PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ ಮೇ. : ಉತ್ತರ ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿರುವ ಹುಲಿಗಿಯ ಶ್ರೀ ಹುಲಿಗೆಮ್ಮ ದೇವಿಯ ರಥೋತ್ಸವ ಇಂದು ವಿಜೃಂಭಣೆಯಿಂದ ಜರುಗಿತು. ಸಂಭ್ರಮ- ಸಡಗರದ ಶ್ರೀ ಹುಲಿಗೆಮ್ಮ ದೇವಿಯ ರಥೋತ್ಸವ ವೀಕ್ಷಿಸಲು ನೆರೆದಿದ್ದ ಸಾವಿರಾರು ಭಕ್ತ ಸಮೂಹ ಇದಕ್ಕೆ ಸಾಕ್ಷಿಯಾಯಿತು.
ಸೂರ್ಯ ತನ್ನ ದೈನಂದಿನ ಕಾಯಕ ಮುಗಿಸಿ ವಿಶ್ರಾಂತಿಗಾಗಿ ಅಂಬರದೊಳಗಿನ ತನ್ನ ಅರಮನೆಗೆ ಸೇರಿಕೊಳ್ಳುವ ತವಕದಲ್ಲಿದ್ದನು, ಹಕ್ಕಿಗಳೂ ಸಹ ತಮ್ಮ ಕಲರವವನ್ನು ನಿಲ್ಲಿಸಿ ಗೂಡಿಗೆ ಸೇರಿಕೊಳ್ಳುವ ಹೊತ್ತಿಗೆ ಹುಲಿಗಿಯಲ್ಲಿ ಉಧೋ ಉಧೋ ಎನ್ನುವ ಭಕ್ತರ ಉದ್ಘಾರ ಮುಗಿಲು ಮುಟ್ಟಿತ್ತು. ಹುಲಿಗಿಯ ದೇವಸ್ಥಾನದ ಎದುರಿನ ಬೀದಿಯಲ್ಲಿ ಸಾಗಿದ ರಥಕ್ಕೆ ಬಾಳೆಹಣ್ಣು, ಉತ್ತತ್ತಿ ಸಮರ್ಪಿಸುವುದರ ಮೂಲಕ ಭಕ್ತರು ತಮ್ಮ ಭಕ್ತಿ ಭಾವ ಮೆರೆದರು. ರಥೋತ್ಸವದ ವೈಭವವನ್ನು ಸವಿಯಲು, ವಯೋವೃದ್ಧರು, ಮಕ್ಕಳು, ನೂತನ ದಂಪತಿಗಳು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಭಕ್ತ ಸಮೂಹ ರಸ್ತೆಯ ಅಕ್ಕ ಪಕ್ಕದಲ್ಲಿ ನಿಂತು ವೀಕ್ಷಿಸಿದರೆ, ಯುವಕರು, ಅಕ್ಕ ಪಕ್ಕದ ಕಟ್ಟಡದ ಮೇಲೆ ನಿಂತು ವೀಕ್ಷಿಸಿ ಕೃತಾರ್ಥ ಭಾವ ಸವಿದರು. ಶ್ರೀ ಹುಲಿಗೆಮ್ಮ ದೇವಿಯ ಆಶೀರ್ವಾದ ಪಡೆಯಲು ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಸಂಗಣ್ಣ ಕರಡಿ, ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಲಲಿತಾರಾಣಿ ಶ್ರೀರಂಗದೇವರಾಯಲು, ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಸೇರಿದಂತೆ ಗಣ್ಯರು ರಥೋತ್ಸವಕ್ಕೆ ಆಗಮಿಸಿದ್ದರು.
