PLEASE LOGIN TO KANNADANET.COM FOR REGULAR NEWS-UPDATES


 ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ ನಾಲ್ಕನೆ ಅಂಗವಾಗಿರುವ ಸುದ್ದಿ ಮಾಧ್ಯಮ ಕ್ಷೇತ್ರ ಸಮಾಜದ ಓರೆ- ಕೋರೆಗಳನ್ನು ತಿದ್ದುವುದರ ಜೊತೆಗೆ ಸರ್ಕಾರದ ಕಿವಿಹಿಂಡಿ ಸರಿ ದಾರಿಗೆ ತರುವ ಪ್ರಯತ್ನ ಮಾಡುತ್ತಿದೆ. ಆಧುನಿಕತೆ ಮತ್ತು ತಂತ್ರಜ್ಞಾನ ಬೆಳೆದಂತೆ ಮಾಧ್ಯಮ ಕ್ಷೇತ್ರ ನಾಗಾಲೋಟದಲ್ಲಿ ಓಡುತ್ತಿದೆ. ಇದು ಒಂದೆಡೆಯಾದರೆ ಸುದ್ದಿಗಳನ್ನು ಅತಿ ರಂಜಿತವಾಗಿ ಬಿಂಬಿಸಿ ತನ್ನ ಪರಿಧಿಯನ್ನು ಮೀರಿ ಕಾರ್ಯ ಮಾಡುತ್ತಿರುವ ಆತಂಕವೂ ಮತ್ತೊಂದೆಡೆ. ಇದೆಲ್ಲವನ್ನೂ ನೋಡಿದಾಗ ಸುದ್ದಿ ಮಾಧ್ಯಮ ಕ್ಷೇತ್ರ ಎತ್ತ ಸಾಗುತ್ತಿದೆ ಎಂಬುದು ಹತ್ತು-ಹಲವು ಯಕ್ಷ ಪ್ರಶ್ನೆಗಳನ್ನು ಹುಟ್ಟುಹಾಕಿ ಜನರ ತಲೆಯನ್ನು ಕೊರೆಯುತ್ತಿದೆ.
ಒಂದು ಹನಿ ಮಸಿ, ಕೋಟಿ ಜನಕ್ಕೆ ಬಿಸಿ:-
ಖಡ್ಗಕ್ಕಿಂತ ಲೇಖನಿ ಹರಿತ ಎನ್ನುವ ಹಾಗೆ ಅತ್ಯಂತ ಪ್ರಭಾವಶಾಲಿ ಮಾಧ್ಯಮ ಕ್ಷೇತ್ರ. ಇದು ಆಳುವವರ ಎದೆ ನಡುಗಿಸಿದ ಉದಾಹರಣೆಗಳಿವೆ. ಒಂದು ಸುದ್ದಿ ಒಂದು ಸರ್ಕಾರದ ಅಳಿವು-ಉಳಿವಿನ ಬಗ್ಗೆ ನಿರ್ಧಾರ ಮಾಡುವ ಶಕ್ತಿ ಹೊಂದಿದೆ. ಒಂದು ಹನಿ ಮಸಿಯಿಂದ ಕೋಟ್ಯಂತರ ಜನರಿಗೆ ಬಿಸಿ ಮುಟ್ಟಿಸುವಂತಹ ತಾಕತ್ತು ಹೊಂದಿದೆ. ಉದಾಹರೆಣೆಗೆ ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪರಂಗಿಯರ ವಿರುದ್ಧ ಪತ್ರಿಕೆಗಳು ರಣ ಕಹಳೆ ಮೊಳಗಿಸಿ ಬ್ರಿಟೀಷರ ಎದೆ ನಡುಗಿಸಿದ್ದವು. ತಾಂತ್ರಿಕತೆ ಅಷ್ಟೇನೋ ಅಭಿವೃದ್ಧಿ ಹೊಂದಿರದ ಆ ಕಾಲದಲ್ಲೇ ಅಷ್ಟೊಂದು ಬಲ ಶಾಲಿಯಾಗಿದ್ದ ಮಾಧ್ಯಮ ಕ್ಷೇತ್ರ ಇಂದು ತಾಂತ್ರಿಕವಾಗಿ ಶ್ರೀಮಂತವಾಗಿದೆ. ಸಾವಿರಾರು ಮೈಲಿಗಳಷ್ಟು ದೂರದಲ್ಲಿ ನಡೆಯುವ ಘಟನೆಗಳನ್ನು ಕ್ಷಣ ಮಾತ್ರದಲ್ಲಿ ವೀಕ್ಷಕರ ಮುಂದೆ ಭಿತ್ತರಿಸುವಷ್ಟು ಸಬಲವಾಗಿದೆ. ಈ ಮೂಲಕ ಮಾಧ್ಯಮ ಕ್ಷೇತ್ರ ಸಾಮಾನ್ಯ ಜನರ ಹತ್ತಿರ ಹೋಗಿದೆ. ರಾಜ್ಯ, ದೇಶ ಹಾಗೂ ವಿದೇಶಗಳ ದೈನಂದಿನ ವಿಚಾರಗಳ ಬಗ್ಗೆ ಜನರು ಮಾಧ್ಯಮ ಮೂಲಕ ತಿಳಿದು ಅವರದೇ ಆದ ಜ್ಞಾನ ಭಂಡಾರ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಇದರೊಂದಿಗೆ ಜನರನ್ನು ಸಂಘಟನೆಗೊಳಿಸುವ ಕಾರ್‍ಯದಲ್ಲೂ ಮಾಧ್ಯಮ ಕ್ಷೇತ್ರ ಅತ್ಯಂತ ಸಕ್ರೀಯವಾಗಿದೆ. ಅನ್ಯಾಯ, ಅಕ್ರಮಗಳು, ಆಳುವವರ ತಪ್ಪುಗಳನ್ನು ಬಯಲಿಗೆಳೆಯುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಿದೆ. ಪ್ರಕಟವಾದ ಸುದ್ದಿಯಿಂದ ಜನರು ಅನ್ಯಾಯದ ವ್ಯವಸ್ಥೆ ವಿರುದ್ಧ ಧ್ವನಿ ಎತ್ತುವಂತೆ ಮಾಡುತ್ತಿದೆ.

