PLEASE LOGIN TO KANNADANET.COM FOR REGULAR NEWS-UPDATES

ದಲಿತಕವಿ ಸಿದ್ಧಲಿಂಗಯ್ಯನವರ ಬದಲಾದ ಮನಸ್ಥಿತಿಯ ಮಾತುಗಳಿಗೆ ನಾಡಿನ ಎಲ್ಲಾ ಕಡೆಯಿಂದ ವಿವಿಧ ರೀತಿಯ ಪ್ರತಿಕ್ರಿ ಯೆಗಳ ಸುರಿಮಳೆಯಾಗುತ್ತಿದೆ!. ಪ್ರತಿಕ್ರಿಯಿಸುತ್ತಿರುವವರೆಲ್ಲರೂ ಕೇವಲ ಸಿದ್ಧಲಿಂಗಯ್ಯ ಎಂಬ ವ್ಯಕ್ತಿಯ ಮಾತುಗಳನ್ನೇ ಹಿಡಿದುಕೊಂಡು ಜಗ್ಗಾಡುತ್ತ ಕನ್ನಡ ನೆಲದ ಲೇಖಕರ ಆಳದಲ್ಲಾಗುತ್ತಿರುವ ಪಲ್ಲಟಗಳ ಕಡೆ ಕಣ್ಣು ಹಾಯಿಸದೆ ತಪ್ಪಿಸಿಕೊಳ್ಳು ತ್ತಿರುವುದು ಬೇಸರದ ಸಂಗತಿ.ಏಕೆಂದರೆ ಪ್ರಗತಿಪರ, ವೈಚಾರಿಕ ಪ್ರಜ್ಞೆ ಇಟ್ಟುಕೊಂಡು ಬರೆಯುತ್ತಿದ್ದ ಹಲವಾರು ಲೇಖಕರು ಇಂದು ತಟಸ್ಥರಾಗಿದ್ದಾರೆ.ಬಂಡಾಯದ ಲೇಖಕರು ತಮ್ಮ ಮೊನಚು ಕಳೆದುಕೊಂಡು ಮೂಲೆ ಸೇರಿದ್ದಾರೆ.ಸಾಹಿತ್ಯ ವಲಯ ದಲ್ಲಿ ಯಾವ ಹೊಸ ತರದ ಸೃಜನಶೀಲ ಚಟುವಟಿಕೆಗಳು- ಹುಡುಕಾಟಗಳು ಕಾಣಿಸಿಕೊಳ್ಳುತ್ತಿಲ್ಲ. ಇನ್ನು ಕಲೆ- ಸಂಗೀತಗಳು ಮಾರುಕಟ್ಟೆ ಸಂಸ್ಕೃತಿಯಲ್ಲಿ ಮಿಂದು ದಿಕ್ಕಾ ಪಾಲಾಗಿ ಉಳ್ಳವರಿಗೆ ಬಹು ಪರಾಕು ಹೇಳುತ್ತ ಹಣವಂತರನ್ನು ರಂಜಿಸುತ್ತಿವೆ!.

ಜನರ ನೋವಿಗೆ ಮಿಡಿವ ಪ್ರಾಣಮಿತ್ರ ನಾಗಬೇಕಿದ್ದ ಕವಿ ಕಣ್ಣು ಮುಚ್ಚಿಕೊಳ್ಳುತ್ತಿರುವ ಎಲ್ಲಾ ಲಕ್ಷಣಗಳೂ ಈಗ ಗೋಚರ ವಾಗುತ್ತಿವೆ. ಆಳುವ ಸರಕಾರಗಳು ಹೇಳುವ ಪ್ರಗತಿಯ ನಾಟಕದ ಸ್ಲೋಗನ್‌ಗಳ ನ್ನಷ್ಟೇ ಕಿವಿಯಲ್ಲಿ ಕೇಳಿಸಿ ಕೊಂಡು ಆನಂದ ತುಂದಿಲರಾಗಿ ಕಣ್ಣುಮು ಚ್ಚಿಕೊಂಡು ನಡೆಯಲು ಪ್ರಯತ್ನಿಸುತ್ತಿರುವ ಈ ಹೊಸ ತಳಿಯ ಬರಹಗಾರರು ಹೊಸಬರೇನಲ್ಲ ವೆಂಬುದು ಮಾತ್ರ ಆತಂಕದ ವಿಚಾರವಾಗಿದೆ!. ಜಾಗತೀಕರಣವೆಂಬುದು ಇಲ್ಲಿನ ಆಳುವ ವರ್ಗದೊಡನೆ ಕಲೆತು ನಮ್ಮ ಕಲೆ, ಸಂಗೀತ, ಸಾಹಿತ್ಯದ ಮೇಲೆ ಎಸೆದಿರುವ ‘ಸಾಂಸ್ಕೃತಿಕ ಬಾಂಬ್’ನ ಪರಿಣಾಮ ಇಲ್ಲಿ ಪಲ್ಲಟಗಳು ಉಂಟಾಗುತ್ತಿವೆ.

