PLEASE LOGIN TO KANNADANET.COM FOR REGULAR NEWS-UPDATES

ಗುಲಬರ್ಗಾ,ಆ.೧೧. -ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ರಂಗಾಪೂರ ಗ್ರಾಮದ ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಮತ್ತು ಕಾನೂನು ಬಾಹೀರವಾಗಿ ವಿವಿಧ ಜನರಿಗೆ ಪರಭಾರೆ ಮಾಡಿದ ಪ್ರಕರಣದಲ್ಲಿ ಭಾಗಿಯಾದ ಅಧಿಕಾರಿಗಳ ಮತ್ತು ಸಿಬ್ಬಂದಿಗಳ ವಿರುದ್ಧ ಕ್ರಮಿನಲ್ ಮೊಕದ್ದಮೆ ಹೂಡುವಂತೆ ಮತ್ತು ಕಾನೂನು ಪ್ರಕಾರ ಶಿಸ್ತುಕ್ರಮ ಜರುಗಿಸುವಂತೆ ಗುಲಬರ್ಗಾ ವಿಭಾಗದ ಪ್ರಾದೇಶಿಕ ಆಯುಕ್ತ ಡಾ. ರಜನೀಶ್ ಗೋಯಲ್ ಅವರು ಕೊಪ್ಪಳ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ. ಇದಲ್ಲದೆ ರಂಗಾಪೂರದ ಸರ್ವೇ ನಂ. ೪ರಲ್ಲಿ ಅನಧಿಕೃತವಾಗಿ ಪಹಣಿ ಕಲಂ ೧೨ರಲ್ಲಿ ಸೇರಿಸಿದ ಹೆಸರುಗಳನ್ನು ನಿಯಮಾನುಸಾರ ರದ್ದುಪಡಿಸಿ ಮೊದಲಿನಂತೆ ಕರ್ನಾಟಕ ಸರ್ಕಾರವೆಂದು ನಮೂದಿಸುವಂತೆ ಹಾಗೂ ಈ ಪಹಣಿಯಲ್ಲಿ ಅನಧಿಕೃತವಾಗಿ ಸೇರ್ಪಡೆಗೊಂಡ ಫಲಾನುಭವಿಗಳ ವಿರುದ್ಧ ಕಾನೂನು ಪ್ರಕಾರ ಕ್ರಮ ಜರುಗಿಸುವಂತೆಯೂ ಸೂಚಿಸಿದ್ದಾರೆ.
ಈ ಗ್ರಾಮದ ಸರ್ಕಾರಿ ಸರ್ವೇ ನಂ. ೪ರ ಒಟ್ಟು ವಿಸ್ತೀರ್ಣ ೫೬೮.೨೭ ಗುಂಟೆ ಇದೆ. ಈ ಪೈಕಿ ೨೨೭.೩೧ ಗುಂಟೆ ಅರಣ್ಯ ಇಲಾಖೆಯ ಜಮೀನಿದೆ. ಹಿಂದಿನ ತಹಶೀಲ್ದಾರರು ೨೦೧೧ರ ಜುಲೈ ೧೫ರಂದು ರಂಗಾಪೂರದ ಮತ್ತಿತರ ಜನರಿಂದ ೨ ಅರ್ಜಿಗಳನ್ನು ಸಾಗುವಳಿ ಚೀಟಿಗಾಗಿ ಸ್ವೀಕರಿಸಿ ಅಂದೇ ಗಂಗಾವತಿ ಕಂದಾಯ ನಿರೀಕ್ಷಕರಿಗೆ ಎನ್.ಡಿ.ಸಿ. ಮಾಡಿ ಪಂಚನಾಮಾ ಮತ್ತು ವರದಿ ಸಲ್ಲಿಸಲು ಕಳುಹಿಸಿದ್ದರು. ಕಂದಾಯ ನಿರೀಕ್ಷಕರು ಸರ್ವೇ ನಂ. ೪ರಲ್ಲಿ ೩೫ ಜನರ ಹೆಸರುಗಳನ್ನು ನೋಂದಾಯಿಸಿ ಅಂದೇ ತಹಶೀಲ್ದಾರರಿಗೆ ಹಿಂದಿರುಗಿಸಿದ್ದಾರೆ. ಪಂಚನಾಮಾದಲ್ಲಿ ಯಾವುದೇ ಅರ್ಜಿ ಸಲ್ಲಿಸಿರುವುದಿಲ್ಲ ಹಾಗೂ ಸಾಗುವಳಿ ಚೀಟಿ ನೀಡಲು ಬರುವುದಿಲ್ಲವೆಂದು ಆರ್.ಐ. ಮತ್ತು ವಿ.ಎ. ತಿಳಿಸಿದ್ದಾರೆ. ತಹಶೀಲ್ದಾರರು ಜುಲೈ ೧೮ರಂದು ೩೫ ಜನರ ಹೆಸರನ್ನು ಪಹಣಿ ಕಲಂ ೧೨ರಲ್ಲಿ ನೋಂದಾಯಿಸುವಂತೆ ಆರ್.ಐ. ಪಂಚನಾಮಾದೊಂದಿಗೆ ಗಣಕೀಕೃತ ಸಂಕಲನಕ್ಕೆ ಆದೇಶ ರವಾನಿಸಿದ ಪ್ರಯುಕ್ತ ಹೆಸರುಗಳು ನೋಂದಾಯಿಸಲ್ಪಟ್ಟಿವೆ.
ಸದರಿ ಭೂಮಿಯನ್ನು ೧೯೯೮-೯೯ರಿಂದ ೨೦೧೦-೧೧ನೇ ಸಾಲಿನವರೆಗೆ ಪಹಣಿಯಲ್ಲಿ ಸರ್ಕಾರಿ ಜಮೀನೆಂದು ನೋಂದಾಯಿಸಲಾಗಿದೆ. ಈ ಹಿಂದೆ ಭೂ ಮಂಜೂರಾತಿ ಸಮಿತಿಯಲ್ಲಿ ಈ ಜನರಿಗೆ ಅರ್ಜಿ ನಮೂನೆ ೫೦ ಮತ್ತು ೫೩ ಸಲ್ಲಿಸಿರುವುದಿಲ್ಲ ಮತ್ತು ಮೇಲಾಧಿಕಾರಿಗಳ ಯಾವುದೇ ಆದೇಶವಿರದೆ ಮತ್ತು ಯಾವುದೇ ಪ್ರಾಧಿಕಾರದ ಅನುಮೋದನೆ ಪಡೆಯದೇ ಹೆಸರು ನೋಂದಣಿ ಮಾಡಿರುವುದು ಕಾನೂನಿನ ಉಲ್ಲಂಘನೆಯಾಗಿರುವುದು ಮತ್ತು ಅಕ್ರಮ ವ್ಯವಹಾರವೆಸಗಿರುವುದು ಸ್ಪಷ್ಟವಾಗಿ ಕಂಡು ಬಂದಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳ ಮತ್ತು ಸಿಬ್ಬಂದಿಗಳ ವಿರುದ್ಧ ಕ್ರಮಕ್ಕೆ ನಿರ್ದೇಶನ ನೀಡಲಾಗಿದೆ ಎಂದು ಡಾ. ರಜನೀಶ್ ಗೋಯಲ್ ಅವರು ತಿಳಿಸಿದ್ದಾರೆ.

Advertisement

0 comments:

Post a Comment

 
Top