PLEASE LOGIN TO KANNADANET.COM FOR REGULAR NEWS-UPDATES





ಕೊಪ್ಪಳ ಜು. ೯ (ಕ.ವಾ) : ೭೮ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ೨೦೧೧` ರ ನವೆಂಬರ್ ೧೮, ೧೯ ಮತ್ತು ೨೦ ರಂದು ಮೂರು ದಿನಗಳ ಕಾಲ ಕೊಪ್ಪಳ ಜಿಲ್ಲೆ ಗಂಗಾವತಿಯಲ್ಲಿ ಅದ್ಧೂರಿಯಾಗಿ ನಡೆಸಲಾಗುವುದು ಎಂದು ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ನಲ್ಲೂರು ಪ್ರಸಾದ್ ಅವರು ಅಧಿಕೃತವಾಗಿ ಪ್ರಕಟಿಸಿದ್ದಾರೆ.
ಗಂಗಾವತಿಯ ಎ.ಪಿ.ಎಂ.ಸಿ. ಆವರಣದಲ್ಲಿ ೭೮ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧಿಕೃತ ಲಾಂಛನ ಬಿಡುಗಡೆ ಹಾಗೂ ಸಮ್ಮೇಳನದ ಸ್ವಾಗತ ಸಮಿತಿಯ ಕಚೇರಿ ಉದ್ಘಾಟನೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
೭೮ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆತಿಥ್ಯ ವಹಿಸಲಿರುವ ಗಂಗಾವತಿಯಲ್ಲಿ ಸಮ್ಮೇಳನವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಈಗಿನಿಂದಲೇ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ. ಸಮ್ಮೇಳನವನ್ನು ಹಿಂದೆಂದಿಗಿಂತಲೂ ಅದ್ಧೂರಿಯಾಗಿ ನಡೆಸಲಾಗುವುದು. ನ. ೧೮, ೧೯ ಮತ್ತು ೨೦ ರಂದು ಅಂದರೆ ಶುಕ್ರವಾರ, ಶನಿವಾರ ಮತ್ತು ಭಾನುವಾರದಂದು ಮೂರು ದಿನಗಳ ಕಾಲ ಅದ್ಧೂರಿಯಾಗಿ ನಡೆಸಲಾಗುವುದು. ಸಮ್ಮೇಳನದಲ್ಲಿ ಎರಡು ವೇದಿಕೆಗಳನ್ನು ನಿರ್ಮಿಸಲು ತೀರ್ಮಾನಿಸಲಾಗಿದೆ. ಸಮ್ಮೇಳನವನ್ನು ಗಂಗಾವತಿ ಎ.ಪಿ.ಎಂ.ಸಿ. ಆವರಣದ ಬೃಹತ್ ಮೈದಾನದಲ್ಲಿ ನಡೆಸಲು ನಿರ್ಧರಿಸಲಾಗಿದ್ದು, ವಿಶಾಲವಾಗಿರುವ ಈ ಪ್ರದೇಶದಲ್ಲಿ ಸಮ್ಮೇಳನ ನಡೆಸಲು ಸಮರ್ಪಕವಾದ ಸ್ಥಳಾವಕಾಶವಿದೆ. ಈ ಭಾಗದ ಹಿರಿ, ಕಿರಿಯ ಸಾಹಿತಿಗಳು, ಸಂಸದರು, ಶಾಸಕರುಗಳು, ಜನಪ್ರತಿನಿಧಿಗಳು, ಅಧಿಕಾರಿಗಳು, ವಿವಿಧ ಸಂಘಟನೆಗಳು ಹಾಗೂ ಸಾರ್ವಜನಿಕರು ಒಗ್ಗೂಡಿ ಸಮ್ಮೇಳನದ ಯಶಸ್ವಿಗೆ ಶ್ರಮಿಸುವ ಅಗತ್ಯವಿದೆ. ಈಗಾಗಲೆ ಸಮ್ಮೇಳನವನ್ನು ಅಚ್ಚುಕಟ್ಟಾಗಿ ನಡೆಸಲು ಸ್ವಾಗತ ಸಮಿತಿ ರಚಿಸಲಾಗಿದ್ದು, ಇನ್ನುಳಿದಂತೆ ಊಟ, ಮೆರವಣಿಗೆ, ಗೋಷ್ಠಿಗಳು, ಆಹ್ವಾನ ಪತ್ರಿಕೆ, ಅತಿಥಿಗಳ ಆಯ್ಕೆ, ವಸತಿ ಸೇರಿದಂತೆ ಮಹತ್ವದ ಜವಾಬ್ದಾರಿಗಳನ್ನು ನಿರ್ವಹಿಸಲು ಉಪ ಸಮಿತಿಗಳನ್ನು ರಚಿಸುವ ಕಾರ್ಯ ಪ್ರಗತಿಯ ಹಂತದಲ್ಲಿದೆ. ಸಮ್ಮೇಳನಕ್ಕೆ ದೇಶ, ವಿದೇಶಗಳಿಂದ ಸಾಹಿತ್ಯಾಸಕ್ತರು ಸೇರಿದಂತೆ ಲಕ್ಷಾಂತರ ಜನರು ಆಗಮಿಸುವ ನಿರೀಕ್ಷೆಯಿದೆ. ಸಮ್ಮೇಳನಕ್ಕೆ ಸಂಪನ್ಮೂಲ ಕ್ರೋಢೀಕರಣ ದೊಡ್ಡ ಸಮಸ್ಯೆಯಲ್ಲ, ಆದರೆ ಮನಸ್ಸುಗಳನ್ನು ಕ್ರೋಢೀಕರಿಸುವ ಕಡೆ ಹೆಚ್ಚು ಗಮನ ಹರಿಸಬೇಕಾಗಿದೆ. ಹಿಡಿದ ಕೆಲಸವನ್ನು ವಿಶ್ವಾಸದಿಂದ ಸಾಧಿಸುವ ಛಲ ಈ ಭಾಗದ ಜನರಲ್ಲಿದೆ. ಹಿಂದಿನ ಎಲ್ಲ ಸಾಹಿತ್ಯ ಸಮ್ಮೇಳನಕ್ಕಿಂತ ಹೆಚ್ಚು ಅದ್ಧೂರಿಯಾಗಿ ನಡೆಸಲು ಎಲ್ಲರೂ ಸಮನ್ವಯತೆಯಿಂದ ಶ್ರಮಿಸುವ ಅಗತ್ಯವಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ನಲ್ಲೂರು ಪ್ರಸಾದ್ ಅವರು ಹೇಳಿದರು.
