ಕೊಪ್ಪಳ ಅ. ): ದೇಶದ ಯಾವುದೇ ಅಭಿವೃದ್ಧಿ ಯೋಜನೆಗಳನ್ನು ರೂಪಿಸುವಲ್ಲಿ ನಿಖರ ಅಂಕಿ-ಸಂಖ್ಯೆಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಹೆಚ್. ಕಾಕನೂರ ಅವರು ಹೇಳಿದರು.
ಕೊಪ್ಪಳ ಜಿಲ್ಲಾ ಪಂಚಾಯತಿ ಸ್ಥಾಯಿ ಸಮಿತಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಲಾಗಿದ್ದ ವಿಶ್ವ ಸಾಂಖ್ಯಿಕ ದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ದೇಶದ ಅಭಿವೃದ್ಧಿಗಾಗಿ ರೂಪಿಸಲಾಗುವ ಪಂಚವಾರ್ಷಿಕ ಯೋಜನೆಗಳು ಸೇರಿದಂತೆ ಬೃಹತ್ ಯೋಜನೆಗಳು ಜನಸಾಮಾನ್ಯರಿಗೆ ತಲುಪಿಸುವಂತಹ ಸೌಲಭ್ಯಗಳು, ನೀರಾವರಿ ಯೋಜನೆಗಳು, ಕೃಷಿ, ತೋಟಗಾರಿಕೆ ಸೇರಿದಂತೆ ಯಾವುದೇ ಯೋಜನೆಗಳನ್ನು ಸಿದ್ಧಪಡಿಸಲು ನಿಖರ ಅಂಕಿ-ಅಂಶಗಳನ್ನು ಸಂಗ್ರಹಿಸಬೇಕಾಗುತ್ತದೆ. ಇಂತಹ ಮಹತ್ವದ ಕೆಲಸವನ್ನು ಕೇಂದ್ರ ಹಾಗೂ ರಾಜ್ಯಗಳ ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆ ನಿರ್ವಹಿಸುತ್ತಿದೆ. ಅಂಕಿ-ಸಂಖ್ಯೆಗಳ ಮಹತ್ವವನ್ನು ಜಗತ್ತಿಗೆ ಸಾರಿದ ಪಿ.ಸಿ. ಮಹಲನೋಬಸ್ ಅವರನ್ನು ಇಂತಹ ಸಂದರ್ಭದಲ್ಲಿ ಸ್ಮರಿಸಬೇಕಾದ್ದು ನಮ್ಮೆಲ್ಲರ ಕರ್ತವ್ಯವಾಗಿದೆ. ಆದರೆ ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆ ಸಿಬ್ಬಂದಿ ಕೊರತೆ ಎದುರಿಸುತ್ತಿದೆ. ಇಲಾಖೆ ಕಿರಿದೇ ಆಗಿದ್ದರೂ ಅದರ ಸೇವೆಯ ಮಹತ್ವ ಹಿರಿದಾಗಿದೆ. ಎಲ್ಲಾ ಇಲಾಖೆಗಳು ಕಂಪ್ಯೂಟರೀಕರಣಗೊಳ್ಳುತ್ತಿರುವ ಈ ದಿನಮಾನದಲ್ಲಿ ಅಂಕಿ-ಅಂಶಗಳ ಸಂಗ್ರಹಣೆಯ ನಿಖರತೆಯ ಗುಣಮಟ್ಟ ಸುಧಾರಣೆಗೊಂಡಿದೆ. ಎಲ್ಲಾ ಇಲಾಖೆಗಳು ಯೋಜನೆಗಳನ್ನು ಸಿದ್ಧಪಡಿಸುವಾಗ ಸರಿಯಾದ ಅಂಕಿ-ಅಂಶಗಳನ್ನು ಒದಗಿಸಬೇಕು. ಇಲ್ಲದಿದ್ದಲ್ಲಿ ಅಂತಹ ಯೋಜನೆಗಳು ವಿಫಲವಾಗುವ ಸಂಭವವೇ ಹೆಚ್ಚು ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಹೆಚ್. ಕಾಕನೂರ ಅವರು ಅಭಿಪ್ರಾಯಪಟ್ಟರು.
