PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ ಜು. ೫ : ಈ ಭಾಗದ ರೈತರ ಬಹುದಿನಗಳ ಬೇಡಿಕೆಯಾಗಿರುವ ಸಿಂಗಟಾಲೂರು ಏತ ನೀರಾವರಿ ಯೋಜನೆಯಡಿ ಕೊಪ್ಪಳ ಭಾಗದ ರೈತರಿಗೆ ನೀರುಣಿಸಲಿರುವ ಎಡದಂಡೆ ಕಾಲುವೆಯ ನಿರ್ಮಾಣ ಕಾಮಗಾರಿ ಜು. ೧೧ ರಿಂದ ಪ್ರಾರಂಭವಾಗಲಿದೆ ಎಂದು ರಾಜ್ಯ ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಸಂಗಣ್ಣ ಕರಡಿ ಅವರು ಹೇಳಿದ್ದಾರೆ.

ಸಿಂಗಟಾಲೂರು ಏತ ನೀರಾವರಿ ಯೋಜನೆಗೆ ಸಂಬಂಧಿಸಿದಂತೆ ಈಗಾಗಲೆ ಕ್ರಸ್ಟ್ ಗೇಟ್‌ಗಳ ಅಳವಡಿಕೆ ಕಾರ್ಯ ಪೂರ್ಣಗೊಂಡಿದ್ದು ಕೊಪ್ಪಳ ಭಾಗಕ್ಕೆ ಬರುವ ಎಡದಂಡೆ ಕಾಲುವೆಯ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲು ರಾಜ್ಯ ಜಲಸಂಪನ್ಮೂಲ ಸಚಿವರಾದ ಬಸವರಾಜ್ ಬೊಮ್ಮಾಯಿ ಅವರು ದಿನಾಂಕ ನಿಗದಿಪಡಿಸಿದ್ದಾರೆ. ಕಾರ್ಯಕ್ರಮವನ್ನು ತಾಲೂಕಿನ ಕವಲೂರು ಅಥವಾ ಅಳವಂಡಿ ಗ್ರಾಮಗಳ ಪೈಕಿ ಒಂದು ಗ್ರಾಮದಲ್ಲಿ ಏರ್ಪಡಿಸಲಾಗುವುದು. ರಾಜ್ಯದ ಮುಖ್ಯಮಂತ್ರಿಗಳೂ ಸಹ ಕಾರ್ಯಕ್ರಮಕ್ಕೆ ಆಗಮಿಸಲು ಒಪ್ಪಿಗೆ ಸೂಚಿಸಿದ್ದು, ರಾಜ್ಯ ವಸತಿ ಸಚಿವ ವಿ. ಸೋಮಣ್ಣ, ಸಣ್ಣ ನೀರಾವರಿ, ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ಗೋವಿಂದ ಕಾರಜೋಳ, ಜಿಲ್ಲಾ ಉಸ್ತುವಾರಿ ಹಾಗೂ ರಾಜ್ಯ ಸಹಕಾರ ಮತ್ತು ಕೃಷಿ ಮಾರುಕಟ್ಟೆ ಸಚಿವ ಲಕ್ಷ್ಮಣ ಎಸ್ ಸವದಿ ಅವರೂ ಸಹ ಕಾರ್ಯಕ್ರಮಕ್ಕೆ ಆಗಮಿಸುವ ಸಾಧ್ಯತೆ ಇದೆ. ಅದೇ ದಿನದಂದು ವಸತಿ ಸಚಿವ ವಿ. ಸೋಮಣ್ಣ ಅವರು ಕೊಪ್ಪಳದ ಬಳಿ ಲಭ್ಯವಿರುವ ಸುಮಾರು ೨೪ ಎಕರೆ ಪ್ರದೇಶದಲ್ಲಿ ವ್ಯವಸ್ಥೆಗೊಳಿಸಲಾಗಿರುವ ನಿವೇಶನಗಳನ್ನು ಅಂದು ಬಡವರಿಗೆ, ಸೂರು ರಹಿತ ಸುಮಾರು ೬೦೦ ರಿಂದ ೭೦೦ ಫಲಾನುಭವಿಗಳಿಗೆ ವಿತರಿಸುವ ಕಾರ್ಯಕ್ರಮ ಹಾಗೂ ಹಮಾಲರ ವಸತಿ ಯೋಜನೆಯಡಿ ನಿವೇಶನ ಹಂಚುವ ಕಾರ್ಯಕ್ರಮವನ್ನೂ ಸಹ ಏರ್ಪಡಿಸಲಾಗುವುದು ಎಂದು ರಾಜ್ಯ ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಸಂಗಣ್ಣ ಕರಡಿ ಅವರು ಹೇಳಿದ್ದಾರೆ.

Advertisement

0 comments:

Post a Comment

 
Top