ಜನಾಭಿರುಚಿ ಕಾರ್‍ಯಕ್ರಮಗಳು:- ಜನರ ಅಭಿರುಚಿ ಬದಲಾದಂತೆ ಮಾಧ್ಯಮ ಕ್ಷೇತ್ರವೂ ಸಹ ಬದಲಾಗುತ್ತಾ ಬಂದಿದೆ. ಮಾಧ್ಯಮದ ಹಿಂದಿನ ಸ್ಥಿತಿಗೂ ಮತ್ತು ಇಂದಿನ ಸ್ಥಿತಿಗೂ ಹೋಲಿಸಿದಾಗ ಇದು ಸ್ಪಷ್ಟವಾಗುತ್ತದೆ. ಸುದ್ದಿ ಮಾಧ್ಯಮಗಳು ತನ್ನ ಅಭಿರುಚಿಗೆ ತಕ್ಕಂತೆ ಬದಲಾಗದೆ ಜನರ ಮನದ ಭಾವನೆಗಳನ್ನು ಅರಿತುಕೊಂಡು ತನ್ನ ಕಾರ್‍ಯಕ್ಷೇತ್ರದ ಹರವನ್ನು ವಿಸ್ತರಿಸಿಕೊಂಡಿದೆ. ದಿನದ ೨೪ ಗಂಟೆಯೂ ಬರೀ ಸುದ್ದಿಗನ್ನೇ ಪ್ರಸಾರ ಮಾಡುವ ನ್ಯೂಸ್ ಚಾನೆಲ್‌ಗಳು ಸಾಕಷ್ಟು ಇವೆ. ಹಾಗೆಯೇ ಜನಾಭಿರುಚಿಗೆ ತಕ್ಕಂತೆ ತನ್ನಮಗ್ಗಲುಗಳನ್ನು ಬದಲಿಸಿಕೊಂಡಿವೆ. ವಾಸ್ತವಿಕವಾಗಿ ಇವೆಲ್ಲವೂ ಸುದ್ದಿಗೆ ಮಹತ್ವ ನೀಡದೆ ಕೇವಲ ಅತಿರಂeನೆಗೆ ತೊಡಗಿರುವುದು ವಿರೋಧಾಭಾಸ ಕಾಣುತ್ತಿದೆ. ಏನೇ ಅದರೂ ಮಾಧ್ಯಮಗಳಿಂದು ಸಮಾಜದ, ಜನರ ಜೀವನದಲ್ಲಿ ಹಾಗೂ ಅವರ ಮನಸಿನಲ್ಲಿ ಹಾಸು ಹೊಕ್ಕಾಗಿದೆ.
ಅನುಭವದ ಕೊರತೆ:-
ಸುದ್ದಿ ಮಾಧ್ಯಮ ಕ್ಷೇತ್ರಕ್ಕೆ ಪ್ರತಿ ವರ್ಷ ಒಂದು ಅಂದಾಜಿನ ಪ್ರಕಾರ ಕಾಲಿಡುತ್ತಿರುವ ಸುಮಾರು ೧೦ ಸಾವಿರಕ್ಕಿಂತ ಹೆಚ್ಚು ಯುವಕ-ಯುವತಿಯರು ಭಾರತದಲ್ಲಿದ್ದಾರೆ. ೧೦ ಸಾವಿರದಲ್ಲಿ ಶೇಕಡಾ ೬೦ ಕ್ಕಿಂತಲೂ ಹೆಚ್ಚು ಪತ್ರಕರ್ತರು ಎಲ್ಲಾ ಬದ್ಧತೆ, ನೈತಿಕತೆ.ಸತ್ಯದ ಪರಿಕಲ್ಪನೆಯನ್ನು ಆಧರಿಸಿ ಸಮಾಜದ ಏಳು ಬೀಳುಗಳನ್ನು ಗ್ರಹಿಸಿಕೊಂಡು ಸಮಾಜದ ಉದ್ಧಾರವೇ
