ಬೆಂಗಳೂರು, ಸೆ.22: ಕೊಪ್ಪಳ ಉಪ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಜೆಪಿ ಸರಕಾರದ ಸಚಿವರೆಲ್ಲರೂ, ಚುನಾವಣಾ ಪ್ರಚಾರದಲ್ಲಿ ಬ್ಯುಸಿಯಾಗಿರುವುದರಿಂದ ರಾಜ್ಯದ ಶಕ್ತಿ ಕೇಂದ್ರ ‘ವಿಧಾನ ಸೌಧ’ ಕಳೆದ ಕೆಲವು ದಿನಗಳಿಂದ ಬಿಕೋ ಎನ್ನುತ್ತಿದೆ. ವಿಧಾನ ಸೌಧದತ್ತ ಮುಖ್ಯಮಂತ್ರಿ ಸದಾನಂದ ಗೌಡ ಸೇರಿದಂತೆ ಸಚಿವರ್ಯಾರೂ ಕಳೆದ ಕೆಲವು ದಿನಗಳಿಂದ ಮುಖ ಮಾಡಿಲ್ಲ. ಇದರಿಂದ ಆಡಳಿತ ಕೇಂದ್ರ ಸ್ತಬ್ಧಗೊಂಡಿದೆ. ಕೊಪ್ಪಳ ಉಪ ಚುನಾವಣೆಯ ದಿನಾಂಕ ನಿಗದಿಯಾದ ಬೆನ್ನಲ್ಲೆ ಸಿಎಂ ಸೇರಿದಂತೆ ಸಚಿವರೆಲ್ಲರೂ ಅತ್ತ ಹೆಚ್ಚಿನ ಗಮನ ವಹಿಸಿದ್ದು, ಇದರಿಂದ ಶಕ್ತಿ ಕೇಂದ್ರ ವಿಧಾನಸೌಧದತ್ತ ಸಚಿವರು ಬರುವುದು ಕಡಿಮೆಯಾಗಿದೆ. ವಿಧಾನ ಸೌಧದಲ್ಲಿ ಕೂತು ರಾಜ್ಯದ ಜನರ ಸಮಸ್ಯೆ, ಆಡಳಿತವನ್ನು ಸುಸೂತ್ರವಾಗಿ ನಡೆಸಬೇಕಾದ ಮುಖ್ಯಮಂತ್ರಿ, ಸಚಿವರೆಲ್ಲರೂ ಕೊಪ್ಪಳ ಉಪ ಚುನಾವಣೆಯ ಪ್ರಚಾರದಲ್ಲಿ ತೊಡಗಿದ್ದು, ಇದರಿಂದ ರಾಜ್ಯದಲ್ಲಿ ಆಡಳಿತ ಯಂತ್ರವೇ ಕುಸಿದಿದೆ ಎಂದು ವಿಪಕ್ಷಗಳು ಆರೋಪಿಸಿವೆ.
ವಿಧಾನ ಸೌಧದಲ್ಲಿ ಕೂತು ಸಾರ್ವಜನಿಕರ ಕೆಲಸ, ಕಾರ್ಯ ಮಾಡಬೇಕಾದ ಸಚಿವರೆಲ್ಲರೂ, ಕೊಪ್ಪಳದಲ್ಲಿ ಠಿಕಾಣಿ ಹೂಡಿದ್ದು, ಜನರ ಸಮಸ್ಯೆಯನ್ನೇ ಕೇಳುವವರಿ ಲ್ಲದಂತಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಆರೋಪಿಸಿದ್ದಾರೆ. ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಬಿಜೆಪಿ ಸಚಿವರು ಸಾರ್ವಜನಿಕರ ಕೆಲಸ, ಕಾರ್ಯ ಮಾಡುವಲ್ಲಿ ವಿಫಲರಾಗಿದ್ದಾರೆ. ಇಂತಹವರಿಂದ ರಾಜ್ಯದ ಅಭಿವೃದ್ಧಿ ಸಾಧ್ಯವೇ ಎಂದು ಪ್ರಶ್ನಿಸಿದರು. ರಾಜ್ಯದಲ್ಲಿ ಆಡಳಿತ ನಡೆಸಬೇಕಾದ ಸಚಿವರೆಲ್ಲರೂ ಕೊಪ್ಪಳ ಉಪ ಚುನಾವಣೆಯಲ್ಲಿ ಬ್ಯುಸಿಯಾಗಿದ್ದು, ಇದರಿಂದ ರಾಜ್ಯದಲ್ಲಿ ಸರಕಾರ ಇದೆಯೇ ಎಂಬ ಭಾವನೆ ಮೂಡುತ್ತಿದೆ ಎಂದು ಮಾಜಿ ಸಿಎಂ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ವಿಧಾನ ಸೌಧದತ್ತ ತಮ್ಮ ಸಮಸ್ಯೆಗಳನ್ನು ಇಟ್ಟುಕೊಂಡು ಬರುವ ಜನರ ಗೋಳನ್ನು ಕೇಳುವವರೇ ಇಲ್ಲವಾಗಿದೆ. ಸರಕಾರಕ್ಕೆ ಜನರ ಕಷ್ಟ ಸುಖ ಬೇಕಾಗಿಲ್ಲ ಎಂದು ಅವರು ಪತ್ರಿಕೆಗೆ ತಿಳಿಸಿದ್ದಾರೆ. ಶೋಭಾ ಕರಂದ್ಲಾಜೆ, ರೇಣುಕಾಚಾರ್ಯ, ಲಕ್ಷ್ಮಣ ಸವದಿ, ಬಚ್ಚೇಗೌಡ, ಉಮೇಶ್ ಕತ್ತಿ, ವಿಶ್ವೇಶ್ವರ ಹೆಗಡೆ ಕಾಗೇರಿ ಸೇರಿದಂತೆ ಬಹುತೇಕ ಎಲ್ಲ ಸಚಿವರು ಪ್ರಚಾರ ಕಾರ್ಯದಲ್ಲಿ ಸಂಪೂರ್ಣ ತೊಡಗಿಕೊಂಡಿದ್ದು ವಿಧಾನಸೌಧದತ್ತ ಸಚಿವರ್ಯಾರು ಸುಳಿಯುತ್ತಿಲ್ಲ. ಹೆಚ್ಚಿನ ಸಚಿವರೆಲ್ಲರೂ ಕೊಪ್ಪಳ ಉಪ ಚುನಾವಣೆಯ ತಮ್ಮ ಪಕ್ಷದ ಅಭ್ಯರ್ಥಿ ಕರಡಿ ಸಂಗಣ್ಣ ಪರವಾಗಿ ಪ್ರಚಾರದ ಭರಾಟೆಯಲ್ಲಿ ಫುಲ್ ಬ್ಯುಸಿಯಾಗಿದ್ದರೆ, ಇನ್ನು ಕೆಲವು ಸಚಿವರು ಬೆಂಗಳೂರಿನಲ್ಲಿದ್ದರೂ ವಿಧಾನ ಸೌಧದತ್ತ ಸುಳಿಯುತ್ತಲೇ ಇಲ್ಲ. ಇದು ವಿಧಾನ ಸೌಧಕ್ಕೆ ರಾಜ್ಯದ ವಿವಿಧ ಮೂಲೆಗಳಿಂದ ಸಮಸ್ಯೆ, ಬೇಡಿಕೆಗಳ ಈಡೇರಿ ಕೆಗಾಗಿ ಬರುವವರನ್ನು ಆಕ್ರೋಶಕ್ಕೀಡು ಮಾಡಿದೆ. ಜನಜಂಗುಳಿಯಿಂದ ಗಿಜಿಗಿಡು ತ್ತಿದ್ದ ವಿಧಾನಸೌಧ, ಸಚಿವರ್ಯಾರು ಇತ್ತ ಬಾರದಿರುವುದರಿಂದ ಬಿಕೋ ಎನ್ನುತ್ತಿದೆ.
ರಾಜ್ಯದ ವಿವಿಧ ಮೂಲೆಗಳಿಂದ ತಮ್ಮ ಸಮಸ್ಯೆಗಳ ಆಗರವನ್ನು ಹೊತ್ತು ಬರುವ ಜನರಿಗೆ ಕಳೆದ ಹಲವು ದಿನಗಳಿಂದ ನಿರಾಸೆಯುಂಟಾಗುತ್ತಿದೆ. ವಿವಿಧ ಖಾತೆಗಳ ಸಚಿವರನ್ನು ಭೇಟಿ ಮಾಡಿ, ತಮ್ಮ ಸಮಸ್ಯೆ, ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ರಾಜ್ಯದ ವಿವಿಧ ಜಿಲ್ಲೆಗಳ ಮೂಲೆ ಮೂಲೆಗಳಿಂದ ಜನ ವಿಧಾನ ಸೌಧಕ್ಕೆ ಪ್ರತಿನಿತ್ಯ ಬರುತ್ತಿದ್ದಾರೆ. ಆದರೆ ತಮ್ಮ ಸಮಸ್ಯೆ, ಮನವಿ ಪತ್ರಗಳನ್ನು ನೀಡಲು ವಿಧಾನಸೌಧದಲ್ಲಿ ಮಂತ್ರಿಗಳಿಲ್ಲದೆ, ಮುಚ್ಚಿದ ಸಚಿವರ ಕೊಠಡಿಗಳ ಬಾಗಿಲನ್ನು ನೋಡಿ ಬಂದ ದಾರಿಗೆ ಸುಂಕವಿಲ್ಲ ಎಂದು ಹಿಂದಿರುಗುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿತ್ತು. ‘ನಾವು ಇಷ್ಟೊಂದು ಹಣ ಖರ್ಚು ಮಾಡಿಕೊಂಡು ಸಮಸ್ಯೆ, ಬೇಡಿಕೆಗಳ ಮನವಿ ಪತ್ರಗಳನ್ನು ಹಿಡಿದುಕೊಂಡು ದೂರದ ಊರುಗಳಿಂದ ಬಂದರೂ, ನಮ್ಮನಾಳುವ ಸರಕಾರದ ಸಚಿವರು ಹಲವು ದಿನಗಳಿಂದ ಈ ಕಡೆ ಬಂದಿಲ್ಲ. ಇನ್ನೆಷ್ಟು ದಿನ ಅಂತ ಇಲ್ಲಿಗೆ ಅಲೆದಾಡುವುದು’ ಎಂದು ವಿಧಾನ ಸೌಧಕ್ಕೆ ಬರುವ ಜನರು ಸರಕಾರದ ವಿರುದ್ಧ ಹಿಡಿ ಶಾಪ ಹಾಕುತ್ತಿದ್ದಾರೆ.
