ಬಳ್ಳಾರಿ, ಸೆ.5:ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಭಾರೀ ವಿವಾದದಲ್ಲಿ ಸಿಲುಕಿರುವ, ಮಾಜಿ ಪ್ರವಾಸೋದ್ಯಮ ಸಚಿವ, ಬಳ್ಳಾರಿಯ ಗಣಿ ಧಣಿ ಜನಾರ್ದನ ರೆಡ್ಡಿಯನ್ನು ಸೋಮವಾರ ಮುಂಜಾನೆ ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ. ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಲೋಕಾಯುಕ್ತ ವರದಿಯಲ್ಲಿಯೂ ಜನಾರ್ದನ ರೆಡ್ಡಿ ಹೆಸರು ಉಲ್ಲೇಖವಾಗಿತ್ತು.
ಬೆಳ್ಳಂಬೆಳಗ್ಗೆಯೇ ಅವರ ನಿವಾಸದ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದು, ಇದೇ ಸಂದರ್ಭ ಓಬಳಾಪುರಂ ಮೈನಿಂಗ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ್ ರೆಡ್ಡಿ ಎಂಬವರನ್ನೂ ಬಂಧಿಸಲಾಗಿದೆ.
2009ರಲ್ಲಿ ಅವರ ವಿರುದ್ಧ ದಾಖಲಾಗಿದ್ದ ಕೇಸ್ ಒಂದಕ್ಕೆ ಸಂಬಂಧಿಸಿ ಈ ಬಂಧನ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಕ್ರಿಮಿನಲ್ ಒಳಸಂಚು, ವಂಚನೆ ಮತ್ತು ಭ್ರಷ್ಟಾಚಾರ ತಡೆ ಕಾಯ್ದೆಯನ್ವಯ ಈ ಕೇಸು ದಾಖಲಾಗಿತ್ತು.
ಇತ್ತೀಚೆಗೆ ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗ್ಡೆಯವರು ಅಕ್ರಮ ಗಣಿಕಾರಿಕೆ ಕುರಿತ ತಮ್ಮ ವರದಿಯಲ್ಲಿ ಜನಾರ್ದನ ರೆಡ್ಡಿ ಮತ್ತು ಸಹೋದರ ಕರುಣಾಕರ ರೆಡ್ಡಿ ಅವರು ದೋಷಿಗಳು ಎಂದು ಉಲ್ಲೇಖಿಸಿದ್ದರು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೂ ಪದತ್ಯಾಗ ಮಾಡಬೇಕಾಗಿಬಂದಿತ್ತು
ಸಚಿವ ಸಂಪುಟ ಪುನಾರಚನೆಯಾದ ಬಳಿಕ ಗಣಿಗಾರಿಕೆ ಆರೋಪ ಹೊತ್ತಿರುವ ಜನಾರ್ದನ ರೆಡ್ಡಿ, ಶ್ರೀರಾಮುಲು ಮತ್ತು ಕರುಣಾಕರ ರೆಡ್ಡಿ ಅವರಿಗೆ ಸ್ಥಾನ ನೀಡಲಾಗಿರಲಿಲ್ಲ.
ಲೋಕಾಯುಕ್ತರು ತಮ್ಮ ವರದಿಯಲ್ಲಿ ಜನಾರ್ದನ ರೆಡ್ಡಿ ಮತ್ತಿತರರ ವಿರುದ್ಧ ಮನಿ ಲಾಂಡರಿಂಗ್, ಲಂಚ ಸ್ವೀಕಾರ ಮುಂತಾದ ಆರೋಪಗಳನ್ನೂ ಮಾಡಿದ್ದರಲ್ಲದೆ, ಕರ್ನಾಟಕದಿಂದ ಕಬ್ಬಿಣದ ಅದಿರನ್ನು ಅಕ್ರಮವಾಗಿ ಹೊರದೇಶಗಳಿಗೆ ರಫ್ತು ಮಾಡಿದ್ದಾರೆ ಮತ್ತು 215 ಕೋಟಿ ರೂಪಾಯಿ ಹಣವನ್ನು ಬ್ರಿಟಿಷ್ ವರ್ಜಿನ್ ದ್ವೀಪ ಹಾಗೂ ಮಾನ್ ದ್ವೀಪದ ಬ್ಯಾಂಕುಗಳಲ್ಲಿ ಠೇವಣಿ ಇರಿಸಿದ್ದಾರೆ ಎಂದೂ ಆರೋಪಿಸಲಾಗಿತ್ತಲ್ಲದೆ, ಈ ಹಣದ ಅಕ್ರಮದ ಕುರಿತು ಸಿಬಿಐ ತನಿಖೆಗೂ ಶಿಫಾರಸು ಮಾಡಲಾಗಿತ್ತು.
0 comments:
Post a Comment