ಸಮ್ಮೇಳನದ ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷರೂ ಆಗಿರುವ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಅವರು ಮಾತನಾಡಿ, ೭೮ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಆತಿಥ್ಯ ವಹಿಸಲು ಕೊಪ್ಪಳ ಜಿಲ್ಲೆಯ ಜನ ಉತ್ಸುಕರಾಗಿದ್ದು, ಕನ್ನಡ ನಾಡು, ನುಡಿ, ಸಂಸ್ಕೃತಿಯ ಬಗ್ಗೆ ಈ ಭಾಗದಲ್ಲಿ ಹೆಚ್ಚಿನ ಅಭಿಮಾನವಿದೆ. ಅತಿಥಿಗಳಿಗೆ, ಸಾಹಿತ್ಯಾಸಕ್ತರಿಗೆ ಯಾವುದೇ ರೀತಿಯ ಕೊರತೆ ಉಂಟಾಗದಂತೆ, ಸಮ್ಮೇಳನವನ್ನು ಯಶಸ್ವಿಗೊಳಿಸಲು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಶ್ರಮಿಸಲಾಗುವುದು ಎಂದು ತಿಳಿಸಿದರು.
ಸಂಸದ ಶಿವರಾಮಗೌಡ ಅವರು ಈ ಸಂದರ್ಭದಲ್ಲಿ ಮಾತನಾಡಿ ಕೊಪ್ಪಳ ಜಿಲ್ಲೆ ಸಾಹಿತಿಗಳ ಬೀಡಾಗಿದ್ದು, ಸಾಹಿತ್ಯ ಚಟುವಟಿಕೆಗಳಿಗೆ ಇಲ್ಲಿನ ಜನ ಹೆಚ್ಚಿನ ಪ್ರೋತ್ಸಾಹ ನೀಡುತ್ತಾರೆ ಎನ್ನುವ ವಿಶ್ವಾಸವಿದೆ. ಅತಿಥಿ ಸತ್ಕಾರದಲ್ಲಿ ಯಾವುದೇ ಲೋಪ-ದೋಷವಾಗದಂತೆ ವ್ಯವಸ್ಥಿತವಾಗಿ ಸಿದ್ಧತೆ ಕೈಗೊಳ್ಳಲು ಎಲ್ಲರ ಸಹಕಾರದೊಂದಿಗೆ ಪ್ರಾಮಾಣಿಕ ಪ್ರಯತ್ನ ಕೈಗೊಳ್ಳಲಾಗುವುದು ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಕೊಪ್ಪಳ ಜಿಲ್ಲಾ ಘಟಕದ ಅಧ್ಯಕ್ಷ ಶೇಖರಗೌಡ ಮಾಲಿಪಾಟೀಲ್ ಅವರು ಎಲ್ಲರನ್ನು ಸ್ವಾಗತಿಸಿ ಮಾತನಾಡಿ, ಕೊಪ್ಪಳದಲ್ಲಿ ೧೯೯೩ ರಲ್ಲಿ ೬೨ನೇ ಸಾಹಿತ್ಯ ಸಮ್ಮೇಳನವನ್ನು ಅತ್ಯಂತ ಯಶಸ್ವಿಯಾಗಿ ನಡೆಸಿ, ಆತಿಥ್ಯ ವಹಿಸಿರುವ ಕೀರ್ತಿ ಕೊಪ್ಪಳಕ್ಕಿದೆ. ಕೊಪ್ಪಳ ಜಿಲ್ಲೆ ರಚನೆಯಾದ ನಂತರ ಇದೇ ಮೊದಲ ಬಾರಿಗೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಜಿಲ್ಲೆಯಲ್ಲಿ ನಡೆಸಲಾಗುತ್ತಿದೆ. ಸಮ್ಮೇಳನವನ್ನು ಯಶಸ್ವಿಗೊಳಿಸಲು ಎಲ್ಲ ಸಾಹಿತಿಗಳು, ಜನಪ್ರತಿನಿಧಿಗಳು, ಸಂಘಟನೆಗಳು, ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡಿಕೊಂಡರು.
ಕಸಾಪ ಶಿವಮೊಗ್ಗ ಜಿಲ್ಲಾ ಘಟಕದ ಅಧ್ಯಕ್ಷ ಬಿ. ಮಂಜುನಾಥ್, ಕಸಾಪ ರಾಜ್ಯ ಸಮಿತಿಯ ಪಿ. ಮಲ್ಲಿಕಾರ್ಜುನಪ್ಪ, ಪ್ರೊ. ಚಂದ್ರಪ್ಪ, ಎಪಿಎಂಸಿ ಅಧ್ಯಕ್ಷ ಅಮರೇಗೌಡ ಪೊಲೀಸ್ ಪಾಟೀಲ್ ಮುಂತಾದ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Advertisement

0 comments:

Post a Comment

 
Top