PLEASE LOGIN TO KANNADANET.COM FOR REGULAR NEWS-UPDATES



ಕೊಪ್ಪಳ ಸೆ. ೦೨ (ಕ.ವಾ): ಬರುವ ನವೆಂಬರ್ ತಿಂಗಳಿನಲ್ಲಿ ಗಂಗಾವತಿಯಲ್ಲಿ ನಡೆಯಲಿರುವ ೭೮ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕೊಪ್ಪಳ ಜಿಲ್ಲೆಯ ರಾಜ್ಯ ಸರ್ಕಾರಿ ನೌಕರರು ಒಂದು ದಿನದ ವೇತನ ನೀಡಲಿದ್ದಾರೆ.  ಈ ಕುರಿತ ಒಪ್ಪಿಗೆ ಪತ್ರವನ್ನು ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಶಂಭುಲಿಂಗನಗೌಡ ಹಲಗೇರಿ ಅವರು ಸೆ. ೨ ರಂದು ಶುಕ್ರವಾರ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರಿಗೆ ಸಲ್ಲಿಸಿದರು.
  ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಈ ಬಾರಿ ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನಡೆಸಲಾಗುತ್ತಿದ್ದು, ಸಮ್ಮೇಳನವನ್ನು ಯಶಸ್ವಿಯಾಗಿ ಆಚರಿಸಲು ಅನುಕೂಲವಾಗುವಂತೆ ಕೊಪ್ಪಳ ಜಿಲ್ಲೆಯ ರಾಜ್ಯ ಸರ್ಕಾರಿ ನೌಕರರು ಒಂದು ದಿನದ ವೇತನ ನೀಡಲು ಸಂತೋಷದಿಂದ, ಸರ್ವಸಮ್ಮತದಿಂದ ಒಪ್ಪಿದ್ದಾರೆ ಎಂದು ಸರ್ಕಾರಿ ನೌಕರರ ಜಿಲ್ಲಾಧ್ಯಕ್ಷ ಶಂಭುಲಿಂಗನಗೌಡ ಹಲಗೇರಿ ಅವರು ತಿಳಿಸಿದರು.
ವಸತಿ ಗೃಹ ನಿರ್ಮಾಣ : ಕೊಪ್ಪಳ ನಗರದಲ್ಲಿರುವ ಸರ್ಕಾರಿ ನೌಕರರಿಗೆ ಸದ್ಯ ವಸತಿ ಗೃಹಗಳು ಬಹಳ ಕಡಿಮೆ ಪ್ರಮಾಣದಲ್ಲಿದ್ದು, ಇದರಿಂದಾಗಿ ಸರ್ಕಾರಿ ನೌಕರರಿಗೆ ತುಂಬಾ ತೊಂದರೆ ಉಂಟಾಗಿದೆ.  ಕೊಪ್ಪಳ ನಗರದಲ್ಲಿ ನೂತನವಾಗಿ ಸುಮಾರು ೫೦೦ ಸರ್ಕಾರಿ ವಸತಿ ಗೃಹಗಳ ನಿರ್ಮಾಣಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು.  ಅಲ್ಲದೆ ಸದ್ಯ ಕೊಪ್ಪಳ ನಗರದಲ್ಲಿರುವ ರಾಜ್ಯ ಸರ್ಕಾರಿ ನೌಕರರ ಸಂಘದ ಕಟ್ಟಡವು ಅತ್ಯಂತ ಚಿಕ್ಕದಾಗಿದ್ದು, ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನೆನಪು ಸರ್ಕಾರಿ ನೌಕರರಲ್ಲಿ ಚಿರಸ್ಥಾಯಿಯಾಗುವಂತೆ ಉಳಿಯುವಂತೆ ಮಾಡಲು, ಸಮ್ಮೇಳನದ ಸಂದರ್ಭದಲ್ಲಿಯೇ ನೌಕರರ ಸಂಘದ ನೂತನ ಕಟ್ಟಡಕ್ಕಾಗಿ ಒಂದು ಸೂಕ್ತ ನಿವೇಶನವನ್ನು ಒದಗಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಶಂಭುಲಿಂಗನಗೌಡ ಅವರು ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದರು.
  ಸರ್ಕಾರಿ ನೌಕರರ ಸಂಘದ ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಮಾತನಾಡಿ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ನೌಕರರು ಒಂದು ದಿನದ ವೇತನ ನೀಡಲು ಒಪ್ಪಿಗೆ ನೀಡಿರುವುದು ಸಂತೋಷದಾಯಕ ಸಂಗತಿಯಾಗಿದೆ.  ಸಮ್ಮೇಳನವನ್ನು ಯಶಸ್ವಿಯಾಗಿಸಲು ಸರ್ಕಾರಿ ನೌಕರರು ಪ್ರಾಮಾಣಿಕವಾಗಿ ಶ್ರಮಿಸುವಂತೆ ಮನವಿ ಮಾಡಿದರು.  ಅಲ್ಲದೆ ಕೊಪ್ಪಳ ನಗರದಲ್ಲಿ ಸರ್ಕಾರಿ ನೌಕರರಿಗೆ ಸೂಕ್ತ ವಸತಿ ಗೃಹಗಳು ಇಲ್ಲದೇ ಇರುವುದು ಗಮನಕ್ಕೆ ಬಂದಿದ್ದು, ಸುಮಾರು ೫೦೦ ನೂತನ ವಸತಿ ಗೃಹಗಳ ನಿರ್ಮಾಣ ಕುರಿತಂತೆ ಶೀಘ್ರದಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು.  ಅಲ್ಲದೆ ಸಂಘದ ಕಟ್ಟಡಕ್ಕೆ ನಿವೇಶನ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಜಿಲ್ಲಾದಿಕಾರಿ ತುಳಸಿ ಮದ್ದಿನೇನಿ ಅವರು ಭರವಸೆ ನೀಡಿದರು.
  ಈ ಸಂದರ್ಭದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘ ಕೊಪ್ಪಳ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ನಾಗರಾಜ ಜುಮ್ಮನ್ನವರ,  ಪದಾಧಿಕಾರಿಗಳಾದ ಗುಂಡಪ್ಪ, ಟಿ.ಕೆ. ಸಾಲಿ, ಚಿಕ್ಕ ನರಗುಂದ, ವಾರ್ತಾಧಿಕಾರಿ ತುಕಾರಾಂ ರಾವ್, ಮೌಲಾಸಾಬ್, ಬಸವರಾಜ ಶೀಗೇನಹಳ್ಳಿ ಮುಂತಾದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Advertisement

0 comments:

Post a Comment

 
Top