PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ ಆ.: ಬಾಲ್ಯಾವಸ್ಥೆಯ ಆನಂದವನ್ನು ಸವಿಯಬೇಕಾಗಿರುವ ಮಕ್ಕಳನ್ನು ಮದುವೆಯೆಂದರೆ ಏನೆಂದು ಅರಿಯದ ಮುಗ್ಧ ಮಕ್ಕಳನ್ನು ವಿವಾಹ ಬಂಧನಕ್ಕೆ ಒಳಪಡಿಸುವುದು ಅಕ್ಷಮ್ಯ ಅಪರಾಧ ಹಾಗೂ ಕಾನೂನು ಬಾಹಿರ, ಬಾಲ್ಯ ವಿವಾಹಕ್ಕೆ ಕಾರಣಕರ್ತರಾಗುವ ಎಲ್ಲರಿಗೂ ಕಠಿಣ ಶಿಕ್ಷೆ ತಪ್ಪಿದ್ದಲ್ಲ ಎಂದು ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಎಚ್ಚರಿಕೆ ನೀಡಿದರು.
ಕೊಪ್ಪಳ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಯೂನಿಸೆಫ್ ಇವರ ಸಹಯೋಗದೊಂದಿಗೆ ಬಾಲ್ಯ ವಿವಾಹ ತಡೆಗಟ್ಟುವುದು ಹಾಗೂ ಬಾಲಕಾರ್ಮಿಕ ಪದ್ಧತಿಯ ನಿರ್ಮೂಲನೆ ಕುರಿತಂತೆ ಚರ್ಚಿಸಲು ಜಿಲ್ಲೆಯ ವಿವಿಧ ಸಂಘ ಸಂಸ್ಥೆಗಳು, ಕೋಳಿಫಾರಂ, ಬೀಜ ತಯಾರಿಕೆ ಕಂಪನಿಗಳ ಪ್ರತಿನಿಧಿಗಳೊಂದಿಗೆ ಏರ್ಪಡಿಸಲಾದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಮದುವೆ ಮಾಡಿಕೊಳ್ಳಲು ಗಂಡಿಗೆ ೨೧ ವರ್ಷ, ಹೆಣ್ಣಿಗೆ ೧೮ ವರ್ಷ ಪೂರ್ಣಗೊಳ್ಳುವುದು ಕಾನೂನು ರೀತ್ಯಾ ಕಡ್ಡಾಯವಾಗಿದೆ. ಆದರೆ ಕೊಪ್ಪಳ ಜಿಲ್ಲೆಯಲ್ಲಿ ಬಾಲ್ಯ ವಿವಾಹದ ಪ್ರಮಾಣ ಹೆಚ್ಚಾಗಿದ್ದು, ಇದನ್ನು ತಡೆಗಟ್ಟಬೇಕಾಗಿದೆ. ಮದುವೆ ಎಂಬುದು ಗೊಂಬೆಯಾಟವಲ್ಲ, ಮದುವೆಯ ಬಗ್ಗೆ ಯಾವುದೇ ಅರಿವು ಇರದ ಮುಗ್ಧ ಮಕ್ಕಳನ್ನು ಹಣಕಾಸಿನ ಕೊರತೆ, ಹೆಣ್ಣು ಮಕ್ಕಳು ಕುಟುಂಬಕ್ಕೆ ಹೊರೆ, ಆಸ್ತಿ ಹಾಗೂ ತವರು ಮನೆಯ ಸಂಬಂಧ ಕಾಪಾಡಿಕೊಳ್ಳುವುದು, ಅಜ್ಜ-ಅಜ್ಜಿಯರ ಮನೋಭಿಲಾಷೆ ಈಡೇರಿಸಬೇಕು ಮುಂತಾದ ಅಸಂಬದ್ಧ ಸಬೂಬುಗಳನ್ನು ಮುಂದೊಡ್ಡಿ ಅಪ್ರಾಪ್ತರನ್ನು ಮದುವೆ ಮಾಡಿಸುವುದು