆ ’ಸಾಹಿತ್ಯ ಸವ್ಯಸಾಚಿ - 2011' ಪ್ರಶಸ್ತಿ ನೀಡಿ ಸಮ್ಮಾನಿಸಿ ಮಾತನಾಡಿದರು.
ಹಿಂದೆ ಸಮಾಜದ ಆಗುಹೋಗುಗಳನ್ನು ಸಾಹಿತ್ಯ ವಲಯ ನಿಯಂತ್ರಿಸುತ್ತಾ ಇತ್ತು. ಆದರೆ ಇದೀಗ ಆರ್ಥ ವ್ಯವಸ್ಥೆಯೇ ಬದುಕನ್ನು ಆಳುತ್ತಿದೆ. ಭೌತಿಕ ಮತ್ತು ಉಪಭೋಗ ಸಂಸ್ಕೃತಿ ಯಿಂದಾಗಿ ಸಾಹಿತ್ಯ ಹಿಂದೆ ಬೀಳುತ್ತಾ ಇದೆ. ಕಥೆ, ಕಾದಂಬರಿ, ನಾಟಕ, ಕಾವ್ಯ, ಬಾನುಲಿ ರೂಪಕ, ಶಿಕ್ಷಣದ ಕ್ಷೇತ್ರಗಳಲ್ಲಿ ಕೈಯಾಡಿಸಿರುವ ಕೆ.ಟಿ. ಗಟ್ಟಿಯವರ ಸಾಹಿತ್ಯ ಕನ್ನಡ ಸಾರಸ್ವತ ಲೋಕದಲ್ಲಿ ಒಂದು ಮೈಲುಗಲ್ಲು ಎಂದರು.
ಸಮ್ಮಾನಕ್ಕೆ ಉತ್ತರಿಸಿದ ಕೆ.ಟಿ. ಗಟ್ಟಿಯವರು ನನಗೆ ಕನ್ನಡ ರಾಜ್ಯೋತ್ಸವದ ದಿನವಾದ ಇಂದು ಅರ್ಜಿ ಹಾಕದೆ ಅದೂ ಮನೆಗೆ ಅಯಾಚಿತವಾಗಿ ರಾಜ್ಯೋತ್ಸವ ಪ್ರಶಸ್ತಿ ಬಂದಂತಾಗಿದೆ. ಬರವಣಿಗೆಯಲ್ಲಿ ನಾನು ಕಂಡಿರುವುದು ಖುಷಿಯನ್ನೇ ಹೊರತು ಹಣ, ಪ್ರಶಸ್ತಿಗಳನ್ನಲ್ಲ. ಯಾವುದೇ ಭಯ ಇಲ್ಲದೇ ಇದ್ದುದರಿಂದಲೇ ನಾನು ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲೂ ಮುನ್ನುಗ್ಗಿದ್ದೇನೆ, ಮುನ್ನುಗ್ಗುತ್ತಿದ್ದೇನೆ. ಯಶಸ್ವಿಯೂ ಆಗಿದ್ದೇನೆ ಎಂದರು.
ಗಟ್ಟಿಯವರ ಮನೆ ವನಶ್ರೀಯಲ್ಲಿ ನಡೆದ ಈ ಸರಳ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಉಡುಪಿ ಎಂಜಿಎಂ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ| ಡಿ.ಆರ್. ಪಾಂಡುರಂಗ ಅವರು ಗಟ್ಟಿಯರನ್ನು ಕಲಾವೃಂದದ ಪರವಾಗಿ ಸಮ್ಮಾನಿಸಿದರು.
ವೇದಿಕೆಯಲ್ಲಿ ಗಟ್ಟಿಯವರ ಪತ್ನಿ ಯಶೋದಾ, ಕಲಾವೃಂದದ ಜತೆ ಕಾರ್ಯದರ್ಶಿ ಶ್ರೀಪತಿ ತಂತ್ರಿ, ರಾಘವೇಂದ್ರ ಭಟ್, ರಾಘಣ್ಣ ಇದ್ದರು.
ಕಲಾವೃಂದದ ಕಾರ್ಯದರ್ಶಿ ಪದ್ಮನಾಭ ಭಟ್ ನಿರ್ವಹಿಸಿ, ಅಂಶುಮಾಲಿ ಪ್ರಶಸ್ತಿ ಪತ್ರ ವಾಚಿಸಿದರು. ಅಧ್ಯಕ್ಷ ಕೆ. ವಿಠಲ ಭಟ್ ಸ್ವಾಗತಿಸಿದರು.
0 comments:
Post a Comment