ಜನಸಂಸ್ಕೃತಿಯ ವಿರೋಧಿಯಾದ ಬಂಡವಾಳಶಾಹಿಗಳ ಸಾಂಸ್ಕೃತಿಕ ಬಾಂಬಿನ ವಿಷ ಈಗ ನಮ್ಮ ನೆಲದ ಜೀವಪರ ಚಿಂತನೆಗಳನ್ನೇ ತಿರುಚಿಹಾಕಿ, ಕೊಳ್ಳುಬಾಕ ಸಂಸ್ಕೃತಿಯ ಮೌಲ್ಯಗಳನ್ನು ಎಲ್ಲರಲ್ಲೂ ಬಿತ್ತುತ್ತಿದೆ!. ಅದರ ಪರಿಣಾಮದಿಂದಲೇ ನಮ್ಮ ಬರಹಗಾರರ ಮಾತುಗಳಲ್ಲಿ ಬೇರೆಯದೆ ತೆರನಾದ ಸ್ವರ ಹೊರಡುತ್ತಿದೆ. ಅದಕ್ಕೆ ಮತ್ತೊಂದು ಉದಾಹರಣೆಯೆಂದರೆ 15-5-2011ರಂದು ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಜ್ಞಾನಪೀಠ ಪುರಸ್ಕೃತ ಸಾಹಿತಿಗಳಾದ ಅನಂತ ಮೂರ್ತಿಯವರು ‘ಲೇಖಕರು ಎಡ- ಬಲ ಬಿಡಬೇಕು’ ಎಂಬ ವಿಚಿತ್ರವಾದ ವೈಯಕ್ತಿಕ ಸಲಹೆಯೊಂದನ್ನು ಸಾರ್ವಜನಿಕವಾಗಿ ಉಚಿತ ವಾಗಿ ನೀಡಿದ್ದಾರೆ!.

ಮುಂದುವರಿದು ಮಾತನಾಡುತ್ತಾ ‘‘ಇತ್ತೀಚೆಗೆ ನಡೆದ ಚುನಾವಣೆಯ ಪಲಿತಾಂಶದ ನಂತರ ಎಡ-ಬಲ ಪರಿಕಲ್ಪನೆ ಬದಲಾಗಿದೆ!. ಪಶ್ಚಿಮ ಬಂಗಾಳದಲ್ಲಿ ಟಾಟಾಗೆ ಭೂಮಿ ನೀಡಲು ಮುಂದಾದ ಎಡಪಂಥೀ ಯರು ಸೋತಿದ್ದಾರೆ! ಅದನ್ನು ವಿರೋಧಿಸಿದ ಮಮತಾ ಬ್ಯಾನರ್ಜಿ ಗೆದ್ದಿದ್ದಾಳೆ. ಹಾಗಾದರೆ ಬ್ಯಾನರ್ಜಿ ಬಲಪಂಥೀಯಳೇ? ಮೂಲದ್ರಾವಿಡರು ಎಂದು ಕೊಳ್ಳುವ ಕರುಣಾನಿಧಿ 2ಜಿ ಹಗರಣದಿಂದಾಗಿ ಸೋತಿದ್ದಾರೆ. ಮೈಸೂರು ಬ್ರಾಹ್ಮಣರಾದ ಜಯಲಲಿತಾ ಗೆದ್ದಿದ್ದಾರೆ! ಒಟ್ಟಾರೆ ದೇಶದಲ್ಲಿ ಎಡ-ಬಲದ ಭ್ರಮೆ ಬದಲಾಗಿದೆ.’’ ಎಂದು ಸಮಜಾಯಿಸಿ ನೀಡುತ್ತಾ ವಿಜ್ಞಾನದ ಮೂಲತತ್ವಗಳಿಗೇ ಸವಾಲು ಹಾಕುವ ರೀತಿ Positive-Negetiveಗಳೆಂಬುದು ಇಲ್ಲವೇ ಇಲ್ಲ, ಅದೆಲ್ಲಾ ಭ್ರಮೆ! ಎಂಬಂತೆ ಮಾತನಾಡಿದ್ದಾರೆ.

