PLEASE LOGIN TO KANNADANET.COM FOR REGULAR NEWS-UPDATES




ಬೆಂಗಳೂರು ನ. : ೧೧,೧೧,೧೧,೧೧,೧೧,೧೧..!

ಅಂದರೆ, ೧೧ನೇ ತಾರೀಖು, ೧೧ನೇ ತಿಂಗಳು, ೨೦೧೧ನೇ ವರ್ಷ, ೧೧ ಗಂಟೆ ೧೧ ನಿಮಿಷ ೧೧ ಸೆಕೆಂಡು. ಇದು ‘ಫ್ಯಾನ್ಸಿ’ ಪ್ರಿಯರ ಬಹು ನಿರೀಕ್ಷಿತ ಗಳಿಗೆ. ಅದಕ್ಕೆ ಬಾಕಿ ಉಳಿದಿರುವುದು ಇನ್ನು ಮೂರೇ ದಿನ.

ಇದೇ ಸಮಯಕ್ಕೆ ಹೆರಿಗೆ ಆಗಬೇಕು ಎಂಬುದು ಹಲವು ತಾಯಂದಿರ ಬಯಕೆಯಾದರೆ, ಇದೇ ವೇಳೆಗೆ ಹಸೆಮಣೆ ಏರಬೇಕು ಏನ್ನುವುದು ವಧು-ವರರ ಆಸೆ. ಅಂದು ಶುಭ ಶುಕ್ರವಾರವೂ ಹೌದು.

ಇತ್ತೀಚೆಗೆ ತಾಯಂದಿರು ಸಹಜ ಪ್ರಸವಕ್ಕೆ ಬದಲಾಗಿ ಸಿಜೇರಿಯನ್‌ಗೆ ಮೊರೆ ಹೋಗುತ್ತಿದ್ದಾರೆ. ಅಲ್ಲದೆ, ಜ್ಯೋತಿಷಿಗಳ ಸಲಹೆ ಮೇರೆಗೆ ಕಾಲ, ಸಮಯಗಳನ್ನು ನಿಗದಿಪಡಿಸಿ ಹೆರಿಗೆ ಮಾಡಿಸಿ ಕೊಳ್ಳುವ ಟ್ರೆಂಡ್ ಹೆಚ್ಚುತ್ತಿದೆ. ಇಂತಹ ಟ್ರೆಂಡ್‌ಗೆ ಈ ‘ಫ್ಯಾನ್ಸಿ ಡೇ’ ಡೆಲಿವರಿ ಹೊಸ ಸೇರ್ಪಡೆ. ೮ ತಿಂಗಳು ತುಂಬಿರುವ ಗರ್ಭಿಣಿಯರು ಸಿಜೇರಿಯನ್ ಪ್ರಸವದ ಮೂಲಕ ಈ ದಿನದಂದೇ ಮಗು ಪಡೆಯಲು ಸಿದ್ಧತೆ ನಡೆಸಿದ್ದಾರೆ.

ಇದಕ್ಕಾಗಿ ವೈದ್ಯರ ಮೇಲೆ ಒತ್ತಡ ಹೇರಲಾರಂಭಿಸಿದ್ದಾರೆ. ಅದರಲ್ಲೂ ಬಾಲಿವುಡ್ ನಟಿ ಐಶ್ವರ್ಯಾ ರೈ ಅದೇ ದಿನ ಮಗುವಿಗೆ ಜನ್ಮ ನೀಡಲಿದ್ದಾರೆ ಎಂಬ ವದಂತಿ ಹಬ್ಬುತ್ತಿದ್ದಂತೆ ಈ ಕ್ರೇಜ್ ಇನ್ನೂ ಹೆಚ್ಚಾಗಿದೆ.

ಈ ಹಿಂದೆ ೧.೧೧.೨೦೧೧ರಂದೂ ಇಂತಹದೇ ಟ್ರೆಂಡ್ ಸುದ್ದಿ ಮಾಡಿತ್ತು. ಹಲವು ದಂಪತಿ ಅಂದು ಮಗು ಪಡೆದಿದ್ದರು ಕೂಡ. ಈಗ ಮತ್ತೊಮ್ಮೆ ತಾಯಂದಿರು ಇಂತಹದೊಂದು ಕ್ರೇಜ್ ಹಿಂದೆ ಬಿದ್ದಿದ್ದಾರೆ. ಮುಂದೆಂದೂ ಸಿಗದ ಈ ಐತಿಹಾಸಿಕ ದಿನಾಂಕದಂದು ಮಗು ಪಡೆಯುವುದು ನಗರ ಪ್ರದೇಶಗಳಲ್ಲಿ ಫ್ಯಾಷನ್ ಆಗಿ ಬದಲಾಗಿದೆ.

ಈಗಾಗಲೇ ಅಲ್ಲಿಯ ಪ್ರಮುಖ ನರ್ಸಿಂಗ್ ಹೋಂಗಳಲ್ಲಿ ಬುಕಿಂಗ್ ಆರಂಭಗೊಂಡಿದೆ.

ನಿಗದಿತ ಅವಧಿಯ ಹೆರಿಗೆ ಸಾಧ್ಯವೇ?

ಫ್ಯಾನ್ಸಿ ಡೇ ಎಂಬ ಒಂದೇ ಕಾರಣಕ್ಕೆ ತಾಯಂದಿರು ತಾವು ಬಯಸಿದ ದಿನ, ಗಳಿಗೆಯಲ್ಲಿ ಮಗು ಹಡೆಯುವುದು ಸಾಧ್ಯವೇ? ಸಾಧ್ಯತೆಗಳಿವೆ ಎನ್ನುತ್ತಾರೆ ಪ್ರಸೂತಿ ತಜ್ಞರು.

