PLEASE LOGIN TO KANNADANET.COM FOR REGULAR NEWS-UPDATES


ಎರಡು ಮುಖ್ಯ ಕಾರಣಗಳಿಗಾಗಿ ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಕರಡಿ ಸಂಗಣ್ಣ ಸೋಲಲೇ ಬೇಕಾಗಿತ್ತು. ಒಂದು, ತನ್ನ ರಾಜಕೀಯ ದುರುದ್ದೇಶಕ್ಕಾಗಿ ಕೊಪ್ಪಳ ಕ್ಷೇತ್ರದ ಮೇಲೆ ಅನಗತ್ಯವಾಗಿ ಉಪ ಚುನಾವಣೆಯನ್ನು ಹೇರಿದುದಕ್ಕಾಗಿ. ಇನ್ನೊಂದು, ಹತ್ತು ಹಲವು ಆರೋಪಗಳನ್ನು ಹೊತ್ತುಕೊಂಡು ಜೈಲು ಸೇರುವುದಕ್ಕೆ ಸಿದ್ಧರಾಗುತ್ತಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಕೊಪ್ಪಳ ಚುನಾವಣೆಯಲ್ಲಿ ಚುನಾವಣೆಯ ನೇತೃತ್ವವನ್ನು ವಹಿಸಿಕೊಂಡಿರುವ ಕಾರಣಕ್ಕಾಗಿ. ಆದರೆ ಕರಡಿ ಸಂಗಣ್ಣ ಸುಮಾರು 12 ಸಾವಿರ ಮತಗಳ ಅಂತರದಿಂದ ಎದುರಾಳಿಗಳನ್ನು ಮಣಿಸಿದ್ದಾರೆ. ಫಲಿತಾಂಶ ಬರುವ ಮುನ್ನವೇ, ಕೊಪ್ಪಳ ಕ್ಷೇತ್ರದ ಅಭ್ಯರ್ಥಿ 15 ಸಾವಿರ ಮತಗಳ ಅಂತರದಲ್ಲಿ ಗೆಲ್ಲುತ್ತಾರೆ ಮತ್ತು ಈ ಗೆಲುವಿನ ಸಂಪೂರ್ಣ ಹಕ್ಕುದಾರ ತಾನೇ ಎಂದು ಯಡಿಯೂರಪ್ಪ ಘೋಷಿಸಿದ್ದರು. ಅವರ ಮಾತುಗಳನ್ನು ಸಮರ್ಥಿಸುವಂತೆ ಕರಡಿ ಸಂಗಣ್ಣ ಭಾರೀ ಮತಗಳ ಅಂತರದಲ್ಲೇ ಗೆದ್ದಿದ್ದಾರೆ.
ಕೊಪ್ಪಳದಲ್ಲಿ ಯಡಿಯೂರಪ್ಪನವರ ಅಭ್ಯರ್ಥಿ ಕರಡಿ ಸಂಗಣ್ಣನವರಿಗೆ ಅತಿ ದೊಡ್ಡ ಎದುರಾಳಿಯಾಗಿ ಸ್ಪರ್ಧಿಸಿರುವುದು ಕಾಂಗ್ರೆಸ್ ಅಥವಾ ಜೆಡಿಎಸ್ ಅಲ್ಲ. ಬದಲಿಗೆ ಬಿಜೆಪಿಯನ್ನೇ ಎದುರಿಸುವ ಅತಿ ದೊಡ್ಡ ಸವಾಲು ಅವರ ಮುಂದಿತ್ತು. ಪರೋಕ್ಷವಾಗಿ ಕೊಪ್ಪಳ ಕ್ಷೇತ್ರದ ಉಪಚುನಾವಣೆಯ ನೇತೃತ್ವವನ್ನು ಯಡಿಯೂರಪ್ಪ ಹೊತ್ತುಕೊಂಡಾಗ, ಬಿಜೆಪಿಯ ಒಂದು ಬಣ ಕರಡಿಗೆ ಸಹಜವಾಗಿಯೇ ಅಡ್ಡಗಾಲು ಹಾಕುವುದಕ್ಕಾಗಿ ಮಸಲತ್ತನ್ನು ನಡೆಸಿತ್ತು. ಈಶ್ವರಪ್ಪ, ಅನಂತಕುಮಾರಾದಿಗಳು ಯಡಿಯೂರಪ್ಪನವರಿಗೆ ಮುಖಭಂಗವಾಗಿಸುವುದಕ್ಕಾಗಿಯೇ ಕರಡಿಯ ವಿರುದ್ಧ ಮಸಲತ್ತು ನಡೆಸಿದ್ದರು. ಆದರೆ ಈ ಎಲ್ಲ ಮಸಲತ್ತುಗಳನ್ನು ಮೀರಿ ಯಡಿಯೂರಪ್ಪ ತನ್ನ ಅಭ್ಯರ್ಥಿಯನ್ನು ಗೆಲ್ಲಿಸಿದ್ದಾರೆ.