ತಮ್ಮ ಧ್ಯೇಯ ಅಂತ ಆರಂಭದಲ್ಲಿ ಪ್ರತಿಜ್ಞೆಯನ್ನು ಮಾಡುತ್ತಾರೆ. ಆದರೆ, ಅವರ ಮನಸು ತುಂಬಾ ತಾಜಾ ಆಗಿರುತ್ತದೆ. ಅಲ್ಲದೇ ಅನುಭವದ ಕೊರತೆಯ ಜೊತೆಗೆ ಉತ್ತಮ ಮಾರ್ಗದರ್ಶನದ ಕೊರತೆ ಇರುತ್ತದೆ. ಇದರಿಂದ ಸಮಾಜದ ವ್ಯವಸ್ಥೆ ಇವರನ್ನು ಬಲಹೀನರನ್ನಾಗಿಸಿ ಹಾಗೂ ಕಾಲ ಕ್ರಮೇಣ ವೈಚಾರಿಕವಾಗಿ ದುರ್ಬಲರನ್ನಾಗಿಸುತ್ತದೆ. ಸುದ್ದಿ ಮಾಧ್ಯಮ ಕ್ಷೇತ್ರಕ್ಕೆ
ಹರಿದು ಬರುವ ಯುವ ಜನತೆಗೆ ಅನುಭವದ ಕೊರತೆ ಇದೆ. ಪತ್ರಿಕೋದ್ಯಮದ ಪಾವಿತ್ರ್ಯತೆಯನ್ನು ಅರಿತು ಬರೆಯಲು ಕೆಲ ಕ್ಷಣಗಳು, ಕೆಲ ವ್ಯಕ್ತಿಗಳು ಹಾಗೂ ಕೆಲ ಸಮಯ-ಸಂದರ್ಭಗಳು ಅವರ ಹಾದಿ ತಪ್ಪಿಸುತ್ತಿರುವುದು ಸತ್ಯ. ಪೈಪೋಟಿ:- ಮಾಧ್ಯಮ ಕ್ಷೇತ್ರ ಇಂದು ಪಾವಿತ್ರ್ಯತೆಯ ಕ್ಷೇತ್ರವಾಗಿ ಉಳಿದಿಲ್ಲ. ಇದಕ್ಕೆ ಇಂತಹ ವ್ಯಕ್ತಿಗಳೇ ಕಾರಣ ಎಂದು ಬೊಟ್ಟು ಮಾಡಿ ತೋರಿಸುವುದು ಆಗುವುದಿಲ್ಲ. ಏಕೆಂದರೆ ಹೊಳೆಯಲ್ಲಿನ ಕೊಳೆ ಯಾರದ್ದು ಎಂದು ಗುರುತಿಸೋದ್ಕೆ ಸಾಧ್ಯವಿಲ್ಲವೋ ಹಾಗೆ
ಯಾರು ಕಾರಣರು ಎಂದು ಹೇಳಿದರೂ ಒಪ್ಪಿಕೊಳ್ಳುವ ಇತ್ತೀಚಿನ ದಿನಗಳಲ್ಲಿ ಸ್ಥಿತಿ ಇಲ್ಲ. ನಾಗಾಲೋಟದಲ್ಲಿ ಓಡುತ್ತಿರುವ ಮಾಧ್ಯಮ ಕ್ಷೇತ್ರ ಪೈಪೋಟಿಯಿಂದ ಕೂಡಿದೆ. ಸಮಾಜ ತಿದ್ದುವ  ಅಜೆಂಡಾ ಇಟ್ಟುಕೊಂಡಿದ್ದರೂ ಅದೊಂದು ಉದ್ಯಮವಾಗಿ
