ಕೊಪ್ಪಳ : ಮುಖ್ಯಮಂತ್ರಿಗಳಾದ ಡಿ.ವಿ. ಸದಾನಂದಗೌಡ ಅವರು ಅ. ೨೯ ರಂದು ಕೊಪ್ಪಳ ತಾಲೂಕಿನ ಡಂಬ್ರಳ್ಳಿ ಗ್ರಾಮಕ್ಕೆ ಭೇಟಿ ನೀಡಿ, ಸಾವಯವ ಕೃಷಿ ಅಳವಡಿಸಿ ಯಶಸ್ವಿಯಾಗಿರುವ ರೈತ ದಂಪತಿಗಳಾದ ಪವಿತ್ರ ಆನಂದರಡ್ಡಿ ಹಾಗೂ ಆನಂದರಡ್ಡಿ ಇಮ್ಮಡಿ ಅವರ ಮನೆಗೆ ಭೇಟಿ ನೀಡುವ ಹಾಗೂ ಅದೇ ಗ್ರಾಮದಲ್ಲಿ ಸಾವಯವ ಕೃಷಿಕರೊಂದಿಗಿನ ಸಂವಾದದಲ್ಲಿ ಭಾಗವಹಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದರಿಂದ ಇಡೀ ಡಂಬ್ರಳ್ಳಿ ಗ್ರಾಮದ ಜನತೆಯಲ್ಲಿ ಸಂಭ್ರಮ ಇಮ್ಮಡಿಗೊಂಡಿದೆ.
ಸಾವಯವ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡು, ಕಡಿಮೆ ಬಂಡವಾಳದಿಂದ ಹೆಚ್ಚಿನ ಲಾಭ ಪಡೆಯಬಹುದು ಎಂಬುದನ್ನು ತೋರಿಸಿಕೊಟ್ಟು, ಇಡೀ ರೈತ ಬಂಧುಗಳಿಗೆ ಮಾದರಿ ರೈತನಾಗಿ ಗುರುತಿಸಿಕೊಂಡ ಕೊಪ್ಪಳ ತಾಲೂಕಿನ ಡಂಬ್ರಳ್ಳಿ ಗ್ರಾಮದ ರೈತ ದಂಪತಿಗಳಾದ ಪವಿತ್ರ ರಡ್ಡಿ ಆನಂದರಡ್ಡಿ ಕರಕರಡ್ಡಿ ಇಮ್ಮಡಿ ಅವರ ಸಾವಯವ ಕೃಷಿ ಪ್ರೀತಿ, ಅ. ೨೯ ರಂದು ರಾಜ್ಯದ ಮುಖ್ಯಮಂತ್ರಿಗಳೇ ಆ ಗ್ರಾಮಕ್ಕೆ ಭೇಟಿ ನೀಡಲು ಪ್ರಮುಖ ಕಾರಣವಾಗಿದೆ. ಈ ರೈತ ದಂಪತಿಗಳ ಸಾಧನೆ, ಇತರೆ ರೈತರಿಗೆ ಮಾದರಿಯಾಗಬೇಕು, ಸಾವಯವ ಕೃಷಿಯ ಮಹತ್ವವನ್ನು ಇತರೆ ರೈತ ಬಂಧುಗಳು ಅರಿತು, ಹೆಚ್ಚು, ಹೆಚ್ಚು ರೈತರು ಸಾವಯವ ಕೃಷಿಯಲ್ಲಿ ತೊಡಗಬೇಕು ಎನ್ನುವುದೇ ಮುಖ್ಯಮಂತ್ರಿಗಳ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ.