ಅಂದರೆ, ಕರಡಿ ಪರೋಕ್ಷವಾಗಿ ಬಿಜೆಪಿಯ ವಿರುದ್ಧವೇ ಗೆದ್ದಿದ್ದಾರೆ. ಫಲಿತಾಂಶಕ್ಕೆ ಮೊದಲೇ ಗೆಲುವಿನ ಹಕ್ಕುದಾರಿಕೆ ಯನ್ನು ಯಡಿಯೂರಪ್ಪ ಘೋಷಿಸಿರುವುದರಿಂದ, ಸಹಜವಾಗಿಯೇ ಅವರ ಎದುರಾಳಿಗಳಿಗೆ ಫಲಿತಾಂಶ ದೊಡ್ಡ ಮುಖಭಂಗವಾಗಿದೆ. ಯಡಿಯೂರಪ್ಪನವರನ್ನು ಕರ್ನಾಟಕದಲ್ಲಿ ಮೂಲೆಗುಂಪು ಮಾಡಲು ಹೊರಟವರು, ಈ ಗೆಲುವನ್ನು ಜೀರ್ಣಿಸಿಕೊಳ್ಳುವುದು ಕಷ್ಟ. ವಿಪರ್ಯಾಸವೆಂದರೆ, ಈ ಗೆಲುವನ್ನು ತನ್ನ ಸಾಚಾತನಕ್ಕೆ ದೊರಕಿದ ಪ್ರಮಾಣ ಪತ್ರ ಎಂದು ಯಡಿಯೂರಪ್ಪ ಸ್ವಯಂ ಘೋಷಿಸಿಕೊಳ್ಳುವ ಸಾಧ್ಯತೆಯಿದೆ.ಈ ಪ್ರಮಾಣಪತ್ರವನ್ನು ಮುಂದಿಟ್ಟು ಪಕ್ಷದ ವರಿಷ್ಠರಿಗೆ ಮಾತ್ರವಲ್ಲ, ನ್ಯಾಯಾಲಯಗಳಿಗೂ ಸವಾಲು ಹಾಕುವ ಸಂಭವವಿದೆ. ಇಷ್ಟೆಲ್ಲ ಹಗರಣಗಳು, ಬಿಜೆಪಿಯೊಳಗಿನ ಭಿನ್ನಮತ ಇವೆಲ್ಲವುಗಳ ನಡುವೆಯೂ ಸಂಗಣ್ಣ ಹೇಗೆ ಗೆದ್ದರು ಎನ್ನುವುದರ ವಿಶ್ಲೇಷಣೆಯ ಅಗತ್ಯವಿದೆ.
ಒಂದು ರೀತಿಯಲ್ಲಿ ಇದು ಯಾವ ಪಕ್ಷದ ಗೆಲುವೂ ಅಲ್ಲ. ಸಂಗಣ್ಣನವರ ವೈಯಕ್ತಿಕ ಗೆಲುವು ಇದಾಗಿದೆ. ಈ ಕ್ಷೇತ್ರದಲ್ಲಿ ಬಿಜೆಪಿ ಗೆದ್ದಿರುವುದು ಇದೇ ಮೊದಲು. ಇಲ್ಲಿ ಯಾವುದೇ ಪಕ್ಷಗಳು ತಮ್ಮ ಪ್ರಾಬಲ್ಯವನ್ನು ಪ್ರದರ್ಶಿಸುವಲ್ಲಿ ಸೋಲುತ್ತಾ ಬಂದಿವೆ. 1989ರಲ್ಲಿ ಎಂ. ಬಿ. ದಿವಟರ್ ಪಕ್ಷೇತರರಾಗಿಯೇ ಈ ಕ್ಷೇತ್ರದಿಂದ ಗೆದ್ದಿದ್ದರು. 1994ರಲ್ಲಿ ಕರಡಿ ಸಂಗಣ್ಣ ಸ್ವತಂತ್ರ ಅಭ್ಯರ್ಥಿಯಾಗಿ ಗೆಲುವಿನ ಬಾವುಟ ಹಾರಿಸಿದ್ದರು. 1999ರಲ್ಲಿ ಇದೇ ಸಂಗಣ್ಣ ಜೆಡಿಯುವಿನಿಂದ ಗೆದ್ದಿದ್ದರೆ, 2008ರಲ್ಲಿ ಜೆಡಿಎಸ್‌ನಿಂದ ಗೆದ್ದಿದ್ದರು. ಈ ಹಿನ್ನೆಲೆಯನ್ನು ಗಮನಿಸಿದರೆ ಪಕ್ಷ ಇಲ್ಲಿ ಹೆಸರಿಗೆ ಮಾತ್ರ.