ಅಕ್ಷಮ್ಯ ಅಪರಾಧ. ಭವಿಷ್ಯದಲ್ಲಿ ಉತ್ತಮವಾಗಿ ಬಾಳಬೇಕಾದವರು, ಬಾಲ್ಯವಿವಾಹಕ್ಕೆ ತುತ್ತಾಗಿ ಅನೇಕ ತೊಂದರೆಗಳನ್ನು ಅನುಭವಿಸುತ್ತಿರುವ ಅನೇಕ ಪ್ರಕರಣಗಳು ನಮ್ಮೆದುರಿಗಿವೆ. ಜಿಲ್ಲೆಯಲ್ಲಿ ಸಂಭವಿಸುವ ತಾಯಿ ಮರಣ, ಶಿಶು ಮರಣ ಪ್ರಕರಣಗಳ ಪೈಕಿ ಶೇ. ೯೦ ರಷ್ಟು ಪ್ರಕರಣಗಳಿಗೆ ಬಾಲ್ಯವಿವಾಹವೇ ಕಾರಣವಾಗಿದೆ ಎಂಬ ಅಂಶ ಬೆಳಕಿಗೆ ಬಂದಿರುವುದು, ಈ ಭಾಗದಲ್ಲಿ ಹೆಚ್ಚು ಬಾಲ್ಯ ವಿವಾಹಗಳು ನಡೆಯುತ್ತಿವೆ ಎಂಬ ಅಂಶಕ್ಕೆ ಪುಷ್ಟಿ ನೀಡುತ್ತದೆ. ಬಾಲ್ಯ ವಿವಾಹ ಪ್ರಕರಣಗಳಿಗೆ ಸಾಮಾನ್ಯವಾಗಿ ಸಾಮೂಹಿಕ ಮದುವೆಗಳ ಸಮಾರಂಭಗಳಲ್ಲಿಯೂ ಸಹ ಎಲ್ಲರ ಕಣ್ಣೆದುರಿಗೇ ಬಾಲ್ಯವಿವಾಹಗಳು ನಡೆಯುತ್ತಿವೆ. ಬಾಲ್ಯ ವಿವಾಹ ತಡೆಗಟ್ಟುವ ಕುರಿತಂತೆ ಸರ್ವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಶಿವರಾಜ್ ಪಾಟೀಲ್ ಅವರ ನೇತೃತ್ವದಲ್ಲಿ ರಚಿಸಲಾಗಿದ್ದ ರಾಜ್ಯ ಮಟ್ಟದ ಸಮಿತಿಯು ಬಾಲ್ಯ ವಿವಾಹ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರಕ್ಕೆ ಮಹತ್ವದ ವರದಿ ಸಲ್ಲಿಸಿದ್ದು, ಸಮಿತಿಯ ಶಿಫಾರಸ್ಸಿನನ್ವಯ ಸಾಮೂಹಿಕ ವಿವಾಹಗಳನ್ನು ಆಯೋಜಿಸುವ ಸಂದರ್ಭದಲ್ಲಿ ಅನುಸರಿಸಬೇಕಾದ ಕ್ರಮಗಳು, ನೋಂದಣಿ, ಸಾಮೂಹಿಕ ವಿವಾಹಕ್ಕೆ ಅನುಮಿ ಪಡೆಯುವುದು ಮುಂತಾದ ಕ್ರಮಗಳ ಕುರಿತು ಕ್ರಮ ಕೈಗೊಳ್ಳಬೇಕಾಗಿದೆ. ಸಾಮೂಹಿಕ ವಿವಾಹ ಕಾರ್ಯಕ್ರಮದ ಆಯೋಜಕರು ಕಡ್ಡಾಯವಾಗಿ ಜಿಲ್ಲಾ ನೋಂದಣಾಧಿಕಾರಿಗಳಲ್ಲಿ ನೋಂದಾಯಿಸಿಕೊಳ್ಳಬೇಕು, ಆಯಾ ತಾಲೂಕು ತಹಸಿಲ್ದಾರರುಗಳಿಂದ ಅನುಮತಿ ಪಡೆಯಬೇಕು, ಯಾವುದೇ ಕಾರಣಕ್ಕೂ ಬಾಲ್ಯ ವಿವಾಹ ನಡೆಸುವುದಿಲ್ಲ ಎಂದು ಆಯಾ ಸಂಘಟಕರು ಅಫಿಡೆವಿಟ್ ಸಲ್ಲಿಸಬೇಕು ಮುಂತಾದ ಕ್ರಮಗಳನ್ನು ಅನುಸರಿಸುವುದು ಕಡ್ಡಾಯವಾಗಿದೆ. ಬಾಲ್ಯ ವಿವಾಹಕ್ಕೆ ಕಾರಣಕರ್ತರಾಗುವ ವಧು-ವರರ ಕುಟುಂಬದವರು, ಸಂಘಟಕರು, ಪೂಜಾರಿಗಳು, ನಿರ್ದೇಶಿಸಿದವರು, ಕುಮ್ಮಕ್ಕು ನೀಡಿದವರು ಹೀಗೆ ಎಲ್ಲ ಕಾರಣೀಕರ್ತರ ಮೇಲೂ ಪ್ರಕರಣ ದಾಖಲಿಸಿ, ಅವರೆಲ್ಲರಿಗೂ ೧ ಲಕ್ಷ ರೂ. ದಂಡ ಹಾಗೂ ೨ ವರ್ಷ ಜೈಲು ಶಿಕ್ಷೆಗೆ ಅವಕಾಶವಿದೆ. ಒಂದು ವೇಳೆ ಕಾನೂನು ಉಲ್ಲಂಘಿಸಿ ಬಾಲ್ಯ ವಿವಾಹ ಮಾಡಿಸಲು ಮುಂದಾದಲ್ಲಿ, ಅಂತಹವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಲು ಹಿಂಜರಿಯುವುದಿಲ್ಲ ಎಂದು ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಎಚ್ಚರಿಕೆ ನೀಡಿದರು.
ಯೂನಿಸೆಫ್‌ನ ಹರೀಶ್ ಜೋಗಿ ಅವರು ಈ ಸಂದರ್ಭದಲ್ಲಿ ಮಾತನಾಡಿ ಸಮೀಕ್ಷಾ ವರದಿಯ ಪ್ರಕಾರ ಕೊಪ್ಪಳ ಜಿಲ್ಲೆಯಲ್ಲಿ ನಡೆಯುವ ಮದುವೆಗಳ ಪೈಕೆ ಶೇ. ೫೯ ರಷ್ಟು ಬಾಲ್ಯವಿವಾಹಗಳಾಗಿರುತ್ತವೆ. ಬಾಲ್ಯ ವಿವಾಹ ಕಾರಣಗಳಿಂದಾಗಿ ಜಿಲ್ಲೆಯಲ್ಲಿ ೧೦೦೦ ಕ್ಕೆ ಕೇವಲ ೫೯ ರಷ್ಟು ಶಿಶು ಮರಣ ಸಂಭವಿಸುತ್ತಿದೆ ಎಂದು ತಿಳಿಸಿದರಲ್ಲದೆ, ಬಾಲ್ಯ ವಿವಾಹದ ದುಷ್ಪರಿಣಾಮಗಳು, ಇದನ್ನು ತಡೆಗಟ್ಟುವ ಬಗೆಯನ್ನು ಸವಿಸ್ತಾರವಾಗಿ ವಿವರಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಹೆಚ್. ಕಾಕನೂರ, ಯೂನಿಸೆಫ್‌ನ ಅಧಿಕಾರಿ ಸೋನುಕುಟ್ಟಿ ಜಾರ್ಜ್, ಡಾ. ಮಾಥೂರ್, ಬೀನಾ ಸೇರಿದಂತೆ ಜಿಲ್ಲೆಯಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮಗಳನ್ನು ಆಯೋಜಿಸುವ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

Advertisement

0 comments:

Post a Comment

 
Top