ದಿನವಿಡೀ ವಿವಿಧ ಸಚಿವರನ್ನು ನೋಡಲು, ಮಾತುಕತೆ ನಡೆಸಲು ಜನ ದೂರದ ಊರುಗಳಿಂದ ಬರುತ್ತಿದ್ದರಿಂದ ಸಚಿವರ ಕೊಠಡಿಯ ಮುಂದೆ ಜನಜಂಗುಳಿಯೇ ಸೇರುತ್ತಿತ್ತು. ಆದರೆ ಈಗ ವಿಧಾನ ಸೌಧದ ಮೂರನೆ ಮಹಡಿ ಹಾಗೂ ಎರಡನೆ ಮಹಡಿಯಲ್ಲಿರುವ ಮುಖ್ಯಮಂತ್ರಿ ಸದಾನಂದ ಗೌಡರ ಹಾಗೂ ಸಚಿವರ ಕೊಠಡಿಗಳ ಬಾಗಿಲು ಮುಚ್ಚಿಯೇ ಇದೆ. ಜೊತೆಗೆ ವಿಧಾನ ಸೌಧದಲ್ಲಿ ಸಚಿವರ್ಯಾರು ಸುಳಿಯದ ಕಾರಣ ಅಧಿಕಾರಿಗಳಲ್ಲಿಯೂ ಕೆಲಸದ ಉತ್ಸಾಹ ಕಡಿಮೆಯಾಗಿದೆ. ದಿನಂಪ್ರತಿ ತಮ್ಮ ಕಾರ್ಯಚಟುವಟಿಕೆಗಳಿಗೆ ಬರುವ ಜನ ಮುಚ್ಚಿದ ಬಾಗಿಲನ್ನು ನೋಡಿ ಹಿಂದಿರುಗುತ್ತಿದ್ದಾರೆ. ಮುಖ್ಯಮಂತ್ರಿ, ಸಚಿವರಾರೂ ಇಲ್ಲದ ಕಾರಣ, ಇಲ್ಲಿನ ಅಧಿಕಾರಿಗಳು, ಸಿಬ್ಬಂದಿ ಕಾಟಾಚಾರಕ್ಕಾಗಿ ನಮ್ಮಾಂದಿಗೆ ಮಾತನಾಡುತ್ತಾರೆ ಎಂದು ವಿಧಾನ ಸೌಧಕ್ಕೆ ಬರುವ ಜನ ಆಡಿಕೊಳ್ಳುತ್ತಿದ್ದಾರೆ.
ಸರಕಾರ ಇದ್ದಂತಿಲ್ಲ: ಎಚ್‌ಡಿಕೆ
ರಾಜ್ಯದಲ್ಲಿ ಆಡಳಿತವನ್ನು ನಡೆಸಬೇಕಾದ ಸಚಿವರೆಲ್ಲರೂ ಕೊಪ್ಪಳ ಕ್ಷೇತ್ರದ ಉಪ ಚುನಾವಣೆಯ ಪ್ರಚಾರ ಕಾರ್ಯದಲ್ಲಿ ತೊಡಗುವ ಮೂಲಕ ಆಡಳಿತ ಯಂತ್ರ ಸಂಪೂರ್ಣವಾಗಿ ಕುಸಿದಿದೆ ಎಂದು ಮಾಜಿ ಸಿಎಂ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ. ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಒಂದು ಕ್ಷೇತ್ರದ ಚುನಾವಣೆಗಾಗಿ ಇಡೀ ಸರಕಾರದ ಸಚಿವರೆಲ್ಲರೂ ಠಿಕಾಣಿ ಹೂಡುವುದು ನಾಚಿಕೆಗೇಡಿನ ವಿಷಯ ಎಂದು ಕಿಡಿಗಾರಿದ್ದಾರೆ. ವಿಧಾನಸೌಧದಲ್ಲಿದ್ದು ಆಡಳಿತ ನಡೆಸಬೇಕಾದ ಸಿಎಂ, ಸಚಿವರು ಅತ್ತ ಮುಖ ಮಾಡದೆ ಹಲವು ದಿನಗಳೇ ಕಳೆದಿದೆ. ಇದರಿಂದ ರಾಜ್ಯದಲ್ಲಿ ಸರಕಾರ ಇದೆಯೇ ಎಂಬ ಪ್ರಶ್ನೆ ಜನರ ಮನಸ್ಸಿನಲ್ಲಿ ಮೂಡಿದೆ ಎಂದಿದ್ದಾರೆ.
