PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ ಸೆ. : ಸದೃಢ ಮನಸ್ಸು ನಿರ್ಮಾಣಕ್ಕೆ ಕ್ರೀಡೆ ಅತ್ಯಂತ ಅವಶ್ಯಕ.  ವಿದ್ಯಾರ್ಥಿಗಳು ಓದಿನ ಜೊತೆಗೆ ಕ್ರೀಡೆಯ ಕಡೆಗೂ ಹೆಚ್ಚಿನ ಗಮನ ನೀಡಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್.ಪ್ರಕಾಶ್ ಕರೆ ನೀಡಿದರು. 
  ಜಿಲ್ಲಾ ಆಡಳಿತ, ಕೊಪ್ಪಳ, ಜಿಲ್ಲಾ ಪಂಚಾಯತ್, ಕೊಪ್ಪಳ ಹಾಗೂ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ  ಗುರುವಾರ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾಮಟ್ಟದ ದಸರಾ, ಮಹಿಳಾ ಹಾಗೂ ಗ್ರಾಮೀಣ (ಪೈಕಾ) ಕ್ರೀಡಾಕೂಟಕ್ಕೆ ಕ್ರೀಡಾ ಜ್ಯೋತಿ ಬೆಳಗಿಸುವುದರ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು. 
  ಕ್ರೀಡೆಯಿಂದೆ ಪ್ರತಿಯೊಬ್ಬರು ತಮ್ಮ ಮನಸ್ಸು, ದೇಹವನ್ನು ಸದೃಢಗೊಳಿಸಿಕೊಳ್ಳಬಹುದು. ಕ್ರೀಡೆಯಲ್ಲಿ ಸೋಲು-ಗೆಲುವು ಮುಖ್ಯವಲ್ಲ, ಅದರಲ್ಲಿ ಪಾಲ್ಗೊಳ್ಳುವುದು ಮುಖ್ಯ. ಸೋಲೇ ಗೆಲುವಿನ ಮೆಟ್ಟಿಲು ಎಂದು ಎಂಬುದನ್ನು ಅರಿತು ಇಲ್ಲಿನ ನಡೆಯುವ ಕ್ರೀಡಾಕೂಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ನಾಡಿಗೆ ಕೀರ್ತಿ ತರಲಿ ಎಂದು ಬಿ.ಎಸ್.ಪ್ರಕಾಶ್ ಹಾರೈಸಿದರು.
  ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೆ.ಎಚ್.ಕಾಕನೂರು ಕ್ರೀಡಾ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಕ್ರೀಡಾಪಟುಗಳು ಕ್ರೀಡಾ ಉತ್ತೇಜನಕ್ಕೆ ಹೆಚ್ಚಿನ ಗಮನ ನೀಡಬೇಕು, ವಿದ್ಯಾರ್ಥಿಗಳು ಶಿಸ್ತುಬದ್ಧ ಕ್ರೀಡೆಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಈ ನಾಡಿಗೆ ಕೀರ್ತಿ ತರುವಂತಾಗಲಿ ಎಂದು ಶುಭ ಕೋರಿದರು. 
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಜ್ಯ ಸರಕಾರಿ ನೌಕರರ ಸಂಘದ  ಕೊಪ್ಪಳ ಜಿಲ್ಲಾ ಘಟಕದ ಅಧ್ಯಕ್ಷ ಶಂಭುಲಿಂಗನಗೌಡ ಪಾಟೀಲ್ ಹಲಗೇರಿ ಮಾತನಾಡಿ, ಕ್ರೀಡಾ ಚಟುವಟಿಕೆಯಿಂದ ಮಾನಸಿಕ ಸದೃಢತೆಗೆ ಸಹಾಯಕಾರಿಯಾಗಲಿದ್ದು, ಪ್ರತಿಯೊಬ್ಬರು ಕ್ರೀಡೆಯಲ್ಲಿ ಪಾಲ್ಗೊಳ್ಳುವುದು ಅವಶ್ಯಕ. ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಆಶ್ರಯದಲ್ಲಿ ಕ್ರೀಡಾ ವಸತಿ ಶಾಲೆ ಇದ್ದು, ಇಲ್ಲಿ ಒಟ್ಟು ೫೦ ಕ್ರೀಡಾಪಟುಗಳು ಕ್ರೀಡಾ ತರಬೇತಿ ಪಡೆಯುತ್ತಿದ್ದಾರೆ. ಇದು ಶ್ಲಾಘನೀಯವಾಗಿದ್ದು, ಇದರ ಸದುಪಯೋಗ ಪಡೆದುಕೊಂಡ ಕ್ರೀಡಾಪಟುಗಳು ಮುಂದೆ ಜಿಲ್ಲೆಗೆ ಹಾಗೂ ನಾಡಿಗೆ ಹೆಚ್ಚಿನ ಗೌರವ ತರಲಿ ಎಂದು ಶುಭ ಹಾರೈಸಿದರು. 
  ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಂಟೇಲಿಂಗಾಚಾರ್, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಸೇರಿದಂತೆ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸಹಾಯಕ ಯುವಜನ ಸೇವಾ ಮತ್ತು ಕ್ರೀಡಾಧಿಕಾರಿ ಕ್ರೀಡಾಪಟುಗಳಿಗೆ ಪ್ರತಿಜ್ಞಾ ವಿಧಿ ಬೋದಿಸಿದರು. ಹಿರಿಯ ವ್ಹಾಲಿಬಾಲ್ ತರಬೇತುದಾರ ಸಿ.ಎ.ಪಾಟೀಲ್ ಪ್ರಾರಂಭದಲ್ಲಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರೆ ಕೊನೆಯಲ್ಲಿ ಇನ್ನೊರ್ವ ಖೋಖೋ ತರಬೇತುದಾರ ಯತಿರಾಜು ವಂದಿಸಿದರು.

Advertisement

0 comments:

Post a Comment

 
Top