PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ ಸೆ. ೦೭ (ಕ.ವಾ): ಕೊಪ್ಪಳ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಅಧಿಸೂಚನೆ ಪ್ರಕಟವಾಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಮಾದರಿ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದು, ಎಲ್ಲಾ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಜಿಲ್ಲಾ ಚುನಾವಣಾ ಅಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಸೂಚನೆ ನೀಡಿದ್ದಾರೆ.
  ನೀತಿ ಸಂಹಿತೆ ಪಾಲನೆ ಕುರಿತಂತೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಕರೆಯಲಾಗಿದ್ದ ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ಅಭ್ಯರ್ಥಿಗಳೊಂದಿಗಿನ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
  ನೀತಿ ಸಂಹಿತೆಯನ್ನು ಎಲ್ಲಾ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು, ಕಟ್ಟುನಿಟ್ಟಾಗಿ ಪಾಲಿಸಬೇಕು, ಯಾವುದೇ ಜಾತಿ ಅಥವಾ ಸಮುದಾಯಗಳ ನಡುವೆ ಅಥವಾ ಸಮೂಹಗಳ ನಡುವೆ ಪರಸ್ಪರ ದ್ವೇಷ ಹುಟ್ಟಿಸುವ ಚಟುವಟಿಕೆಯಲ್ಲಿ ತೊಡಗಬಾರದು, ಯಾವುದೇ ಪಕ್ಷಗಳ ನಾಯಕರ ಅಥವಾ ಕಾರ್ಯಕರ್ತರ ಖಾಸಗಿ ಜೀವನದ ಯಾವುದೇ ಅಂಶಗಳ ಕುರಿತು ಟೀಕೆ ಮಾಡುವಂತಿಲ್ಲ, ಜಾತಿ ಮತಗಳ ಆಧಾರದ ಮೇಲೆ ಮತ ಕೇಳಬಾರದು, ಮಸೀದಿ, ಚರ್ಚ್, ದೇವಸ್ಥಾನ ಅಥವಾ ಇತರ ಪೂಜಾ ಸ್ಥಳಗಳನ್ನು ಚುನಾವಣಾ ಪ್ರಚಾರ ವೇದಿಕೆಗಳಾಗಿ ಬಳಸಿಕೊಳ್ಳಬಾರದು, ಯಾವುದೇ ವ್ಯಕ್ತಿಯ ಭೂಮಿ, ಕಟ್ಟಡ, ಕಾಂಪೌಂಡ್, ಗೋಡೆ ಮುಂತಾದವುಗಳನ್ನು ಅದರ ಮಾಲೀಕರ ಅನುಮತಿ ಪಡೆಯದೆ ಬಾವುಟ ನಿಲ್ಲಿಸಲು, ಭಿತ್ತಿ ಪತ್ರಗಳನ್ನು ಅಂಟಿಸಲು, ಘೋಷಣೆ ಮುಂತಾದವುಗಳನ್ನು ಬರೆಯಲು ಯಾವುದೇ ಪಕ್ಷ ಅಥವಾ ಯಾವೊಬ್ಬ ಅಭ್ಯರ್ಥಿಯು ತಮ್ಮ ಅನುಯಾಯಿಗಳಿಗೆ ಅನುಮತಿ ನೀಡುವಂತಿಲ್ಲ.  ಚುನಾವಣೆ ನೀತಿ ಸಂಹಿತೆಗೆ ಒಳಪಟ್ಟಂತೆ ರಾಜಕೀಯ ಪಕ್ಷಗಳು ಹಾಗೂ ಸಾರ್ವಜನಿಕ ವ್ಯಕ್ತಿಗಳು ಸಂಬಂಧಿಸಿದ ಅಧಿಕಾರಿಗಳಿಂದ ಅನುಮತಿಯನ್ನು ಪಡೆಯದೆ, ಯಾವುದೇ ಜಾಹಿರಾತು / ಪ್ರಚಾರ ಸಾಮಗ್ರಿಗಳನ್ನು ಪ್ರದರ್ಶಿಸುವಂತಿಲ್ಲ.  ಹಾಗೇನಾದರೂ ನಿಯಮ ಉಲ್ಲಂಘಿಸಿ ಪ್ರದರ್ಶಿಸಿದಲ್ಲಿ, ಅಂತಹ ಪಕ್ಷಗಳ ಹಾಗೂ ವ್ಯಕ್ತಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು.  