ಮತ ಹಾಕುವ ಸಂದರ್ಭದಲ್ಲಿ ವ್ಯಕ್ತಿಯೇ ಪ್ರಾಧಾನ್ಯ ಪಡೆದಿದ್ದಾನೆ. ಕರಡಿ ಸಂಗಣ್ಣ ಪಕ್ಷಗಳ ಮೂಲಕ ಸ್ಪರ್ಧಿಸಿದ್ದರೂ, ಗೆದ್ದುದು ವೈಯಕ್ತಿಕ ವರ್ಚಸ್ಸಿನಿಂದ. ಈ ಬಾರಿ ಬಿಜೆಪಿಯಿಂದ ಸ್ಪರ್ಧಿಸಿದ್ದರೂ, ಅವರ ವೈಯಕ್ತಿಕ ವರ್ಚಸ್ಸೇ ಕೆಲಸ ಮಾಡಿದೆ. ಉಳಿದಂತೆ, ಕಾಂಗ್ರೆಸ್ ಮತ್ತು ಜೆಡಿಎಸ್‌ಗಳ ನಿಷ್ಕ್ರಿಯತೆ ಕರಡಿಯ ಗೆಲುವಿಗೆ ಇನ್ನಷ್ಟು ಸಹಾಯ ಮಾಡಿರುವುದು ಸುಳ್ಳಲ್ಲ. ಒಂದು ರೀತಿಯಲ್ಲಿ, ಬಿಜೆಪಿಯಿಂದ ಸ್ಪರ್ಧಿಸದೆ ಇನ್ನಾವುದೋ ಪಕ್ಷದಿಂದ ಸ್ಪರ್ಧಿಸಿದ್ದರೆ ಕರಡಿ, 20 ಸಾವಿರಕ್ಕೂ ಅಧಿಕ ಮತಗಳಿಂದ ಗೆಲ್ಲುತ್ತಿದ್ದರು. ಕರಡಿಯ ಗೆಲುವಿನಿಂದ ಬಿಜೆಪಿಯೇನೂ ಸಂಭ್ರಮಿಸಿದಂತೆ ಕಾಣುತ್ತಿಲ್ಲ.
ಆದರೆ ಯಡಿಯೂರಪ್ಪ ಮಾತ್ರ ಮೀಸೆ ತಿರುವುತ್ತಿದ್ದಾರೆ. ಮುಳುಗುವವನಿಗೆ ಹುಲ್ಲುಕಡ್ಡಿ ಸಿಕ್ಕಿದಂತೆ, ಕರಡಿಯ ಗೆಲುವನ್ನೇ ಆಸರೆಯನ್ನಾಗಿ ಮಾಡಿಕೊಂಡು, ತನ್ನ ಮೇಲಿರುವ ಎಲ್ಲ ಆರೋಪಗಳಿಂದ ಪಾರಾಗಲು ಯಡಿಯೂರಪ್ಪ ಹವಣಿಸುತ್ತಿದ್ದಾರೆ.ಇದೇ ಸಂದರ್ಭದಲ್ಲಿ ಕಾಂಗ್ರೆಸ್-ಜೆಡಿಎಸ್‌ಗಳಿಗೆ ಕೊಪ್ಪಳ ಕ್ಷೇತ್ರದ ಚುನಾವಣೆಯ ಸೋಲು ಕಟ್ಟಕಡೆಯ ತರಗತಿ. ಇಲ್ಲಿ ಕಲಿತ ಪಾಠದಿಂದ ಮುಂಬರುವ ವಿಧಾನಸಭೆಯ ಮಹಾ ಚುನಾವಣೆಯನ್ನು ಎದುರಿಸಿದ್ದೇ ಆದರೆ, ಬಿಜೆಪಿಯನ್ನು ಹಿಂದಿಕ್ಕಿ ಸರಕಾರವನ್ನು ಹಿಡಿಯಬಹುದು. ಇಲ್ಲವಾದರೆ, ಅವು ಶಾಶ್ವತವಾಗಿ ವಿರೋಧ ಪಕ್ಷದಲ್ಲಿ ಕುಳಿತು, ಗೋಳಾಡಬೇಕು ಮತ್ತು ಹೊಟ್ಟೆ ಉರಿಸಿಕೊಳ್ಳಬೇಕು.
