PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ ಅ. : ಕೊಪ್ಪಳ ತಾಲೂಕು ಡೊಂಬರಳ್ಳಿ ಗ್ರಾಮಕ್ಕೆ ಅ. ೨೯ ರಂದು ಮುಖ್ಯಮಂತ್ರಿಗಳಾದ ಡಿ.ವಿ. ಸದಾನಂದಗೌಡ ಅವರು ಆಗಮಿಸಿ, ಸಾವಯವ ಕೃಷಿಕರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸುವ ಕಾರ್ಯಕ್ರಮ ಇರುವುದರಿಂದ, ಇದಕ್ಕಾಗಿ ಗ್ರಾಮದಲ್ಲಿ ನಿರ್ಮಿಸಲಾಗುತ್ತಿರುವ ಭವ್ಯ ವೇದಿಕೆ ಸ್ಥಳಕ್ಕೆ ಶಾಸಕ ಸಂಗಣ್ಣ ಕರಡಿ ಅವರು ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
  ಡೊಂಬರಳ್ಳಿ ಗ್ರಾಮದಲ್ಲಿ ಗ್ರಾಮಸ್ಥರೊಂದಿಗೆ ಸಭೆ ನಡೆಸಿದ ಸಂಗಣ್ಣ ಕರಡಿ ಅವರು, ಅ. ೨೯ ರಂದು ಮುಖ್ಯಮಂತ್ರಿಗಳ ಕಾರ್ಯಕ್ರಮ ಅತ್ಯಂತ ವ್ಯವಸ್ಥಿತವಾಗಿ ಜರುಗಬೇಕು, ಈ ಹಿಂದಿನಿಂದಲೂ ಗ್ರಾಮದ ಜನತೆ ಶಿಸ್ತುಬದ್ಧತೆಗೆ ಹೆಚ್ಚು ಒತ್ತು ನೀಡಿದ್ದು, ತಾಲೂಕಿನಲ್ಲಿ ನಡೆಯುವ ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆಸುವ ಮೂಲಕ ಮಾದರಿ ಗ್ರಾಮವಾಗಬೇಕು ಎಂದು ಮನವಿ ಮಾಡಿದರು.  ಈ ಗ್ರಾಮದ ಎಲ್ಲ ರೈತರು ಪ್ರಗತಿಪರ ರೈತರಾಗಿರುವುದರಿಂದ, ಮುಖ್ಯಮಂತ್ರಿಗಳಿಗೂ ಮೆಚ್ಚುಗೆಯಾಗುವುದರಲ್ಲಿ ಅನುಮಾನವಿಲ್ಲ.  ಈ ಹಿಂದೆ ರಾಜ್ಯದಲ್ಲಿ ನಡೆದಿರುವ ಸಾವಯವ ಕೃಷಿಕರ ಮನೆಯಂಗಳದಲ್ಲಿ ಮುಖ್ಯಮಂತ್ರಿಗಳ ಕಾರ್ಯಕ್ರಮಕ್ಕಿಂತಲೂ ಭಿನ್ನವಾಗಿ ಹಾಗೂ ಅರ್ಥಪೂರ್ಣವಾಗಿ ನಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.  
ಗ್ರಾಮದಲ್ಲಿ ಸಿದ್ಧತೆ : ಗ್ರಾಮದಾದ್ಯಂತ ನಡೆಯುತ್ತಿರುವ ಸಿದ್ಧತೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಶಾಸಕ ಸಂಗಣ್ಣ ಕರಡಿ ಅವರು ಗ್ರಾಮದಲ್ಲಿ ಅ. ೨೯ ರಂದೂ ಸಹ ಹಬ್ಬದ ವಾತಾವರಣ ನಿರ್ಮಾಣವಾಗಲಿದೆ.  ಕಳೆದ ನಾಲ್ಕಾರು ದಿನಗಳಿಂದ ಇಡೀ ಗ್ರಾಮಸ್ಥರು ಎಲ್ಲರೂ ತಮ್ಮ ಮನೆಯ ಕೆಲಸದಂತೆ ಗ್ರಾಮದ ಕೆಲಸವನ್ನು ಮಾಡುತ್ತಾ, ಗ್ರಾಮವನ್ನು ಅಲಂಕರಿಸುತ್ತಿದ್ದಾರೆ ಎಂದರು.  ಗ್ರಾಮದ ಹೊರವಲಯದಲ್ಲಿ ಹಾಕಲಾಗುತ್ತಿರುವ ಭವ್ಯ ವೇದಿಕೆಯ ನಿರ್ಮಾಣ ಕಾರ್ಯದ ಬಗ್ಗೆ ಪರಿಶೀಲನೆ ನಡೆಸಿದ ಅವರು, ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು, ಕುಡಿಯುವ ನೀರಿನ ವ್ಯವಸ್ಥೆ, ಆಹಾರ ಪೂರೈಕೆ, ಆಸನದ ವ್ಯವಸ್ಥೆ ಕುರಿತು ಮಾಹಿತಿ ಪಡೆದರು.  ಕಾರ್ಯಕ್ರಮ ಹೆಚ್ಚು ಅರ್ಥಪೂರ್ಣವಾಗಬೇಕು, ಈ ಭಾಗದ ರೈತರ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿ, ಪರಿಹಾರೋಪಾಯಗಳನ್ನು ಕಂಡುಕೊಳ್ಳುವಂತಾಗಬೇಕು ಎಂದು ಕೃಷಿ ಇಲಾಖೆಯ ಅಧಿಕಾರಿಗಳಿಗೆ ಶಾಸಕ ಸಂಗಣ್ಣ ಕರಡಿ ಅವರು ಸೂಚನೆ ನೀಡಿದರು. ಜಂಟಿಕೃಷಿ ನಿರ್ದೇಶಕ ಬಾಲರೆಡ್ಡಿ, ಕೊಪ್ಪಳ ಸಹಾಯಕ ಕೃಷಿ ನಿರ್ದೇಶಕರಾದ ಮಂಜುಳಾ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Advertisement

0 comments:

Post a Comment

 
Top