ಮಾರ್ಪಟ್ಟಿರೋದರಿಂದ ಲಾಭ-ಗಳಿಕೆ ಲೆಕ್ಕಾಚಾರಗಳೇ ಮುಖ್ಯವಾಗಿ, ಮೂಲ ಅಝಂಡಾದ ಮೇಲೆ ಕತ್ತಲು ಆವರಿಸುವಂತೆ ಮಾಡಿದೆ. ಹೀಗಾಗಿ ಮಾಧ್ಯಮ ಕ್ಷೇತ್ರದಲ್ಲಿ ಅಲ್ಲಲ್ಲ ಸ್ವೇಚ್ಚಾಚಾರ ಅವ್ಯಾಹತವಾಗಿ ನಡೆಯುತ್ತಿರೋದು ಓಪನ್ ಸೀಕ್ರೇಟ್. ಲಾಭ-ಗಳಿಕೆ ಲೆಕ್ಕಾಚಾರದ ಹಿಂದೆ ಜೋತು ಬಿದ್ದು ಸುದ್ದಿಗಳಿಗೆ ಕೆಲ ವೇಳೆ ನ್ಯಾಯ ಒದಗುತ್ತಿಲ್ಲ ಎನ್ನುವ ಮಾತುಗಳು ಈಗ ಸಮಾಜದಲ್ಲಿ ಕೇಳಿಬರುತ್ತಿವೆ. ತಪ್ಪು ಮಾಡುವ ಒಂದು ವ್ಯವಸ್ಥೆಯನ್ನು,ಸಮಾಜವನ್ನು, ಸರ್ಕಾರ, ಆಡಳಿತ ಯಂತ್ರವನ್ನು
ಕಿವಿ ಹಿಂಡಿ ಸರಿದಾರಿಗೆ ತರಲು ತನ್ನದೇ ಆದ ರೀತಿಯಲ್ಲಿ ಚಾಟಿ ಬೀಸುತ್ತಾ ತನ್ನ ಗತ್ತು ಉಳಿಸಿಕೊಂಡಿದೆ. ಇದೆಲ್ಲದರ
ನಡುವೆಯೂ ಮಾಧ್ಯಮ ಕ್ಷೇತ್ರ ಎತ್ತ ಸಾಗುತ್ತಿದೆ ಎನ್ನುವ ಅನುಮಾನದ ಪ್ರಶ್ನೆಯೊಂದು ಉಳಿದುಕೊಂಡು ಕಹಿ ಸತ್ಯವನ್ನು ರಹಸ್ಯವಾಗಿರಿಸಿಬಿಟ್ಟಿದೆ.

- ಎಚ್.ಆರ್. ತನುಜ.
ಬಿ.ಎ. ಪತ್ರಿಕೋದ್ಯಮ, ಮೊದಲ ಸೆಮಿಸ್ಟರ್,
ಸ.ಪ್ರ.ದ. ಕಾಲೇಜ್, ಅಳವಂಡಿ.ತಾ.ಜಿ. ಕೊಪ್ಪಳ.

Advertisement

0 comments:

Post a Comment

 
Top