ಅವರ ದೃಷ್ಟಿ ಈ ಸಮಾಜದಲ್ಲಿ ಎಲ್ಲಾ ಸರಿ ಇದೆ, ಜನರನ್ನು ಶೋಷಿಸುವ ಪಂಥವೆಂಬುದು ಇಲ್ಲ! ಆ ಕಾರಣದಿಂದ ಜನಪರವಾದ ಮತ್ತೊಂದು ಪಂಥದ ಅವಶ್ಯಕತೆ ಈಗಿಲ್ಲ ಎಂಬಂತಿದೆ!. ಈ ದೇಶದಲ್ಲಿ ದುಡಿವ ಜನರ ಮೇಲೆ ಆಳುವ ವರ್ಗದಿಂದ ಎಷ್ಟೆಲ್ಲಾ ಶೋಷಣೆ ನಡೆಯುತ್ತಿದ್ದರೂ ಮಾನ್ಯ ಕವಿಗಳು ಪ್ಯಾಸಿಸ್ಟರ ರೀತಿ, ಆಡಳಿತಪಕ್ಷ ಇದ್ದಮೇಲೆ ವಿರೋಧ ಪಕ್ಷದ ಅವಶ್ಯಕತೆ ಇಲ್ಲ! ಆಡಳಿತ-ವಿರೋಧ ವೆಂಬ ಭ್ರಮೆಬೇಡ ಎಂಬರ್ಥದ ಮಾತು ಆಡುತ್ತಾ ಬಿನ್ನಾ ಭಿಪ್ರಾಯಕ್ಕೆ ಅವಕಾಶವಿಲ್ಲದ ಅಪ್ರಜಾತಾಂತ್ರಿಕ ಮಾತು ಗಳನ್ನು ಉದುರಿಸುತ್ತಾರೆಂದರೆ ಕನ್ನಡದ ಲೇಖಕರ ಕಣ್ಣುಗಳು ಮುಚ್ಚಿಕೊಳ್ಳುತ್ತಿವೆ ಎಂಬುದಕ್ಕೆ ಬೇರೆ ನಿದರ್ಶನ ಬೇಕೆ?.

ಅನಂತಮೂರ್ತಿಯವರ ಮಾತುಗಳಿಗೆ ರಾಜ್ಯದೆಲ್ಲೆಡೆ ಯಿಂದ ಒಳ್ಳೆಯ ಪ್ರತಿಕ್ರಿಯೆ-ಚರ್ಚೆಯನ್ನು ನಿರೀಕ್ಷಿಸಿದ್ದ ನನ್ನಂತಹವರಿಗೆ ಬೌದ್ಧಿಕವಾಗಿ ದಿವಾಳಿಯ ಹಾದಿ ಹಿಡಿದಿರುವ ಕನ್ನಡ ಲೇಖಕರ ಮೌನದಿಂದ ನಿರಾಶೆಯಾಗಿದ್ದು ಸುಳ್ಳಲ್ಲ.ಅದೇ ದಿನ ಮತ್ತೊಂದು ಕಾರ್ಯಕ್ರಮದಲ್ಲಿ ಮಾತ ನಾಡುತ್ತಾ ಮತ್ತೊಬ್ಬ ಬಂಡಾಯ ಬರಹಗಾರರಾದ ಚಂ(ಪಾ)ದ್ರಶೇಖರ ಪಾಟೀಲರು ‘‘ಪ್ರಜಾಪ್ರಭುತ್ವಕ್ಕೆ ಪರ್ಯಾಯವಿಲ್ಲ! ಏಕೆಂದರೆ ಪಶ್ಚಿಮ ಬಂಗಾಳದಲ್ಲಿ ಕಮ್ಯೂನಿಷ್ಟರು ಪತನಗೊಂಡಿದ್ದಾರೆ!.’’ ಎಂದು ಷರಾ ಬರೆದಂತೆ ಹೇಳಿಕೆ ಕೊಟ್ಟಿದ್ದಾರೆ. ಜಾಗತೀಕರಣದ ಕಡೆ ಒಲವು ತೋರಿ ಕಮ್ಯೂನಿಷ್ಟರು ಭೂಸ್ವಾಧೀನ ಪ್ರಕ್ರಿಯೆಗೆ ಕೈಹಾಕಿದ್ದನ್ನು ನಾವೆಲ್ಲ ವಿರೋಧಿಸುತ್ತಲೇ ಈಗ ಗೆದ್ದಿರುವ ಮಮತಾ ಬ್ಯಾನರ್ಜಿ ಪಶ್ಚಿಮ ಬಂಗಾಳದಲ್ಲೇ ಟಾಟಾದವರಿಗೆ, ಬಂಡವಾಳಶಾಹಿಗಳಿಗೆ ಭೂಮಿ ಕೊಡಲು ಮುಂದಾಗಿರುವುದನ್ನು ಗಂಭೀರವಾಗಿ ನೋಡಿ ಪ್ರತಿಕ್ರಿಯಿಸಬೇಕಿದೆ.