ಈ ಚುನಾವಣೆಯ ದೊಡ್ಡ ಪಾಠವೆಂದರೆ, ಬಿಜೆಪಿಯೊಳಗಿನ ಭಿನ್ನಮತವನ್ನೇ ತಮ್ಮ ಗೆಲುವನ್ನಾಗಿ ಪರಿವರ್ತಿಸುವ ಸೋಮಾರಿತನವನ್ನು ಈ ಪಕ್ಷಗಳು ಬಿಡಬೇಕು. ಬಿಜೆಪಿಯ ವೈಫಲ್ಯ ಉಳಿದವರ ಗೆಲುವು ಆಗಲಾರದು. ಇದನ್ನು ಕೊಪ್ಪಳ ಉಪ ಚುನಾವಣೆ ಮತ್ತೊಮ್ಮೆ ಸಾಬೀತು ಪಡಿಸಿದೆ. ಜಾತ್ಯತೀತ ಮತಗಳನ್ನು ಒಡೆಯದಂತೆ ನೋಡಿಕೊಳ್ಳುವ ಅಗತ್ಯವನ್ನು ಈ ಬಾರಿಯ ಉಪಚುನಾವಣೆಯೂ ಎತ್ತಿ ಹಿಡಿದಿದೆ. ಎಲ್ಲಿಯವರೆಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡು ಚುನಾವಣೆ ಯನ್ನು ಎದುರಿಸುವುದಿಲ್ಲವೋ, ಅಲ್ಲಿಯವರೆಗೆ ಅವಕ್ಕೆ ಸೋಲು ಕಟ್ಟಿಟ್ಟ ಬುತ್ತಿ. ಬಿಜೆಪಿ ಗೆದ್ದಾಕ್ಷಣ, ಅಕ್ರಮ ಹಣವನ್ನು ಹಂಚಿ ಬಿಜೆಪಿ ಗೆದ್ದಿತು ಎಂದು ಹೇಳಿಕೆ ನೀಡುವುದರೊಂದಿಗೆ ಕಾಂಗ್ರೆಸ್, ಜೆಡಿಎಸ್ ಮುಖ ಉಳಿಸಿಕೊಳ್ಳಲು ಹವಣಿಸುತ್ತವೆ.
ಆದರೆ ಅದರಿಂದ ರಾಜಕೀಯವಾಗಿ ಯಾವ ಲಾಭವನ್ನೂ ಪಡೆಯಲು ಸಾಧ್ಯವಿಲ್ಲ. ಜನರ ಅನುಕಂಪ ಗಳಿಸುವುದಕ್ಕೂ ಸಾಧ್ಯವಿಲ್ಲ.ಇಂದು ಭ್ರಷ್ಟರಾಗಿರುವುದು ರಾಜಕಾರಣಿಗಳು ಮಾತ್ರವಲ್ಲ, ಅವರು ತಮ್ಮ ಹಣದ ಮೂಲಕ ಜನಸಾಮಾನ್ಯರನ್ನೂ ಭ್ರಷ್ಟರನ್ನಾಗಿಸಿದ್ದಾರೆ. ಆದುದರಿಂದ ಸದ್ಯದ ಸಂದರ್ಭದಲ್ಲಿ ಬಿಜೆಪಿಯ ವಿರುದ್ಧ ಸ್ಪರ್ಧಿಸಲು ರಾಜಕೀಯ ತಂತ್ರಗಳನ್ನು ಹೆಣೆಯಬೇಕು. ಕೊಡುಕೊಳ್ಳುವಿಕೆಯಂತೂ ಇಂದು ಅತ್ಯಗತ್ಯ. ದೇವೇಗೌಡರು ಮತ್ತು ಸಿದ್ದರಾಮಯ್ಯ ತಮ್ಮ ಮೂಗಿನ ನೇರಕ್ಕೆ ಹೇಳಿಕೆಗಳನ್ನು ನೀಡುತ್ತಾ ಹೋದರೆ, ಮುಂದೊಂದು ದಿನ ಈ ಎರಡೂ ಪಕ್ಷಗಳು ರಾಜ್ಯದಲ್ಲಿ ಹೇಳ ಹೆಸರಿಲ್ಲದಂತೆ ನಾಶವಾಗಲಿವೆ. ಬಿಜೆಪಿಯನ್ನು ಎದುರಿಸಲು ಪರ್ಯಾಯ ಶಕ್ತಿಯೊಂದು ಹುಟ್ಟುವುದು ಅತ್ಯಗತ್ಯವಾಗುತ್ತದೆ. ಆದುದರಿಂದ ಕೈಮೀರುವ ಮುನ್ನ ಉಭಯ ನಾಯಕರು ಎಚ್ಚೆತ್ತುಕೊಳ್ಳಬೇಕು.    ಕೃಪೆ : ವಾರ್ತಾಭಾರತಿ ಸಂಪಾದಕೀಯ

Advertisement

0 comments:

Post a Comment

 
Top