ಬೆಂಗಳೂರು, ಸೆ.14: ತೀವ್ರ ಪ್ರತಿಷ್ಠೆಯ ಕ್ಷೇತ್ರವಾಗಿರುವ ಕೊಪ್ಪಳ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯ ಗೆಲುವಿಗೆ ಸಾಮೂಹಿಕ ನಾಯಕ್ವದಲ್ಲಿ ಪ್ರಚಾರ ನಡೆಸಲು ಪಕ್ಷದ ಪದಾಧಿಕಾರಿಗಳ ಸಭೆ ಮಹತ್ವದ ನಿರ್ಣಯಕೈಗೊಂಡಿದ್ದು, ಇದರಿಂದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬಣಕ್ಕೆ ತೀವ್ರ ಹಿನ್ನಡೆಯಾಗಿದೆ. ಬುಧವಾರ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಅಧ್ಯಕ್ಷ ಕೆ.ಎಸ್.ಈಶ್ವರಪ್ಪನವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮೇಲ್ಕಂಡ ನಿರ್ಣಯ ಕೈಗೊಳ್ಳಲಾಗಿದೆ ಎಂದ ಪಕ್ಷದ ವಕ್ತಾರ ಆಯನೂರು ಮಂಜುನಾಥ್, ಪಕ್ಷದ ವರ್ಚಸ್ಸು ವೃದ್ಧಿಗೆ ಕಾರ್ಯಕ್ರಮ ರೂಪಿಸುವ ನಿರ್ಣಯ ಅಂಗೀಕರಿಸಲಾಗಿದೆ ಎಂದು ಹೇಳಿದರು.
ಬಿಜೆಪಿಗೆ ಮಧ್ಯಾಂತರ ಚುನಾವಣೆಯ ಆತಂಕವಿಲ್ಲ. ತಮ್ಮ ಸರಕಾರ ಐದು ವರ್ಷ ಪೂರೈಸಲಿದೆ. ರಾಜ್ಯ ಸರಕಾರ ಕೈಗೊಂಡಿರುವ ಯೋಜನೆಗಳನ್ನು ಜನ ಸಾಮಾನ್ಯರಿಗೆ ತಲುಪಿಸುವ ನಿಟ್ಟಿನಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಭೆಯಲ್ಲಿ ಪದಾಧಿಕಾರಿ ಗಳೊಂದಿಗೆ ಚರ್ಚಿಸಲಾಯಿತು ಎಂದು ಅವರು ತಿಳಿಸಿದರು. ರಾಜ್ಯ ಸರಕಾರದಲ್ಲಿನ ಬಹುತೇಕ ಸಂಪುಟ ಸಚಿವರು ಭ್ರಷ್ಟಾಚಾರದ ಆರೋಪ ಎದುರಿಸುತ್ತಿದ್ದಾರೆಂಬ ಆರೋಪವನ್ನು ನಿರಾಕರಿಸಿದ ಆಯನೂರು ಮಂಜುನಾಥ್, ಅರಣ್ಯ ಸಚಿವ ಸಿ.ಪಿ.ಯೋಗೇಶ್ವರ್‌ರ ಮೇಲಿನ ಮೆಗಾಸಿಟಿ ಹಗರಣದ ಆಪಾದನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ, ಪಕ್ಷದ ಅಧ್ಯಕ್ಷ ಈಶ್ವರಪ್ಪ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಹೇಳಿ ಜಾರಿಕೊಂಡರು.
ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಯವರ ಹಣ ಖರ್ಚು ಮಾಡಿ ಪಕ್ಷ ಚುನಾವಣೆಯಲ್ಲಿ ಗೆದ್ದು ಬಂದಿಲ್ಲ. ಅವರಿಲ್ಲದ ಸಂದರ್ಭದಲ್ಲಿಯೂ ಬಿಜೆಪಿ ಗೆಲುವು ಸಾಧಿಸಿದೆ ಎಂದ ಅವರು, ಶ್ರೀರಾಮುಲು ರಾಜೀನಾಮೆಗೆ ಸಂಬಂಧಿಸಿದಂತೆ ವಿಧಾನ ಸಭಾಧ್ಯಕ್ಷ ಕೆ.ಜಿ. ಬೋಪಯ್ಯ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ತಿಳಿಸಿದರು.
ಆರು ವಿಭಾಗೀಯ ಸಮಾವೇಶ: ಪಕ್ಷದ ವರ್ಚಸ್ಸು ಹೆಚ್ಚಿಸಲು ಕೊಪ್ಪಳ ಉಪ ಚುನಾವಣೆಯನಂತರ ರಾಜ್ಯದ ಆರು ವಿಭಾಗಗಳ ಮಟ್ಟದಲ್ಲಿ ಸಮಾವೇಶಗಳನ್ನು ನಡೆಸಲಾಗುವುದು. ಬಿಜೆಪಿಯ ಹಿರಿಯ ಮುಖಂಡ ಎಲ್.ಕೆ. ಅಡ್ವಾಣಿಯವರ ರಥಯಾತ್ರೆಗೆ ಸಂಬಂಧಿಸಿದಂತೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಲಾಯಿತು ಎಂದು ಆಯನೂರು ಮಂಜುನಾಥ್ ವಿವರಿಸಿದರು. ಪದಾಧಿಕಾರಿಗಳ ಸಭೆಯಲ್ಲಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಚಿವರಾದ ಜಗದೀಶ್ ಶೆಟ್ಟರ್, ಗೋವಿಂದ ಕಾರಜೋಳ ಸಹಿತ ಸಚಿವರು, ಶಾಸಕರು, ಪಾಲಿಕೆ ಸದಸ್ಯರು ಹಾಗೂ ಪಕ್ಷದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
0 comments:
Post a Comment