ಮಗು ೮ನೇ ತಿಂಗಳು ಪೂರೈಸಿ ೯ನೇ ತಿಂಗಳಿಗೆ ಕಾಲಿಟ್ಟಿದ್ದು, ಕನಿಷ್ಠ ೨.೫ ಕೆಜಿ ತೂಕವಿದ್ದು, ಆರೋಗ್ಯವಾಗಿದ್ದಲ್ಲಿ ಇಂತಹ ಚಾನ್ಸ್ ತೆಗೆದುಕೊಳ್ಳಲು ಅವಕಾಶವಿದೆ. ಇಂತಹ ಪರಿಸ್ಥಿತಿಯಲ್ಲಿ ತಾಯಿ ಕೂಡ ರಕ್ತದೊತ್ತಡ, ಮಧುಮೇಹದಂತಹ ಕಾಯಿಲೆಗಳಿಂದ ಬಳಲುತ್ತಿರಬಾರದು. ತಾಯಿ-ಮಗು ಆರೋಗ್ಯವಾಗಿದ್ದಲ್ಲಿ ೧೫ ದಿನಗಳ ಕಾಲಾವಧಿಯಲ್ಲಿ ತಮ್ಮ ಪ್ರಸವದ ದಿನವನ್ನು ನಿಗದಿಪಡಿಸಿಕೊಳ್ಳಲು ಅವಕಾಶವಿದೆ ಎನ್ನುತ್ತಾರೆ ಆರ್ಯುವೇದ ತಜ್ಞೆ ಡಾ.ವಸುಂಧರಾ ಭೂಪತಿ.

ಬ್ಯುಸಿಯಾಗುವ ಆಪರೇಷನ್ ಥಿಯೇಟರ್‌ಗಳು: ಅಪರೂಪದ ದಿನದಂದೇ ತಮ್ಮ ಮಗುವಿನ ಜನ್ಮ ನೀಡಬೇಕು ಎಂಬ ಪೋಷಕರ ಹಪಾಹಪಿಗೆ ವೈದ್ಯರು ಸಾಥ್ ನೀಡುತ್ತಿದ್ದು, ೧೧.೧೧ರಂದು ಆಪರೇಷನ್ ಥಿಯೇಟರ್‌ಗಳು ಫುಲ್ ಆಗಲಿವೆ. ಕೆಲ ನರ್ಸಿಂಗ್ ಹೋಂಗಳಲ್ಲಂತೂ ಇತರ ಶಸ್ತ್ರಚಿಕಿತ್ಸೆಗಳನ್ನು ಮುಂದೂಡಿ, ಆಪರೇಷನ್ ಥಿಯೇಟರ್‌ಗಳನ್ನು ಕೇವಲ ಸಿಜೇರಿಯನ್‌ಗಾಗಿ ಮೀಸಲಿಡಲಿವೆ.

ವಿವಾಹಕ್ಕೂ ಅದೇ ದಿನ: ಈ ನಂಬರ್ ಗೇಮ್ ಕೇವಲ ಪ್ರಸವಕ್ಕೆ ಮಾತ್ರ ಸೀಮಿತವಾಗಿಲ್ಲ. ಅನೇಕರು ಈ ದಿನದಲ್ಲೇ ವೈವಾಹಿಕ ಬಂಧನಕ್ಕೆ ಸಿಲುಕುವ ಮೂಲಕ ಹಸೆಮಣೆ ಏರುವ ಗಳಿಗೆಯನ್ನು ಸ್ಮರಣೀಯವಾಗಿಸಲು ಮುಂದಾಗಿದ್ದಾರೆ. ನಗರದ ಬಸವೇಶ್ವರ ನಗರದ ಡಿಟಿಪಿ ಅಂಗಡಿಯೊಂದರಲ್ಲೇ ೧೧.೧೧ಕ್ಕೆ ನಾಲ್ಕು ವಿವಾಹದ ಪತ್ರಿಕೆ ಮುದ್ರಣಗೊಂಡಿದೆ. ಜ್ಯೋತಿಷ್ಯ, ಜಾತಕ, ಶಾಸ್ತ್ರಗಳಲ್ಲಿ ನಂಬಿಕೆಯಿಲ್ಲದವರೂ ಅಂದು ವಿವಾಹ ನಿಶ್ಚಯಿಸಿದ್ದಾರೆ.

ವೈದ್ಯರು ಹಣೆಬರಹ ಬರೆಯುತ್ತಾರೆಯೇ?

ಸಿಜೇರಿಯನ್‌ಗೆ ಮುಂದಾಗುವವರು ಸಾಮಾನ್ಯವಾಗಿ ಜ್ಯೋತಿಷಿ ಇಲ್ಲವೇ ಶುಭ ಗಳಿಗೆ ಹಿಂದೆ ಬೀಳುತ್ತಾರೆ. ಪ್ರಸೂತಿ ತಜ್ಞೆಯೊಬ್ಬರು ಹೇಳುವಂತೆ ಮಧ್ಯರಾತ್ರಿ ಹಾಗೂ ಮುಂಜಾನೆ ವೇಳೆ ಕೂಡ ಅವರು ಸಿಜೇರಿಯನ್‌ನ್ನು ಮಾಡಿದ್ದುಂಟು. ಒಳ್ಳೆ ಗಳಿಗೆಯಲ್ಲಿ ಮಗು ಹುಟ್ಟಿದರೆ ಅವರ ಬಾಳು ಸುಂದರವಾಗಿರುತ್ತದೆ ಎಂಬುದು ಪೋಷಕರ ನಂಬಿಕೆ.

Advertisement

0 comments:

Post a Comment

 
Top