ಈ ಬಾರಿಯ ಶ್ರೀ ಹುಲಿಗೆಮ್ಮ ದೇವಿಯ ರಥೋತ್ಸವಕ್ಕೆ ದೂರದ ಊರುಗಳಿಂದ ಆಗಮಿಸಿದ್ದ ಭಕ್ತಾದಿಗಳಿಗೆ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ. ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ, ನೈರ್ಮಲ್ಯ ಅಚ್ಚುಕಟ್ಟಾಗಿದೆ. ಜಾತ್ರೆಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಭಕ್ತಾದಿಗಳಿಗೆ ಕೊಪ್ಪಳ, ಗಂಗಾವತಿ, ಹೊಸಪೇಟೆಯಿಂದ ವಿಶೇಷ ಬಸ್ ಸಂಚಾರದ ವ್ಯವಸ್ಥೆಗೊಳಿಸಲಾಗಿದೆ. ಆರೋಗ್ಯ ಇಲಾಖೆಯ ವತಿಯಿಂದ ಸಾರ್ವಜನಿಕರ ಆರೋಗ್ಯ ತಪಾಸಣೆ, ಜನಜಾಗೃತಿ ಕುರಿತಂತೆ ವಿಶೇಷ ಮಳಿಗೆ ತೆರೆಯಲಾಗಿದೆ. ರಾಜ್ಯ ಮಹಿಳಾ ಅಭಿವೃದ್ಧಿ ನಿಗಮವು ದೇವದಾಸಿ ಪದ್ಧತಿ ನಿಮೂಲನೆ ಕುರಿತಂತೆ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದೆ.
ರಥೋತ್ಸವಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನ ಸಮಿತಿ ಅಧ್ಯಕ್ಷ ರಮೇಶ್ ವೈದ್ಯ ಅವರು, ಈ ಬಾರಿಯ ಹುಲಿಗೆಮ್ಮ ದೇವಿ ಜಾತ್ರೆಯ ಅಂಗವಾಗಿ ಹುಲಿಗಿ ಕ್ಷೇತ್ರಕ್ಕೆ ಆಗಮಿಸುವ ಭಕ್ತಾದಿಗಳಿಗೆ ವಿಶೇಷ ಸೌಕರ್ಯ ಕಲ್ಪಿಸಲಾಗಿದೆ. ಪ್ರಾಣಿಬಲಿ, ಮದ್ಯಪಾನ ನಿಷೇಧವನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲಾಗಿದೆ. ಹುಲಿಗಿ ಗ್ರಾಮದ ಅಭಿವೃದ್ಧಿಗಾಗಿ ತಯಾರಿಸಲಾಗಿರುವ ಮಾಸ್ಟರ್ ಪ್ಲಾನ್ ಯೋಜನೆ ಅನುಷ್ಠಾನಕ್ಕಾಗಿ ಸರ್ಕಾರ ಅಗತ್ಯ ಅನುದಾನವನ್ನು ಬಿಡುಗಡೆಗೊಳಿಸಿದ್ದು, ಈಗಾಗಲೆ ಸುಮಾರು ೨೬ ಎಕರೆ ಜಮೀನು ಖರೀದಿಗೆ ಕ್ರಮ ಕೈಗೊಳ್ಳಲಾಗಿದೆ. ಜಾತ್ರೆ ಕಾರ್ಯಕ್ರಮ ಮುಗಿಯುತ್ತಿದ್ದಂತೆಯೇ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದ ೧೫ ಕೋಟಿ ರೂ.ಗಳ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದರು.
ಒಟ್ಟಾರೆ ಈ ಬಾರಿಯ ಶ್ರೀ ಹುಲಿಗೆಮ್ಮ ದೇವಿ ರಥೋತ್ಸವ ಕಾರ್ಯಕ್ರಮ ಅತ್ಯಂತ ವಿಜೃಂಭಣೆಯಿಂದ ಜರುಗಿತು. ಜಾತ್ರೆಯ ಅಂಗವಾಗಿ ಮೇ. ೨೭ ರಂದು ಬಾಳಿದಂಡಿಗೆ, ಮೇ. ೨೮ ರಂದು ಪಾಯಸ ಅಗ್ನಿಕುಂಡ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿವೆ.

Advertisement

1 comments:

 
Top