ಸ್ವಯಂ ಮುಖ್ಯಮಂತ್ರಿಗಳೇ ತಮ್ಮ ಗ್ರಾಮಕ್ಕೆ ಆಗಮಿಸಿ, ಗ್ರಾಮದ ರೈತ ಕುಟುಂಬದ ಮನೆಗೆ ಭೇಟಿ ನೀಡಲಿದ್ದಾರೆ ಎಂಬುದು ಈ ಗ್ರಾಮಸ್ಥರಲ್ಲಿ ಸಂಭ್ರಮ ಮನೆಮಾಡಲು ಕಾರಣವಾಗಿದೆ. ಇಡೀ ಗ್ರಾಮವೇ ನವ ವಧುವಿನಂತೆ ಸಿಂಗಾರಗೊಳ್ಳುತ್ತಿದ್ದು, ಗ್ರಾಮದ ಎಲ್ಲ ರಸ್ತೆಗಳು, ಚರಂಡಿಗಳು ದುರಸ್ತಿಗೊಳ್ಳುತ್ತಿವೆ. ಕೊಪ್ಪಳದಿಂದ ಡಂಬ್ರಳ್ಳಿಗೆ ಸಂಪರ್ಕಿಸುವ ರಸ್ತೆಗಳು ಸಹ ಅಭಿವೃದ್ಧಿಗೊಳ್ಳುತ್ತಿದ್ದು, ಡಂಬ್ರಳ್ಳಿ ಗ್ರಾಮದ ಎಲ್ಲ ಗ್ರಾಮಸ್ಥರಲ್ಲ ಬಾಯಲ್ಲೂ ಮುಖ್ಯಮಂತ್ರಿಗಳ ಭೇಟಿ ಕುರಿತ ಮಾತುಗಳೇ ಕೇಳಿಬರುತ್ತಿವೆ. ರೈತ ದಂಪತಿಗಳಾದ ಪವಿತ್ರ ಆನಂದರಡ್ಡಿ ಇಮ್ಮಡಿ ಅವರ ಮನೆಯಲ್ಲಂತೂ ಸಂಭ್ರಮ ಮನೆಮಾಡಿದ್ದು, ಮನೆಗೆ ಆಗಮಿಸುವ ಮುಖ್ಯಮಂತ್ರಿಗಳ ವಿಶೇಷ ಆತಿಥ್ಯಕ್ಕಾಗಿ ಮನೆಯನ್ನು ಸಜ್ಜುಗೊಳಿಸುವುದು, ಮುಖ್ಯಮಂತ್ರಿಗಳ ಭೋಜನ ವ್ಯವಸ್ಥೆಗಾಗಿ ಈ ಭಾಗದ ಬಗೆ ಬಗೆಯ ಭಕ್ಷ್ಯಗಳ ಅಡುಗೆಯನ್ನು ತಯಾರಿಸಲು ಸಿದ್ಧತೆ ನಡೆಸುತ್ತಿರುವುದು, ಮನೆ ಮಂದಿಯಲ್ಲ ಸಂಭ್ರಮದಿಂದ ಮನೆಯನ್ನು ಅಲಂಕಾರಗೊಳಿಸುತ್ತಿರುವುದು ಕಂಡುಬಂದಿತು. ಒಂದು ಸಾವಿರಕ್ಕೂ ಕಡಿಮೆ ಜನಸಂಖ್ಯೆ ಹೊಂದಿರುವ ಡಂಬ್ರಳ್ಳಿ ಗ್ರಾಮದ ಪ್ರತಿ ಮನೆ, ಮನೆಯಲ್ಲೂ ಹಬ್ಬದ ವಾತಾವರಣ ಕಂಡುಬರುತ್ತಿದ್ದು, ಎಲ್ಲ ಗ್ರಾಮಸ್ಥರು ಮುಖ್ಯಮಂತ್ರಿಗಳ ಕಾರ್ಯಕ್ರಮಕ್ಕೆ ಜಿಲ್ಲಾಡಳಿತದೊಂದಿಗೆ ಸಹಕರಿಸುತ್ತಿದ್ದಾರೆ. ಇನ್ನು ಗ್ರಾಮದ ಹೊರವಲಯದಲ್ಲಿ ಬೃಹತ್ ವೇದಿಕೆ ಸಿದ್ಧಗೊಳ್ಳುತ್ತಿದ್ದು, ಮುಖ್ಯಮಂತ್ರಿಗಳ ಕಾರ್ಯಕ್ರಮದ ಮುನ್ನಾ ದಿನದಂದು ವೇದಿಕೆ ನಿರ್ಮಾಣ ಕಾರ್ಯಕ್ಕೆ ಕೆಲಸಗಾರರು ಅಂತಿಮ ರೂಪ ನೀಡುತ್ತಿದ್ದರು. ಕೊಪ್ಪಳ ವಿಧಾನಸಭೆ ಉಪಚುನಾವಣೆಯ ನಂತರ ಇದೇ ಪ್ರಥಮ ಬಾರಿಗೆ ಮುಖ್ಯಮಂತ್ರಿಗಳು ಕೊಪ್ಪಳ ಜಿಲ್ಲೆಗೆ ಆಗಮಿಸುತ್ತಿರುವುದರಿಂದ, ಕೊಪ್ಪಳ ಶಾಸಕ ಸಂಗಣ್ಣ ಕರಡಿ ಅವರು ಇಡೀ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಗೊಳಿಸಬೇಕು ಎಂದು ಎಲ್ಲಾ ಸಿದ್ಧತೆಗಳನ್ನು ಮುಂದೆ ನಿಂತು, ಜವಾಬ್ದಾರಿಯಿಂದ ಮಾಡಿಸುತ್ತಿರುವುದು ಕಂಡು ಬಂದಿತು. ಇನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮಣ ಎಸ್ ಸವದಿ ಅವರು ಕಾರ್ಯಕ್ರಮದ ಸಿದ್ಧತೆಯ ಕುರಿತು ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಲಲಿತಾರಾಣಿ ಶ್ರೀರಂಗದೇವರಾಯಲು, ಶಾಸಕರು (ವಿಧಾನಪರಿಷತ್) ಹಾಲಪ್ಪ ಆಚಾರ್, ಸೇರಿದಂತೆ ಅನೇಕ ಗಣ್ಯರು ಅ. ೨೮ ಶುಕ್ರವಾರದಂದು ಡಂಬ್ರಳ್ಳಿ ಗ್ರಾಮಕ್ಕೆ ಭೇಟಿ ನೀಡಿ, ಸಕಲ ಸಿದ್ದತೆಗಳ ಬಗ್ಗೆ ಸ್ಥಳ ಪರಿಶೀಲನೆ ನಡೆಸಿದರು. ಒಟ್ಟಾರೆಯಾಗಿ ಅ. ೨೯ ರಂದು ಡಂಬ್ರಳ್ಳಿಯಲ್ಲಿ ಸಾವಯವ ಕೃಷಿಕರ ಮನೆಯಂಗಳದಲ್ಲಿ ನಡೆಯುವ ರೈತರೊಂದಿಗಿನ ಸಂವಾದ ಕಾರ್ಯಕ್ರಮ ರೈತ ಬಾಂಧವರಲ್ಲಿ ಸಾವಯವ ಕೃಷಿಗೆ ಉತ್ತೇಜನ ದೊರೆಯುವಂತಾಗಲಿ, ರೈತರ ಸಮಸ್ಯೆಗಳಿಗೆ ಪರಿಹಾರ ದೊರೆಯುವಂತಾಗಲಿ ಎಂಬುದೇ ಸರ್ಕಾರದ ಆಶಯವಾಗಿದೆ ಎನ್ನುತ್ತಾರೆ ಕೊಪ್ಪಳ ಶಾಸಕ ಸಂಗಣ್ಣ ಕರಡಿ ಅವರು.
ಈ ಸಂದರ್ಭದಲ್ಲಿ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಲಲಿತಾರಾಣಿ ಶ್ರೀರಂಗದೇವರಾಯಲು, ಶಾಸಕ (ವಿಧಾನಪರಿಷತ್) ಹಾಲಪ್ಪ ಆಚಾರ್, ಕೊಪ್ಪಳ ನಗರಸಭೆ ಅಧ್ಯಕ್ಷ ಸುರೇಶ್ ದೇಸಾಯಿ, ಗಣ್ಯರಾದ ಪ್ರಸನ್ನ ಗಡಾದ, ಹನುಮಂತಪ್ಪ ಅಂಗಡಿ, ಅಂದಾನಪ್ಪ ಅಗಡಿ, ಸೇರಿದಂತೆ ಜಂಟಿಕೃಷಿ ನಿರ್ದೇಶಕ ಬಾಲರೆಡ್ಡಿ, ಕೊಪ್ಪಳ ಸಹಾಯಕ ಕೃಷಿ ನಿರ್ದೇಶಕರಾದ ಮಂಜುಳಾ, ಡಂಬ್ರಳ್ಳಿ ಗ್ರಾಮದ ಮುಖಂಡರು, ಗ್ರಾಮಸ್ಥರು ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
0 comments:
Post a Comment