PLEASE LOGIN TO KANNADANET.COM FOR REGULAR NEWS-UPDATES


ಪುದುಚೇರಿ, ಅ.1: ಈ ವರ್ಷ ಚೆನ್ನೈ ಸಮೀಪದ ಖಾಸಗಿ ಶಾಲೆಯೊಂದರಲ್ಲಿ ನಡೆದ ಹತ್ತನೆ ತರಗತಿಯ ಪೂರಕ ಪರೀಕ್ಷೆ ಬರೆದ ಹಲವು ವಿದ್ಯಾರ್ಥಿಗಳ ಜೊತೆ ಗಣ್ಯ ರಾಜಕಾರಣಿಯೊಬ್ಬರೂ ಇದ್ದರು. ಅವರು ಮತ್ಯಾರೂ ಅಲ್ಲ. ಪುದುಚೇರಿಯ ಶಿಕ್ಷಣ ಸಚಿವ ಪಿ.ಎಂ.ಎಲ್. ಕಲ್ಯಾಣ ಸುಂದರಂ, ಹತ್ತನೆ ತರಗತಿ ಪರೀಕ್ಷೆ ಬರೆದು ತನ್ನ ಅದೃಷ್ಟ ಪರೀಕ್ಷಿಸ ಹೊರಟಿದ್ದಾರೆ. ಈಗ 34 ವರ್ಷ ವಯಸ್ಸಾಗಿರುವ ಕಲ್ಯಾಣಸುಂದರಂ, 1991ರಲ್ಲಿ ಪುದುಚೇರಿಯ ಸರಕಾರಿ ಶಾಲೆಯಲ್ಲಿ ಹತ್ತನೆ ತರಗತಿಯವರೆಗೆ ಕಲಿತಿರುವರಾದರೂ, ಅವರು ಅಂತಿಮ ಪರೀಕ್ಷೆಯಲ್ಲಿ ವಿಜ್ಞಾನ ಹಾಗೂ ಸಾಮಾಜಿಕ ವಿಜ್ಞಾನ ವಿಷಯಗಳಲ್ಲಿ ಅನುತ್ತೀರ್ಣರಾಗಿದ್ದರು.
  ತದನಂತರ ಅವರು ವಿದ್ಯಾಭ್ಯಾಸಕ್ಕೆ ತಿಲಾಂಜಲಿ ಹೇಳಿ, ತನ್ನ ಸೋದರನ ಜೊತೆ ಗಣಿಗಾರಿಕೆ ಉದ್ಯಮದಲ್ಲಿ ತೊಡಗಿದರು. ಹತ್ತು ವರ್ಷಗಳ ಬಳಿಕ ರಾಜಕೀಯ ಪ್ರವೇಶಿಸಿದ ಅವರು, 2006ರ ಪುದುಚೇರಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಹೀಗೆ ವಿದ್ಯಾಭ್ಯಾಸ ತ್ಯಜಿಸಿದ ಎರಡು ದಶಕಗಳ ಬಳಿಕ ಕಲ್ಯಾಣಸುಂದರಂ ವಿಲ್ಲುಪುರಂ ಜಿಲ್ಲೆಯ ತಿಂಡಿವನಂ ಪಟ್ಟಣದಲ್ಲಿರುವ ಖಾಸಗಿ ಶಾಲೆಯಲ್ಲಿ ಗುರುವಾರ ಹತ್ತನೆ ತರಗತಿಯ ವಿಜ್ಞಾನ ವಿಷಯದಲ್ಲಿ ನಡೆದ ಪೂರಕ ಪರೀಕ್ಷೆಯನ್ನು ಬರೆದಿದ್ದಾರೆ. ಆದರೆ ಶುಕ್ರವಾರ ಮಹತ್ವದ ಸಭೆಯಲ್ಲಿ ಭಾಗವಹಿಸಬೇಕಾಗಿದ್ದರಿಂದ, ಅಂದು ನಡೆದ ಸಮಾಜವಿಜ್ಞಾನ ಪರೀಕ್ಷೆಯಗೆ ಹಾಜರಾಗಲು ತನಗೆ ಸಾಧ್ಯವಾಗಲಿಲ್ಲವೆಂದು ಅವರು ಹೇಳಿದ್ದಾರೆ. ಶಿಕ್ಷಣ ಸಚಿವನಾದ ಬಳಿಕ ತನಗೆ ಹತ್ತನೆ ತರಗತಿಯಲ್ಲಿ ಪಾಸಾಗಬೇಕೆಂಬ ಹಂಬಲ ಉಂಟಾಗಿರುವುದಾಗಿ ಕಲ್ಯಾಣಸುಂದರಂ ಹೇಳುತ್ತಾರೆ. ಹತ್ತನೆ ತರಗತಿ ಪಾಸು ಮಾಡಿದ ನಂತರ ಪದವಿ ಪರೀಕ್ಷೆ ಬರೆಯಲೂ ಅವರು ನಿರ್ಧರಿಸಿದ್ದಾರಂತೆ.
ತನಗೆ ಪರೀಕ್ಷೆಗೆ ಸಿದ್ಧತೆ ನಡೆಸಲು ತನ್ನ ಸ್ನೇಹಿತರು ತುಂಬಾ ನೆರವಾಗಿರುವುದಾಗಿ ಸುಂದರಂ ಕೃತಜ್ಞತೆಯಿಂದ ಸ್ಮರಿಸಿಕೊಳ್ಳುತ್ತಾರೆ. ಈ ಸಲದ ವಿಜ್ಞಾನ ಪರೀಕ್ಷೆಯಲ್ಲಿ ತಾನು ಉತ್ತಮ ನಿರ್ವಹಣೆ ತೋರಿದ್ದು, 60ಕ್ಕೂ ಅಧಿಕ ಅಂಕಗಳು ಲಭಿಸುವ ನಿರೀಕ್ಷೆಯಿದೆಯೆಂದು ಅವರು ಹೇಳಿದ್ದಾರೆ. 1991ರಲ್ಲಿ ಹತ್ತನೆಯ ತರಗತಿ ಪರೀಕ್ಷೆಯಲ್ಲಿ ಅವರಿಗೆ ತಮಿಳಿನಲ್ಲಿ 48, ಇಂಗ್ಲಿಷ್‌ನಲ್ಲಿ 47 ಹಾಗೂ ಗಣಿತದಲ್ಲಿ 75 ಅಂಕಗಳು ದೊರೆತಿದ್ದವು. ಸಚಿವನಾದ ಬಳಿಕ ತಾನು ಮದ್ರಾಸ್ ವಿಶ್ವವಿದ್ಯಾನಿಲಯದ 2011-12ನೆ ಸಾಲಿನ ಬಿಎ (ಇತಿಹಾಸ)ಅಂಚೆ ತೆರಪಿನ ಕೋರ್ಸ್‌ಗೂ ಸೇರ್ಪಡೆಗೊಂಡಿರುವುದಾಗಿ ಕಲ್ಯಾಣ ಸುಂದರಂ ಹೇಳಿದ್ದಾರೆ. ಹಲವಾರು ಮಂದಿ ತಾನು ನೇರವಾಗಿ ಸ್ನಾತಕ ಪದವಿಯನ್ನು ಪಡೆಯುವಂತೆ ಸಲಹೆ ಮಾಡಿದ್ದರು. ಆದರೆ ತಾನು ಸಮಂಜಸವಾದ ಮಾರ್ಗದ ಮೂಲಕವೇ ಸ್ನಾತಕ ಪದವಿ ಪಡೆಯಬೇಕೆಂದು ನಿರ್ಧರಿಸಿದ್ದೆ. ಮುಕ್ತ ವಿವಿಯಲ್ಲಿ ಬಿಎ ಪದವಿ ಕೋರ್ಸ್‌ಗೆ ಅರ್ಜಿ ಹಾಕುವ ಮುನ್ನವೇ ತಾನು ಹತ್ತನೆಯ ತರಗತಿಯ ಪರೀಕ್ಷೆಗಳಲ್ಲಿ ಉತ್ತೀರ್ಣನಾಗಲು ಇಚ್ಛಿಸಿದ್ದೆ ಎಂದು ಕಲ್ಯಾಣ ಸುಂದರಂ ಹೇಳಿದ್ದಾರೆ.

Advertisement

0 comments:

Post a Comment

 
Top