ಈಗಿನ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ವಿಧಾನಸೌಧಕ್ಕೆ ಬರುವುದೇ ಇಲ್ಲ. ಅವರು ಎಲ್ಲಿ ಇರುತ್ತಾರೆ ಎಂಬುದು ರಾಜ್ಯದ ಜನರಿಗೆ ಗೊತ್ತಿರುವುದಿಲ್ಲ ಎಂದಿದ್ದಾರೆ. ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಂದಿನಿಂದ ಅಧಿಕಾರ ಉಳಿಸಿಕೊಳ್ಳಲು ‘ಆಪರೇಷನ್ ಕಮಲ’ದ ಮೂಲಕ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷದ ಶಾಸಕರನ್ನು ಬಿಜೆಪಿ ಖರೀದಿಸುವ ಮೂಲಕ ಉಪ ಚುನಾವಣೆ ನಡೆಯುವಂತೆ ಮಾಡುತ್ತಿದೆ. ಇದರಿಂದ ಸರಕಾರ ಉಪ ಚುನಾವಣೆಗಾಗಿ ಅನಾವಶ್ಯಕವಾಗಿ ಹಣವನ್ನು ಪೋಲು ಮಾಡುವಂತಾಗಿದೆ ಎಂದು ಹೇಳಿರುವ ಕುಮಾರಸ್ವಾಮಿ, ರಾಜ್ಯದಲ್ಲಿರುವ ಬೇರೆ ಬೇರೆ ಸಮಸ್ಯೆಗಳ ಕಡೆ ಗಮನ ಕೊಡದ ಬಿಜೆಪಿ ಸರಕಾರ, ಕೇವಲ ಉಪ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಗೆಲುವಿಗಾಗಿ ಹಣದ ಹೊಳೆ ಹರಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಜನರ ಕಷ್ಟ ಸರಕಾರಕ್ಕೆ ಬೇಕಿಲ್ಲ: ಡಾ.ಪರಮೇಶ್ವರ್
ಸಾರ್ವಜನಿಕರ ಕೆಲಸ ಕಾರ್ಯ ಮಾಡಬೇಕಾದ ಸಚಿವರೆಲ್ಲರೂ ಉಪ ಚುನಾವಣೆಯ ಪ್ರಚಾರಕ್ಕಾಗಿ ಕೊಪ್ಪಳದಲ್ಲಿ ಕ್ಯಾಂಪ್ ಹೂಡಿರುವುದು ನಾಚಿಕೆಗೇಡಿನ ವಿಷಯ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ. ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಕಳೆದ 10 ದಿನಗಳಿಂದ ಕೊಪ್ಪಳದಲ್ಲಿ ಬೀಡುಬಿಟ್ಟಿರುವ ಬಹುತೇಕ ಸಚಿವರೆಲ್ಲರೂ, ತಾವು ಅಕ್ರಮವಾಗಿ ಗಳಿಸಿರುವ ಹಣವನ್ನೆಲ್ಲ ಮತದಾರರಿಗೆ ಹಂಚುತ್ತಿದ್ದಾರೆ ಎಂದರು. ರಾಜ್ಯದ ವಿವಿಧ ಕಡೆ ಹಲವು ಸಮಸ್ಯೆಗಳಿದ್ದರೂ, ಅದರತ್ತ ಗಮನಿಸದೆ ಬಿಜೆಪಿ ಸರಕಾರ, ಕೇವಲ ಉಪಚುನಾವಣೆಗೆ ಆದ್ಯತೆ ನೀಡಿ, ಜನರ ಸಮಸ್ಯೆಗೆ ಸ್ಪಂದಿಸದಿರು ವುದು ಅವರು ರಾಜ್ಯದಲ್ಲಿ ಅಧಿಕಾರ ನಡೆಸಲು ಅನರ್ಹರು ಎಂಬುದನ್ನು ಎತ್ತಿ ತೋರಿಸುತ್ತದೆ ಎಂದಿದ್ದಾರೆ.
0 comments:
Post a Comment