ಇತರ ಪಕ್ಷಗಳು ಏರ್ಪಡಿಸುವ ಸಭೆ ಮತ್ತು ಮೆರವಣಿಗೆಗಳಲ್ಲಿ ತಮ್ಮ ಬೆಂಬಲಿಗರು ತೊಂದರೆ ಉಂಟು ಮಾಡದಂತೆ ಆಯಾ ಪಕ್ಷಗಳು, ಅಭ್ಯರ್ಥಿಗಳು ಗಮನವಹಿಸಬೇಕು, ಒಂದು ಪಕ್ಷವು ಸಭೆ ನಡೆಸುತ್ತಿರುವ ಸ್ಥಳಕ್ಕೆ ಇನ್ನೊಂದು ಪಕ್ಷವು ಮೆರವಣಿಗೆ ತೆಗೆದುಕೊಂಡು ಹೋಗುವಂತಿಲ್ಲ,  ಒಂದು ಪಕ್ಷವು ಅಂಟಿಸಿರುವ ಭಿತ್ತಿ ಪತ್ರಗಳನ್ನು ಮತ್ತೊಂದು ಪಕ್ಷದ ಕಾರ್ಯಕರ್ತರು ಕಿತ್ತುಹಾಕುವಂತಿಲ್ಲ,  ಪಕ್ಷ ಅಥವಾ ಅಭ್ಯರ್ಥಿಯು ತಾವು ನಡೆಸುವ ಸಭೆಯ ಸ್ಥಳ ಹಾಗೂ ವೇಳೆಯನ್ನು ಮುಂಚಿತವಾಗಿಯೇ ಸ್ಥಳೀಯ ಪೊಲೀಸ್ ಅಧಿಕಾರಿಗಳಿಂದ ಅನುಮತಿ ಪಡೆದ ನಂತರ ಮುಂದುವರಿಯಬೇಕು, ಸಭೆಗೆ ಧ್ವನಿವರ್ಧಕ ಬಳಕೆಗೆ ಅಥವಾ ಇತರೆ ಯಾವುದೇ ಸೌಲಭ್ಯಕ್ಕಾಗಿ ಸಂಬಂಧಪಟ್ಟ ಅಧಿಕಾರಿಗಳಿಂದ ಪರವಾನಗಿ ಪಡೆಯಬೇಕು, ಒಂದು ಮೆರವಣಿಗೆ ಏರ್ಪಡಿಸುವ ಪಕ್ಷ ಅಥವಾ ಅಭ್ಯರ್ಥಿಯು ಮೆರವಣಿಗೆ ಪ್ರಾರಂಭವಾಗುವ ವೇಳೆ ಮತ್ತು ಸ್ಥಳ, ಮುಗಿಯುವ ಸ್ಥಳವನ್ನು ಮುಂಚಿತವಾಗಿಯೇ ನಿರ್ಧರಿಸಿಕೊಳ್ಳಬೇಕು, ಈ ಕುರಿತು ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ಒದಗಿಸಬೇಕು, ವಾಹನ ಸಂಚಾರಕ್ಕೆ ಅಡಚಣೆ ಉಂಟಾಗದಂತೆ ಮೆರವಣಿಗೆಯನ್ನು ರಸ್ತೆಯ ಒಂದು ಪಾರ್ಶ್ವದಲ್ಲಿ ಸಾಗಲು ವ್ಯವಸ್ಥೆ ಮಾಡಿಕೊಳ್ಳಬೇಕು.  ನೀತಿ ಸಂಹಿತೆಯನ್ನು ಪಾಲಿಸದ, ಅಥವಾ ಉಲ್ಲಂಘಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಚುನಾವಣಾ ಅಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಎಚ್ಚರಿಕೆ ನೀಡಿದರು.
  ಸಭೆಯಲ್ಲಿ ಭಾಗವಹಿಸಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ಪ್ರಕಾಶ್ ಅವರು ಮಾತನಾಡಿ, ಯಾವುದೇ ಪಕ್ಷ ಅಥವಾ ಅಭ್ಯರ್ಥಿಗಳು ಪ್ರಚಾರ ಅಥವಾ ಇತರೆ ಕಾರ್ಯಕ್ಕಾಗಿ ವಾಹನಗಳನ್ನು ಬಳಸುವ ಪೂರ್ವದಲ್ಲಿ ಸಕ್ಷಮ ಅಧಿಕಾರಿಗಳಿಂದ ಪರವಾನಗಿ ಪಡೆದಿರಬೇಕು,  ಅಲ್ಲದೆ ಪರವಾನಗಿ ಪತ್ರವನ್ನು ಅಂತಹ ವಾಹನದ ಮೇಲೆ ಕಾಣುವಂತೆ ಪ್ರದರ್ಶಿಸಬೇಕು,  ಎಷ್ಟು ವಾಹನಗಳಿಗೆ ಅನುಮತಿ ಪಡೆಯಲಾಗಿರುತ್ತದೋ, ಅಷ್ಟೇ ವಾಹನಗಳನ್ನು ಮಾತ್ರ ಚುನಾವಣಾ ಕಾರ್ಯಕ್ಕೆ ಬಳಸಬೇಕು.  ಅನುಮತಿ ಪಡೆಯದ ವಾಹನಗಳ ಮೇಲೆ ಒಂದು ಪಕ್ಷ ಅಥವಾ ಗುರುತಿನ ಬಾವುಟ ಹಾಕುವುದು, ಅನುಮತಿ ಪಡೆದಿರುವುದಕ್ಕಿಂತ ಹೆಚ್ಚಿನ ವಾಹನಗಳನ್ನು ಬಳಸಿದಲ್ಲಿ ಅಥವಾ ಪಕ್ಷ/ಗುರುತಿನ ಬಾವುಟ ಬಳಸಿದಲ್ಲಿ ಅಂತಹ ವಾಹನಗಳನ್ನು ವಶಕ್ಕೆ ತೆಗೆದುಕೊಳ್ಳಲಾಗುವುದಲ್ಲದೆ, ಅಂತಹವರ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆಯ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
  ಸಭೆಯಲ್ಲಿ ಕೊಪ್ಪಳ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಯಾಗಿರುವ ಸಹಾಯಕ ಆಯುಕ್ತ ಎಂ. ಶರಣಬಸಪ್ಪ, ಚುನಾವಣೆ ತಹಸಿಲ್ದಾರ್ ಬಿ. ನಾಗರಾಜ್ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

Advertisement

0 comments:

Post a Comment

 
Top