PLEASE LOGIN TO KANNADANET.COM FOR REGULAR NEWS-UPDATES






ಕೊಪ್ಪಳ : ಜನತೆಗೆ ಬೇಕಿರುವುದು ರಾಜಕೀಯವಲ್ಲ, ರೋಟಿ,ಕಪಡಾ ಮತ್ತು ಮಕಾನ್ . ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಕೇವಲ ರಾಜಕೀಯ ಮಾಡುತ್ತ ಜನತೆಗೆ ಬೇಕಾಗಿರುವ ಮೂಲಭೂತ ಸೌಲಭ್ಯಗಳತ್ತ ನಿರ್ಲಕ್ಷ್ಯವಹಿಸಿವೆ. ಯಡಿಯೂರಪ್ಪ ಅಭಿವೃದ್ದಿ ಕೆಲಸಗಳ ಬಗ್ಗೆ ಚರ್ಚೆ ನಡೆಯುತ್ತಿಲ್ಲ ಎನ್ನುತ್ತಾರೆ. ಕಳೆದ ಮೂರುವರೆ ವರ್ಷಗಳ ಬಿಜೆಪಿ ಅಧಿಕಾರ, ಐವತ್ತು ವರ್ಷಗಳ ಕಾಂಗ್ರೆಸ್ ಆಡಳಿತ ಮತ್ತು  ನನ್ನ ಅವಧಿಯ ೨೦ ತಿಂಗಳ ಆಡಳಿತದಲ್ಲಿ ನಡೆದ ಅಭಿವೃದ್ದಿ ಕಾರ್‍ಯಗಳ ಬಗ್ಗೆ ಚರ್ಚಿಸಲು ಸಿದ್ದ. ನಾನು ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಪಂಥಾಹ್ವಾನ ನೀಡುತ್ತೇನೆ. ಇದೇ ವೇದಿಕೆಗೆ ಬನ್ನಿ ಚರ್ಚೆ ಮಾಡೋಣ. ಕಾಂಗ್ರೆಸ್ ಮತ್ತು ಬಿಜೆಪಿ ಭ್ರಷ್ಟಾಚಾರದ ಕೆಟ್ಟ ಸಂಪ್ರದಾಯ ಹಾಕಿವೆ. ಕೊಪ್ಪಳ ನಗರದ ಜನತೆ ಇಡೀ ರಾಜ್ಯಕ್ಕೆ,ದೇಶಕ್ಕೆ  ಈ ಚುನಾವಣೆಯ ಮೂಲಕ ಸಂದೇಶ ನೀಡಬೇಕಿದೆ. ಭ್ರಷ್ಟಾಚಾರವನ್ನು ಸಹಿಸುವುದಿಲ್ಲ ಎನ್ನುವ ಸಂದೇಶ ಸಾರಬೇಕಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು. ಅವರು ನಗರದ ಸಾರ್ವಜನಿಕ ಮೈದಾನದಲ್ಲಿ ಹಮ್ಮಿಕೊಂಡಿದ್ದ ವಿಧಾನಸಭಾ ಕ್ಷೇತ್ರದ ಅಲ್ಪಸಂಖ್ಯಾತರ ಸಮಾವೇಶದಲ್ಲಿ ಮಾತನಾಡುತ್ತಿದ್ದರು. 
ಇಡೀ ರಾಜ್ಯದಲ್ಲಿ ಅಭಿವೃದ್ದಿ ಪರ ಕೆಲಸಗಳಾಗಿರುವುದು ಜನತಾದಳದ ಸರ್ಕಾರದಲ್ಲಿ ಮಾತ್ರ. ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಉತ್ತರ ಕರ್ನಾಟಕದ ಜನತೆಯ ಮುಗ್ಧ ಭಾವನೆಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ನೆರೆಹಾವಳಿಯ ಸಂತ್ರಸ್ತರಿಗೆ ನೀಡಬೇಕಿರುವ ಮನೆಗಳ ಕಟ್ಟುವ ಕಾರ್‍ಯ ೨ ವರ್ಷಗಳಾದರೂ ಇನ್ನೂ ಪೂರ್ಣವಾಗಿಲ್ಲ. ಕಟ್ಟಿರುವ ಕೆಲವು ಮನೆಗಳ ಕಾಮಗಾರಿಯೂ ಪೂರ್ತಿ ಕಳಪೆಯಾಗಿದೆ. ಕಾಂಗ್ರೆಸ್ ನ ಒಳಸಂಚಿನ ರಾಜಕೀಯಕ್ಕೆ, ಬಿಜೆಪಿಗೆ ಕಡಿವಾಣ ಹಾಕಿದ್ದೆ ಜೆಡಿಎಸ್. ಅಭಿವೃದ್ದಿಗಾಗಿ ಜೆಡಿಎಸ್  ಮತ ನೀಡಿ ಪ್ರದೀಪಗೌಡ ಮಾಲಿಪಾಟೀಲರನ್ನು ಬಹುಮತದಿಂದ ಆರಿಸಿತರಬೇಕು ಎಂದು ಮನವಿ ಮಾಡಿದರು. 
 ಇದಕ್ಕೂ ಮೊದಲು ಮಾತನಾಡಿದ ಶಾಸಕ ಜಮೀರ್ ಅಹ್ಮದ್ ಇಷ್ಟು ದಿನ ಕಾಂಗ್ರೆಸ್ ಪಕ್ಷ ಮುಸ್ಲಿಂರನ್ನು ಕೇವಲ ಮತಬ್ಯಾಂಕ್ ಗಳನ್ನಾಗಿ ನೋಡುತ್ತಾ,ಉಪಯೋಗಿಸುತ್ತಾ ಬಂದಿದೆ. ಅಲ್ಪಸಂಖ್ಯಾತರಿಗಾಗಿ ಏನೂ ಮಾಡಿಲ್ಲ. ಜೆಡಿಎಸ್ ನ ಕುಮಾರಸ್ವಾಮಿಯವರ ಸರಕಾರದಲ್ಲಿ ಅಲ್ಪಸಂಖ್ಯಾತರ ಅಭಿವೃದ್ದಿಗೆ ಆದಷ್ಟು ಕೆಲಸಗಳು ಬೇರೆ ಯಾರ ಅವಧಿಯಲ್ಲೂ ಆಗಿಲ್ಲ.  ಇಲ್ಲಿ ಜೆಡಿಎಸ್ ನ ಅಭ್ಯರ್ಥಿ ಪ್ರದೀಪಗೌಡ ಮಾಲಿಪಾಟೀಲ ಅಲ್ಲ ಸ್ವತಃ ಕುಮಾರಸ್ವಾಮಿ ಮತ್ತು ನಾನು.  ಕೊಪ್ಪಳದ ಸಮಗ್ರ ಅಭಿವೃದ್ದಿಗಾಗಿ ಮತ್ತು ಮುಸ್ಲಿಂ ಬಾಂಧವರ ಅಭ್ಯುದಯಕ್ಕಾಗಿ ಜೆಡಿಎಸ್ ಗೆ ಮತ ನೀಡಿ ಎಂದು ಮನವಿ ಮಾಡಿದರು. ಕರಡಿ ಸಂಗಣ್ಣ ತಮ್ಮನ್ನು ತಾವು ಮಾರಿಕೊಂಡಿದ್ದಾರೆ. ಕೊಪ್ಪಳದ ಜನತೆ ತಮ್ಮ ಮತವನ್ನು ಮಾರಿಕೊಳ್ಳದೆ , ಯಾವುದೇ ಆಮಿಷ,ಬೆದರಿಕೆಗಳಿಗೆ ಮಣಿಯದೆ ಜೆಡಿಎಸ್ ಗೆ ಮತ ನೀಡಿ ಅಭ್ಯರ್ಥಿಯನ್ನು ಬಹುಮತದಿಂದ ಆರಿಸಿ ತರಬೇಕೆಂದು ಕೋರಿದರು. 
ಜೆಡಿಎಸ್ ಅಭ್ಯರ್ಥಿ ಪ್ರದೀಪಗೌಡ ಮಾಲಿಪಾಟೀಲ್ ಮಾತನಾಡಿ ತಮಗೆ ಮತ ಚಲಾಯಿಸುವಂತೆ ವಿನಂತಿಸಿಕೊಂಡರು. 
ಇದೇ ಸಂದರ್ಭದಲ್ಲಿ  ಬಂಡೆಪ್ಪ ಕಾಂಶಪೂರ, ಬಸವರಾಜ ಹೊರಟ್ಟಿ, ಚೆಲುವರಾಯಸ್ವಾಮಿ, ಬಸವನಗೌಡ ಯತ್ನಾಳ, ಎಂ.ಪಿ.ನಾಡಗೌಡ್ರ ,ಮಂಗಳೂರಿನ ಹೆಗಡೆ, ಸುಲ್ತಾನಾಬೇಗಂ ಮಾತನಾಡಿ ಜೆಡಿಎಸ್ ಗೆ ಮತ ನೀಡಲು ಮನವಿ ಮಾಡಿದರು. 
ಕಾರ್‍ಯಕ್ರಮವನ್ನು ಶಕೀಲ್ ನವಾಜ್ ನಡೆಸಿಕೊಟ್ಟರು. ವೇದಿಕೆಯ ಮೇಲೆ ಕೆ.ಎಂ.ಸಯ್ಯದ್, ಈ ಕೃಷ್ಣಪ್ಪ,ನಾಗಪ್ಪ ಸಾಲೋಣೀ, ಚಂದ್ರು ಕವಲೂರ, ವಿರೇಶ ಮಹಾಂತಯ್ಯಮಠ ಹಾಗೂ ಇತರ ನಾಯಕರು ಉಪಸ್ಥಿತರಿದ್ದರು.
ಕ್ಷೇತ್ರದ ವಿವಿಧ ಊರುಗಳಿಂದ ಮಹಿಳೆಯರು,ಅಭಿಮಾನಿಗಳು, ಕಾರ್‍ಯಕರ್ತರು ಸೇರಿಂತೆ ಸಾವಿರಾರು ಜನ ಉಪಸ್ಥಿತರಿದ್ದರು.

Advertisement

0 comments:

Post a Comment

 
Top