ಕೊಪ್ಪಳ ಸೆ. : ಕೊಪ್ಪಳ ವಿಧಾನಸಭಾ ಕ್ಷೇತ್ರ ಉಪಚುನಾವಣೆಗೆ ಸಂಬಂಧಿಸಿದಂತೆ ಈಗಾಗಲೆ ನಾಮಪತ್ರ ಸಲ್ಲಿಕೆ, ಪರಿಶೀಲನೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಚುನಾವಣೆ ನಿಮಿತ್ಯ ಜಿಲ್ಲೆಯಾದ್ಯಂತ ಜಾರಿಯಲ್ಲಿರುವ ಮಾದರಿ ನೀತಿ ಸಂಹಿತೆ ಪಾಲನೆಯ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ತೀವ್ರ ನಿಗಾ ವಹಿಸಬೇಕು, ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ಕಂಡುಬಂದಲ್ಲಿ ಕೂಡಲೆ ಅಗತ್ಯ ಕ್ರಮ ಜರುಗಿಸುವಂತೆ ಜಿಲ್ಲಾ ಚುನಾವಣಾ ಅಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಚುನಾವಣೆ ನೀತಿ ಸಂಹಿತೆ ಪಾಲನೆಯ ಬಗ್ಗೆ ಚುನಾವಣಾ ವೀಕ್ಷಕರ ಸಮಕ್ಷಮ ನೀತಿ ಸಂಹಿತೆ ಪಾಲನೆ ನಿಗಾ ತಂಡದ ಅಧಿಕಾರಿಗಳೊಂದಿಗೆ ಭಾನುವಾರ ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಕೊಪ್ಪಳ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯನ್ನು ಶಾಂತಿಯುತವಾಗಿ ಹಾಗೂ ನಿಷ್ಪಕ್ಷಪಾತದಿಂದ ಯಶಸ್ವಿಯಾಗಿ ನಡೆಸಬೇಕಾಗಿದೆ. ಈ ನಿಟ್ಟಿನಲ್ಲಿ ನೀತಿ ಸಂಹಿತೆಯನ್ನು ಎಲ್ಲಾ ರಾಜಕೀಯ ಪಕ್ಷಗಳು, ಪಕ್ಷೇತರ ಅಭ್ಯರ್ಥಿಗಳು ಸೇರಿದಂತೆ ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸುವುದು ಅಗತ್ಯ. ಯಾವುದೇ ಪಕ್ಷಗಳ ಅಭ್ಯರ್ಥಿಗಳು ಅಥವಾ ಪಕ್ಷೇತರ ಅಭ್ಯರ್ಥಿಗಳು ಚುನಾವಣಾ ಪ್ರಚಾರ ಕಾರ್ಯ ಸಂದರ್ಭದಲ್ಲಿ ನೀತಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು, ಪರವಾನಗಿ ಇಲ್ಲದೆ ಧ್ವನಿವರ್ಧಕ ಬಳಸುವುದು, ಅನುಮತಿ ಪಡೆದಿರುವುದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳನ್ನು ಬಳಸುವುದು, ಅನಧಿಕೃತವಾಗಿ ಧ್ವಜಗಳನ್ನು ವಾಹನಗಳಿಗೆ ಅಳವಡಿಸುವುದು ಮಾಡುವಂತಿಲ್ಲ. ಅಕ್ರಮವಾಗಿ ಪೋಸ್ಟರ್, ಬ್ಯಾನರ್‍ಸ್, ಬಂಟಿಂಗ್ಸ್ ಮುಂತಾದ ಪ್ರಚಾರ ಸಾಮಗ್ರಿಗಳನ್ನು ಉಪಯೋಗಿಸಬಾರದು. ಮತದಾರರನ್ನು ಸೆಳೆಯಲು ಹಣ, ಮದ್ಯ ಸೇರಿದಂತೆ ಇನ್ನಿತರೆ ಸಾಮಗ್ರಿಗಳನ್ನು ಹಂಚುವುದು ಅಥವಾ ದಾಸ್ತಾನು ಮಾಡಿಟ್ಟು ಬಳಸುವುದನ್ನು ನಿಷೇಧಿಸಲಾಗಿದ್ದು, ಒಂದು ವೇಳೆ ಇಂತಹ ಯಾವುದೇ ಪ್ರಕರಣ ಕಂಡುಬಂದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಅಂತಹ ಹಣ, ಮದ್ಯ, ಸಾಮಗ್ರಿಗಳನ್ನು ವಶಪಡಿಸಿಕೊಳ್ಳುವುದಲ್ಲದೆ, ಅಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು, ಈ ಕುರಿತ ವರದಿಯನ್ನು ನಿಯಮಿತವಾಗಿ ಸಲ್ಲಿಸಬೇಕು. ಅಧಿಕಾರಿಗಳು ಗ್ರಾಮೀಣ ಅಥವಾ ನಗರ ಪ್ರದೇಶಗಳಲ್ಲಿ ರಾತ್ರಿ ಹೊತ್ತು ಸಂಚರಿಸಿ, ರಾಜಕೀಯ ಪಕ್ಷಗಳು ಅಥವಾ ಪಕ್ಷೇತರ ಅಭ್ಯರ್ಥಿಗಳು, ನೀತಿ ಸಂಹಿತೆ ಉಲ್ಲಂಘಿಸುವಂತಹ ಚಟುವಟಿಕೆಗಳ ಬಗ್ಗೆ ತೀವ್ರ ನಿಗಾ ವಹಿಸಬೇಕು. ಅಗತ್ಯ ಬಿದ್ದಲ್ಲಿ ಇದಕ್ಕಾಗಿ ಪೊಲೀಸ್ ನೆರವು ಒದಗಿಸಲಾಗುವುದು. ಯಾವುದೇ ಹಣ, ಮದ್ಯ ಅಥವಾ ಇನ್ನಿತರೆ ಸಾಮಗ್ರಿಗಳು ದಾಸ್ತಾನು ಮಾಡುವುದು, ಸಾಗಾಣಿಕೆ ಮಾಡುವುದರ ಬಗ್ಗೆ ಮಾಹಿತಿ ದೊರೆತಲ್ಲಿ, ಅಂತಹ ಯಾವುದೇ ಮನೆ ಅಥವಾ ಕಟ್ಟಡಗಳನ್ನು ತಕ್ಷಣ ತಪಾಸಣೆ ಮಾಡಲು ಅಧಿಕಾರಿಗಳಿಗೆ ಸಂಪೂರ್ಣ ಅಧಿಕಾರ ನೀಡಲಾಗಿದೆ. ಇದಕ್ಕಾಗಿ ಯಾವುದೇ ವಿಶೇಷ ಅನುಮತಿಯ ಅಗತ್ಯವಿಲ್ಲ ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ತಿಳಿಸಿದರು.
ಸಭೆಯಲ್ಲಿ ಭಾಗವಹಿಸಿದ್ದ ಚುನಾವಣಾ ವೀಕ್ಷಕ (ಸಾಮಾನ್ಯ) ಎಸ್. ಕಿಶೋರ್ ಅವರು ಮಾತನಾಡಿ ಉಪಚುನಾವಣೆಯನ್ನು ನಿಷ್ಪಕ್ಷಪಾತವಾಗಿ ನಡೆಸುವುದು ನಮ್ಮ ಉದ್ದೇಶವಾಗಿದೆ. ಇದರಲ್ಲಿ ಯಾವುದೇ ರಾಜಕೀಯ ಪಕ್ಷ ಅಥವಾ ಪಕ್ಷೇತರ ಸೇರಿದಂತೆ ಯಾರೇ ಅಭ್ಯರ್ಥಿಗಳು ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಲು ಅವಕಾಶ ನೀಡುವುದಿಲ್ಲ. ಒಂದು ವೇಳೆ ಅಂತಹ ಪ್ರಕರಣ ಅಥವಾ ವರದಿ ಕಂಡು ಬಂದಲ್ಲಿ ಕಠಿಣ ಕಾನೂನು ಕ್ರಮಕ್ಕೆ ಮುಂದಾಗಬೇಕಾಗುತ್ತದೆ. ಚುನಾವಣೆ ಸಂದರ್ಭದಲ್ಲಿ ಸಾಮಾನ್ಯವಾಗಿ ಹಣ ಹಾಗೂ ಮದ್ಯ ಹಂಚುವ ಪ್ರಕರಣಗಳು ಹೆಚ್ಚು, ಆದ್ದರಿಂದ ಈ ಬಾರಿ ಇಂತಹ ವಿಷಯಕ್ಕೆ ಹೆಚ್ಚು ನಿಗಾ ವಹಿಸಬೇಕಾಗಿದ್ದು, ಪ್ರಮುಖ ಮಾರ್ಗಗಳಲ್ಲಿ ಚೆಕ್‌ಪೋಸ್ಟ್ ಸ್ಥಾಪಿಸಿ ಪರಿಶೀಲಿಸಬೇಕು. ಒಟ್ಟಾರೆ ಅಧಿಕಾರಿಗಳು ಪ್ರಾಮಾಣಿಕವಾಗಿ ತಮ್ಮ ಕರ್ತವ್ಯ ನಿರ್ವಹಿಸಬೇಕು. ತಪ್ಪಿದಲ್ಲಿ ಅಂತಹವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಚುನಾವಣಾ ವೀಕ್ಷಕ (ಚುನಾವಣಾ ವೆಚ್ಚ) ರಾಜೀವ್ ಅಗರವಾಲ್ ಅವರು ಈ ಸಂದರ್ಭದಲ್ಲಿ ಮಾತನಾಡಿ, ಹಣ, ಮದ್ಯ ಹಂಚಿಕೆಯ ಮಾಹಿತಿ ಆಯಾ ವ್ಯಾಪ್ತಿಯ ಮತದಾರರಿಗೆ ಕೂಡಲೆ ಸಿಗುತ್ತದೆ ಎಂದರೆ ಆಯಾ ವ್ಯಾಪ್ತಿಯಲ್ಲಿ ನಿಗಾ ವಹಿಸುವ ಅಧಿಕಾರಿಗಳಿಗೂ ಸಹ ಈ ಮಾಹಿತಿ ದೊರೆಯಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಅತ್ಯಂತ ಜಾಗರೂಕತೆಯಿಂದ ಕೆಲಸ ನಿರ್ವಹಿಸಬೇಕಿದೆ. ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ಮುದ್ರಣ ಮಾಧ್ಯಮ, ಎಲೆಕ್ಟ್ರಾನಿಕ್ ಮಾಧ್ಯಮ ಸೇರಿದಂತೆ ಇನ್ನಿತರೆ ಮಾಧ್ಯಮಗಳಲ್ಲಿ ಚುನಾವಣಾ ಪ್ರಚಾರಕ್ಕಾಗಿ ಜಾಹೀರಾತು ನೀಡುವುದು ಅಥವಾ ಪೇಯ್ಡ್ ನ್ಯೂಸ್ ಮೂಲಕ ಪ್ರಚಾರ ಗಿಟ್ಟಿಸಿಕೊಳ್ಳುವುದರ ಬಗ್ಗೆ ತೀವ್ರಾ ನಿಗಾ ವಹಿಸಲು ಕ್ರಮ ಕೈಗೊಳ್ಳಲಾಗಿದೆ. ಇಂತಹ ಸಂದರ್ಭದಲ್ಲಿ ಆಯಾ ಜಾಹೀರಾತಿನ ವೆಚ್ಚವನ್ನು ಆಯಾ ಅಭ್ಯರ್ಥಿಯ ಚುನಾವಣಾ ವೆಚ್ಚಕ್ಕೆ ಸೇರಿಸಲಾಗುವುದು. ಅಭ್ಯರ್ಥಿಗಳು ಯವುದೇ ಜಾಹೀರಾತಿಗೆ ಸಂಬಂಧಿಸಿದಂತೆ ಸಂಪೂರ್ಣ ವಿವರವನ್ನು ಸಂಬಂಧಿಸಿದ ಅಧಿಕಾರಿಗಳಿಗೆ ಸಲ್ಲಿಸಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ಪ್ರಕಾಶ್, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿನಿರ್ದೇಶಕ ಆನಂದ್, ಡಿವೈಎಸ್‌ಪಿ ವಿಜಯ ಡಂಬಳ, ಚುನಾವಣಾ ವೀಕ್ಷಕರ ಲೈಜನಿಂಗ್ ಅಧಿಕಾರಿಗಳಾದ ಜಿಲ್ಲಾ ಬಿಸಿಎಂ ಅಧಿಕಾರಿ ಕಲ್ಲೇಶ್, ಪರಿಸರ ಮಾಲಿನ್ಯ ನಿಯಂತ್ರಣ ಅಧಿಕಾರಿ ಶ್ರೀಧರ್, ನಗರಸಭೆ ಪೌರಾಯುಕ್ತ ಆನಂದ ಕಾಂಬ್ಳೆ, ಅಬಕಾರಿ ಇಲಾಖೆ ಅಧಿಕಾರಿಗಳು ಸೇರಿದಂತೆ ಚುನಾವಣಾ ನೀತಿ ಸಂಹಿತೆ ಪಾಲನೆ ನಿಗಾ ತಂಡದ ಅಧಿಕಾರಿಗಳು ಭಾಗವಹಿಸಿ ಸಭೆಗೆ ಮಾಹಿತಿ ನೀಡಿದರು.
0 comments:
Post a Comment