ಮತ್ತೊಬ್ಬ ಬರಹಗಾರರಾದ ಜಿ.ಕೆ.ಗೋವಿಂದರಾವ್ ರವರು ಅಣ್ಣಾ ಹಝಾರೆಯ ಭ್ರಷ್ಟಾಚಾರ ವಿರೋಧಿ ಹೋರಾಟದ ಹುಳುಕುಗಳ ಬಗ್ಗೆ ಪ್ರಸ್ತಾಪಿಸುತ್ತಾ ‘‘ಕೊನೆಗೆ ಪ್ರಜಾತಂತ್ರದಲ್ಲಿ ಎಲ್ಲವೂ ವಾಹನಗಳ ಲೈಸನ್ಸ್‌ನಿಂದ ಹಿಡಿದು ಪ್ರತಿಯೊಂದು ಕೂಡ ಬಹು ನಿಧಾನಗತಿಯ ಪ್ರಕ್ರಿಯೆಗಳು ಎಂದು ಮನದಟ್ಟು ಮಾಡಿಕೊಳ್ಳಬೇಕು!; ತಾಳ್ಮೆಯಿಂದ ಕಾಯುವುದನ್ನು ರೂಢಿಸಿಕೊಳ್ಳಬೇಕು!.’’ ಎಂದು ಮುಂದುವರಿದು ‘‘ಸಮಷ್ಟಿಯ, ಭವಿಷ್ಯದ ಪ್ರಜ್ಞೆಯನ್ನು ಒಳಗೊಂಡ ಕಲಾತ್ಮಕ ಸೃಷ್ಟಿಯ ದರ್ಶನ ಶಕ್ತಿ ಪಡೆದ ಚಳುವಳಿಗೆ ಮಾತ್ರ ನಮ್ಮ ಬೆಂಬಲ’’ ಎಂದಿದ್ದಾರೆ!. ತಮ್ಮ ಹೇಳಿಕೆಗಳಿಗೆ ತಾವೇ ಢಿಕ್ಕಿಹೊಡೆದುಕೊಂಡು ಜನರನ್ನು ದಾರಿತಪ್ಪಿಸುವ ಈ ಬರಹಗಾರರ ಪಾಂಡಿತ್ಯದ ಹೇಳಿಕೆಗಳು ಹೇಗಿವೆ ನೋಡಿ.