ಸಮಾರಂಭದಲ್ಲಿ ಭಾಗವಹಿಸಿದ್ದ ಜಿಲ್ಲಾ ಪಂಚಾಯತಿ ಮುಖ್ಯ ಯೋಜನಾಧಿಕಾರಿ ಟಿ.ಪಿ. ದಂಡಿಗದಾಸರ ಅವರು ಮಾತನಾಡಿ, ಇದೇ ಪ್ರಥಮ ಬಾರಿಗೆ ವಿಶ್ವ ಸಾಂಖ್ಯಿಕ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, ಕೇಂದ್ರ ಹಾಗೂ ರಾಜ್ಯ ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆಗಳು ದೇಶದ ಪ್ರತಿಯೊಬ್ಬ ವ್ಯಕ್ತಿಯ ತಲಾದಾಯ, ರಾಜ್ಯ, ಜಿಲ್ಲಾ ಮಟ್ಟದ ಆದಾಯ ಸೂಚ್ಯಂಕ, ಮಾನವ ಅಭಿವೃದ್ಧಿ ಸೂಚ್ಯಂಕ, ಹಣದುಬ್ಬರದ ಪ್ರಮಾಣ, ಆರ್ಥಿಕ ಸಮೀಕ್ಷೆ, ವಿವಿಧ ಗಣಗತಿ ಕಾರ್ಯ, ಮೂಲಭೂತ ಸೌಲಭ್ಯ ಒದಗಿಸುವಿಕೆ, ಶಿಕ್ಷಣ ಕ್ಷೇತ್ರ, ಯೋಜನೆಗಳ ಅನುಷ್ಠಾನ ಮುಂತಾದ ಕಾರ್ಯಗಳಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ. ಅಂಕಿ-ಸಂಖ್ಯಾ ವಿವರಗಳು ಸರ್ಕಾರಗಳಿಗೆ ಆಡಳಿತಾತ್ಮಕ ಬಲ ನೀಡುತ್ತವೆ ಎಂದರು.
ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕೃಷ್ಣಮೂರ್ತಿ ದೇಸಾಯಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಮುಂದಿನ ವರ್ಷದಿಂದ ವಿಶ್ವ ಸಾಂಖ್ಯಿಕ ದಿನಾಚರಣೆಯನ್ನು ಜಿಲ್ಲಾ ಮಟ್ಟದಲ್ಲಿ ಇನ್ನೂ ಅರ್ಥಪೂರ್ಣವಾಗಿ ಆಚರಿಸಲಾಗುವುದು. ನಿಖರ ಅಂಕಿ-ಅಂಶಗಳನ್ನು ನೀಡುವ ಅಧಿಕಾರಿಗಳನ್ನು ಗುರುತಿಸಿ ಜಿಲ್ಲಾ ಮಟ್ಟದಲ್ಲಿ ಪ್ರಶಸ್ತಿ ನೀಡಲು ಯೋಜಿಸಲಾಗಿದೆ ಎಂದರು.
ಸಮಾರಂಭದ ಅಂಗವಾಗಿ ಪ್ರಾಧ್ಯಾಪಕ ಪ್ರಭುರಾಜ್ ಅವರು ಅಂಕಿ-ಸಂಖ್ಯೆಗಳ ಸಂಗ್ರಹದ ಮಹತ್ವ ಕುರಿತು ವಿಶೇಷ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಎನ್.ಕೆ. ತೊರವಿ, ಮುಖ್ಯ ಲೆಕ್ಕಾಧಿಕಾರಿ ರತ್ನಾನಾಯಕ್, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಬಿ. ಕಲ್ಲೇಶ್, ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆ ಅಧಿಕಾರಿ, ಸಿಬ್ಬಂದಿಗಳು ಭಾಗವಹಿಸಿದ್ದರು. ಜಿಲ್ಲಾ ಪಂಚಾಯತಿ ಕಚೇರಿಯ ಬಸವನಗೌಡ ಅವರು ಕಾರ್ಯಕ್ರಮ ನಿರೂಪಿಸಿದರು. ಕುಷ್ಟಗಿ ತಾಲೂಕಾ ಪಂಚಾಯತಿಯ ಆರ್. ಒನಕಿ ಅವರು ವಂದಿಸಿದರು.
0 comments:
Post a Comment