ಕೊಪ್ಪಳ : ಕೊಪ್ಪಳ ಜಿಲ್ಲೆ ಗಂಗಾವತಿಯಲ್ಲಿ ಬರುವ ನವೆಂಬರ್ ತಿಂಗಳಿನಲ್ಲಿ ನಡೆಯುವ ಅಖಿಲಭಾರತ ೭೮ನೇ ಕನ್ನಡ ಸಾಹಿತ್ಯ ಸಮ್ಮೆಳನದ ಅದ್ಧೂರಿ ಯಶಸ್ಸಿಗೆ ಶಿಕ್ಷಕರು ವಿಶ್ವಾಸಭರಿತರಾಗಿ ದುಡಿಯುತ್ತೇವೆ ಎಂದು ರಾಷ್ಟ್ರಪ್ರಶಸ್ತಿ ಪುರಷ್ಕೃತ ಶಿಕ್ಷಕ ಮತ್ತು ನೋಂದಣಿ ಸಮಿತಿ ಅಧ್ಯಕ್ಷ ಮಲ್ಲನಗೌಡ ಗೌಡರ ಹೇಳಿದರು.
ಗಂಗಾವತಿ ನಗರದ ಎ.ಪಿ.ಎಂ.ಸಿ ಆವರಣದಲ್ಲಿರುವ ಕ.ಸಾ.ಪ ಸ್ವಾಗತ ಸಮಿತಿ ಕಛೇರಿಯಲ್ಲಿ ಏರ್ಪಡಿಸಲಾಗಿದ್ದ ನೋಂದಣಿ ಸಮಿತಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ತಾಲೂಕಾ ಕೇಂದ್ರಕ್ಕೆ ಅಖಿಲಭಾರತ ಮಟ್ಟದ ಸಮ್ಮೇಳನ ದೊರೆತಿರುವುದು ನಮ್ಮೆಲ್ಲರ ಭಾಗ್ಯವೇ ಸರಿ. ಈ ಸಮ್ಮೇಳನದ ಯಶಸ್ಸಿಗೆ ಸರ್ವರೂ ಕೈ ಜೋಡಿಸಿ ಕನ್ನಡಮ್ಮನ ತೇರು ಎಳೆಯಲು ಸಜ್ಜಾಗೋಣ, ದೂರದ ಜಿಲ್ಲೆಗಳ ಪ್ರತಿನಿಧಿಗಳ ನೋಂದಾವಣೆಗೆ ಒಂದು ಕೌಂಟರ್ ಮಾಡಲಾಗುವುದು, ಸಮೀಪದ ಜಿಲ್ಲೆಗಳಿಗೆ ಎರಡು ಕೌಂಟರ್ ಮಾಡಲಾಗುವುದು. ಕೊಪ್ಪಳ ಜಿಲ್ಲೆ ಹೊರತುಪಡಿಸಿ ಉಳಿದ ಜಿಲ್ಲೆಯ ಶಿಕ್ಷಕರು ಸೇರಿದಂತೆ ಸಮ್ಮೇಳನದಲ್ಲಿ ಪಾಲ್ಗೊಳ್ಳುವ ಪ್ರತಿನಿಧಿಗಳಿಗೆ ಹಾಜರಾತಿ ಹಾಗೂ ಅನ್ಯಕಾರ್ಯನಿಮಿತ್ಯ ಪ್ರಮಾಣ ಪತ್ರವನ್ನು ನೋಂದಣಿ ಸಮಯದಲ್ಲಿಯೇ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಶಿಕ್ಷಕರುಗಳಾದ ಲಿಂಗಾರೆಡ್ಡಿ, ಶಿವಪ್ರಸಾದ, ರೇವಣಸಿದ್ಧಪ್ಪ, ನಾಗಪ್ಪ ಬಡಿಗೇರ, ಚಿದಾನಂದಪ್ಪ ಮೇಟಿ ಇನ್ನಿತರರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಸ್ವಾಗತ ಸಮಿತಿ ಪ್ರಧಾನಕಾರ್ಯದರ್ಶಿ ಹಾಗೂ ಜಿಲ್ಲಾ ಕ.ಸಾ.ಪ ಅಧ್ಯಕ್ಷ ಶೇಖರಗೌಡ ಮಾಲಿಪಾಟೀಲ, ಜಿಲ್ಲಾ ಕ.ಸಾ.ಪ ಗೌರವಕಾರ್ಯದರ್ಶಿ ಎಸ್.ಬಿ.ಗೊಂಡಬಾಳ, ತಾಲೂಕಾ ಕ.ಸಾ.ಪ ಅಧ್ಯಕ್ಷ ಬಸವರಾಜ ಕೋಟಿ, ತಾಲೂಕಾ ಗೌರವಕಾರ್ಯದರ್ಶಿ ಬಸವರೆಡ್ಡಿ ಆಡೂರ ಉಪಸ್ಥಿತರಿದ್ದರು.
ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸರ್ವರೂ ಬನ್ನಿ : ಸಿಂಗನಾಳ
ಕೊಪ್ಪಳ ಅ. : ಅಖಿಲ ಭಾರತ ೭೮ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕನ್ನಡ ತಾಯಿ ಭುವನೇಶ್ವರಿಯ ತೇರು ಎಳೆಯಲು ಸರ್ವರೂ ಬನ್ನಿ ಎಂದು ವಾಣಿಜ್ಯೋದ್ಯಮಿ ಹಾಗೂ ಸಮ್ಮೇಳನದ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಸಮಿತಿಯ ಅಧ್ಯಕ್ಷ ಸುರೇಶ ಸಿಂಗನಾಳ ಹೇಳಿದರು.
ಗಂಗಾವತಿಯ ಎ.ಪಿ.ಎಂ.ಸಿ ಆವರಣದಲ್ಲಿರುವ ಸ್ವಾಗತ ಸಮಿತಿಯ ಕಾರ್ಯಾಲಯದಲ್ಲಿ ನಡೆದ ಪುಸ್ತಕ ಪ್ರದರ್ಶನ ಹಾಗೂ ಮಾರಾಟ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸುವ ಪುಸ್ತಕ ಪ್ರದರ್ಶನ ಮಾರಾಟಗಾರರಿಗಾಗಿ ಸುಮಾರು ೪೦೦ ಮಳಿಗೆಗಳನ್ನು ನಿರ್ಮಿಸಿ ಒದಗಿಸಲಾಗುವುದು, ಅಲ್ಲದೆ ಅಂತಹವರಿಗೆ ಅಗತ್ಯ ಸೌಕರ್ಯಗಳನ್ನು ಕಲ್ಪಿಸಲಾಗುವುದು. ಪುಸ್ತಕ ಪ್ರದರ್ಶನ ಹಾಗೂ ಮಾರಾಟ ಮಳಿಗೆ ತೆಗೆದುಕೊಳ್ಳುವಂತಹವರು ಕೇಂದ್ರ ಕನ್ನಡ ಸಾಹಿತ್ಯ ಸಮಿತಿ ಬೆಂಗಳೂರು ಮತ್ತು ಸಮ್ಮೇಳನ ಸ್ವಾಗತ ಸಮಿತಿ ಕಛೇರಿ ಗಂಗಾವತಿಯಲ್ಲಿ ನೋಂದಾಯಿಸಿಕೊಳ್ಳಬೇಕು. ಪುಸ್ತಕ ಪ್ರದರ್ಶನ ಹಾಗೂ ಮಾರಾಟ ಮಾಡುವವರು ರೂ. ೧೫೦೦/-ಗಳನ್ನು ಸ್ವಾಗತ ಸಮಿತಿ ಕಛೇರಿಯಲ್ಲಿ ಪಾವತಿಸಿ ಮಳಿಗೆಗಳಿಗಾಗಿ ಅ. ೩೧ ರೊಳಗಾಗಿ ನೋಂದಾಯಿಸಿಕೊಳ್ಳಬೇಕು ಎಂದರು.
ಸಮಿತಿಯ ಕಾರ್ಯದರ್ಶಿ ಹಾಗೂ ಪತ್ರಕರ್ತ ಕೆ.ನಿಂಗಜ್ಜ ಮಾತನಾಡಿ ಸ್ವಾಗತ ಮತ್ತು ವಿಚಾರಣಾ ಕೇಂದ್ರದಲ್ಲಿ ಸೂಕ್ತ ಮಾಹಿತಿ ಒದಗಿಸಲು ಕ್ರಮ ಕೈಗೊಳ್ಳಲಾಗುವುದು, ಮೊದಲ ೩೦ ಮಳಿಗೆಗಳನ್ನು ಸರ್ಕಾರಿ ಇಲಾಖೆಗಳಿಗೆ ಮೀಸಲಿಡಲಾಗುವುದು ಎಂದರು.
ಅಖಿಲ ಭಾರತ ೭೮ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಗೊಳಿಸಲು ಜಿಲ್ಲೆಯ ಎಲ್ಲಾ ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಶೇಖರಗೌಡ ಮಾಲಿಪಾಟೀಲ್ ಅವರು ಮಾತನಾಡಿ, ಸಾಹಿತ್ಯಾಸಕ್ತರು, ಸಾಹಿತ್ಯ ಪ್ರೇಮಿಗಳು ಸಕ್ರಿಯವಾಗಿ, ಸ್ವಯಂ ಪ್ರೇರಿತರಾಗಿ ಪಾಲ್ಗೊಳ್ಳಬೇಕು. ಈಗಾಗಲೇ ೩೦ಕ್ಕೂ ಹೆಚ್ಚು ಉಪಸಮಿತಿಗಳನ್ನು ರಚಿಸಲಾಗಿದೆ. ಎಲ್ಲಾ ಸಮಿತಿಯ ಕಾರ್ಯ ಭರದಿಂದ ಸಾಗಿದ್ದು, ಆಯಾ ಸಮಿತಿಯಲ್ಲಿ ಕಾರ್ಯನಿರ್ವಹಿಸಲು ಇಚ್ಛಿಸುವವರು ಸ್ವಾಗತ ಸಮಿತಿಯ ಕಛೇರಿಯಲ್ಲಿ ಭಾವಚಿತ್ರ ನೀಡಿ ಹೆಸರು ನೋಂದಾಯಿಸಿಕೊಳ್ಳಬಹುದು. ಸಮ್ಮೇಳನದ ಯಶಸ್ಸಿಗೆ ತನು, ಮನ, ಧನದಿಂದ ಸಹಕರಿಸಿ ಎಲ್ಲರೂ ಸೇರಿ ಮಾದರಿ ಸಮ್ಮೇಳನವನ್ನಾಗಿಸೋಣ ಎಂದರು.
ಈ ಸಂದರ್ಭದಲ್ಲಿ ಚನ್ನಬಸವ ಸುಂಕದ ಕಾರಟಗಿ, ಸ್ವಾಗತ ಸಮಿತಿ ಜಿಲ್ಲಾ ಕ.ಸಾ.ಪ ಗೌರವಕಾರ್ಯದರ್ಶಿ ಎಸ್.ಬಿ.ಗೊಂಡಬಾಳ, ತಾಲೂಕಾ ಕ.ಸಾ.ಪ ಅಧ್ಯಕ್ಷ ಬಸವರಾಜ ಕೋಟಿ, ತಾಲೂಕಾ ಕ.ಸಾ.ಪ ಗೌರವ ಕಾರ್ಯದರ್ಶಿ ಬಸವರೆಡ್ಡಿ ಆಡೂರ ಮತ್ತಿತರರು ಉಪಸ್ಥಿತರಿದ್ದರು.
ಸಮ್ಮೇಳನದ ಯಶಸ್ಸಿಗೆ ಪೋಲೀಸ್ ಇಲಾಖೆ ಸನ್ನದ್ಧ : ಡಿ.ಎಲ್. ಹಣಗಿ
ಕೊಪ್ಪಳ ): ಅಖಿಲ ಭಾರತ ೭೮ನೇ ಕನ್ನಡ ಸಾಹಿತ್ಯ ಸಮ್ಮೇಳನ ಅಚ್ಚುಕಟ್ಟಾಗಿ ನೆರವೇರಲು ಹಾಗೂ ಶಾಂತಿ, ಸುವ್ಯವಸ್ಥೆಯಿಂದ ಜರುಗಿಸಲು ಅಗತ್ಯವಾಗಿರುವ ಭದ್ರತಾ ವ್ಯವಸ್ಥೆ ಕೈಗೊಳ್ಳಲು ಪೋಲೀಸ್ ಇಲಾಖೆ ಸನ್ನದ್ಧವಾಗಿದೆ ಎಂದು ಡಿ.ವೈ.ಎಸ್.ಪಿ. ಡಿ.ಎಲ್. ಹಣಗಿ ಹೇಳಿದರು.
ಗಂಗಾವತಿ ನಗರದ ಎ.ಪಿ.ಎಂ.ಸಿ ಆವರಣದಲ್ಲಿರುವ ಸ್ವಾಗತ ಸಮಿತಿ ಕಾರ್ಯಾಲಯದಲ್ಲಿ ನಡೆದ ಭದ್ರತಾ ಸಮಿತಿ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಈಗಾಗಲೇ ಸಮ್ಮೇಳನದ ಸಲುವಾಗಿ ಹಲವಾರು ಉಪಸಮಿತಿಗಳ ಸಭೆ ನಡೆದಿದೆ, ಸಮ್ಮೇಳನದಲ್ಲಿ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಹಾಗೂ ಸಮ್ಮೇಳನ ಶಾಂತಿ ಸುವ್ಯವಸ್ಥೆಯಿಂದ ಜರುಗಲು ಅನುಕೂಲವಾಗುವಂತೆ ಭದ್ರತಾ ದೃಷ್ಟಿಯಿಂದ ಹಲವು ನಿರ್ಧಾರಗಳನ್ನು ಕೈಗೊಳ್ಳಲಾಗಿದ್ದು, ಡಿ.ವೈ.ಎಸ್.ಪಿ, ಸಿ.ಪಿ.ಐ, ಎ.ಎಸ್.ಐ, ಪಿ.ಎಸ್.ಐ, ಎ.ಎಸ್.ಐ ಸೇರಿ ಶ್ರೇಣಿಯ ೬೦೦ ಜನ ಪೋಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುವುದು. ಮುಂದಿನ ಸಭೆಯಲ್ಲಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳ ಮಾರ್ಗದರ್ಶನದಡಿ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದು ಎಂದರು. ಸಭೆಯು ಪ್ರಧಾನವೇದಿಕೆ, ಎರಡು ಸಮಾನಂತರ ವೇದಿಕೆಗಳು, ಮಾಧ್ಯಮ ಕೇಂದ್ರ, ಮೆರವಣಿಗೆ, ಊಟದ ಕೇಂದ್ರ, ನೋಂದಣಿ ಕೇಂದ್ರ, ಮಹಿಳೆಯರ ವಸತಿ ಇರುವ ಕೇಂದ್ರಗಳು, ವಾಹನ ನಿಲುಗಡೆ ಸ್ಥಳಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವ ಸ್ಥಳಗಳಲ್ಲಿ ಪೋಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಶೇಖರಗೌಡ ಮಾಲಿಪಾಟೀಲ, ನಗರ ಪೋಲೀಸ್ ಠಾಣಾ ಪಿ.ಐ ಶಿವಕುಮಾರ್ ಎಸ್. ಗ್ರಾಮೀಣ ಪೋಲೀಸ್ ಠಾಣಾ ಸಿ.ಪಿ.ಐ ರುದ್ರಪ್ಪ ಉಜ್ಜನಕೊಪ್ಪ, ಜಿಲ್ಲಾ ಕ.ಸಾ.ಪ ಗೌರವ ಕಾರ್ಯದರ್ಶಿ ಎಸ್.ಬಿ ಗೊಂಡಬಾಳ, ತಾಲೂಕ ಕ.ಸಾ.ಪ ಅಧ್ಯಕ್ಷ ಬಸವರಾಜ ಕೋಟಿ ಹಾಗೂ ನಗರ ಸಂಚಾರಿ ಪೋಲೀಸ್ ಠಾಣಾ ಪಿ.ಎಸ್.ಐ ಪಾಟೀಲ್ ಉಪಸ್ಥಿತರಿದ್ದರು.
0 comments:
Post a Comment