ಒಂದುಕಡೆ ಸಮಷ್ಟಿಯ, ಭವಿಷ್ಯದ ಪ್ರಜ್ಞೆಯನ್ನು ಒಳಗೊಂಡ ಕಲಾತ್ಮಕ ಸೃಷ್ಟಿಯ ದರ್ಶನಶಕ್ತಿ ಪಡೆಯುವಂತಹ ಚಳವಳಿಗಳ ಅವಶ್ಯಕತೆಗಳ ಮಾತನಾಡುತ್ತಾ ಮತ್ತೊಂದೆಡೆ ಸಮಷ್ಟಿಯ ಬದಲಾವಣೆಗೆ ತಾಳ್ಮೆಯಿಂದ ಕಾಯುವುದನ್ನು ರೂಢಿಸಿಕೊಳ್ಳಬೇಕೆಂದೂ ವಾಹನದ ಲೈಸನ್ಸ್‌ನಂತೆ ಪ್ರಜಾತಂತ್ರ ನಿಧಾನಗತಿಯಲ್ಲಿ ನಿಮ್ಮ ಬಳಿಗೆ ನಡೆದು ಬರುತ್ತದೆಂದು ಕಥೆ ಹೊಸೆಯುತ್ತಾ ಜನರನ್ನು ಹೊಸ ಸಾಧ್ಯತೆಗಳ ಹುಡುಕಾಟದ ಮಡಿಲಿಂದ ವಿಮುಖಗೊಳಿಸುತ್ತಾರೆ!. 60ವರ್ಷಗಳ ನಂತರವೂ ಒಂದು ಹೊಸ ಕಲಾತ್ಮಕ ಸೃಷ್ಟಿಯ ದರ್ಶನ ಪಡೆಯಲಾರದೆ ಒದ್ದಾಡುತ್ತಿರುವ ಎಷ್ಟೋ ಸೃಜನಶೀಲ ತುಂಡುಗಳು ಹಿಂದೂ ಸನಾತನ ಜಾತಿ ಅಸಮಾನತೆಗೊಂದು ಪರ್ಯಾಯ ಸಾಂಸ್ಕೃತಿಕ ರೂಪಕೊಡಲಾರದೆ ದಿವಾಳಿಯೆದ್ದಿದ್ದರೂ ನಮ್ಮಂತಹ ನವ ಯುವಬರಹಗಾರರಿಗೆ ದಿಕ್ಕುತೋರಲು ನಾಮುಂದು ತಾಮುಂದು ಎನ್ನುತ್ತಾ ಒಂಟಿಕಾಲಲ್ಲಿ ನಿಂತಿರುತ್ತಾರೆ!. ಹಾಸ್ಯಾಸ್ಪದ ಅನ್ನಿಸುತ್ತಿದೆ ಅಲ್ಲವೇ?

ಜಗತ್ತಿನ ಎಲ್ಲಾ ದುಡಿವ ಜನರ ವಿರುದ್ಧ ಸಂಚುರೂಪಿಸಿ ದರೋಡೆಗೆ ಸಿದ್ಧವಾಗಿರುವ ಬಂಡವಾಳಶಾಹಿ ಸಂಸ್ಕೃತಿಗೆ ಪರ್ಯಾಯವನ್ನು ಹುಡುಕಬೇಕಾದ ಸಂದರ್ಭದಲ್ಲಿ ಬರಹಗಾರರು, ಚಿಂತಕರು ಎನಿಸಿಕೊಂಡ ಜನ ಹೀಗೆ ಪರ್ಯಾಯವೇ ಬೇಡ!, ಎಡ-ಬಲ ಬಿಟ್ಟುಬಿಡೋಣ!, ಪ್ರಜಾತಂತ್ರ ವಾಹನದ ಲೈಸನ್ಸ್‌ನಂತೆ ನಿಧಾನಕ್ಕೆ ಬರುತ್ತೆ ಕಾಯುವುದನ್ನು ರೂಢಿಮಾಡಿಕೊಳ್ಳಿ!, ಬಂಡಾಯ ಸಾಹಿತ್ಯ ಈಗ ಅವಶ್ಯಕತೆ ಇಲ್ಲ ಎಂಬಂತೆ ಹಿಮ್ಮುಖ ಚಲನೆಯ ತಟಸ್ಥ ನಿಲುವಿನ ಸಿದ್ಧಾಂತಗಳನ್ನು ಪ್ರತಿಪಾದಿಸುವುದು ಕವಿಗಳು ಕಣ್ಣುಮುಚ್ಚಿಕೊಳ್ಳುತ್ತಿರುವ ಪ್ರಕ್ರಿಯೆಗೆ ಸಾಕ್ಷಿಯಾಗಿದೆ. ಆ ಲೆಕ್ಕದಲ್ಲಿ ಪ್ರಾಧಿಕಾರದ ಸಿದ್ಧಲಿಂಗಯ್ಯ ಮುಂದಿದ್ದಾರೆ ಅಷ್ಟೆ!.

ಪರಶಿವಧನಗೂರು ( ವಾರ್ತಾ ಭಾರತಿ)

Advertisement

0 comments:

Post a Comment

 
Top